ಮಂಗಳವಾರ, ಆಗಸ್ಟ್ 11, 2020
27 °C

ಇಷ್ಟೊಂದು ಸಿನಿಮಾ ಮಾಡಿದ್ರೆ ನೋಡೋರ‌್ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಷ್ಟೊಂದು ಸಿನಿಮಾ ಮಾಡಿದ್ರೆ ನೋಡೋರ‌್ಯಾರು?

ಬೆಂಗಳೂರು: `ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಯ ಚಿತ್ರಗಳು ಚಿತ್ರಮಂದಿರಕ್ಕೆ ಬರುತ್ತಿದ್ದು, ಕನ್ನಡ ಚಿತ್ರಗಳೇ ವರ್ಷಕ್ಕೆ ನೂರಾರು ಸಂಖ್ಯೆಯಲ್ಲಿ ಬಿಡುಗಡೆಯಾದರೆ ಅಷ್ಟೊಂದು ಸಂಖ್ಯೆಯ ಚಿತ್ರಗಳನ್ನು ನೋಡೋರ‌್ಯಾರು~ ಎಂದು ಹಿರಿಯ ಚಿತ್ರನಟಿ ಪ್ರತಿಮಾದೇವಿ ಆತಂಕದಿಂದ ಪ್ರಶ್ನಿಸಿದರು.ಕರ್ನಾಟಕ ಚಲನಚಿತ್ರ ಅಕಾಡೆಮಿಯು ಶನಿವಾರ ನಗರದಲ್ಲಿ ಏರ್ಪಡಿಸಿದ್ದ `ಬೆಳ್ಳಿಹೆಜ್ಜೆ~ ಕಾರ್ಯಕ್ರಮದಲ್ಲಿ ತಮ್ಮ ಚಿತ್ರರಂಗದ ಅನುಭವ ಹಂಚಿಕೊಂಡ ಅವರು, `ಹಲವಾರು ಚಿತ್ರಗಳು ಬರುತ್ತಿದ್ದರೂ ಯಾವುದನ್ನು ನೋಡಬೇಕು ಎಂಬ ಗೊಂದಲ ಉಂಟಾಗುತ್ತದೆ. ಜೊತೆಗೆ ಸಾಕಷ್ಟು ಹಣ ತೊಡಗಿಸಿ ಚಿತ್ರಗಳನ್ನು ನಿರ್ಮಿಸುವುದೂ ಅಪಾಯಕಾರಿಯಾಗಿದ್ದು, ಆದಷ್ಟೂ ಕಡಿಮೆ ಬಜೆಟ್‌ನ, ಕೆಲವೇ ಚಿತ್ರಗಳನ್ನು ನಿರ್ಮಿಸುವುದು ಉತ್ತಮ~ ಎಂದು ಸಲಹೆ ನೀಡಿದರು.`ಇಂದಿನ ಸಿನಿಮಾ ನಾಯಕ-ನಾಯಕಿಯರಿಗೆ ಪ್ರತ್ಯೇಕ ಕೊಠಡಿ, ವಾಹನಗಳನ್ನು ಒದಗಿಸಬೇಕಾಗಿದೆ.ಆದರೆ ನಮ್ಮ ಕಾಲದಲ್ಲಿ ಇಂಥ ಪರಿಸ್ಥಿತಿ ಇರಲಿಲ್ಲ. ಎಲ್ಲ ಕಲಾವಿದೆಯರು ಒಂದೇ ಕೋಣೆಯಲ್ಲಿ ಮಲಗುತ್ತಿದ್ದೆವು. ಅಡುಗೆಯನ್ನೂ ನಾವೇ ಮಾಡಿಕೊಂಡು ಉಳಿದವರಿಗೆ ಪೂರೈಸುತ್ತಿದ್ದೆವು. ಆದರೆ ಆ ಪರಿಸ್ಥಿತಿ ಇಂದು ಇಲ್ಲ~ ಎಂದು ವಿಷಾದಿಸಿದರು.`ಹಲವು ಕಂಪೆನಿಗಳ ನಾಟಕದಲ್ಲಿ ಪಾತ್ರ ಮಾಡುವ ಮೂಲಕ ನಟನಾ ಕ್ಷೇತ್ರಕ್ಕೆ ಪ್ರವೇಶ. ಪ್ರತಿಮಾ ನಾಟಕ ಮಂಡಳಿ ಸೇರಿದಾಗ ಅಲ್ಲಿ ಮೊದಲಿನ ಹೆಸರು `ಮೋಹಿನಿ~ ಬದಲು `ಪ್ರತಿಮಾ~ ಎಂದು ನಾಮಕರಣ ಮಾಡಿದರು. ಚಿತ್ರ ನಿರ್ಮಾಪಕ ಡಿ. ಶಂಕರ್ ಸಿಂಗ್‌ರೊಂದಿಗೆ ಮದುವೆ. ನಂತರ ಅವರು ನಿರ್ಮಿಸಿದ ಹಲವು ಚಿತ್ರಗಳಲ್ಲಿ ನಟನೆ. ಕೃಷ್ಣಲೀಲಾ, ಬಿಂದು ಬಿ, ನಾಗಕನ್ಯೆ, ಪ್ರಭುಲಿಂಗಲೀಲೆ, ಜಗನ್ಮೋಹಿನಿ, ಇತ್ತೀಚಿನ ರಾಮ ಶ್ಯಾಮ ಭಾಮ ಸೇರಿದಂತೆ 65 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ~ ಎಂದು ವಿವರಿಸಿದರು.ಮರೆಯಲಾಗದ ಘಳಿಗೆ: ಚಿತ್ರವೊಂದರ ಚಿತ್ರೀಕರಣಕ್ಕೆ ಬಿಸಿಲಿಗಾಗಿ ಕಾದದ್ದು. ಚಿತ್ರೀಕರಣದ ನಂತರ ಕ್ಯಾಮೆರಾಮನ್‌ನ ಅಚಾತುರ್ಯದಿಂದ ಕ್ಯಾಮೆರಾದ ಫಿಲಂ ತೆಗೆದಾಗ ಎಲ್ಲ ದೃಶ್ಯಗಳು ನಾಶವಾದದ್ದು.ಮತ್ತೊಂದು ಸಂದರ್ಭದಲ್ಲಿ ಮೇಕೆದಾಟುವಿಗೆ ಚಿತ್ರೀಕರಣಕ್ಕೆಂದು ಹೋಗುವಾಗ 10 ತಿಂಗಳ ಕೂಸಾಗಿದ್ದ ಪುತ್ರ ರಾಜೇಂದ್ರಸಿಂಗ್ ಬಾಬು (ಹಿರಿಯ ಚಲನಚಿತ್ರ ನಿರ್ದೇಶಕ)ರನ್ನು ನಾಲ್ಕು ಮೈಲಿವರೆಗೆ ಹೊತ್ತುಕೊಂಡೇ ಹೋದದ್ದು ಮರೆಯಲಾಗದ ಘಳಿಗೆ. ಆದರೆ ಪುತ್ರ ಸಂಗ್ರಾಮ್‌ಸಿಂಗ್ ಅಕಾಲ ಮರಣಕ್ಕೀಡಾದದ್ದು ಜೀವನದ ಅತ್ಯಂತ ಬೇಸರದ ಸಂಗತಿ ಎಂದರು.ಎಮ್ಮೆ ಮಾರಿ ಸಿನಿಮಾ ನೋಡಿದರು!

