ಇಸ್ಕಾನ್ ಮಂದಿರ: ಭೂಮಿಪೂಜೆ 13ಕ್ಕೆ

7

ಇಸ್ಕಾನ್ ಮಂದಿರ: ಭೂಮಿಪೂಜೆ 13ಕ್ಕೆ

Published:
Updated:

ಹುಬ್ಬಳ್ಳಿ: ಬೆಂಗಳೂರಿನಲ್ಲಿರುವ ಇಸ್ಕಾನ್ ದೇವಸ್ಥಾನದ ಮಾದರಿಯಲ್ಲಿಯೇ ಹುಬ್ಬಳ್ಳಿ ಸಮೀಪದ ರಾಯಾಪುರದಲ್ಲಿಯೂ ಶ್ರೀಕೃಷ್ಣ-ಬಲರಾಮ ಮಂದಿರ ನಿರ್ಮಾಣವಾಗಲಿದೆ.

ಒಟ್ಟು ಎರಡೂವರೆ ಲಕ್ಷ ಚದರ ಅಡಿ ಜಾಗೆಯಲ್ಲಿ ನಿರ್ಮಾಣಗೊಳ್ಳಲಿರುವ ದೇವಸ್ಥಾನ ಮತ್ತು ಸಾಂಸ್ಕೃತಿಕ ಭವನದ ನಿರ್ಮಾಣ ಕಾಮಗಾರಿಗೆ ಫೆಬ್ರುವರಿ 13ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಲಿದ್ದಾರೆ.ಹುಬ್ಬಳ್ಳಿ ಇಸ್ಕಾನ್‌ನ ಅಧ್ಯಕ್ಷ ರಾಜೀವಲೋಚನ ದಾಸ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.“ಕೃಷ್ಣ-ಬಲರಾಮ ಮಂದಿರದ ಜೊತೆಗೆ, ತಿರುಪತಿ ಶ್ರೀನಿವಾಸದ ಗುಡಿಯನ್ನೂ ಇಲ್ಲಿ ನಿರ್ಮಿಸಲಾಗುವುದು. ಮೂರು ಅಥವಾ ನಾಲ್ಕು ವರ್ಷಗಳಲ್ಲಿ  ಭವ್ಯ ದೇವಸ್ಥಾನ ನಿರ್ಮಾಣವಾಗಲಿದೆ. ಈ ಮಂದಿರಕ್ಕೆ ದೇಣಿಗೆ ನೀಡಲು ಇಚ್ಛಿಸುವವರಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ಇಟ್ಟಿಗೆ ಅಳತೆಯ ಮತ್ತು ಒಂದು ಚದರ ಅಡಿಯ ನಿರ್ಮಾಣಕ್ಕೆ ದೇಣಿಗೆ ನೀಡಬಹುದು” ಎಂದು ತಿಳಿಸಿದರು.“ಧರ್ಮಸ್ಥಳದ ಮಾದರಿಯಲ್ಲಿ ಅನ್ನದಾಸೋಹವೂ ನಡೆಯಲಿದೆ. ಭಕ್ತರಿಗೆ ಉಳಿದುಕೊಳ್ಳಲು ಸುಸಜ್ಜಿತ ಛತ್ರ, ಒಂದು ಸಾವಿರ ಪ್ರೇಕ್ಷಕರ ಬಯಲು ರಂಗಮಂದಿರ, 450 ಜನರು ಕುಳಿತುಕೊಳ್ಳಬಹುದಾದ ಭವ್ಯವಾದ ಆಡಿಟೋರಿಯಂ, ಹೂಬನ, ಬೆಳಕಿನಾಟದ ಕಾರಂಜಿ, ಮಿನಿ ಜಲಪಾತ ನಿರ್ಮಿಸಲಾಗುತ್ತಿದೆ”ಎಂದರು.ಕೃಷ್ಣ-ಬಲರಾಮ ರಥಯಾತ್ರೆ ನಾಳೆ

ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ (ಇಸ್ಕಾನ್) ಆಶ್ರಯದಲ್ಲಿ ಹುಬ್ಬಳ್ಳಿಯಲ್ಲಿ ಫೆಬ್ರುವರಿ 5ರಂದು  ಮತ್ತು ಧಾರವಾಡದಲ್ಲಿ 12ರಂದು ಕೃಷ್ಣಬಲರಾಮ ರಥಯಾತ್ರೆಯನ್ನು ಆಯೋಜಿಸಿದೆ.“40 ಅಡಿ ಎತ್ತರದ ವರ್ಣರಂಜಿತ ರಥದಲ್ಲಿ ಕೃಷ್ಣ-ಬಲರಾಮರ ಮೆರವಣಿಗೆ ನಡೆಯಲಿದೆ. ದುರ್ಗದಬೈಲ್, ಸ್ಟೇಷನ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಕಿತ್ತೂರು ಚೆನ್ನಮ್ಮ ವೃತ್ತ, ಪ್ರವಾಸಿ ಮಂದಿರ ರಸ್ತೆ,  ದೇಶಪಾಂಡೆ ನಗರದ ಮೂಲಕ ಸಾಗುವ ರಥಯಾತ್ರೆಯು ಸವಾಯಿ ಗಂಧರ್ವ ಹಾಲ್‌ನಲ್ಲಿ ಸಮಾರೋಪಗೊಳ್ಳಲಿದೆ. ಇಲ್ಲಿಯೇ ಮಹಾಮಂಗಳರಾತಿ ಮತ್ತು ಮಹಾಪ್ರಸಾದ ನಡೆಯುವುದು. ಶನಿವಾರ ಸಂಜೆ 5 ಗಂಟೆಗೆ ದುರ್ಗದಬೈಲ್‌ನಲ್ಲಿ ಇಸ್ಕಾನ್‌ಮತ್ತು ಆಕ್ಷಯ ಪಾತ್ರೆ ಪ್ರತಿಷ್ಠಾನದ ಅಧ್ಯಕ್ಷ ಮಧುಪಂಡಿತ್ ದಾಸ್ ಚಾಲನೆ ನೀಡುವರು” ಎಂದು ರಾಜೀವಲೋಚನ ದಾಸ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry