ಶುಕ್ರವಾರ, ಮೇ 20, 2022
19 °C

ಇವಳು ನದಿಯಲ್ಲ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನವ್ಯ ಚಳುವಳಿ~ಯ ಸಂದರ್ಭದಲ್ಲಿ ಕಾವ್ಯಕ್ಷೇತ್ರಕ್ಕೆ ಪ್ರವೇಶಿಸಿದರೂ  ಛಂದೋಬದ್ಧವಾದ, ನಿಯತ ಲಯದ, ಪ್ರಾಸಾನುಪ್ರಾಸ ಸಹಿತವಾದ, ಸಾಲಂಕೃತ ಕವನಗಳಿಗೆ ಹೊರಳಿಕೊಂಡವರು ಬಿ. ಆರ್. ಲಕ್ಷ್ಮಣರಾವ್ . ಕಾವ್ಯದ ರಸಾನುಭವಕ್ಕೆ ಒತ್ತು ನೀಡುವ ಲಕ್ಷ್ಮಣರಾವ್, ದಿನನಿತ್ಯದ ಮಾತುಗಳು ಕಾವ್ಯದ ಮಾಂತ್ರಿಕತೆಯನ್ನು ಪಡೆಯುವ ಆ ದಿವ್ಯ ಗಳಿಗೆ, ಆ ದಿವ್ಯ ಸ್ಪರ್ಶದ ಕುರಿತ ಬೆರಗನ್ನು ಇಲ್ಲಿ ಚಿತ್ರಿಸಿದ್ದಾರೆ.

______________________________________________________ನಾನು ಕಳೆದ ನಲವತ್ತೈದು ವರ್ಷಗಳಿಂದ ಕನ್ನಡ ಕಾವ್ಯಕ್ಷೇತ್ರದಲ್ಲಿ ಸಕ್ರಿಯವಾಗಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಹಲವಾರು ಕವನ ಸಂಕಲನಗಳನ್ನು ಹೊರತಂದಿದ್ದೇನೆ. ಆದರೆ `ಕವನ ಎಂದರೇನು?~ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರಿಸಲು ಇಂದಿಗೂ ನನಗೆ ಸಾಧ್ಯವಾಗಿಲ್ಲ. `ಕವಿತೆ, ನೀನೇಕೆ ಪದಗಳಲ್ಲಿ ಅವಿತೆ?~ ಎಂಬ ವೈಯೆನ್ಕೆ ಅವರ ಸಾಲು ನೆನಪಾಗುತ್ತದೆ.ಹೌದು, ನಾವು ದಿನನಿತ್ಯ ಬಳಸುವ ಅದೇ ಮಾತು ಕಾವ್ಯದ ಮಾಂತ್ರಿಕತೆಯನ್ನು ಪಡೆಯುವ ಆ ದಿವ್ಯ ಗಳಿಗೆ, ಆ ದಿವ್ಯ ಸ್ಪರ್ಶ ಯಾವುದು, ಎಂಬುವುದು ಒಂದು ನಿಗೂಢ ರಹಸ್ಯ. ಆದ್ದರಿಂದಲೇ ಕವಿತೆಯನ್ನು `ಬುದ್ಧಿಭಾವಗಳ ವಿದ್ಯುದಾಲಿಂಗನ~ ಎಂದು ವರ್ಣಿಸಿದ್ದಾರೆ. ಒಂದು ಒಳ್ಳೆಯ ಕವಿತೆಯನ್ನು ಓದಿದ ಕೂಡಲೇ ನಿಜವಾದ ಕಾವ್ಯರಸಿಕನಿಗೆ ಅದು ಅಪ್ಪಟ ಕವಿತೆ ಎನ್ನುವುದು ತಾನಾಗಿ ಮನವರಿಕೆಯಾಗುತ್ತದೆ.ಅನಂತರ ಅದು ಏಕೆ ಮತ್ತು ಹೇಗೆ ಒಂದು ಒಳ್ಳೆಯ ಕವಿತೆ ಎಂದು ನಾವು ವಿಶ್ಲೇಷಿಸಬಹುದು, ವ್ಯಾಖ್ಯಾನಿಸಬಹುದು. ಆದರೆ ಕವಿತೆ ಹೇಗಿದ್ದರೆ ಮತ್ತು ಏನಾದರೆ ಒಂದು ಶ್ರೇಷ್ಠ ಕವಿತೆಯಾಗುತ್ತೆ ಎಂಬುದಕ್ಕೆ ಸಿದ್ಧಸೂತ್ರಗಳನ್ನು ಕೊಡಲು ಯಾರಿಗೂ ಸಾಧ್ಯವಾಗಿಲ್ಲ.ಸಾಧ್ಯವಾಗಿದ್ದಿದ್ದರೆ ಇಂದು ನಮ್ಮ ಗಣಕಯಂತ್ರವನ್ನು ಬಳಸಿ ಶ್ರೇಷ್ಠ ಕವಿತೆಗಳನ್ನು ಪುಂಖಾನುಪುಂಖವಾಗಿ ತಯಾರಿಸಿಬಿಡಬಹುದಿತ್ತು. ಸುದೈವದಿಂದ ಕವಿತೆ ಇಂದಿಗೂ ಒಂದು ವಿಸ್ಮಯವಾಗಿಯೇ ಉಳಿದಿದೆ. ಕವಿತೆಯನ್ನು ಪಟ್ಟು ಹಿಡಿದು ಕೂತು ಹೊಸೆಯಲು ಸಾಧ್ಯವಿಲ್ಲ. ಹೊಸೆದರೆ ಅದು `ಕಟ್ಟು ಕವಿತೆ~ಯಾದೀತೇ ಹೊರತು `ಹುಟ್ಟು ಕವಿತೆ~ ಆಗಲಾರದು. ಯಾವುದೋ ಮಾಯೆಯಲ್ಲಿ ಅದು ತಾನಾಗಿ ಸಂಭವಿಸುತ್ತದೆ. `ಇಟ್ ಕೆನ್ನಾಟ್ ಬಿ ಮೇಡ್, ಇಟ್ ಹ್ಯಾಪನ್ಸ್~.

     ವೀರ್ಯಾಣು ಮತ್ತು ಅಂಡಾಣು ಮಿಲನಗೊಂಡು, ಹೆಣ್ಣಿನ ಗರ್ಭದಲ್ಲಿ ಹೇಗೆ ಭ್ರೂಣವಾಗಿ ಹಂತ ಹಂತವಾಗಿ ಬೆಳೆಯುತ್ತೆ, ರೂಪುಗೊಳ್ಳುತ್ತೆ, ಮಗುವಿನ ಆಕಾರ ಪಡೆಯುತ್ತೆ ಎಂಬುದನ್ನು ವಿಜ್ಞಾನ ನಿಖರವಾಗಿ ಹೇಳಬಲ್ಲದು, ತೋರಿಸಬಲ್ಲದು. ಆದರೆ ಅದರಲ್ಲಿ ಜೀವ ಸಂಚಾರ ಯಾವ ಗಳಿಗೆಯಲ್ಲಿ, ಹೇಗೆ ಪ್ರಾರಂಭವಾಗುತ್ತೆ ಎಂಬುದು ಇಂದಿಗೂ ರಹಸ್ಯವೇ, ವಿಸ್ಮಯವೇ! ಅದೇ ರೀತಿ, ಕವಿ ತನ್ನ ಭಾವ, ವಿಚಾರಗಳಿಗೆ ಕವಿತೆಯ ರೂಪ ಕೊಡಬಲ್ಲ. ಆದರೆ ಅದರಲ್ಲಿ ಕಾವ್ಯದ ಜೀವ ಸಂಚಾರ ಹೇಗಾಗುತ್ತೆ ಎಂಬುದು ಇಂದಿಗೂ ಸ್ವತಃ ಕವಿಗೂ ತಿಳಿಯದ ಸಂಗತಿ. ಆದ್ದರಿಂದಲೇ ಕಾವ್ಯ ಇಂದಿಗೂ ತನ್ನ ಆಕರ್ಷಣೆಯನ್ನೂ, ಬೆರಗನ್ನೂ ಉಳಿಸಿಕೊಂಡು ಬಂದಿದೆ.

     ಆದರೆ ಇಂಥದೊಂದು ಶ್ರೇಷ್ಠ ಕವಿತೆ ಒಬ್ಬ ಕವಿಯಿಂದ ತಾನಾಗಿ, ಸಹಜಸ್ಫೂರ್ತವಾಗಿ ಸಂಭವಿಸಿ, ಪಡಿಮೂಡಬೇಕಾದರೆ, ಅದರ ಹಿಂದೆ ಆ ಕವಿಯ ಪ್ರತಿಭೆ, ವ್ಯತ್ಪತ್ತಿ, ಜೀವನಾನುಭವ ಮತ್ತು ಕಲಾಕೌಶಲ ಖಂಡಿತ ಅಗತ್ಯ ಎಂಬುವುದು ನಿರ್ವಿವಾದ.

 

ಆದ್ದರಿಂದಲೇ ರಾಮಚಂದ್ರಶರ್ಮರು ಹೇಳಿದ್ದು `ಪ್ರತಿಯೊಂದು ಕವನವೂ ಭರವಸೆಯ ವ್ಯವಸಾಯ/ ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ~. ಅಂಥ ಭಾಗ್ಯಕ್ಕಾಗಿ ಕಾತರದಿಂದ ಕಾಯುವುದು ಪ್ರತಿ ಕವಿಗೂ ಅನಿವಾರ್ಯ. ಅಸಂಖ್ಯಾತ ಕಪ್ಪೆಚಿಪ್ಪುಗಳಲ್ಲಿ ಕೆಲವಾದರೂ ಅಪ್ಪಟ ಮುತ್ತುಗಳು ಸಿಕ್ಕರೆ ಅದು ಕವಿಯ ಪ್ರಾಪ್ತಿ. ಕೆ.ಎಸ್.ನ.  ಹೇಳಿದಂತೆ `ಹೊಳೆದದ್ದೇ ತಾರೆ, ಉಳಿದದ್ದು ಆಕಾಶ~

     ನಾನು `ನವ್ಯ ಚಳುವಳಿ~ಯ ಸಂದರ್ಭದಲ್ಲಿ ಕಾವ್ಯಕ್ಷೇತ್ರಕ್ಕೆ ಪ್ರವೇಶಿಸಿದ್ದರಿಂದ ಪ್ರಯತ್ನಪೂರ್ವಕವಾಗಿ ಮುಕ್ತ ಛಂದಸ್ಸಿನಲ್ಲಿ ಕವನಗಳನ್ನು ಬರೆದದ್ದು ನಿಜ. ಆದರೆ ಅಂದಿನಿಂದ ಇಂದಿಗೂ ನನಗೆ ಛಂದೋಬದ್ಧವಾದ, ನಿಯತ ಲಯದ, ಪ್ರಾಸಾನುಪ್ರಾಸ ಸಹಿತವಾದ, ಸಾಲಂಕೃತ ಕವನಗಳೆಂದರೇನೇ ಹೆಚ್ಚು ಇಷ್ಟ. ಗದ್ಯ ಬೇರೆ, ಪದ್ಯ ಬೇರೆ, ಅವುಗಳ ಉದ್ದೇಶಗಳು ಬೇರೆ, ಸ್ವರೂಪಗಳೂ ಸಹ ಬೇರೆ ಎಂದೇ ನನ್ನ ಅಭಿಮತ.          ಮೊಲೆ ಮುಡಿ ಬಂದರೆ ಹೆಣ್ಣೆಂಬರು

          ಗಡ್ಡ ಮೀಸೆ ಬಂದರೆ ಗಂಡೆಂಬರು

          ನಡುವೆ ಸುಳಿವಾತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ

ಎಂಬ ಜೇಡರ ದಾಸಿಮಯ್ಯನ ವಚನ ನೆನಪಾಗುತ್ತೆ.    ಹಾಗೆಯೇ ಪದ್ಯ ಮತ್ತು ಗದ್ಯದ ನಡುವೆ ಸುಳಿವ ಆತ್ಮ ಒಂದೇ ಇರಬಹುದಾದರೂ ಅವುಗಳಿಗೆ ತಮ್ಮದೇ ವಿಶಿಷ್ಟ ದೇಹವಿದೆ, ರೂಪವಿದೆ. ಬುದ್ಧಿಪ್ರಧಾನವಾದ ಗದ್ಯವನ್ನು ಗಂಡು ಎನ್ನಬಹುದಾದರೆ, ಭಾವಪ್ರಧಾನವಾದ ಪದ್ಯ ಹೆಣ್ಣು. ಅದು ಕಾವ್ಯ ಸರಸ್ವತಿ. ಅದಕ್ಕೆ ತನ್ನದೇ ಆದ ವಿಶಿಷ್ಟ ಚೆಲುವಿದೆ, ಮಾರ್ದವತೆಯಿದೆ, ನಾದಮಾಧುರ್ಯವಿದೆ, ಒನಪು ವೈಯಾರಗಳಿವೆ, ಅನನ್ಯ ಆಕರ್ಷಣೆಯಿದೆ. ನನ್ನದೇ ಸಾಲುಗಳನ್ನು ಉಲ್ಲೇಖಿಸುವುದಾದರೆ-          ಕವಿ ವಿಶ್ವಾಮಿತ್ರನಿಗೂ

          ಖಾತ್ರಿ ತಪೋಭಂಗ,

          ಕವಿತೆ ಸ್ತ್ರೀಲಿಂಗ.ಅಷ್ಟೇ ಅಲ್ಲ, ಕವಿತೆ ತಾಯಿಯ ಮಡಿಲೂ ಹೌದು, ದೇವಿಯ ಅಭಯವೂ ಹೌದು. ಕೆ.ಎಸ್.ನ ಹೇಳಿದಂತೆ:          ಬಂದ ಬಾಗಿಲು ಮಣ್ಣು,

          ಬಿಡುವ ಬಾಗಿಲು ಮಣ್ಣು,

          ನಡುವೆ ಕಾಪಾಡುವುದು

          ತಾಯ ಕಣ್ಣು.     ಛಂದೋಬದ್ಧ ಕವಿತೆಗಳು ನನಗೆ ಪ್ರಿಯವಾಗಲು ಪ್ರಮುಖ ಕಾರಣ ಅವುಗಳ ನಾದ ಮತ್ತು ಗೇಯಗುಣ. ನಾನು ಕವಿಯಾಗುವುದಕ್ಕೂ ಮುಂಚಿನಿಂದ ಗಾಯಕನಾಗಿದ್ದವನು. ಚಿತ್ರಗೀತೆಗಳ ಜೊತೆಗೆ ಭಾವಗೀತೆಗಳನ್ನೂ ಹಾಡುತ್ತಿದ್ದವನು. ಹಾಗೆ ನೋಡಿದರೆ ನನಗೆ ಚಿಕ್ಕಂದಿನಿಂದಲೂ ಕುವೆಂಪು, ಬೇಂದ್ರೆ, ಅಡಿಗ, ಕೆ.ಎಸ್.ನ., ಜೀಯೆಸ್ಸೆಸ್, ಕಣವಿ ಮುಂತಾದವರು ಪರಿಚಿತರಾಗಿದ್ದದ್ದು ಅವರ ಜನಪ್ರಿಯ ಭಾವಗೀತೆಗಳ ಮೂಲಕವೇ. ಆ ನಂತರವಷ್ಟೇ ನಾನು ಅವರ ಗಂಭೀರ ಕಾವ್ಯವನ್ನು ಓದಿಕೊಂಡದ್ದು.

 

ಇಂದಿಗೂ ನಮ್ಮ ಶ್ರೇಷ್ಠ ಕವಿಗಳು ಜನಸಾಮಾನ್ಯರೊಂದಿಗೆ ಒಡನಾಡಿಕೊಂಡಿರುವುದು ಅವರ ಭಾವಗೀತೆಗಳ ಮೂಲಕ ಎಂಬ ವಾಸ್ತವವನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದಲೇ ಡಿ.ವಿ.ಜಿ. ಹೇಳಿದ್ದು, `ಕವನ ನೆನಪಿಗೆ ಸುಲಭ, ಮಂಕುತಿಮ್ಮ~ ಎಂದು.

   ನವೋದಯದ ಕಾಲದಲ್ಲಿ ಕಥನ ಕವನ, ಭಾವಗೀತೆ, ಸುನೀತ, ಹನಿಗವನ, ಶಿಶುಗೀತೆ- ಹೀಗೆ ಕಾವ್ಯದಲ್ಲಿ ವೈವಿಧ್ಯವಿತ್ತು. ಆದರೆ ನವ್ಯದ ಸಂದರ್ಭದಲ್ಲಿ ಪ್ರತಿಮಾತ್ಮಕವಾದ, ಜಟಿಲ ಹೆಣಿಗೆಯ, ಮುಕ್ತಛಂದಸ್ಸಿನ, ಸಂಕೀರ್ಣ ರಚನೆಗಳಷ್ಟೇ ಶ್ರೇಷ್ಠ ಕಾವ್ಯ, ಎಂಬಂತಾಗಿ ಕಾವ್ಯ ಏಕಶಿಲಾರೂಪ ಪಡೆದು, ತನ್ನ ಅತಿಕ್ಲಿಷ್ಟತೆಯೇ ಕಾರಣವಾಗಿ ಜನಸಾಮಾನ್ಯರಿಂದ ದೂರವಾದದ್ದನ್ನು ನಾವು ಅಲ್ಲಗಳೆಯುವಂತಿಲ್ಲ.ಹಾಗೆಂದು, ಜನಪ್ರಿಯತೆಯೊಂದೇ ಕಾವ್ಯದ ಮೌಲ್ಯಮಾಪನಕ್ಕೆ ಮಾನದಂಡವಲ್ಲ ಎಂಬ ಅರಿವೂ ನನಗಿದೆ. ನನ್ನ ಹಲವು ಗಂಭೀರ, ಸಂಕೀರ್ಣ ಕವನಗಳು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿವೆ. ಆದರೂ ನನಗೆ ಯೇಟ್ಸ್ ಕವಿಯ ರೀತಿ ಅಥವಾ ನಮ್ಮ ಕೆ.ಎಸ್.ನ. ತರಹ `ಸರಳತೆಯಲ್ಲಿ ಗಹನತೆ~ಯೇ ಹೆಚ್ಚು ಇಷ್ಟ. ಇಂದು ನಮಗೆ ಬೇಕಾದ್ದು ಗಗನದಲ್ಲಿ ಹಾರಾಡುವ ಗರುಡನಂಥ ಕವಿತೆಯಲ್ಲ. ಮನೆಮನೆ ಸಮಾಚಾರ ಹೇಳುವ ಗುಬ್ಬಿಯಂಥ ಕವಿತೆ.`ರಾಮಾಯಣ~, `ಮಹಾಭಾರತ~ದಂತಹ ಸುದೀರ್ಘ ಕಥಾನಕಗಳನ್ನು ಹೇಳಲು ಇಂದು ಕಾದಂಬರಿಯಿದೆ. ಮಹಾಕಾವ್ಯದ ಅಗತ್ಯವಿದೆಯೇ? ಇಷ್ಟಕ್ಕೂ ನಾವು ಕಾವ್ಯದಿಂದ ನಿರೀಕ್ಷಿಸುವುದು ಯಾವುದನ್ನು? ಕಥೆಯನ್ನಲ್ಲ, ವಿಚಾರವನ್ನಲ್ಲ, ತತ್ವವನ್ನಲ್ಲ, ಸಿದ್ಧಾಂತವನ್ನಲ್ಲ, ರಸಾನುಭವವನ್ನು. ಆದ್ದರಿಂದಲೇ ಬಹುಶಃ ನಮ್ಮ ಶ್ರೇಷ್ಠ ಕವಿಗಳಾದ ಬೇಂದ್ರೆ, ಅಡಿಗ, ಕೆ.ಎಸ್.ನ. ಅಂಥವರು ಮಹಾಕಾವ್ಯದ ರಚನೆಗೆ ಮುಂದಾಗಲಿಲ್ಲವೇನೋ ಅನ್ನಿಸುತ್ತೆ. ಅವರ `ಸಮಗ್ರ ಕಾವ್ಯ~ಗಳೇ ಅವರ ಮಹಾಕಾವ್ಯಗಳೆಂದರೆ ತಪ್ಪಾಗಲಾರದು. ಕಾವ್ಯಕ್ಕೆ ಅನೇಕ ಉದ್ದೇಶಗಳಿವೆ. ಅವುಗಳಲ್ಲಿ ಇಂದಿಗೆ ನನಗೆ ಬಹು ಮುಖ್ಯವಾಗಿ ಕಾಣುವುದು ಅದು ನೀಡುವ ಸಾಂತ್ವನ ಮತ್ತು ಭರವಸೆ. ಸಮಕಾಲೀನ ಸಮಸ್ಯೆಗಳಿಂದ, ಜೀವನದ ಜಂಜಾಟಗಳಿಂದ, ತವಕ ತಲ್ಲಣಗಳಿಂದ ಜರ್ಜರಿತರಾದ ಎಷ್ಟೊಂದು ಮಂದಿ ಇದ್ದಾರೆ ಇಂದು ನಮ್ಮ ಸುತ್ತ! ಅವರನ್ನು ಸಂತೈಸಿ, ಅವರ ಬಾಳಿನಲ್ಲಿ ಮತ್ತೆ ಭರವಸೆ ತುಂಬಿ, ಅವರ ಬಾಡಿ ಕರಕಲಾದ ಮನಸ್ಸುಗಳನ್ನು ಮತ್ತೆ ನಳನಳಿಸಿ ಅರಳುವಂತೆ, ಮಗಮಗಿಸುವಂತೆ ಮಾಡಲು ಪ್ರಯತ್ನಿಸುವುದೇ ಇಂದಿನ ಕವಿಯ ಮುಂದಿರುವ ನಿಜವಾದ ಸವಾಲು. ಇದನ್ನೇ ಒಂದು ಕಿರುಗವನದಲ್ಲಿ ನಾನು ಹೀಗೆ ಹೇಳಿದ್ದೇನೆ:

     ಸಿದ್ಧಿ

     ----


ಆ ಬಾಡಿಹೋದ ಹೂವನ್ನು ಕಂಡೆಯಾ?

ತಂದು ಮುಂದಿಟ್ಟುಕೊ

ಮೃದುವಾಗಿ ಅದನ್ನು ನೇವರಿಸು

ನೆಟ್ಟನೋಟದಿಂದ ಅದನ್ನು ದಿಟ್ಟಿಸು

ನಿಧಾನ ಅದರ ಒಳಕ್ಕಿಳಿ

ಹೃದಯ ಮುಟ್ಟು

ಅಕ್ಕರೆಯಿಂದ ಮೆಲ್ಲಗೆ ತಟ್ಟು

ಘಲ್ಲೆಂದು ಪುಲಕಿಸಿ

ಆ ಹೂ ಮತ್ತೆ

ದಳ ಬಿಚ್ಚಿ, ನಳನಳಿಸಿ, ನಕ್ಕರೆ...

ನೀ ಕವಿ,

ಅದು ಕವಿತೆ. ನನ್ನ ಇಬ್ಬರು ಜೀವನ ಸಂಗಾತಿಯರು: ಗಿರಿಜ ಮತ್ತು ಕಾವ್ಯ. ಈ ಇಬ್ಬರನ್ನೂ ಒಟ್ಟಿಗೆ ಉದ್ದೇಶಿಸಿ ನಾನು ಬರೆದ ಕವನ `ಇವಳು ನದಿಯಲ್ಲ~. ಇದು ನನ್ನ ಜೀವನ ಮೀಮಾಂಸೆ ಮತ್ತು ಕಾವ್ಯ ಮೀಮಾಂಸೆ- ಎರಡನ್ನೂ ಒಟ್ಟಿಗೆ ಹೇಳಲು ಪ್ರಯತ್ನಿಸಿರುವ ರಚನೆಯಾದ್ದರಿಂದ ಕವನವನ್ನು ಇಡಿಯಾಗಿ ಉಲ್ಲೇಖಿಸುತ್ತಿದ್ದೇನೆ:ಇವಳು ನದಿಯಲ್ಲ

----------


ಇವಳು ನದಿಯಲ್ಲ:

ಕಣ್ಣೆದುರೆ ಪ್ರತಿಕ್ಷಣ

ಹೊಸ ನೀರು ಹೊಸ ವೇಷ ಹೊಸ ಪಾತ್ರ

ಹೊಸ ತುಳುಕು ಬಳುಕುಗಳ

ಬಿನ್ನಾಣಗಿತ್ತಿ ಇವಳಲ್ಲ,

ಇವಳು ನದಿಯಲ್ಲ.

ಬರ ಸೆಳೆದು ಬಿಗಿದಪ್ಪಿ

ತಿರುವಿ ಗಿರಗಿರ

ತಳಕ್ಕೆಳೆದು ಮುಳುಗಿಸುವ

ಒಳಸುಳಿಗಳಿಲ್ಲಿಲ್ಲ,

ಇವಳು ನದಿಯಲ್ಲ.

ಮಾತು ಮುರಿದರೆ ನನ್ನ ತೊರೆದು

ಸಂಬಂಧ ಹರಿದು

ಸರಿದು ಹೋಗುವ ಸರಿತೆ ಇವಳಲ್ಲ,

ಇವಳು ನದಿಯಲ್ಲ.

ಕಾಣದ ಕಡಲಿನ ಕಡೆಗೆ

ಚೆನ್ನಮಲ್ಲಿಕಾರ್ಜುನನ ಎಡೆಗೆ

ತುಡಿವ ಹಾತೊರೆವ ತೊರೆ ಇವಳಲ್ಲ,

ಇವಳು ನದಿಯಲ್ಲ.

     -+-

ಇವಳೊಂದು ಪುಟ್ಟ ಕೊಳ:

ತನ್ನ ಹರವಿಗೆ

ದಕ್ಕಿದಷ್ಟು

ಸುತ್ತಲಿನ ಗಿಡ ಮರ ಬೆಟ್ಟ ಆಕಾಶ

ಹಗಲು ರವಿ ಮುಗಿಲು

ಇರುಳಲ್ಲಿ ಚಿಕ್ಕೆ ಚಂದ್ರಾಮರನು

ಮುಕ್ಕಾಗದಂತೆ ಪ್ರತಿಬಿಂಬಿಸುವ

ಕನ್ನಡಿ,

ಇವಳೊಂದು ಪುಟ್ಟ ಕೊಳ.

ಗೋಜುಗೋಜಲು ಬಳ್ಳಿನಾಳಗಳು

ಒಡಲಲ್ಲಿ;

ಗಾಯಗೊಳಿಸಿದ ಚೂಪು ಕಲ್ಲುಗಳು

ತಳದಲ್ಲಿ;

ನರುಗಂಪು ಸೂಸುತ್ತ ಅರಳಿದ ಕೆಂದಾವರೆ

ಮೇಲ್ಪದರದಲ್ಲಿ;

ಗಹನ, ಕಾಣಲು ಸರಳ,

ಇವಳೊಂದು ಪುಟ್ಟ ಕೊಳ.

ನಿರಾತಂಕದಿಂದ ನಾ ಈಜಾಡಲು

ಮಕ್ಕಳುಮರಿ ದೋಣಿಯಲ್ಲಿ

ವಿಹಾರ ಮಾಡಲು

ನಮ್ಮ ಹೂಹಣ್ಣು ತೋಟಕ್ಕೆ

ನೀರೂಡಲು

ಸದಾ ಸಿದ್ಧ ಸಮೃದ್ಧ ಜೀವಜಲ,

ಇವಳೊಂದು ಪುಟ್ಟ ಕೊಳ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.