ಇಸ್ರೊ ವಿವಾದ ಕೊನೆಗಾಣಲಿ

7

ಇಸ್ರೊ ವಿವಾದ ಕೊನೆಗಾಣಲಿ

Published:
Updated:

ಬೆಂಗಳೂರು (ಪಿಟಿಐ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಕಾರ್ಯಕ್ರಮಗಳು `ಮೊದಲಿನಂತೆ ನಡೆಯುವಂತಾಗಲು~ ಅಂತರಿಕ್ಷ್-ದೇವಾಸ್ ಒಪ್ಪಂದದ ಕುರಿತು ಎದ್ದಿರುವ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಅಗತ್ಯವಿದೆ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ಅಭಿಪ್ರಾಯಪಟ್ಟರು.

`ಸಂಸ್ಥೆಯನ್ನು ಈ ಹಂತಕ್ಕೆ ಬೆಳೆಸಲು ದೇಶದ ವಿಜ್ಞಾನಿಗಳು ನಾಲ್ಕು ದಶಕಕ್ಕೂ ಹೆಚ್ಚಿನ ಕಾಲ ಶ್ರಮಿಸಿದ್ದಾರೆ. ಈಗ ಎದುರಾಗಿರುವ ಸಮಸ್ಯೆ ಶೀಘ್ರ ಬಗೆಹರಿಯಬೇಕು ಎಂಬುದೇ ನನ್ನ ಆಸೆ~ ಎಂದು ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು ಹೇಳಿದರು. ಜಿ. ಮಾಧವನ್ ನಾಯರ್ ಅವರಿಗಿಂತ ಮೊದಲು ಒಂಬತ್ತು ವರ್ಷಗಳ ಕಾಲ ಕಸ್ತೂರಿರಂಗನ್ ಇಸ್ರೊ ಅಧ್ಯಕ್ಷರಾಗಿದ್ದರು.

ಭಾಸ್ಕರ ನಾರಾಯಣ ಬೇಸರ: ಸರ್ಕಾರಿ ಹುದ್ದೆ ಹೊಂದುವುದರಿಂದ ನಿಷೇಧಕ್ಕೆ ಒಳಗಾಗಿರುವ ಬಾಹ್ಯಾಕಾಶ ವಿಜ್ಞಾನಿ ಎ. ಭಾಸ್ಕರ ನಾರಾಯಣ ಅವರು ಬುಧವಾರ ಪ್ರತಿಕ್ರಿಯೆ ನೀಡಿ, `ಸಂಸ್ಥೆಯ ಏಳ್ಗೆಗಾಗಿ 37 ವರ್ಷ ದುಡಿದಿದ್ದೇನೆ. ಆದರೂ ನಮ್ಮ ವಿರುದ್ಧ ಇಂಥ ಕ್ರಮ ಜರುಗಿಸಲಾಗಿದೆ~ ಎಂದು ಬೇಸರ ವ್ಯಕ್ತಪಡಿಸಿದರು.

`ಪ್ರಸ್ತುತ ನಾನು ಯಾವುದೇ ಸರ್ಕಾರಿ ಹುದ್ದೆ ಹೊಂದಿಲ್ಲ. ಆದರೆ ನಮಗೆ ಮಾತ್ರ ಇಂಥ ಶಿಕ್ಷೆ ಏಕೆ? ಸಮಾಜದಲ್ಲಿ ಇನ್ನು ನಮಗೆ ಯಾವ ಬೆಲೆ ಸಿಗಬಹುದು? ನಮ್ಮ ಸ್ಥಿತಿ ನಿಕೃಷ್ಟವಾಗಿದೆ. ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡ ನಂತರ ನನಗೆ ನಿದ್ರೆಯೂ ಬರುತ್ತಿಲ್ಲ~ ಎಂದರು.

`ನಿಮ್ಮ ವಿರುದ್ಧ ಕೈಗೊಂಡ ಕ್ರಮದ ಹಿಂದೆ ಪಿತೂರಿ ಇದೆಯೇ?~ ಎಂದು ಪ್ರಶ್ನಿಸಿದಾಗ, `ಈ ಕುರಿತು ಊಹಿಸುವುದಕ್ಕೂ ನನಗೆ ಆಸಕ್ತಿ ಇಲ್ಲ~ ಎಂದು ಪ್ರತಿಕ್ರಿಯೆ ನೀಡಿದರು.

ಇಸ್ರೊ ಅಧ್ಯಕ್ಷ ಸ್ಥಾನದಿಂದ ನಾಯರ್ ಅವರು ನಿರ್ಗಮಿಸಿ ಕೆ. ರಾಧಾಕೃಷ್ಣನ್ ಅವರು ಅಧಿಕಾರ ವಹಿಸಿಕೊಂಡಾಗ ಭಾಸ್ಕರ ನಾರಾಯಣ  ಅತಿಥಿ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆಗ ಅವರಿಗೆ ಇನ್ನೂ ಒಂದೂವರೆ ವರ್ಷಗಳ ಅವಧಿ ಬಾಕಿ ಇತ್ತು. ಈ ಬಗ್ಗೆ ಪ್ರಶ್ನಿಸಿದಾಗ, `ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದೆ. ಸಂಸ್ಥೆ ಅಧ್ಯಕ್ಷರು ಬದಲಾದಾಗ, ಅಲ್ಲಿನ ಕೆಲವರ ಸ್ಥಾನಗಳೂ ಬದಲಾಗುತ್ತದೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry