ಇಶಾನುಭವ

7

ಇಶಾನುಭವ

Published:
Updated:
ಇಶಾನುಭವ

ಮೂರು ವರ್ಷದ ನಂತರ ನಟಿ ಇಶಾ ಕೊಪ್ಪೀಕರ್ ನಗರಕ್ಕೆ ಬಂದಿದ್ದರು. ಇಲ್ಲಿನ ಹವಾಮಾನ, ಊಟವಷ್ಟೇ ಅಲ್ಲದೆ ಅವರ ಮಾತು ಈಗಿನ ಚಿತ್ರರಂಗದ ಸುತ್ತ ಗಿರಕಿ ಹೊಡೆಯಿತು.ಮೂವತ್ತಮೂರು ವಯಸ್ಸಿನ ಇಶಾ ಹಿಂದೊಮ್ಮೆ ರವಿಚಂದ್ರನ್ ನಾಯಕರಾಗಿದ್ದ `ಓ ನನ್ನ ನಲ್ಲೆ', ವಿಷ್ಣುವರ್ಧನ್ ಅಭಿನಯದ `ಸೂರ್ಯವಂಶ' ಚಿತ್ರಗಳಿಗೆ ಬಣ್ಣಹಚ್ಚಿದ್ದವರು. ಹಾಗಾಗಿ ಬೆಂಗಳೂರು ಅವರಿಗೆ ಚಿರಪರಿಚಿತ. ಈಗ ಕನ್ನಡದ ಯಾವ ಚಿತ್ರಗಳೂ ಅವರ ನೆನಪಿಗೆ ಬರುವುದಿಲ್ಲ ಅಥವಾ ಆ ನೆನಪಿನ ಹಂಗು ಅವರಿಗಿಲ್ಲ. ನಗರದಲ್ಲಿ ಅವರು ಹಿಂದೆ ಸ್ನೇಹಿತೆಯರ ಜೊತೆ ಕುಳಿತು ಹರಟುತ್ತಿದ್ದ `ಕಾಸಾ ಪಿಕೋಲಾ' ಎಂಬ ಸ್ಥಳದ ರಸಾನುಭವಗಳು ಮನದಲ್ಲಿ ಇನ್ನೂ ಹಸಿರಾಗಿದೆ. ಈಗ ಯುಬಿ ಸಿಟಿಯಲ್ಲಿ ಸುತ್ತಾಡುವುದು ಅವರ ಬಯಕೆ.ಇಶಾ ಚಿತ್ರರಂಗಕ್ಕೆ ಕಾಲಿಟ್ಟದ್ದು 1998ರಲ್ಲಿ; `ಕಾದಲ್ ಕವಿದೈ' ತಮಿಳು ಚಿತ್ರದ ಮೂಲಕ. ಆಮೇಲೆ ತೆಲುಗು, ಕನ್ನಡ ಚಿತ್ರರಂಗದ ಓಣಿಗಳಿಗೂ ಪರಿಚಿತರಾದ ಅವರು ಹೆಚ್ಚು ಸದ್ದು ಮಾಡಿದ್ದು ಬಾಲಿವುಡ್‌ನಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ. ಈಗ ಅವರು ಅಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಹಿಂದಿ ಚಿತ್ರರಂಗದಲ್ಲಿ ಅವಕಾಶ ತಗ್ಗಿದ ಮೇಲೆ ಮರಾಠಿ ಚಿತ್ರರಂಗ ಕೈಬೀಸಿ ಕರೆದಿದೆ. `ಮಾಟ್' ಎಂಬ ಮರಾಠಿ ಚಿತ್ರಕ್ಕೆ ಅವರು ಸಿದ್ಧತೆ ನಡೆಸಿದ್ದಾರೆ. ಕೇವಲ ಅಭಿನಯ ಹಾಗೂ ದೇಹಭಾಷೆ ಕಲಿಯುವುದಕ್ಕೆ ಆ ಸಿದ್ಧತೆ ಸೀಮಿತವಾಗಿಲ್ಲ. ಮರಾಠಿ ಭಾಷೆಯನ್ನು ತಮ್ಮದಾಗಿಸಿಕೊಳ್ಳುವುದರಲ್ಲಿ ಅವರು ತಲ್ಲೆನರಾಗಿದ್ದಾರೆ. ಅಷ್ಟೇ ಅಲ್ಲದೆ ಹೋಟೆಲ್ ಉದ್ಯಮಕ್ಕೂ ಅವರು ಕಾಲಿರಿಸುತ್ತಿದ್ದಾರೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಅವರ ಕನಸಿನ ಉದ್ಯಮ ಪ್ರಾರಂಭವಾಗಲಿದೆ.`ಸಿನಿಮಾ ನನಗೆ ಎಂದಿಗೂ ಆದ್ಯತೆ. ಆದರೆ ಅದಕ್ಕಾಗಿ ಬೇರೆ ಕನಸುಗಳನ್ನು ಮರೆಯುವವಳು ನಾನಲ್ಲ. ಹೋಟೆಲ್ ಉದ್ಯಮದಲ್ಲಿ ತೊಡಗಬೇಕೆಂಬುದು ದೀರ್ಘ ಕಾಲದ ಬಯಕೆಯಾಗಿತ್ತು. ಅದು ಈಡೇರುವ ಕಾಲ ಸನ್ನಿಹಿತವಾಗಿರುವುದು ಸಂತಸದ ವಿಚಾರ' ಎಂದು ಚೌಕಾಸಿ ಮಾಡಿದಂತೆ ನಗುವ ಇಶಾ ಈಗಲೂ ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳುವುದಿಲ್ಲವಂತೆ.`ಸಿನಿಮಾ ಬಹಳ ವಿಚಿತ್ರ ಮಾಧ್ಯಮ. ನಾವು ನೋಡುವ ಸ್ಕ್ರಿಪ್ಟ್ ಚೆನ್ನಾಗಿರುತ್ತದೆ. ಆದರೆ ಪ್ರೇಕ್ಷಕರು ಅದನ್ನು ನಿರಾಕರಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವ ಚಿತ್ರ ಎಲ್ಲಾ ದೃಷ್ಟಿಕೋನದಿಂದಲೂ ಉತ್ತಮ ಎನ್ನಿಸುತ್ತದೆ ಎಂಬುದನ್ನು ವಿವೇಚಿಸಬೇಕು. ಬಜೆಟ್, ಬ್ಯಾನರ್, ತಂತ್ರಜ್ಞರ ತಂಡ, ಎಲ್ಲವೂ ಮುಖ್ಯ. ಅಂದುಕೊಂಡ ಯೋಚನೆಯನ್ನು ತೆರೆಮೇಲೆ ಸಮರ್ಥವಾಗಿ ತೋರಿಸುವುದಷ್ಟೇ ಅಲ್ಲದೆ, ಗೆಲ್ಲಿಸುವ ಸರಿದಾರಿಯಲ್ಲಿ ಹೋಗುವವರನ್ನು ನಾನು ಮೆಚ್ಚಿಕೊಳ್ಳುತ್ತೇನೆ. ಈ ವಾಸ್ತವದ ಅರಿವಿದ್ದರೂ ಕೊನೆಗೆ ಚಿತ್ರವನ್ನು ಒಪ್ಪಿಕೊಳ್ಳುವುದು ಸ್ಕ್ರಿಪ್ಟ್ ನೋಡಿಯೇ ಅಲ್ಲವೇ? ಆದಷ್ಟೂ ಎಚ್ಚರಿಕೆಯಿಂದ ನಾನು ಸ್ಕ್ರಿಪ್ಟ್ ಓದುತ್ತೇನೆ' ಎನ್ನುವ ಇಶಾಗೆ ಸ್ಟೀವಲ್ ಸ್ಪೀಲ್‌ಬರ್ಗ್, ಸಂಜಯ್ ಲೀಲಾ ಬನ್ಸಾಲಿ ಹಾಗೂ ರಾಜ್‌ಕುಮಾರ್ ಹಿರಾನಿ ಇಷ್ಟದ ನಿರ್ದೇಶಕರು.`ಒಂದೂವರೆ ದಶಕದ ಹಿಂದೆ ನಾನು ಚಿತ್ರರಂಗಕ್ಕೆ ಬಂದಾಗ ಪ್ರೇಕ್ಷಕರ ಮನಸ್ಥಿತಿ ಬೇರೆಯೇ ಆಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ದೊಡ್ಡ ಬಜೆಟ್‌ನ ಕೆಟ್ಟ ಚಿತ್ರವನ್ನು ಜನ ಹಿಂದುಮುಂದು ಯೋಚಿಸದೆ ನಿರಾಕರಿಸುತ್ತಾರೆ. ಹಾಕಿರುವ ಹಣ, ಅದ್ದೂರಿ ಸೆಟ್, ಅದ್ಭುತ ನಟನೆ ಹೀಗೆ ಬಿಡಿಬಿಡಿಯಾದ ಉತ್ತಮ ಸಂಗತಿಗಳನ್ನಷ್ಟೇ ಜನ ನೋಡುತ್ತಾ ಕೂರುವ ಜಮಾನ ಇದಲ್ಲ. ಸಿನಿಮೀಯ ತರ್ಕದ ಮಟ್ಟ ಕೂಡ ಈಗ ಬದಲಾಗಿದೆ. ಸುಮ್ಮನೆ ಏನನ್ನೋ ತೋರಿಸಿ, ನಂಬಿಸಿ, ಖುಷಿಪಡಿಸಬಹುದು ಎಂಬ ಕಾಲ ದೂರವಾಗಿದೆ'- ಇದು ಪ್ರೇಕ್ಷಕರ ಮನಸ್ಥಿತಿಯ ಬಗೆಗೆ ಇಶಾ ಅವರಿಗೆ ಇರುವ ಅಭಿಪ್ರಾಯ.  ಮಹಿಳೆಯರಿಂದ ಮಾತ್ರ ಸಾಧ್ಯವಿರುವ ಯಾವುದೇ ಕೆಲಸಕ್ಕೂ ಚಿತ್ರರಂಗ ಬೆನ್ನುಮಾಡಬಾರದು ಎಂದು ಸಲಹೆ ನೀಡುವ ಇಶಾ ಐಟಂ ಹಾಡುಗಳನ್ನು ಇಂದಿಗೂ ಮೆಚ್ಚಿಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry