ಮಂಗಳವಾರ, ಅಕ್ಟೋಬರ್ 15, 2019
29 °C

ಈಗ ಗಡಿ ವಿವಾದದ ಸರದಿ

Published:
Updated:

ಚೆನ್ನೈ (ಪಿಟಿಐ): ಮುಲ್ಲಪೆರಿಯಾರ್ ಅಣೆಕಟ್ಟೆ ಬಗ್ಗೆ ಕೇರಳದ ನಿಲುವಿನ ಹಿನ್ನೆಲೆಯಲ್ಲಿ ಡಿಎಂಕೆ ಗುರುವಾರ ಐದು ದಶಕಗಳಷ್ಟು ಹಿಂದಿನ ತನ್ನ ಬೇಡಿಕೆಯನ್ನು ಮತ್ತೆ ಮುಂದಿಟ್ಟಿದೆ.

ಅಣೆಕಟ್ಟೆ ಇರುವ ದೇವಿಕುಲಂ ಮತ್ತು ಪೀರ್ಮೆಡು ತಾಲ್ಲೂಕುಗಳು ತಮಿಳುನಾಡಿಗೆ ಸೇರಿದ್ದು ಈ ತಾಲ್ಲೂಕುಗಳನ್ನು ಮತ್ತೆ ರಾಜ್ಯದ ವ್ಯಾಪ್ತಿಗೆ ತರಲು ಕೇಂದ್ರ ಕ್ರಮ ಕೈಗೊಳ್ಳಬೇಕು ಎಂದು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

`ಚಾರಿತ್ರಿಕವಾಗಿ ಮತ್ತು ಭೌಗೋಳಿಕವಾಗಿ ತಮಿಳರು ಮತ್ತು ತಮಿಳುನಾಡಿಗೆ ಸೇರಿದ ಈ ಎರಡು ತಾಲ್ಲೂಕುಗಳ ಬಗ್ಗೆ ನಾವು ನೆನಪಿಸಿಕೊಳ್ಳುವಂತೆ ಕೇರಳ ಸರ್ಕಾರ ನಡೆದುಕೊಂಡಿದೆ~ ಎಂದು ಅವರು ಹೇಳಿದ್ದಾರೆ.

ವಿವಾದದ ಬಗ್ಗೆ ಪರಿಶೀಲಿಸಲು ನ್ಯಾಯಮೂರ್ತಿ ಎ.ಎಸ್. ಆನಂದ್  ನೇತೃತ್ವದ ಸಮಿತಿಯನ್ನು ಸುಪ್ರೀಂಕೋರ್ಟ್ ರಚಿಸಿದ್ದರೆ, ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದು ಬಿಟ್ಟು 116 ವರ್ಷಗಳಷ್ಟು ಹಳೆಯದಾದ ಅಣೆಕಟ್ಟೆಯ ಜಾಗದಲ್ಲಿ ಹೊಸ ಅಣೆಕಟ್ಟೆ ನಿರ್ಮಿಸಲು ಒತ್ತಡ ತರುತ್ತಿದ್ದಾರೆ ಎಂದು ಕರುಣಾನಿಧಿ ಟೀಕಿಸಿದರು.

ಬಹಳ ಹಿಂದೆ, 1965ರ ಜನವರಿಯಲ್ಲೇ ಅಣೆಕಟ್ಟೆ ಇರುವ ಪೀರ್ಮೆಡು ಮತ್ತು ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶಗಳಿರುವ ದೇವಿಕುಲಂ ತಾಲ್ಲೂಕನ್ನು ತಮಿಳುನಾಡಿಗೆ ಸೇರ್ಪಡೆ ಮಾಡಬೇಕೆಂದು ಡಿಎಂಕೆ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಒತ್ತಾಯಿಸಿದ್ದರು ಎಂದೂ ಅವರು  ಸ್ಮರಿಸಿದರು.

`12ನೇ ಶತಮಾನದಲ್ಲಿ ತಮಿಳು ರಾಜರ ಆಡಳಿತಾವಧಿಯಲ್ಲಿ ಮುಲ್ಲಪೆರಿಯಾರ್ ಅಣೆಕಟ್ಟೆ ನಿರ್ಮಾಣವಾಗಿದೆ. ವಾಸ್ತವಾಂಶ ಇದಾಗಿದ್ದರೂ ಈ ಪ್ರದೇಶಗಳು ತಿರುವಾಂಕೂರು ರಾಜರ ಅಧೀನದಲ್ಲಿರುವುದಾಗಿ ತಪ್ಪಾಗಿ ಪರಿಗಣಿಸಿ 1886ರಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಗಿದೆ~ ಎಂದು ವಿವರಿಸಿದರು.

`ತಿರುವಾಂಕೂರು ಗಡಿರೇಖೆಯು ಆರೂರ್ ಮತ್ತು ಕೊಟ್ಟಾರಕರವರೆಗೆ ಇದೆ. ಆದರೆ ಬ್ರಿಟಿಷರು ದೇವಿಕುಲಂ ಮತ್ತು ಪೀರ್ಮೆಡುವನ್ನೂ ಇದರೊಂದಿಗೆ ಸೇರಿಸಿ ಒಪ್ಪಂದ ಮಾಡಿಕೊಂಡರು~ ಎಂದರು.

`ಬ್ರಿಟಿಷ್ ಗವರ್ನರ್ ಅವರ ತಪ್ಪಿನಿಂದಾಗಿ ಮತ್ತು ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ಪುನರ್‌ವಿಂಗಡಣೆ ಮಾಡುವಾಗ ಅನುಸರಿಸಿದ ತಪ್ಪು ಕ್ರಮಗಳಿಂದಾಗಿ ಮುಲ್ಲ ಪೆರಿಯಾರ್ ಅಣೆಕಟ್ಟೆ ವಿವಾದ ಮುಂದುವರಿದಿದೆ~ ಎಂದು ವಿಷಾದಿಸಿದರು.

`ಕೇಂದ್ರ ಮಧ್ಯ ಪ್ರವೇಶಿಸಿ ಆಗಿರುವ ತಪ್ಪನ್ನು ಹಾಗೂ ತಮಿಳುನಾಡಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು~  ಎಂದು ಆಗ್ರಹಿಸಿದರು.

ತಮಿಳುನಾಡು ಸರ್ಕಾರವೂ ಈ ದಿಸೆಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

Post Comments (+)