ಇಸ್ಕಾನ್‌ ತಡೆಗೋಡೆ ಕುಸಿದು ಮೂವರ ಸಾವು

7

ಇಸ್ಕಾನ್‌ ತಡೆಗೋಡೆ ಕುಸಿದು ಮೂವರ ಸಾವು

Published:
Updated:

ಬೆಂಗಳೂರು: ನಗರದ ಕನಕಪುರ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಇಸ್ಕಾನ್ ದೇವಸ್ಥಾನದ ತಡೆಗೋಡೆ ಕುಸಿದು ಅಜ್ಜ ಮೊಮ್ಮಗಳು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹಬ್ಬದ ದಿನವೇ ನಡೆದಿದೆ.ಮೂಲತಃ ಮಂಡ್ಯದ ತೋಪಾಲಯ್ಯ (63), ಐದು ವರ್ಷದ ಮೊಮ್ಮಗಳು ಶ್ರೇಯಾ ಮತ್ತು ಕನಕಪುರದ ಚನ್ನಗಿರಿ­ಯಪ್ಪ (35) ಮೃತಪಟ್ಟವರು. ಘಟನೆ­ಯಲ್ಲಿ ವೆಂಕಟೇಶ್ (30), ಅವರ ಮಗ ವರಪ್ರಸಾದ್ (7), ಎರಡು ವರ್ಷದ ಲಕ್ಷ್ಮಿಕಾಂತ್, ಸರಸಮ್ಮ  (24) ಮತ್ತು ಸ್ವಾಮಿ­ವೇಲು ಎಂಬುವರು ಗಾಯಗೊಂಡಿ­ದ್ದಾರೆ.ಈ ಪೈಕಿ ಬಿಜಿಎಸ್‍ ಆಸ್ಪತ್ರೆಗೆ ದಾಖ­ಲಾ­ಗಿರುವ ಲಕ್ಷ್ಮೀಕಾಂತ್ ಸ್ಥಿತಿ ಗಂಭೀರ­ವಾಗಿದೆ. ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಳಿದ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.ಕನಕಪುರ ರಸ್ತೆಯ ವಸಂತಪುರದಲ್ಲಿ­ರುವ ಗುಡ್ಡದ ಮೇಲೆ ಇಸ್ಕಾನ್ ದೇವಾಸ್ಥಾನದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದರ ಸುತ್ತಲೂ 25 ಅಡಿ ಎತ್ತರದ ತಡೆಗೋಡೆ ನಿರ್ಮಿಸ­ಲಾಗಿದೆ. ಗುಡ್ಡದ  ಒಂದು ಭಾಗದ  ತಗ್ಗು ಪ್ರದೇಶದಲ್ಲಿ ಕೂಲಿ ಕಾರ್ಮಿಕರು ಹಲವು  ವರ್ಷದಿಂದ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿ­ದ್ದಾರೆ.ಸೋಮವಾರ ಮಧ್ಯಾಹ್ನ 1.45ರ ಸುಮಾರಿಗೆ ಆ ತಡೆಗೋಡೆ ಕುಸಿದು ತಗ್ಗುಪ್ರದೇಶದಲ್ಲಿರುವ ಮನೆಗಳ ಮೇಲೆ ಬಿದ್ದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸಂಜೆ 5.30ರ ವೇಳೆಗೆ ರಕ್ಷಣಾ ಕಾರ್ಯ ಪೂರ್ಣಗೊಂಡಿತಾದರೂ, ಈ ವೇಳೆ­ಗಾಗಲೇ ಮೂರು ಮಂದಿ ಅಸು­ನೀಗಿದ್ದರು. ಘಟನೆಯಲ್ಲಿ ಎಂಟು ಮನೆ­ಗಳಿಗೆ ಸಂಪೂರ್ಣ ಹಾನಿಯಾದರೆ,  ಐದು ಮನೆಗಳು ಬಾಗಶಃ ಜಖಂ ಆಗಿವೆ.‘ಅನಧಿಕೃತವಾಗಿ ತಡೆಗೋಡೆ ನಿರ್ಮಿ­ಸಿದ ಹಾಗೂ ಕಳಪೆ ಕಾಮಗಾರಿ ಕಾರಣ­ದಿಂದಲೇ ಈ ದುರ್ಘಟನೆ ನಡೆದಿದೆ. ಇಸ್ಕಾನ್‍ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು. ಸದ್ಯ ಕಾಮ­ಗಾರಿಯ ಎಂಜಿನಿಯರ್‍ ಮತ್ತು ಗುತ್ತಿಗೆದಾರನ ವಿರುದ್ಧ ನಿರ್ಲಕ್ಷ್ಯ  ಆರೋಪದಡಿ ಪ್ರಕರಣ ದಾಖಲಿಸಿ­ಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಸುಬ್ರಹ್ಮಣ್ಯಪುರ ಪೊಲೀಸರು ತಿಳಿಸಿದರು.ಗೃಹಸಚಿವ ಕೆ.ಜೆ.ಜಾರ್ಜ್, ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ, ರಾಘವೇಂದ್ರ ಔರಾದಕರ್ ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳು ಸೋಮವಾರ ಘಟನಾ ಸ್ಥಳವನ್ನು ಪರಿಶೀಲಿಸಿದರು. ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಸಚಿವ ರಾಮಲಿಂಗರೆಡ್ಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಐದು ಲಕ್ಷ ಪರಿಹಾರ

ಇಸ್ಕಾನ್ ಆಡಳಿತ ಮಂಡಳಿ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ ₨ 50 ಸಾವಿರ  ಪರಿಹಾರ ಘೋಷಿಸಿದೆ. ಅಲ್ಲದೇ, ಈಗಿರುವ ತಡೆಗೋಡೆ ಯನ್ನು ತೆರವು­ಗೊಳಿಸಿ 20 ಅಡಿ ಹಿಂಭಾಗಕ್ಕೆ ಹೊಸ ತಡೆಗೋಡೆ ನಿರ್ಮಿಸಲು ನಿರ್ಧರಿಸಿದೆ. ಘಟನೆ­ಯಿಂದಾಗಿ ಮನೆ ಕಳೆದುಕೊಂಡ­ವರಿಗೆ ನಾಲ್ಕು ತಿಂಗಳೊಳಗೆ ಮನೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದೆ. ಜತೆಗೆ ಪಾಲಿಕೆ ಕೂಡ ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದೆ.ಇಸ್ಕಾನ್ ನಿರ್ಲಕ್ಷ್ಯಕ್ಕೆ ಕಾರ್ಮಿಕರು ಬಲಿ

‘ಸುಮಾರು 20 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೇವೆ. ಇಸ್ಕಾನ್ ಆಡಳಿತ ಮಂಡಳಿಯು ಬೇರೆ ಕಡೆಯಿಂದ ಮಣ್ಣು ತರಿಸಿ ತಗ್ಗು ಪ್ರದೇಶಕ್ಕೆ ಸುರಿಯಿತು. ಬಳಿಕ ಆ ಮಣ್ಣಿನ ಮೇಲೆಯೇ ತಡೆಗೋಡೆ ನಿರ್ಮಿಸಿತು. ಹೀಗಾಗಿ ಮಳೆಯಿಂದ ಪಾಯ ಸಡಿಲಗೊಂಡು ಗೋಡೆ ಕುಸಿದು ಬಿದ್ದಿದೆ’ ಎಂದು ಸ್ಥಳೀಯ ನಿವಾಸಿ ಇಳಯಪ್ಪ ಆಕ್ರೋಶ ವ್ಯಕ್ತಪಡಿಸಿದರು.ಹಬ್ಬಕ್ಕೆ ಬಂದಿದ್ದವರು ಮಸಣ ಸೇರಿದರು

‘ಗಣೇಶ ಹಬ್ಬಕ್ಕೆಂದು ತಂದೆ ಮನೆಗೆ ಬಂದಿದ್ದರು. ಮಧ್ಯಾಹ್ನ ಮೊಮ್ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಲು ಅಣಿಯಾಗುತ್ತಿದ್ದರು. ಆಗ ನಾನು ತಟ್ಟೆಗಳನ್ನು ತೊಳೆಯಲು ಹೊರಗೆ ಬಂದಿದ್ದೆ. ಆಗ ತಡೆಗೋಡೆಯ ಅವಶೇಷಗಳು ಛಾವಣಿಯ ಮೇಲೆ ಬಿದ್ದಿದ್ದರಿಂದ ಮನೆ ಕುಸಿದು ಬಿದ್ದಿತು. ತಂದೆ - ಮಗಳನ್ನು ರಕ್ಷಿಸಲು  ಒಳಗೆ ಹೋಗಲು ಮುಂದಾದಾಗ ಸ್ಥಳೀಯರು ನನ್ನನ್ನು ತಡೆದರು. ಅಗ್ನಿಶಾಮಕ ಸಿಬ್ಬಂದಿ ಬರುವ ವೇಳೆಗಾಗಲೇ ಇಬ್ಬರೂ ಸಾವನ್ನಪ್ಪಿದ್ದರು’ ಎಂದು ಧನಲಕ್ಷ್ಮಿ ದುಃಖತಪ್ತರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry