ಭಾನುವಾರ, ಡಿಸೆಂಬರ್ 8, 2019
21 °C

ಇಸ್ಕಾನ್ ಬಿಸಿಯೂಟ ಸೇವನೆ ವಿದ್ಯಾರ್ಥಿಗಳು ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಕಾನ್ ಬಿಸಿಯೂಟ ಸೇವನೆ ವಿದ್ಯಾರ್ಥಿಗಳು ಅಸ್ವಸ್ಥ

ಬೆಂಗಳೂರು: ಇಸ್ಕಾನ್ ಪೂರೈಸಿದ ಊಟ ಸೇವಿಸಿದ ನಂತರ 46 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಯಶವಂತಪುರದ ಮತ್ತೀಕೆರೆಯ ಬಿಬಿಎಂಪಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದಿದೆ.

ಅಸ್ವಸ್ಥಗೊಂಡ ಎಲ್ಲರನ್ನು ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಹದಿನೇಳು ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಚಿಕಿತ್ಸೆ ಪಡೆದು ಮರಳಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಬಿಎಂಪಿಯ ಪ್ರೌಢಶಾಲೆಗೆ  ಇಸ್ಕಾನ್‌ನಿಂದ ಬಿಸಿಯೂಟ ಸರಬರಾಜಾಗುತ್ತದೆ. ಎಂದಿನಂತೆ ಮಧ್ಯಾಹ್ನ      ವಿದ್ಯಾರ್ಥಿಗಳಿಗೆ ಊಟ ನೀಡಲಾಯಿತು. ಊಟ ಮಾಡಿದವರಲ್ಲಿ 46 ಮಂದಿ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಕೆಲವರು ತಲೆ ನೋವಿನಿಂದ ನರಳಲಾರಂಭಿಸಿದರು. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆಹಾರ ಅಥವಾ ನೀರಿನ ಸೇವನೆಯಿಂದ ಈ ರೀತಿ ಆಗಿರುವ ಸಾಧ್ಯತೆ ಇದೆ. ಆಹಾರ ಮತ್ತು ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ವರದಿ ಬಂದ ನಂತರ ಕಾರಣ ಗೊತ್ತಾಗಲಿದೆ. ಆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಯಶವಂತಪುರ ಉಪ ವಿಭಾಗದ ಎಸಿಪಿ ಎನ್. ಹನುಮಂತಪ್ಪ  `ಪ್ರಜಾವಾಣಿ~ ತಿಳಿಸಿದರು.

ಇಸ್ಕಾನ್ ಸ್ಪಷ್ಟನೆ: ಮತ್ತೀಕೆರೆ ಶಾಲೆಯ ಮಕ್ಕಳಿಗೆ ಅಕ್ಷಯ ಪಾತ್ರೆ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ ಅನ್ನ ಮತ್ತು ಮಜ್ಜಿಗೆ ಹುಳಿ ಪೂರೈಕೆ ಮಾಡಲಾಗಿತ್ತು. ಈ ಊಟವನ್ನು ಹರೇಕೃಷ್ಣ ಹಿಲ್‌ನಲ್ಲಿರುವ ಅಡುಗೆ ಮನೆಯಲ್ಲಿ ತಯಾರಿಸಲಾಗಿತ್ತು. ಇಲ್ಲಿ ತಯಾರಿಸಿದ ಊಟವನ್ನೇ ನಗರದ ವಿವಿಧ ಶಾಲೆಗಳ ಒಟ್ಟು 85 ಸಾವಿರ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲಾಗಿದೆ. ಆದರೆ ಬೇರೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಏನೂ ತೊಂದರೆ ಆಗಿಲ್ಲ. ಆಹಾರದ ಮಾದರಿಯನ್ನು ಪ್ರಯೋಗಾಲಯಕ್ಕೂ ಕಳುಹಿಸಿಕೊಡಲಾಗಿದೆ ಎಂದು ಇಸ್ಕಾನ್ ಸ್ಪಷ್ಟನೆ ನೀಡಿದೆ.

ಪ್ರತಿಕ್ರಿಯಿಸಿ (+)