ಇಸ್ರೊ ಅಕ್ರಮ ಪ್ರವೇಶ: ವೈದ್ಯಕೀಯ ನಿಗಾಕ್ಕೆ ಬ್ಯುಲಾ

7

ಇಸ್ರೊ ಅಕ್ರಮ ಪ್ರವೇಶ: ವೈದ್ಯಕೀಯ ನಿಗಾಕ್ಕೆ ಬ್ಯುಲಾ

Published:
Updated:

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೊ) ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ಕೇರಳ ಮೂಲದ ಬ್ಯುಲಾ ಎಂ.ಸ್ಯಾಮ್ (40) ಅವರನ್ನು ಹತ್ತು ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿ ಇಡಲು ಅನುಮತಿ ಕೋರಿ ಪ್ರಕರಣದ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.`ಬ್ಯುಲಾ ಅವರ ವೈದ್ಯಕೀಯ ಪರೀಕ್ಷೆ ನಡೆಸಿದ ನಿಮ್ಹಾನ್ಸ್ ವೈದ್ಯರು, ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಕೆಲ ದಿನಗಳ ಕಾಲ ಅವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಿ, ತಪಾಸಣೆ ಮಾಡಬೇಕಿದೆ. ಆ ನಂತರವಷ್ಟೇ ಅವರು ಮಾನಸಿಕವಾಗಿ ಅಸ್ವಸ್ಥರೇ ಅಥವಾ ಆರೋಗ್ಯವಾಗಿದ್ದಾರೆಯೇ ಎಂಬ ಬಗ್ಗೆ ವರದಿ ನೀಡಲು ಸಾಧ್ಯ ಎಂದು ಹೇಳಿದ್ದಾರೆ~ ಎಂದು ಪ್ರಕರಣದ ತನಿಖಾಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

 

`ಈ ಕಾರಣಕ್ಕಾಗಿ ಆರೋಪಿ ಬ್ಯುಲಾ ಅವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲು ಅನುಮತಿ ಕೋರಿ ನಗರದ ಹತ್ತನೇ ಎಸಿಎಂಎಂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ನ್ಯಾಯಾಲಯ ಸದ್ಯದಲ್ಲೇ ವಿಚಾರಣೆ ನಡೆಸಲಿದೆ. ನ್ಯಾಯಾಲಯ ಅನುಮತಿ ನೀಡಿದ ನಂತರ ಆರೋಪಿಯನ್ನು ವಶಕ್ಕೆ ಪಡೆದು ನಿಮ್ಹಾನ್ಸ್‌ನಲ್ಲಿ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ~ ಎಂದು ಅವರು ಹೇಳಿದ್ದಾರೆ.ಬ್ಯುಲಾ ಅವರು ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲೂ ತನಿಖೆಗೆ ಸಹಕರಿಸಲಿಲ್ಲ. ಪ್ರಶ್ನೆಗಳನ್ನು ಕೇಳಿದಾಗ ಉತ್ತರಿಸದೆ ಮೌನವಾಗಿರುತ್ತಿದ್ದರು. ಕೆಲವು ಬಾರಿ ಅನ್ಯ ಮನಸ್ಕರಾಗಿ ಒಬ್ಬೊಬ್ಬರೆ ಮಾತನಾಡಿಕೊಳ್ಳುತ್ತಿದ್ದರು. ಇದರಿಂದಾಗಿ ಅವರಿಂದ ಪ್ರಕರಣ ಸಂಬಂಧ ಈವರೆಗೆ ಯಾವುದೇ ಮಹತ್ವದ ಮಾಹಿತಿ ಲಭ್ಯವಾಗಿಲ್ಲ. ಅವರ ಪತಿ ಅಲೆಕ್ಸ್ ಥಾಮಸ್‌ರ ಊರಾದ ಗುಜರಾತ್‌ನ ಅಹಮದಾಬಾದ್‌ಗೆ ತೆರಳಿದ್ದ ಮತ್ತೊಂದು ತನಿಖಾ ತಂಡ ನಗರಕ್ಕೆ ಹಿಂದಿರುಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಕುಟುಂಬ ಸದಸ್ಯರ ಭೇಟಿ: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಬ್ಯುಲಾ ಅವರನ್ನು ಕುಟುಂಬ ಸದಸ್ಯರು ಸೋಮವಾರ ಮಧ್ಯಾಹ್ನ ಭೇಟಿ ಮಾಡಿ ಮಾತುಕತೆ ನಡೆಸಿದರು.`ಅಲೆಕ್ಸ್ ಥಾಮಸ್ ಹಾಗೂ ಕುಟುಂಬ ಸದಸ್ಯರು, ಅವರನ್ನು ಕಾರಾಗೃಹದ ಸಂದರ್ಶಕರ ಕೊಠಡಿಯಲ್ಲಿ ಮಧ್ಯಾಹ್ನ ಭೇಟಿಯಾಗಿ ಒಂದು ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಬ್ಯುಲಾ ಅವರನ್ನು ಜೈಲಿನ ಮಹಿಳಾ ಕೈದಿಗಳ ವಿಭಾಗದಲ್ಲಿ ಇರಿಸಲಾಗಿದೆ~ ಎಂದು ಕಾರಾಗೃಹದ ಅಧಿಕಾರಿಗಳು ಹೇಳಿದ್ದಾರೆ.ಪಾತ್ರವಿಲ್ಲ: ಪ್ರಕರಣ ಸಂಬಂಧ ವಶಕ್ಕೆ ತೆಗೆದುಕೊಳ್ಳಲಾಗಿದ್ದ ಕೇರಳದ ಕೊಲ್ಲಂ ಜಿಲ್ಲೆಯ `ಜನ ಸ್ಟುಡಿಯೊ~ದ ಮಾಲೀಕ ಸಿನಿ ಬಾಲನ್ ಹಾಗೂ ಬಿಸಿಎ ಪದವೀಧರ ಅಂತೋನಿ ಥಾಮಸ್ ಅವರ ವಿಚಾರಣೆ ನಡೆಸಿ ವಾಪಸ್ ಕಳುಹಿಸಲಾಗಿದೆ.

 

ಪ್ರಕರಣದಲ್ಲಿ ಬಾಲನ್ ಮತ್ತು ಥಾಮಸ್ ಅವರ ಪಾತ್ರವಿಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಅಗತ್ಯವೆನಿಸಿದರೆ ಅವರಿಬ್ಬರನ್ನೂ ಪುನಃ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry