ಶನಿವಾರ, ಜನವರಿ 18, 2020
26 °C
ಕ್ರಿಕೆಟ್‌: ದಕ್ಷಿಣ ಆಫ್ರಿಕಾ ನೆರವಿಗೆ ಫಿಲ್ಯಾಂಡರ್‌; ಕುತೂಹಲ ಕೆರಳಿಸಿದ ಪಂದ್ಯ

ಇಶಾಂತ್‌, ಶಮಿಗೆ ಆತಿಥೇಯರು ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್‌: ವಾಂಡರರ್ಸ್‌ ಕ್ರೀಡಾಂಗಣ ದಲ್ಲಿ ಭಾರತದ ವೇಗಿಗಳ ಅಚ್ಚರಿ ಪ್ರದರ್ಶನಕ್ಕೆ ಗುರುವಾರ ತತ್ತರಿಸಿದ್ದು ಆತಿಥೇಯ ದಕ್ಷಿಣ ಆಫ್ರಿಕಾ. ಏಕದಿನ ಸರಣಿಯ ಹೀನಾಯ ಸೋಲಿನ ಬಳಿಕ  ದೋನಿ ಬಳಗದ ಮೇಲಿನ ವಿಶ್ವಾಸ ಕಳೆದುಕೊಂಡವರೇ ಹೆಚ್ಚು. ಆದರೆ ಯುವ ಆಟಗಾರರನ್ನು ಒಳಗೊಂಡಿರುವ ಪ್ರವಾಸಿ ತಂಡ ಆತಿಥೇಯರ ಎದುರು ದಿಟ್ಟ ಪ್ರದರ್ಶನ ತೋರುತ್ತಿದೆ. ಹಾಗಾಗಿ ಟೆಸ್ಟ್‌ ಪಂದ್ಯ ಮತ್ತಷ್ಟು ಕುತೂಹಲ ಕೆರಳಿಸಿದೆ. ಇಲ್ಲಿ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿಯೇ ಅದು ಸಾಬೀತಾಗಿದೆ. ಮೊದಲ ದಿನ ವಿರಾಟ್‌ ಕೊಹ್ಲಿ ಎದುರಾಳಿಯ ಬೌಲರ್‌ಗಳಿಗೆ ತಿರುಗೇಟು ನೀಡಿದರೆ, ಎರಡನೇ ದಿನ ವೇಗಿ ಇಶಾಂತ್‌ ಶರ್ಮ (64ಕ್ಕೆ3) ಹಾಗೂ ಮೊಹಮ್ಮದ್‌ ಶಮಿ (48ಕ್ಕೆ2) ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.ಭಾರತದ ಮೊದಲ ಇನಿಂಗ್ಸ್‌ನ 280 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿದೆ. ಇನಿಂಗ್ಸ್‌ ಮುನ್ನಡೆ ಗಳಿಸಲು ಆತಿಥೇಯ ತಂಡದವರು ಇನ್ನೂ 68 ರನ್‌ ಗಳಿಸಬೇಕಾಗಿದೆ.ಮಳೆಯ ಸ್ವಾಗತ: ಎರಡನೇ ದಿನದಾಟಕ್ಕೂ ಮುನ್ನ ಭಾರಿ ಮಳೆ ಸುರಿಯಿತು. ಆದರೂ ಕ್ರೀಡಾಂಗಣದ ಸಿಬ್ಬಂದಿಯ ಚುರುಕು ಕೆಲಸದಿಂದಾಗಿ ದಿನದಾಟ ನಿಗದಿತ ಸಮಯಕ್ಕೆ ಆರಂಭವಾಯಿತು. ಪ್ರವಾಸಿ ತಂಡದ ಅಜಿಂಕ್ಯ ರಹಾನೆ ಹಾಗೂ ನಾಯಕ ದೋನಿ ಎಚ್ಚರಿಕೆಯ ಆಟಕ್ಕೆ ಮುಂದಾದರು. ವೇಗಿಗಳ ಎದುರು ಆ ಎಚ್ಚರಿಕೆಯ ಆಟ ಹೆಚ್ಚು ಹೊತ್ತು ನಡೆಯಲಿಲ್ಲ.ದಿನದ 9ನೇ ಓವರ್‌ನಲ್ಲಿ ಭಾರತಕ್ಕೆ ಆಘಾತ ಕಾದಿತ್ತು. ಹಿಂದಿನ ದಿನದ ತಮ್ಮ ಮೊತ್ತಕ್ಕೆ ಕೇವಲ ಎರಡು ರನ್‌ ಸೇರಿಸಿದ್ದ ದೋನಿ ವೇಗಿ

ಮಾರ್ನ್‌ ಮಾರ್ಕೆಲ್‌ಗೆ ವಿಕೆಟ್‌ ಒಪ್ಪಿಸಿದರು. ನಂತರದ ಓವರ್‌ನಲ್ಲಿ ರಹಾನೆ (47; 137 ಎ., 8 ಬೌಂ.,) ವಿಕೆಟ್‌ ಪಡೆದ ಫಿಲ್ಯಾಂಡರ್‌ ತಮ್ಮ ತಂಡ ಮೇಲುಗೈ ಸಾಧಿಸಲು ಕಾರಣರಾದರು.ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಪಡೆಯಲು ಆತಿಥೇಯ ವೇಗಿಗಳಿಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಕೊನೆಯ ಐದು ವಿಕೆಟ್‌ಗಳು ಕೇವಲ 25 ರನ್‌ಗಳ ಅಂತರದಲ್ಲಿ ಪತನವಾದವು. ಫಿಲ್ಯಾಂಡರ್‌ (61ಕ್ಕೆ4) ಹಾಗೂ ಮಾರ್ಕೆಲ್‌ (34) ಯಶಸ್ವಿ ಬೌಲರ್‌ ಎನಿಸಿದರು. ಹಾಗಾಗಿ ಭಾರತ 103 ಓವರ್‌ಗಳಲ್ಲಿ 280 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು. ಮೊದಲ ದಿನ 5 ವಿಕೆಟ್‌ ನಷ್ಟಕ್ಕೆ 255 ರನ್‌ ಗಳಿಸಿತ್ತು.ಸ್ಮಿತ್‌ ಉತ್ತಮ ಆರಂಭ: ದಕ್ಷಿಣ ಆಫ್ರಿಕಾ ತಂಡದ ನಾಯಕ ಗ್ರೇಮ್‌ ಸ್ಮಿತ್‌ ಹಾಗೂ ಅಲ್ವಿರೊ ಪೀಟರ್ಸನ್‌ ಸುಭದ್ರ ಬುನಾದಿ ಕಟ್ಟಲು ಪ್ರಯತ್ನಿಸಿದರು. ಜಹೀರ್‌ ಹಾಗೂ ಶಮಿ ಅವರ ಎಸೆತಗಳನ್ನು ಆರಂಭದಲ್ಲಿ ಚೆನ್ನಾಗಿಯೇ ಆಡಿದರು.ಈ ಸಂದರ್ಭದಲ್ಲಿ ಇಶಾಂತ್‌ಗೆ ಚೆಂಡು ನೀಡಿದ್ದು ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟಿತು. ಪೀಟರ್ಸನ್‌ ಅವರನ್ನು ಇಶಾಂತ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಆ ವಿಕೆಟ್‌ ಪತನದ ಬಳಿಕ ಜೊತೆಗೂಡಿದ ಸ್ಮಿತ್‌ ಹಾಗೂ ಆಮ್ಲಾ ಪ್ರವಾಸಿ ವೇಗಿಗಳನ್ನು ಸಮರ್ಥವಾಗಿ ಎದುರಿಸಿದರು. ಆದರೆ ಚಹಾ ವಿರಾಮದ ಬಳಿಕ ದಕ್ಷಿಣ ಆಫ್ರಿಕಾ ತಂಡದ ಪೆರೇಡ್‌ ಶುರುವಾಯಿತು.