ಸೋಮವಾರ, ಡಿಸೆಂಬರ್ 9, 2019
19 °C

ಇ ಲೈಬ್ರರಿ ಬೆಂಗಳೂರು ವಿ.ವಿ.ಗೆ ಗರಿ

Published:
Updated:
ಇ ಲೈಬ್ರರಿ ಬೆಂಗಳೂರು ವಿ.ವಿ.ಗೆ ಗರಿ

ಬೆಂಗಳೂರು ವಿಶ್ವವಿದ್ಯಾಲಯವು ಹಲವು ನೂತನ ಪ್ರಯತ್ನಗಳನ್ನು ಮಾಡುತ್ತಿದೆ. ಈ ತಿಂಗಳಿಂದಲೇ ಜಾರಿಗೆ ಆನ್‌ಲೈನ್ ಮೂಲಕ ಘಟಿಕೋತ್ಸವ ಪ್ರಮಾಣಪತ್ರ ವಿತರಿಸುವ ಕ್ರಮ ಆರಂಭಿಸಿದ್ದರ ಜೊತೆಗೇ ವಿ.ವಿ.ಗ್ರಂಥಾಲಯವು ತಾನು ಹೊಂದಿದ ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಹಂಚಲು ‘ಇ ಲೈಬ್ರರಿ’ ವ್ಯವಸ್ಥೆಯನ್ನು ಪರಿಚಯಿಸಿದೆ.



ಈ ತಿಂಗಳ 12ರಂದು ಜಾರಿಗೆ ಬಂದ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತದೆ ಎನ್ನುವ ಅಭಿಪ್ರಾಯ ಈ ವ್ಯವಸ್ಥೆ ರೂಪಿಸಿದ ಕುಲಪತಿ ಡಾ.ಎನ್.ಪ್ರಭುದೇವ್ ಹಾಗೂ ಮುಖ್ಯ ಗ್ರಂಥಾಲಯಾಧಿಕಾರಿ ಡಾ.ಪಿ.ವಿ.ಕೊಣ್ಣೂರ ಅವರದು.



ಒಂದು ಅಂದಾಜಿನಂತೆ ವಿ.ವಿಯ ಮುಖ್ಯ ಗ್ರಂಥಾಲಯದಲ್ಲಿ  3ಲಕ್ಷಕ್ಕೂ ಅಧಿಕ ಗ್ರಂಥಗಳು, 50 ಸಾವಿರಕ್ಕೂ ಹೆಚ್ಚು ಹಳೆಯ ನಿಯತಕಾಲಿಕೆಗಳು ಹಾಗೂ 400ಕ್ಕೂ ಅಧಿಕ ಸದ್ಯದ ನಿಯತಕಾಲಿಕೆಗಳಿವೆ. ಅವುಗಳ ಉಪಯೋಗ ಬರೀ ಗ್ರಂಥಾಲಯಕ್ಕೆ ಭೇಟಿ ನೀಡುವವರಿಗಷ್ಟೇ ಲಭ್ಯವಾಗಬಾರದು. ಜೊತೆಗೆ ವಿ.ವಿ. ಅಧೀನಕ್ಕೆ ಒಳಪಟ್ಟ ವಿವಿಧ ಕಾಲೇಜುಗಳ, ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಯನ ಮಾಡುತ್ತಿರುವವರಿಗೂ ತಲುಪಬೇಕು ಎಂಬ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ.



ಜೊತೆಗೆ ಅತಿ ದುಬಾರಿ ಪುಸ್ತಕಗಳನ್ನು ಹೊರತರುವ ಜಾಗತಿಕ ಮಟ್ಟದ ಸ್ಪ್ರಿಂಗರ್ ಪ್ರಕಾಶನವು 2005ರಿಂದ 2010ರ ಅವಧಿಯಲ್ಲಿ ಪ್ರಕಟಿಸಿದ 15.742 ಗ್ರಂಥಗಳ ಇ-ಅವತರಣಿಕೆಗಳನ್ನು ಖರೀದಿಸಿ ಆನ್‌ಲೈನ್ ಓದುಗರಿಗೆ ಲಭ್ಯವಾಗುವಂತೆ ಮಾಡಿದೆ. ಸಾಫ್ಟವೇರ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ವಿ.ವಿ.ಯು ಆ ಮೂಲಕ ಕೆಲವು ಯೋಜನೆಗಳನ್ನು ಪ್ರಕಟಿಸಿದೆ.



ಸಾಂಘಿಕ ಸದಸ್ಯತ್ವ

ಈ ಯೋಜನೆಯ ಮೂಲಕ ವಿ.ವಿ.ಯೊಂದಿಗೆ ಸಂಲಗ್ನ ಹೊಂದಿದ ಕಾಲೇಜುಗಳು ವಾರ್ಷಿಕ 10,000 ರೂಪಾಯಿಗಳನ್ನು ಪಾವತಿಸುವ ಮೂಲಕ ಸದಸ್ಯತ್ವ ಪಡೆದುಕೊಂಡರೆ ಗ್ರಂಥಾಲಯದ ಎಲ್ಲ ಪುಸ್ತಕಗಳು, ನಿಯತಕಾಲಿಕೆಗಳಲ್ಲದೇ 6,500 ಇ-ಜರ್ನಲ್‌ಗಳು ಹಾಗೂ ಸ್ಪ್ರಿಂಗರ್ ಪ್ರಕಾಶನದಿಂದ ಖರೀದಿಸಲಾದ ಗ್ರಂಥಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಗ್ರಂಥಗಳನ್ನು ಅವುಗಳ ಹೆಸರು ಹಾಗೂ ಲೇಖಕರ ಹೆಸರಿನೊಂದಿಗೆ ಹುಡುಕುವ ತಾಪತ್ರಯವಿಲ್ಲ. ಬರೀ ತಮ್ಮ  ಅಧ್ಯಯನಕ್ಕೆ ಬೇಕಾದ ‘ಕೀವರ್ಡ್’ (ಉದಾ: ಷೇಕ್ಸ್‌ಪಿಯರ್ ಬಗ್ಗೆ ಮಾಹಿತಿ ಬೇಕಿದ್ದರೆ ಆ ಹೆಸರು ಟೈಪಿಸಿದರೆ ಸಾಕು) ಗಳನ್ನು ಬರೆಯುವ ಮೂಲಕ ಪಡೆಯಬಹುದು. ಗೂಗಲ್ ಹುಡುಕು ತಾಣದಲ್ಲಿ ನಾವು ಹೇಗೆ ಬರೀ ಒಂದು ಅಕ್ಷರ ಕೊಡುತ್ತೇವೆಯೋ ಅದೇ ವಿಧಾನ ಇಲ್ಲಿ ಅನ್ವಯವಾಗುತ್ತದೆ.



ಗ್ರಂಥ ಕಳ್ಳತನ ತಡೆಗಟ್ಟುವ ಸಾಫ್ಟ್‌ವೇರ್

ಗ್ರಂಥಾಲಯದಿಂದ ಎರವಲು ಒಯ್ದ ಅಮೂಲ್ಯ ಕೃತಿಗಳು ಎಷ್ಟೋ ಬಾರಿ ಇದ್ದಕ್ಕಿದ್ದಂತೆ ಕಾಣೆಯಾಗಿಬಿಡುತ್ತವೆ. ಒಂದು ಆಕಸ್ಮಾತ್ ಆದರೆ ಮತ್ತೊಂದು ಉದ್ದೇಶಪೂರ್ವಕವಾಗಿಯೇ ಕಾಣೆಯಾಗುವಂಥವು. ಗ್ರಂಥಾಲಯಗಳು ವಿಧಿಸುವ ಕಡಿಮೆ ದಂಡ ನೀಡಿ ಹೆಚ್ಚಿನ ಬೆಲೆಯ ಕೃತಿಗಳನ್ನು ತಮ್ಮದಾಗಿಸಿಕೊಳ್ಳಬಹುದು ಎಂಬುದೂ ಗ್ರಂಥಗಳು ‘ಕಾಣೆ’ಯಾಗಲು ಕಾರಣ. ಈಗ ವಿ.ವಿ. ಗ್ರಂಥಾಲಯವು ಅಳವಡಿಸಿರುವ ‘ಆರ್‌ಎಫ್‌ಐಡಿ’ ತಂತ್ರಜ್ಞಾನದಿಂದ ಈ ಕಳ್ಳಾಟವನ್ನು ತಡೆಗಟ್ಟಬಹುದು ಎಂಬ ನಂಬಿಕೆ ಗ್ರಂಥಾಲಯಾಧಿಕಾರಿಗಳದ್ದು.



