ಮಂಗಳವಾರ, ಜನವರಿ 28, 2020
22 °C

ಇ-ಪರವಾನಗಿ ವ್ಯವಸ್ಥೆಯಿಂದ ಅಕ್ರಮ ಅದಿರು ಸಾಗಣೆಗೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಅದಿರು ಸಾಗಣೆ ಮೇಲೆ ನಿರಂತರ ನಿಗಾ ಇಡುವ ಉದ್ದೇಶದಿಂದ `ಇ-ಪರವಾನಗಿ~ ವ್ಯವಸ್ಥೆಯನ್ನು ಜಾರಿ ಮಾಡಿದ್ದು ಇದರಿಂದ ಅಕ್ರಮ ಅದಿರು ಸಾಗಣೆಯನ್ನು ತಡೆಯಬಹುದು~ ಎಂದು ಅರಣ್ಯ ಇಲಾಖೆ ಮುಖ್ಯಸ್ಥರಾದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವನಿಕುಮಾರ್ ವರ್ಮ ತಿಳಿಸಿದರು. `ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಸಾಗಣೆ ಬಗ್ಗೆ ವ್ಯಾಪಕ ದೂರುಗಳು ಬಂದ ಕಾರಣದಿಂದ ಈ ಹೊಸ ವ್ಯವಸ್ಥೆ ಜಾರಿ ಮಾಡಿದ್ದು, ಎಲ್ಲೆಡೆ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ `ಇ- ಪರವಾನಗಿ~ ವ್ಯವಸ್ಥೆಯನ್ನು ತೂಕ ಮಾಡುವ ಕೇಂದ್ರಗಳಿಗೂ ಜೋಡಿಸಲಾಗುವುದು. ಆ ಮೂಲಕ ಎಷ್ಟು ಪ್ರಮಾಣದ ಅದಿರು ಸಾಗಣೆ ಆಗುತ್ತಿದೆ ಎಂಬುದರ ಮಾಹಿತಿಯೂ ಲಭ್ಯವಾಗಲಿದೆ~ ಎಂದು ಅವರು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೊಟ್ಟ ಪರವಾನಗಿ ಆಧಾರದ ಮೇಲೆ ಅದಿರು ಸಾಗಣೆಗೂ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಇದರ ಉಸ್ತುವಾರಿಯನ್ನು ಆನ್‌ಲೈನ್‌ನಲ್ಲಿ ನೋಡುವ ವ್ಯವಸ್ಥೆಯೂ ಇದೆ ಎಂದು ವಿವರಿಸಿದರು. ಈ ಕಾರಣಕ್ಕೆ ಇನ್ನೂ ಸುಮಾರು 200 ಕಂಪ್ಯೂಟರ್ ಬೇಕಾಗಿದ್ದು, ಅವುಗಳ ಖರೀದಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು. ಇ-ಪರವಾನಗಿ ವ್ಯವಸ್ಥೆಯನ್ನು ಮರ ಮತ್ತು ಉರುವಲು ಸೌದೆ ಸಾಗಣೆಗೂ ಜಾರಿ ಮಾಡಲಾಗುವುದು. ಇದರಿಂದಲೂ ಅಕ್ರಮ ಸಾಗಣೆ ತಡೆಯಬಹುದೆಂದರು. ಚಂದನ ವನ: ಶ್ರೀಗಂಧದ ಸಸಿಗಳನ್ನು ಬೆಳೆಸುವ ಉದ್ದೇಶದಿಂದ `ಚಂದನ ವನ~ ಕಾರ್ಯಕ್ರಮ ಜಾರಿ ಮಾಡುತ್ತಿದ್ದು, ಮೊದಲ ಬಾರಿಗೆ ಶಿವಮೊಗ್ಗದ ಶೆಟ್ಟಿಹಳ್ಳಿಯಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. ವಿಧಾನಮಂಡಲ ಅಧಿವೇಶನ ನಂತರ ಮುಖ್ಯಮಂತ್ರಿಯವರ ಸಮಯ ನೋಡಿಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು. ರಾಜ್ಯದ ಕನಿಷ್ಠ 50ರಿಂದ 60 ಕಡೆ ಈ ರೀತಿಯ ಚಂದನ ವನ ಅಭಿವೃದ್ಧಿಪಡಿಸುವ ಉದ್ದೇಶ ಇದೆ ಎಂದು ವಿವರಿಸಿದರು. ಅರಣ್ಯದಲ್ಲಿ ನೆಲೆಸಿದ 12 ಸಾವಿರ ಬುಡಕಟ್ಟು ಜನರ ಕುಟುಂಬಗಳ ಪೈಕಿ ಸುಮಾರು 6500 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಇಂತಹ ಪ್ರತಿ ಕುಟುಂಬಕ್ಕೆ ರೂ 10 ಲಕ್ಷ ಪರಿಹಾರ ನೀಡಲಾಗಿದೆ. ಉಳಿದವರ ಸ್ಥಳಾಂತರಕ್ಕೂ ಕ್ರಮ ತೆಗೆದುಕೊಳ್ಳಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲೂ ಸುಮಾರು 400 ಕುಟುಂಬಗಳನ್ನು ಸ್ಥಳಾಂತರಿಸಿದ್ದು, ಇನ್ನೂ 130 ಕುಟುಂಬಗಳ ಸ್ಥಳಾಂತರಕ್ಕೆ ಚಾಲನೆ ನೀಡಲಾಗಿದೆ ಎಂದರು. ಆನೆ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರದ ನೆರವು ಕೋರಿದ್ದು, 2005ರಲ್ಲಿ ಈ ಸಲುವಾಗಿ ಸುಮಾರು ರೂ 200 ಕೋಟಿ ಖರ್ಚಾಗುವ ಅಂದಾಜು ಮಾಡಲಾಗಿತ್ತು. ಈಗಿನ ಲೆಕ್ಕದ ಪ್ರಕಾರ ಅದು ರೂ 400 ಕೋಟಿ ದಾಟುವ ಸಾಧ್ಯತೆ ಇದೆ. ಆದಷ್ಟು ಬೇಗ ಈ ಯೋಜನೆ ಜಾರಿಗೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ಬಂಡೀಪುರದಲ್ಲಿ ವಾಹನ ನಿಲುಗಡೆಗೆ ದುಬಾರಿ ದರ ನಿಗದಿ ಮಾಡಿದ್ದು, ಇದನ್ನು ಕಡಿಮೆ ಮಾಡುವ ಬಗ್ಗೆ ನಿಗಾ ವಹಿಸಲಾಗುವುದು. ಕಾರೊಂದಕ್ಕೆ 500 ರೂಪಾಯಿ ಸಂಗ್ರಹಿಸುತ್ತಿದ್ದು, ಈ ಬಗ್ಗೆ ದೂರುಗಳು ಬಂದಿದೆ ಎಂದು ಹೇಳಿದರು. ವನಪಾಲಕರು: ಒಟ್ಟು 600 ವನಪಾಲಕರನ್ನು ನೇಮಕ ಮಾಡಿಕೊಂಡಿದ್ದು, ಅವರಿಗೆ ತರಬೇತಿ ಕೊಡಿಸುವ ಕೆಲಸ ನಡೆದಿದೆ. ಆದಷ್ಟು ಬೇಗ ಅವರು ಸೇವೆಗೆ ಲಭ್ಯವಾಗಲಿದ್ದು, ಆ ನಂತರ ಸಿಬ್ಬಂದಿ ಕೊರತೆ ನೀಗಲಿದೆ ಎಂದರು.ತಜ್ಞರ ಸಭೆ: ಹಾಸನ ಜಿಲ್ಲೆಯಲ್ಲಿ ಬೆಳೆಗಳಿಗೆ ಹಾನಿ ಮಾಡುವ 25 ಆನೆಗಳ ಸ್ಥಳಾಂತರ ಕುರಿತು ತಜ್ಞರ ಅಭಿಪ್ರಾಯ ಸಂಗ್ರಹಿಸಲು ಇದೇ 21ರಂದು ಅರಣ್ಯ ಭವನದಲ್ಲಿ  ರಾಷ್ಟ್ರೀಯ ಮಟ್ಟದ ತಜ್ಞರ ಸಭೆ ಆಯೋಜಿಸಲಾಗಿದೆ. ತಜ್ಞ ಡಾ.ಸುಕುಮಾರ್, ಇತರರು ಭಾಗವಹಿಸಲಿದ್ದಾರೆ ಎಂದರು.

ತಿಳಿಸಿದರು. ಅರಣ್ಯ ಭವನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ತಜ್ಞರಾದ ಡಾ.ಸುಕುಮಾರ್ ಸೇರಿದಂತೆ ಇತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ವರ್ಮ ವಿವರಿಸಿದರು.

ಪ್ರತಿಕ್ರಿಯಿಸಿ (+)