ಇಶಾಂತ್‌ ತಮ್ಮ 12ನೇ ಓವರ್‌ನ ಸತತ ಎರಡು ಎಸೆತಗಳಲ್ಲಿ ಆಮ್ಲಾ ಹಾಗೂ ಜಾಕ್‌ ಕಾಲಿಸ್‌ ವಿಕೆಟ್‌ ಪಡೆದು ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು. ನಂತರದ ಓವರ್‌ನಲ್ಲಿ ಸ್ಮಿತ್‌ ವಿಕೆಟ್‌ ಕಬಳಿಸಿದ್ದು ಎಡಗೈ ವೇಗಿ ಜಹೀರ್‌. ಅವರು ಸ್ಮಿತ್‌ ಎದುರಿನ ಹೋರಾಟದಲ್ಲಿ ಮತ್ತೊಮ್ಮೆ ಯಶಸ್ವಿಯಾದರು. ಒಂದು ಹಂತದಲ್ಲಿ 130ಕ್ಕೆ1 ವಿಕೆಟ್‌ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಪರಿಸ್ಥಿತಿ 130ಕ್ಕೆ4 ಬಂದು ನಿಂತಿತು. ಶೂನ್ಯಕ್ಕೆ ಮೂರು ವಿಕೆಟ್‌ಗಳು ಪತನವಾದವು. ಆ ನಂತರ ಶುರುವಾಗಿದ್ದು ಶಮಿ ಆರ್ಭಟ.ಶಮಿ ತಾವು ಮಾಡಿದ ಎರಡನೇ ಸ್ಪೆಲ್‌ನ ಮೊದಲ ಓವರ್‌ನಲ್ಲಿ ಎರಡು ವಿಕೆಟ್‌ ಪಡೆದು ಆತಿಥೇಯರಿಗೆ ದೊಡ್ಡ ಹೊಡೆತ ನೀಡಿದರು. ಡುಮಿನಿ ಹಾಗೂ ಡಿವಿಲಿಯರ್ಸ್‌ ವಿಕೆಟ್‌ ಪಡೆದು ಭಾರತದ ಅಭಿಮಾನಿಗಳಲ್ಲಿ ಸಂಭ್ರಮಕ್ಕೆ ಕಾರಣರಾದರು. ಆಗ ದಕ್ಷಿಣ ಆಫ್ರಿಕಾ ಸ್ಕೋರ್‌ 146ಕ್ಕೆ6. 16 ರನ್‌ಗಳ ಅಂತರದಲ್ಲಿ ಐದು ವಿಕೆಟ್‌ಗಳು ಪತನವಾದವು. ಆದರೆ ಫಿಲ್ಯಾಂಡರ್‌ ಅವರು ಬ್ಯಾಟಿಂಗ್‌ನಲ್ಲೂ ವಿಜೃಂಭಿಸಿ ತಂಡಕ್ಕೆ ಆಸರೆಯಾದರು. ಅವರಿಗೆ ಉತ್ತಮ ಬೆಂಬಲ ನೀಡಿದ್ದು ಪ್ಲೇಸಿಸ್‌.ಫಿಲ್ಯಾಂಡರ್‌ (ಬ್ಯಾಟಿಂಗ್‌ 48; 76 ಎ., 5 ಬೌಂ.,) ಹಾಗೂ ಪ್ಲೇಸಿಸ್‌ ಮುರಿಯದ ಏಳನೇ ವಿಕೆಟ್‌ಗೆ 67 ರನ್‌ ಸೇರಿಸಿದ್ದಾರೆ. ಆದರೂ ಆತಿಥೇಯರು ಆತಂಕದಲ್ಲಿದ್ದಾರೆ.

                                                           ಸ್ಕೋರ್ ವಿವರ 

ಭಾರತ: ಮೊದಲ ಇನಿಂಗ್ಸ್‌ 103 ಓವರ್‌ಗಳಲ್ಲಿ 280

(ಬುಧವಾರದ ಆಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ

5 ವಿಕೆಟ್‌ ನಷ್ಟಕ್ಕೆ 255)

ಅಜಿಂಕ್ಯ ರಹಾನೆ ಸಿ ಎಬಿ ಡಿವಿಲಿಯರ್ಸ್‌ ಬಿ ಫಿಲ್ಯಾಂಡರ್‌  47

ಎಂ.ಎಸ್‌. ದೋನಿ ಸಿ ಡಿವಿಲಿಯರ್ಸ್‌ ಬಿ ಮಾರ್ನ್‌ ಮಾರ್ಕೆಲ್‌ 19

ಆರ್‌.ಅಶ್ವಿನ್‌ ಔಟಾಗದೆ  11

ಜಹೀರ್‌ ಖಾನ್‌ ಎಲ್‌ಬಿಡಬ್ಲ್ಯು ಬಿ ವೆರ್ನಾನ್‌ ಫಿಲ್ಯಾಂಡರ್‌  00

ಇಶಾಂತ್‌ ಶರ್ಮ ಬಿ ವೆರ್ನಾನ್‌ ಫಿಲ್ಯಾಂಡರ್‌  00

ಮೊಹಮ್ಮದ್‌ ಶಮಿ ಬಿ ವೆರ್ನಾನ್‌ ಫಿಲ್ಯಾಂಡರ್‌  00

ಇತರೆ (ಬೈ–4, ಲೆಗ್‌ಬೈ–6, ವೈಡ್‌–14, ನೋಬಾಲ್‌–2)  26

ವಿಕೆಟ್‌ ಪತನ: 1–17 (ಧವನ್‌; 8.6); 2–24 (ವಿಜಯ್‌; 15.1); 3–113 (ಪೂಜಾರ; 42.4); 4–151 (ರೋಹಿತ್‌; 53.2); 5–219 (ಕೊಹ್ಲಿ; 75.3); 6–264 (ದೋನಿ; 98.6); 7–264 (ರಹಾನೆ; 99.4); 8–264 (ಜಹೀರ್‌; 99.5); 9–278 (ಇಶಾಂತ್‌; 101.6); 10–280 (ಶಮಿ; 102.6)

ಬೌಲಿಂಗ್‌: ಡೇಲ್‌ ಸ್ಟೇನ್‌ 26–7–61–1 (ವೈಡ್‌–2), ವೆರ್ನಾನ್‌ ಫಿಲ್ಯಾಂಡರ್‌ 27–6–61–4, ಮಾರ್ನ್‌ ಮಾರ್ಕೆಲ್‌ 23–12–34–3 (ನೋಬಾಲ್‌–2, ವೈಡ್‌–2), ಜಾಕ್‌ ಕಾಲಿಸ್‌ 14–4–37–1 (ವೈಡ್‌–2), ಇಮ್ರಾನ್ ತಾಹಿರ್‌ 8–0–47–0, ಜೀನ್‌ ಪಾಲ್‌ ಡುಮಿನಿ 5–0–30–0

ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್‌ 66 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 213

ಗ್ರೇಮ್‌ ಸ್ಮಿತ್‌ ಎಲ್‌ಬಿಡಬ್ಲ್ಯು ಬಿ ಜಹೀರ್‌ ಖಾನ್‌  68

ಅಲ್ವಿರೊ ಪೀಟರ್ಸನ್‌ ಎಲ್‌ಬಿಡಬ್ಲ್ಯು ಬಿ ಇಶಾಂತ್‌ ಶರ್ಮ  21

ಹಾಶಿಮ್‌ ಆಮ್ಲಾ ಬಿ ಇಶಾಂತ್‌ ಶರ್ಮ  36

ಜಾಕ್‌ ಕಾಲಿಸ್‌ ಎಲ್‌ಬಿಡಬ್ಲ್ಯು ಬಿ ಇಶಾಂತ್‌ ಶರ್ಮ  00

ಎಬಿ ಡಿವಿಲಿಯರ್ಸ್‌ ಎಲ್‌ಬಿಡಬ್ಲ್ಯು ಬಿ ಮೊಹಮ್ಮದ್‌ ಶಮಿ 1 3

ಜೀನ್‌ ಪಾಲ್‌ ಡುಮಿನಿ ಸಿ ಮುರಳಿ ವಿಜಯ್‌ ಬಿ ಮೊಹಮ್ಮದ್‌ ಶಮಿ  02

ಫಾಫ್‌ ಡು ಪ್ಲೇಸಿಸ್‌ ಬ್ಯಾಟಿಂಗ್‌  17

ವೆರ್ನಾನ್‌ ಫಿಲ್ಯಾಂಡರ್‌ ಬ್ಯಾಟಿಂಗ್‌  48

ಇತರೆ (ಲೆಗ್‌ಬೈ–4, ವೈಡ್‌–1, ನೋಬಾಲ್‌–3) 08

ವಿಕೆಟ್‌ ಪತನ: 1–37 (ಪೀಟರ್ಸನ್‌; 13.1); 2–130 (ಆಮ್ಲಾ; 38.1); 3–130 (ಕಾಲಿಸ್‌; 38.2); 4–130 (ಸ್ಮಿತ್‌; 39.3); 5–145 (ಡುಮಿನಿ; 44.1); 6–146 (ಡಿವಿಲಿಯರ್ಸ್‌; 44.3)

ಬೌಲಿಂಗ್‌: ಜಹೀರ್‌ ಖಾನ್‌ 22–4–72–1 (ವೈಡ್‌–1), ಮೊಹಮ್ಮದ್‌ ಶಮಿ 18–3–48–2, ಇಶಾಂತ್‌ ಶರ್ಮ 20–4–64–3 (ನೋಬಾಲ್‌–3), ಆರ್‌.ಅಶ್ವಿನ್‌ 6–0–25–0

ಪ್ರತಿಕ್ರಿಯಿಸಿ (+)