ಬುಧವಾರ, ಮಾರ್ಚ್ 3, 2021
31 °C

ಈಗ ದಂತ ಚಿಕಿತ್ಸೆಗೂ ಕಾರ್ಡ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಗ ದಂತ ಚಿಕಿತ್ಸೆಗೂ ಕಾರ್ಡ್!

`ನಗರದಲ್ಲಿ ಇಂದು ಶೇ 90ರಷ್ಟು ಮಂದಿ ದಂತ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದು ಆಹಾರ ಪದ್ಧತಿಯಿಂದ ಬಂದಿರಬಹುದು ಇಲ್ಲವೇ ಮದ್ಯಪಾನ ವ್ಯಸನದಿಂದ ಅಂಟಿಕೊಂಡಿರಬಹುದು. ದುರದೃಷ್ಟವೆಂದರೆ ಬಹುತೇಕರಿಗೆ ಈ ಕುರಿತ ಮಾಹಿತಿ ಇಲ್ಲ. ಅರ್ಧಗಂಟೆಗೆ ಮೂರು ಬಾರಿ ಪ್ರಸಾರವಾಗುವ ಜಾಹೀರಾತುಗಳೂ ಮಕ್ಕಳು ಬ್ರಷ್ ಮಾಡಬೇಕಾದ ವಿಧಾನವನ್ನು ಹೇಳಿಕೊಡುತ್ತಿಲ್ಲ~ ಎನ್ನುತ್ತಾ ಹಣೆ ಮೇಲೆ ಕೈಯಾಡಿಸಿದರು ವೈದ್ಯ ಡಾ. ರಘುನಂದ್ ಸಿಂಧೆ.ಹಲ್ಲಿನ ಬಗ್ಗೆ ಜನಸಾಮಾನ್ಯರಲ್ಲೂ ಜಾಗೃತಿ ಮೂಡಿಸಬೇಕು. ಎಲ್ಲರೂ ದಂತಪಂಕ್ತಿಗಳ ಬಗ್ಗೆ ಕಾಳಜಿ ವಹಿಸುವಂತಾಗಬೇಕು ಎಂಬ ಕಳಕಳಿ ಸಿಂಧೆ ಅವರದ್ದು. ಅದಕ್ಕಾಗಿ ಅವರು ಅನುಸರಿಸಿದ ಮಾರ್ಗ ಮಾತ್ರ ವಿಭಿನ್ನ. ಭಾರತದಲ್ಲೇ ಮೊದಲು ಎನ್ನಬಹುದಾದ ಈ ಯೋಜನೆ ಕಳೆದ ಐದು ವರ್ಷಗಳ ಪ್ರಯತ್ನದಿಂದ ಇದೀಗ ಸ್ಪಷ್ಟರೂಪ ಪಡೆದುಕೊಂಡಿದೆ.ಈ ಯೋಜನೆಗೆ ಅವರಿಟ್ಟ ಹೆಸರು `ಡೆಂಟಲ್ ಕನೆಕ್ಟ್~. ರೋಗಿಗಳಿಗೆ `ಡೆಂಟಲ್ ಪ್ರಿವಿಲಿಜ್ ಡಿಸ್ಕೌಂಟ್ ಕಾರ್ಡ್~ ವಿತರಿಸಿ ಆ ಮೂಲಕ ಅವರಿಗೆ ನೆರವಾಗುವ ಯೋಜನೆಯಿದು. ನೂರಕ್ಕೂ ಅಧಿಕ ದಂತವೈದ್ಯರನ್ನು ಸಂಪರ್ಕಿಸಿ ಈ ತಂಡದ ಸದಸ್ಯರನ್ನಾಗಿ ಮಾಡಲಾಗಿದೆ. ಇವರೆಲ್ಲರೂ 15 ವರ್ಷಗಳಿಂದ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಪರಿಣತರೇ. 75 ರೂಪಾಯಿಗೆ ದೊರೆಯುವ ಈ ಕಾರ್ಡನ್ನು ಸಾರ್ವಜನಿಕರೂ ಪಡೆದುಕೊಳ್ಳಬಹುದು.

 

ಮಕ್ಕಳಿಗಾಗಿ ನೀಡುವ `ಪೆಡೊ ಪ್ರಿವಿಲಿಜ್ ಕಾರ್ಡ್~ನಲ್ಲಿ ನಾಲ್ಕು ಬಾರಿ ಉಚಿತ ಸಮಾಲೋಚನೆ ಹಾಗೂ ಎಲ್ಲಾ ದಂತ ಚಿಕಿತ್ಸೆಗಳ ಮೇಲೆ ಶೇ 20ರಷ್ಟು ರಿಯಾಯಿತಿ ದೊರೆಯಲಿದೆ.ಇನ್ನು `ಆರ್ಥೋ ಪ್ರಿವಿಲಿಜ್ ಕಾರ್ಡ್~ ಪಡೆದುಕೊಂಡರೆ ಒಂದು ಬಾರಿ ಉಚಿತ ಸಲಹೆ ಹಾಗೂ ಮೂಳೆ ಸಂಬಂಧಿ ಸಮಸ್ಯೆ ಚಿಕಿತ್ಸೆಗಳ ಮೇಲೆ ಶೇ 15 ರಿಯಾಯಿತಿ ದೊರೆಯಲಿದೆ.`ಸೀನಿಯರ್ ಸಿಟಿಜನ್ ಪ್ರಿವಿಲಿಜ್ ಕಾರ್ಡ್~ ಕೂಡಾ 75 ರೂಪಾಯಿಗೆ ದೊರೆಯಲಿದ್ದು 60 ವಯಸ್ಸಿನ ಮೇಲ್ಪಟ್ಟವರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಇದರಲ್ಲಿ ಎರಡು ಉಚಿತ ಸಮಾಲೋಚನೆ ಹಾಗೂ ಎಲ್ಲಾ ಚಿಕಿತ್ಸೆಗಳ ಮೇಲೆ ಶೇ 20ರಷ್ಟು ರಿಯಾಯಿತಿಯೂ ದೊರೆಯಲಿದೆ. `ಕಾಂಪ್ರಿಹೆನ್ಸಿವ್ ಪ್ರಿವಿಲಿಜ್ ಕಾರ್ಡ್~ 99 ರೂಪಾಯಿಗೆ ದೊರೆಯಲಿದ್ದು, ಎಲ್ಲಾ ವಯೋಮಾನದವರಿಗೂ ಇದು ಲಭ್ಯವಾಗಲಿದೆ.ಇಲ್ಲಿ ಒಂದು ಬಾರಿ ಉಚಿತ ಸಮಾಲೋಚನೆ ಹಾಗೂ ಎಲ್ಲಾ ಸಮಸ್ಯೆಗಳ ಚಿಕಿತ್ಸೆಗೆ ಶೇ 15ರಷ್ಟು ರಿಯಾಯಿತಿ ದೊರೆಯಲಿದೆ. ಸದಸ್ಯರಾಗಿರುವ ನೂರಕ್ಕೂ ಅಧಿಕ ದಂತವೈದ್ಯರು ಈ ಕಾರ್ಡ್‌ನ ಅನ್ವಯ ಚಿಕಿತ್ಸೆ ನೀಡುತ್ತಾರೆ. ಕಾರ್ಡ್‌ಗಳನ್ನು ಡೆಂಟಲ್ ಕನೆಕ್ಟ್‌ನ ಅಧಿಕೃತ ಮಾರ್ಕೆಟಿಂಗ್ ಅಧಿಕಾರಿಗಳ ಬಳಿ ಪಡೆದುಕೊಳ್ಳಬಹುದು.`ಕಾರ್ಡ್ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಇದೇ ಕಾರಣಕ್ಕೆ ಜಾಗೃತಿ ಮೂಡಿಸಲೆಂದೇ ಶಾಲಾ-ಕಾಲೇಜುಗಳಿಗೆ ತೆರಳಿ ಮಾಹಿತಿ ನೀಡುತ್ತಿದ್ದೇವೆ. ಪ್ರಾತ್ಯಕ್ಷಿಕೆ ನೀಡುವ ಮೂಲಕ ದಂತಪಂಕ್ತಿಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡುತ್ತೇವೆ.

 

ಇತ್ತೀಚೆಗೆ ಐಟಿ ಕಂಪೆನಿಗಳಿಗೂ ತೆರಳಿ ಅಲ್ಲೂ ಜಾಗೃತಿ ಶಿಬಿರ ಏರ್ಪಡಿಸಿದ್ದಿದೆ. ಈವರೆಗೆ 500 ಮಂದಿ ಈ ಕಾರ್ಡನ್ನು ಉಪಯೋಗಿಸಿಕೊಂಡಿದ್ದಾರೆ~ ಎನ್ನುತ್ತಾರೆ ಮಾರುಕಟ್ಟೆ ಅಧಿಕಾರಿ ಪಿ. ಎನ್. ರವೀಂದ್ರ.`ಇಂದು ನಗರದಲ್ಲಿ 4,500ಕ್ಕೂ ಹೆಚ್ಚು ಮಂದಿ ದಂತ ವೈದ್ಯರಿದ್ದಾರೆ. ಹೀಗಿದ್ದೂ ಅವರ ಬಳಿ ಚಿಕಿತ್ಸೆಗೆ ಬರುವವರು, ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಮಂದಿ ಮಾತ್ರ. ಬಡತನ ರೇಖೆಗಿಂತ ಕೆಳಗಿರುವವರು ಎಷ್ಟೇ ನೋವು ಅನುಭವಿಸಿದರೂ ವೈದ್ಯರ ಬಳಿ ಬರುವ ತೊಂದರೆ ತೆಗೆದುಕೊಳ್ಳುವುದಿಲ್ಲ.ಇದನ್ನು ತಪ್ಪಿಸಲು, ಎಲ್ಲರೂ ವೈದ್ಯರ ಉಪಯೋಗ ಪಡೆದುಕೊಳ್ಳುವಂತಾಗಲು ಇಂತಹ ಹೊಸ ಯೋಜನೆ ರೂಪಿಸಿದ್ದೇನೆ. ಒಂದು ವರ್ಷ ಬಳಸಿ ಮತ್ತೆ ನವೀಕರಿಸಿಕೊಳ್ಳಬಹುದು~ ಎನ್ನುತ್ತಾರೆ ರಘುನಂದ್.

ನೀವೂ ಕಾರ್ಡ್ ಕೊಳ್ಳಬೇಕಾದರೆ: 97393 15728 ಅಥವಾ 9886155151.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.