ಜಗನ್ಮೋಹಿನಿ ಸಿನಿಮಾದ ಯಶಸ್ಸನ್ನು ನೆನಪಿಸಿಕೊಂಡ ಪ್ರತಿಮಾದೇವಿ, ಅದಕ್ಕೆ ಕಾರಣವಾದ ಘಟನೆಯನ್ನು ವಿವರಿಸಿದ್ದು ಹೀಗೆ, `ನಟಿ ಹರಿಣಿ ಅವರು ಆ ಸಿನಿಮಾದಲ್ಲಿ ಮೊದಲ ಬಾರಿಗೆ ಸ್ವಿಮ್‌ಸೂಟ್‌ನಲ್ಲಿ ಕಾಣಿಸಿಕೊಂಡರು. ವಿಜಾಪುರದಲ್ಲಿ ಸಿನಿಮಾ ಬಿಡುಗಡೆಯಾದಾಗ, ನಟಿ ಹರಿಣಿ ಅವರನ್ನು ನೋಡುವ ಉದ್ದೇಶದಿಂದಲೇ ಹಲವು ಬಾರಿ ಸಿನಿಮಾ ನೋಡಿದ ಜನರು, ಸಿನಿಮಾ ಟಿಕೆಟ್‌ಗೆ ಹಣ ಹೊಂದಿಸಲು ಎಮ್ಮೆಗಳನ್ನೂ ಮಾರಿದರು. ಇದರಿಂದ ಆತಂಕಗೊಂಡ ಅಂದಿನ ಜಿಲ್ಲಾಧಿಕಾರಿ ಸಿನಿಮಾ ಪ್ರದರ್ಶನ ನಡೆಯುತ್ತಿದ್ದ ಚಿತ್ರಮಂದಿರದ ಲೈಸೆನ್ಸನ್ನೇ ರದ್ದುಗೊಳಿಸಿದರು~ ಎಂದರು.ಮತ್ತೊಂದು ಸಂದರ್ಭದಲ್ಲಿ `ಧರ್ಮಸ್ಥಳ ಮಹಾತ್ಮೆ~ ಸಿನಿಮಾ ಬಂದ ನಂತರ ಉತ್ತರ ಕರ್ನಾಟಕದ ಜನರು ಧರ್ಮಸ್ಥಳಕ್ಕೆ ಭೇಟಿ ನೀಡುವ ಪ್ರಮಾಣದಲ್ಲಿ ಜಾಸ್ತಿಯಾಗಿದೆ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ನಮಗೆ ಹೇಳಿದ್ದರು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.