ಮಂಗಳವಾರ, ಮೇ 11, 2021
25 °C

ಇಷ್ಟು ದಿನ ಪಾತ್ರಧಾರಿ; ಈಗ ಅಕಾಡೆಮಿ ಸೂತ್ರಧಾರಿ!!

ಪ್ರಜಾವಾಣಿ ವಾರ್ತೆ ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

ಉಡುಪಿ: ಕಳೆದ 35 ವರ್ಷಗಳಿಂದ ಬಡಗುತಿಟ್ಟು, ಬಡಾ ಬಡಗುತಿಟ್ಟು, ತೆಂಕುತಿಟ್ಟು ಯಕ್ಷಗಾನ ಮತ್ತು ತಾಳಮದ್ದಲೆ ಕ್ಷೇತ್ರಗಳಲ್ಲಿ ವೇಷಧಾರಿಯಾಗಿ, ಅರ್ಥಧಾರಿಯಾಗಿ ಅನುಭವವಿರುವ ಮಲ್ಪೆಯ ಪ್ರೊ.ಎಂ.ಲಕ್ಷ್ಮೀನಾರಾಯಣ ಸಾಮಗ (ಎಂ.ಎಲ್.ಸಾಮಗರು ಎಂದೇ ಖ್ಯಾತಿ)  ಪ್ರಸ್ತುತ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ನಿಯೋಜಿತರಾಗಿದ್ದಾರೆ. ಇದು ಸಹಜವಾಗಿಯೇ ಕರಾವಳಿ ಅಷ್ಟೇ ಅಲ್ಲ, ಯಕ್ಷಗಾನ ಪ್ರಿಯರಲ್ಲಿ ಖುಷಿ ತಂದಿದೆ.`ಸಾಮಗ~ ಮನೆತನವೇ ಯಕ್ಷಗಾನ ಹಾಗೂ ತಾಳಮದ್ದಲೆ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕುಟುಂಬ. ಅಂಥ ಕುಟುಂಬದ ಅರ್ಥದಾರಿಯೇ ಈಗ ಸೂತ್ರಧಾರಿಯೂ  ಆಗಿದ್ದಾರೆ. ಯಕ್ಷಗಾನ ಕ್ಷೇತ್ರದ ಅಗ್ರಮಾನ್ಯ ಕಲಾವಿದರ ಮನೆತನದಲ್ಲಿ ಶಂಕರನಾರಾಯಣ ಸಾಮಗ ಅವರ ಪುತ್ರನಾಗಿ 1949ರಲ್ಲಿ ಜನನ.ಎಂ.ಎ.ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ. 40 ವರ್ಷಗಳಿಂದ ಇಂಗ್ಲಿಷ್ ಭಾಷಾ ಪ್ರಾಧ್ಯಾಪಕರಾಗಿ ಸೇವೆ. ಉಡುಪಿ ಎಂಜಿಎಂ ಕಾಲೇಜಿನಲ್ಲಿ 3 ವರ್ಷ ಪ್ರಾಂಶುಪಾಲರಾಗಿ 2007ರಲ್ಲಿ ನಿವೃತ್ತಿ. ಪ್ರಸ್ತುತ ತೆಂಕನಿಡಿಯೂರಿನ ಸರ್ಕಾರಿ ಕಾಲೇಜಿನಲ್ಲಿ ಸ್ನಾತಕೋತ್ತರ ತರಗತಿಯಲ್ಲಿ ಇಂಗ್ಲಿಷ್ ಭಾಷೆಯ ಅತಿಥಿ ಉಪನ್ಯಾಸಕ.ಯಕ್ಷಗಾನ ಅನುಭವಿ: ಬಡಗುತಿಟ್ಟಿನ ಹಿರಿಯ ಕಲಾವಿದರಾದ ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ನೆಬ್ಬೂರು ನಾರಾಯಣ ಭಾಗವತ, ಹೊಸ್ತೋಟ ಮಂಜುನಾಥ ಭಾಗವತ, ಗೋಡೆ ನಾರಾಯಣ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಮುಂತಾದ ದಿಗ್ಗಜರೊಂದಿಗೆ ಸಹಕಲಾವಿದರಾಗಿ ಉಡುಪಿ, ಸಾಗರ, ಶಿರಸಿ, ಕುಮಟಾ, ಅಂಕೋಲ, ಕಾರವಾರ, ಹುಬ್ಬಳ್ಳಿ ಮತ್ತಿತರೆಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.ತೆಂಕುತಿಟ್ಟಿನ ಯಕ್ಷಗಾನದಲ್ಲಿ ಬಲಿಪ ನಾರಾಯಣ ಭಾಗವತ, ದಾಮೋದರ ಮಂಡೆಚ್ಚ, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ, ಪದ್ಯಾಣ ಗಣಪತಿ ಭಟ್, ನಿಡ್ಲೆ ನರಸಿಂಹ ಭಟ್, ಬಣ್ಣದ ಮಾಲಿಂಗ, ಕೆ.ಗೋವಿಂದ ಭಟ್, ಕುಂಬ್ಳೆ ಸುಂದರ ರಾವ್, ಮಂಟಪ ಪ್ರಭಾಕರ ಉಪಾಧ್ಯ, ಪುತ್ತೂರು ಶ್ರೀಧರ ಭಂಡಾರಿ ಮುಂತಾದ ಹಿಮ್ಮೇಳ-ಮುಮ್ಮೇಳ ಕಲಾವಿದರೊಂದಿಗೆ ಯಕ್ಷಗಾನ ಆಟಗಳಲ್ಲಿ ಪ್ರದರ್ಶನ ನೀಡಿದ್ದಾರೆ.ಎಡನೀರು ಯಕ್ಷಗಾನ ಮೇಳದಲ್ಲಿ ಆಗಾಗ್ಗೆ ಭಾಗವಹಿಸುವ ಅತಿಥಿ ನಟ. ದೇವಿ, ದ್ರೌಪದಿ ಮುಂತಾದ ಸ್ತ್ರೀಪಾತ್ರ ನಿರ್ವಹಣೆ, ಕೊಳ್ಯೂರು ರಾಮಚಂದ್ರ ರಾಯರೊಂದಿಗೆ ನಳ, ಹರಿಶ್ಚಂದ್ರ, ಅರ್ಜುನ ಇತ್ಯಾದಿ ಪಾತ್ರವನ್ನೂ ಮಾಡಿದ್ದಾರೆ. ತಾಳಮದ್ದಲೆಯಲ್ಲಿ ಹಿರಿಯ ಕಲಾವಿದರೊಂದಿಗೆ ಸಾಮಗರು ಪಾಲ್ಗೊಳ್ಳುತ್ತಾರೆ. ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್ಟ, ಪೆರ್ಲ ಕೃಷ್ಣ ಭಟ್, ಡಾ.ಪ್ರಭಾಕರ ಜೋಷಿ ಮುಂತಾದ ಹಿರಿಯ ಅರ್ಥಧಾರಿಗಳೊಂದಿಗೆ ಮಂಗಳೂರು, ಕಾಸರಗೋಡು, ಪುತ್ತೂರು, ಬೆಂಗಳೂರು, ಮೈಸೂರು, ಮುಂಬೈ, ಕೋಲ್ಕತ್ತಾ, ದೆಹಲಿ, ಚೆನ್ನೈನಲ್ಲಿಯೂ ಪಾಲ್ಗೊಂಡಿದ್ದಾರೆ.ದೇಶದ ಪ್ರಮುಖ ನಗರಗಳು, ರಾಷ್ಟ್ರಪತಿ ಭವನ, ಇಟಲಿ, ಬೆಹರೈನ್, ಸಿಂಗಾಪುರ ಮುಂತಾದೆಡೆ ಪ್ರದರ್ಶನ. ಚೆನ್ನೈನ `ಕೃಷ್ಣಗಾನ ಸಭಾ~ದವರ ರಾಷ್ಟ್ರಮಟ್ಟದ ನೃತ್ಯಕಲಾ ಸಮ್ಮೇಳನದಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆಗೆ ಪ್ರಥಮ ಬಹುಮಾನ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ತಾಲ್ಲೂಕು ಸಾಹಿತ್ಯ ಸಮ್ಮೇಳನದ ಪುರಸ್ಕಾರ, ಮುಂಬೈನ ರಾಷ್ಟ್ರಮಟ್ಟದ ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ , ಇತರೆ ಹಲವು ಸಂಘ ಸಂಸ್ಥೆಗಳಿಂದ ಸಾಮಗರಿಗೆ ಪುರಸ್ಕಾರ ಸಂದಿದೆ.ಬಿ.ವಿ.ಕಾರಂತ, ಉದ್ಯಾವರ ಮಾಧವಾಚಾರ್ಯ ಮತ್ತಿತರರ ಪ್ರಯೋಗಾತ್ಮಕ ನಾಟಕ, ಯಕ್ಷಗಾನ, ನೃತ್ಯ ರೂಪಕಗಳಲ್ಲಿ ಪ್ರಧಾನ ನಟರಾಗಿ ಮಿಂಚಿದ್ದಾರೆ. ಕೆರೆಮನೆ ಶಂಭು ಹೆಗಡೆ ನಿಧನಾನಂತರ ಕೆರೆಮನೆ ಶಿವಾನಂದ ಹೆಗಡೆ ನೇತೃತ್ವದ ಇಡಗುಂಜಿ ಯಕ್ಷಗಾನ ಮಂಡಳಿಯ ಹೆಚ್ಚಿನ ಪ್ರದರ್ಶನಗಳಲ್ಲಿ ಸಾಮಗರು ಮುಖ್ಯ ಪಾತ್ರಧಾರಿ. ಸಿಂಗಾಪುರದಲ್ಲಿ ಏಷ್ಯನ್ ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್‌ನಲ್ಲಿ ಯಕ್ಷಗಾನ ಪ್ರದರ್ಶಿಸಿದ್ದಾರೆ. ಶಿವರಾಮ ಕಾರಂತರ ಜತೆ ಯಕ್ಷಗಾನ ನೃತ್ಯ ರೂಪಕ ತಂಡದಲ್ಲಿ ಇಟಲಿಯಲ್ಲಿ 3 ವಾರ ಪ್ರದರ್ಶಿಸಿದ್ದಾರೆ.ಇಂಗ್ಲಿಷ್ ಅರ್ಥದಾರಿಕೆ: ಯಕ್ಷಗಾನದ ಬಗ್ಗೆ ಕನ್ನಡ, ಇಂಗ್ಲಿಷ್‌ನಲ್ಲಿ ಲೇಖನ ಬರೆದಿರುವ ಸಾಮಗರು ನವದೆಹಲಿಯ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ಇದರ ಗೌರವ ಸಂಪಾದಕರು. ಇಂಗ್ಲಿಷ್ ಅರ್ಥದಾರಿಕೆಯ ಪ್ರಧಾನ ರೂವಾರಿಯೂ ಹೌದು. ಏಸುಕ್ರಿಸ್ತನ ಕಥೆಯನ್ನು ಇಂಗ್ಲಿಷ್ ಯಕ್ಷಗಾನಕ್ಕೆ ಅಳವಡಿಸಿ ಹಲವೆಡೆ ಪ್ರದರ್ಶನ ನೀಡಿದ್ದಾರೆ.ಸಾಮಗರು ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ಸದಸ್ಯ. ಉಡುಪಿ ಯಕ್ಷಗಾನ ಕಲಾರಂಗದ ಗೌರವ ಸಲಹೆಗಾರ. ಯಕ್ಷಗಾನವನ್ನು ಅಕಾಡೆಮಿಕ್ ಆಗಿಯೇ ಅಧ್ಯಯನ ಮಾಡಬೇಕು ಎನ್ನುವ ನಿಲುವಿಗೆ ಬದ್ಧರಾಗಿರುವ ಸಾಮಗರು ಯಕ್ಷಗಾನ ಕಲಿಕಾ ಕೇಂದ್ರಗಳನ್ನು ಹಾಗೂ ಕಲಾವಿದರ ಸಹಯೋಗದಲ್ಲಿ ಇನ್ನಷ್ಟು ಹೊಸ ಕಾರ್ಯಕ್ರಮ ರೂಪಿಸುವ ಯೋಜನೆ ಹೊಂದಿದ್ದಾರೆ.ಒಟ್ಟಿನಲ್ಲಿ ಕರಾವಳಿಯಲ್ಲಿ ಯಕ್ಷಗಾನ ಕಲೆ ನಶಿಸುತ್ತಿದೆ ಎನ್ನುವ ಕೂಗನ್ನು ಅಳಿಸುವ ನಿಟ್ಟಿನಲ್ಲಿ ಅವರು ದಿಟ್ಟ ಹೆಜ್ಜೆ ಇಡಲಿದ್ದಾರೆ ಎನ್ನುವ ವಿಶ್ವಾಸ ಯಕ್ಷಗಾನ ಪ್ರಿಯರದ್ದು.ಸನ್ಮಾನ: ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ನಿಯೋಜಿತ ಸಾಮಗರನ್ನು ಅಭಿನಂದಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಉಡುಪಿಯ ಭಾರತ್ ಸ್ವಾಭಿಮಾನ ಟ್ರಸ್ಟ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಘಟಕ ಅಧ್ಯಕ್ಷ ಉಮೇಶ್ ಕೋಟ್ಯಾನ್ ಗೌರವಿಸಿದರು. ಯೋಗೀಶ್ ಕೋಟ್ಯಾನ್, ಹರೀಶ್ ಪಡುಕೆರೆ, ಪ್ರವೀಣ್ ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಇದ್ದರು.

`ಯಕ್ಷಗಾನಕ್ಕೆ ಅಕಾಡೆಮಿಕ್ ಶಿಸ್ತು~

`ಯಕ್ಷಗಾನ ಅಕಾಡೆಮಿ ಬೇರೆ, ಕಲಾವಿದರು ಬೇರೆಯಲ್ಲ. ಅಂತಿಮ ಫಲಾನುಭವಿಗಳು ಕಲಾವಿದರು. ಹೀಗಾಗಿ ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಲೋಚಿಸಿ ಯೋಜನೆ ರೂಪಿಸುವ ಉದ್ದೇಶ ಹೊಂದಿದ್ದೇನೆ. ವಿಶೇಷವಾಗಿ ಯಕ್ಷಗಾನ ಅಕಾಡೆಮಿಕ್ ಆಗಿ ಅಧ್ಯಯನ ಮಾಡುವ ವಿಷಯವಾಗಬೇಕು. ಇತರೆ ಕಲೆಗಳಿಗೆ ಸರಿಸಮನಾಗಿ ಅದು ನಿಲ್ಲುವಂತಾಗಬೇಕು. ಶಾಸ್ತ್ರೀಯವಾಗಿ ಈ ಕಲೆ ಪರಿಷ್ಕಾರವಾಗಬೇಕು. ಇದಕ್ಕಾಗಿ ಯೋಜನೆ ರೂಪಿಸಬೇಕಿದೆ. ಈಗಾಗಲೇ ಇದಕ್ಕೆ ಪೂರಕವಾಗಿ ಯಕ್ಷಗಾನ ಅಕಾಡೆಮಿ ಪಠ್ಯಪುಸ್ತಕ ರಚನೆ ಕಾರ್ಯ ಶೇ 75ರಷ್ಟು ಮುಗಿದಿದೆ. ಹಾಗೆಯೇ ಹಿಂದಿನ ಅಧ್ಯಕ್ಷರು ಹಮ್ಮಿಕೊಂಡ ಯೋಜನೆಗಳನ್ನು ಮುಂದುವರಿಸುವುದು ಮತ್ತು ಯಕ್ಷಗಾನ ಕಲಿಕಾ ಕೇಂದ್ರಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ರೂಪಿಸುವುದು ಉದ್ದೇಶ.~

-ಪ್ರೊ.ಎಂ.ಎಲ್.ಸಾಮಗ

ಯಕ್ಷಗಾನ ಅಕಾಡೆಮಿ ನಿಯೋಜಿತ ಅಧ್ಯಕ್ಷ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.