ಗ್ರಂಥಗಳನ್ನು ಎರವಲು ಪಡೆದಿರುವವರ ವಿವರಗಳನ್ನು ಈ ಸಾಫ್ಟವೇರ್ ಸಂಗ್ರಹಿಸಿರುತ್ತದೆ. ಜೊತೆಗೆ ಪುಸ್ತಕ ಒಯ್ಯುವ, ಹಿಂತಿರುಗಿಸುವ ಪ್ರಕ್ರಿಯೆ ಸರಳೀಕರಣಗೊಳ್ಳಲಿದೆ. ಹೇಗೆಂದರೆ ಪುಸ್ತಕಗಳನ್ನು ಒಯ್ದವರು ಗ್ರಂಥಾಲಯಕ್ಕೇ ವಾಪಸ್ ತಂದು ಕೊಡಬೇಕಾಗಿಲ್ಲ. ಗ್ರಂಥಾಲಯದ ಸಿಬ್ಬಂದಿಯು ವಿ.ವಿ.ಆವರಣದಲ್ಲಿ ಅಳವಡಿಸಿದ ಪುಸ್ತಕ ಸಂಗ್ರಹ ಪೆಟ್ಟಿಗೆಗಳಲ್ಲಿ ಪುಸ್ತಕಗಳನ್ನು ಇಟ್ಟರೆ ಮುಗಿಯಿತು. ತಕ್ಷಣ ಪುಸ್ತಕ ಸ್ವೀಕೃತವಾದ ಬಗ್ಗೆ ನಿಮ್ಮ ಮೊಬೈಲ್‌ಗೆ ಸಂದೇಶವೊಂದು ಬರುತ್ತದೆ. ಇದೇ ತಂತ್ರಜ್ಞಾನ ಬಳಸಿಕೊಂಡು ಗ್ರಂಥಾಲಯದಲ್ಲಿ ಎಷ್ಟು ಪುಸ್ತಕಗಳಿವೆ ಎಂಬುದರ ಕುರಿತೂ ನಿರಂತರವಾಗಿ ಮಾಹಿತಿ ಪಡೆಯುತ್ತಿರಬಹುದಾಗಿದೆ.



ಮನೆಯಲ್ಲಿಯೂ ಗ್ರಂಥಾಲಯ ಲಭ್ಯತೆ


ವಿ.ವಿ.ಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಅಥವಾ ಹಾಸ್ಟೆಲ್‌ನ ಕೋಣೆಗಳಲ್ಲಿ ಕುಳಿತುಕೊಂಡೇ ಇ-ಪುಸ್ತಕ ಹಾಗೂ ನಿಯತಕಾಲಿಕೆಗಳನ್ನು ಓದಬಹುದಾಗಿದೆ. ಹೇಗೆಂದರೆ ಮುಖ್ಯ ಗ್ರಂಥಾಲಯದಲ್ಲಿ Proxy Server ಅಳವಡಿಸಲಾಗಿದ್ದು, ಈ ಸರ್ವರ್ ಮೂಲಕ ತಾವಿದ್ದ ಸ್ಥಳದಿಂದಲೇ ಮಾಹಿತಿಗಳನ್ನು ಆರ್ 3 ಸೌಲಭ್ಯದ ಮೂಲಕ ಪಡೆಯಬಹುದು. ನೀವು ಪ್ರವಾಸದಲ್ಲಿದ್ದೀರಾ? ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಲ್ಯಾಪ್‌ಟಾಪ್‌ನ ಡಾಟಾಕಾರ್ಡ್ ಮೂಲಕವೂ ಗ್ರಂಥಾಲಯ ಸೌಕರ್ಯ ಪಡೆಯಬಹುದು.



ಡಿಜಿಟಲ್ ಭಾಷಾ ಪ್ರಯೋಗಾಲಯ, ಓದುಗರ ಇ ಮೇಲ್ ಗ್ರೂಪ್, ಹೆಚ್ಚು ಉಪಯುಕ್ತ ಹಾಗೂ ಕಡಿಮೆ ಉಪಯುಕ್ತ ಗ್ರಂಥಗಳ ವಿಭಜನೆ ಹಾಗೂ ವಿಶ್ವದ ಪ್ರಮುಖ ಗ್ರಂಥಾಲಯಗಳ ಗ್ರಂಥಸೂಚಿಯ ಸೌಕರ್ಯವನ್ನು ಗ್ರಂಥಾಲಯವು ತನ್ನ ವಿದ್ಯಾರ್ಥಿ-ಪ್ರಾಧ್ಯಾಪಕರಿಗೆ ನೀಡಿದೆ. ಇದೀಗ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಇದರ ಫಲಿತಾಂಶ ತಿಳಿದುಕೊಂಡು ಇನ್ನಷ್ಟು ಪ್ರಯೋಗಗಳನ್ನು ಮಾಡಲು ವಿ.ವಿ.ಆಡಳಿತ ನಿರ್ಧರಿಸಿದೆ.ವಿ.ವಿ. ಗ್ರಂಥಾಲಯ ಎಂಬ ಕೆರೆಯಲ್ಲಿ ಸಾಕಷ್ಟು ನೀರಿದೆ. ಕೆರೆಯ ಹತ್ತಿರವೂ ವಿದ್ಯಾರ್ಥಿಗಳನ್ನು ಕರೆದೊಯ್ದಿದೆ. ಕುಡಿಯುವ ಉದಾರತೆಯನ್ನು ಅವರು ತೋರಬೇಕಷ್ಟೇ.

ಪ್ರತಿಕ್ರಿಯಿಸಿ (+)