ಶುಕ್ರವಾರ, ನವೆಂಬರ್ 15, 2019
23 °C
ಮಠಗಳ ಓಲೈಕೆ ರಾಜಕೀಯ

ಈಗ ಕಾಂಗ್ರೆಸ್ ಸರದಿ!

Published:
Updated:

ನವದೆಹಲಿ: ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಿವಿಧ ಸಮಾಜದ ಪ್ರಭಾವಿ ಮಠಗಳನ್ನು ಓಲೈಸುವುದೀಗ ಕಾಂಗ್ರೆಸ್ ಸರದಿ! ಮಠಾಧೀಶರ `ಆಶೀರ್ವಾದ' ಪಡೆಯಲು ಬಿಜೆಪಿ ಸರ್ಕಾರ ಬೊಕ್ಕಸದಿಂದ ಉದಾರವಾಗಿ `ದಕ್ಷಿಣೆ' ನೀಡಿದ್ದು ಈಗ ಹಳೆಯ ಸುದ್ದಿ!ರಾಜ್ಯದ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಮಠಗಳಿಗೂ ಭೇಟಿ ಕೊಟ್ಟು ಮಠಾಧೀಶರ `ಆಶೀರ್ವಾದ' ಬೇಡುವಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲಹೆ ಮಾಡಿದ್ದಾರೆ.ಡಿ.ಕೆ. ಶಿವಕುಮಾರ್ ಗುರುವಾರ ರಾಹುಲ್ ಗಾಂಧಿಗೆ ಬರೆದಿರುವ ಪತ್ರದಲ್ಲಿ ಮಠಮಾನ್ಯಗಳು ತಮ್ಮ ಸಮುದಾಯದ ಮತದಾರರ ಮೇಲೆ ಹೊಂದಿರುವ ಪ್ರಾಬಲ್ಯ ಕುರಿತು ವಿವರಿಸಿದ್ದಾರೆ. ಶಿವಕುಮಾರ ಸ್ವಾಮೀಜಿ ಅವರ 106ನೇ ಜಯಂತಿ ಸಂದರ್ಭದಲ್ಲಿ ವಿವಿಧ ಪಕ್ಷಗಳ ನಾಯಕರು ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು `ಆಶೀರ್ವಾದ' ಪಡೆದಿದ್ದಾರೆ.ರಾಹುಲ್ ಗಾಂಧಿ ರಾಜ್ಯದ ಹಿರಿಯ ಸಚಿವರ ಜತೆಗೂಡಿ ಎಲ್ಲ ಶ್ರೀಗಳ ಆಶೀರ್ವಾದ ಪಡೆಯಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ. ರಾಹುಲ್ ಗಾಂಧಿ, ಡಿ. ಕೆ ಸಲಹೆಯನ್ನು ಒಪ್ಪಿಕೊಳ್ಳುವರೆ ಎಂದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಆದರೆ, ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡರು ತಮ್ಮ ನೇತಾರರು ಮಠಮಾನ್ಯಗಳಿಗೆ ಭೇಟಿ ನೀಡುವುದರಿಂದಾಗುವ ರಾಜಕೀಯ ಲಾಭ ಕುರಿತು ಅರ್ಥ ಮಾಡಿಕೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಿದ್ದಗಂಗಾ ಶ್ರೀಗಳ 105ನೇ ಜಯಂತಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಸೋನಿಯಾ ಅವರನ್ನು ಸಮಾರಂಭಕ್ಕೆ ಕರೆತರುವುದಾಗಿ ರಾಜ್ಯ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಇದಲ್ಲದೆ, ಸೋನಿಯಾ ಕೆಲವು ತಿಂಗಳ ಹಿಂದೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಂಗಳೂರಿನ ದಸರ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು.ಶಿವಕುಮಾರ್ ರಾಹುಲ್ ಬರೆದಿರುವ ಇದೇ ಪತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡುವಂತೆ ಒತ್ತಾಯ ಮಾಡಿದ್ದಾರೆ. ಪಕ್ಷದ ದೃಷ್ಟಿಯಿಂದ ಅಭ್ಯರ್ಥಿಗಳ ಬದಲಾವಣೆ ಅಗತ್ಯವಿದೆ ಎಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿರುವ ಅಲೆ ಲಾಭವನ್ನು ಸಂಪೂರ್ಣವಾಗಿ ಪಡೆಯಲು ರಾಜ್ಯ ನಾಯಕರು ಒಗ್ಗೂಡಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)