ಮಂಗಳವಾರ, ಏಪ್ರಿಲ್ 20, 2021
26 °C

ಈಗ ನೊಣಗಳ ಆಟ: ರೋಗದ ಕಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಈಗ ನಗರದಲ್ಲಿ ನೊಣ, ಸೊಳ್ಳೆಗಳ ಕಾಟ. ಮುಂಗಾರು ಸಿಂಚನದ ಜೊತೆ ರೋಗದ ಭಯವೂ ಹೆಚ್ಚಿದೆ. ಹಗಲು ಮುತ್ತಿಕ್ಕುವ ನೊಣ, ಮುಸ್ಸಂಜೆಯಲ್ಲಿ ಬರುವ ಸೊಳ್ಳೆಯಿಂದ ನೆಮ್ಮದಿಯಿಲ್ಲ. ಆದರೂ ಆಡಳಿತದಿಂದ ಯಾವುದೇ ಮುಂಜಾಗ್ರತ ಕ್ರಮವೇ ಇಲ್ಲ! ಮೂರೇ ವರ್ಷದಲ್ಲಿ ಮೂರನೇ ಮುಖ್ಯಮಂತ್ರಿ ಬಂದರೂ, 2009ರಲ್ಲಿ ಮಂಜೂರಾದ `ಮುಖ್ಯಮಂತ್ರಿ - 100 ಕೋಟಿ ರೂಪಾಯಿ~ಯ ಕಾಮಗಾರಿ ಮಾತ್ರ ನಗರದಲ್ಲಿ ಪೂರ್ಣಗೊಂಡಿಲ್ಲ. ಅಲ್ಲದೇ ನಗರದಲ್ಲಿ ಖಾಸಗಿ ಕಟ್ಟಡ ನಿರ್ಮಾಣಕಾರರು ಸುರಕ್ಷತಾ ನಿಯಮವನ್ನೇ ಅನುಸರಿಸುತ್ತಿಲ್ಲ. ಮಳೆ ನೀರು, ಕೊಳಚೆ ಸಾಗಲೂ ಚರಂಡಿಯಿಲ್ಲ. ಇದರಿಂದ ಅಲ್ಲಲ್ಲಿ ಕೊಳಚೆ ಮತ್ತು ಕೆಸರು ಸಾಮಾನ್ಯವಾಗಿದೆ. ಗುಲ್ಬರ್ಗ ಮಹಾನಗರ ಪಾಲಿಕೆಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ನಗರವೇ ಗಬ್ಬೆದ್ದು ಹೋಗಿದೆ. ಜನತೆ ನಡೆದಾಡುವುದೂ ಅಸಾಧ್ಯವಾಗಿದೆ. ಹೋಟೆಲ್, ಸಿಹಿತಿಂಡಿ, ತರಕಾರಿ, ಮಾಂಸ ಮತ್ತಿತರ ವ್ಯಾಪಾರಿ ಮಳಿಗೆಗಳೆಲ್ಲ ತ್ಯಾಜ್ಯವನ್ನು ರಸ್ತೆ ಬದಿಗೆ ಎಸೆಯುತ್ತಿವೆ. ಗುಟ್ಕಾ-ಬೀಡವನ್ನು ಅಲ್ಲಲ್ಲಿ ಉಗುಳುವ, ಕಸ ಎಸೆಯುವ, ಸ್ವಚ್ಛತೆ ಪಾಲಿಸದ ಜನತೆಯ ಕೊಡುಗೆಗೂ ಕಮ್ಮಿಯಿಲ್ಲ. ಇದರಿಂದಲೇ ಈಗ ನೊಣ-ಸೊಳ್ಳೆಗಳ ಆರ್ಭಟ.ನೊಣ: ವಿಶ್ವದಾದ್ಯಂತ ಮನುಷ್ಯನ ಆಹಾರ ಮತ್ತು ತ್ಯಾಜ್ಯದಲ್ಲೇ ಬದುಕುವ ಜೀವಿ ನೊಣ. ಹೌಸ್‌ಫ್ಲೈ, `ಮ್ಯೂಸ್ಕಾ ಡೊಮೆಸ್ಟಿಕಾ~ ಎಂಬ ಹೆಸರು ಇದೆ. ನೊಣವೊಂದಕ್ಕೆ 500 ಮೊಟ್ಟೆ ಇಡುವ ಸಾಮರ್ಥ್ಯವಿದೆ. ಈ ಮೊಟ್ಟೆಗಳು ವಾರದೊಳಗೆ `ಲಾರ್ವಾ~ (ಮರಿಹುಳು) ಹಂತ ಪೂರೈಸಿ ನೊಣಗಳಾಗುತ್ತವೆ. ಮತ್ತೆ ಸಂತಾನೋತ್ಪತ್ತಿ. ಹೀಗೆ 30 ದಿನ ಜೀವಿತಾವಧಿ. ಕೆಲವೇ ದಿನಗಳಲ್ಲಿ ನೊಣಗಳ ಸಂಖ್ಯಾಸ್ಫೋಟವು  ಕೋಟಿ ಮೀರುತ್ತದೆ.ಸೊಳ್ಳೆ: ಸಾವಿರಾರು ಮೊಟ್ಟೆ ಇಡುವ ಸಾಮರ್ಥ್ಯದ ಸೊಳ್ಳೆಯ ಸಂತತಿಯು ಶರವೇಗದಲ್ಲಿ ವೃದ್ಧಿಸುತ್ತದೆ. 20ರಿಂದ 30 ದಿನ ಜೀವಿತಾವಧಿ. ಅಲ್ಲದೇ 2ರಿಂದ 3 ಕಿ.ಮೀ. ದೂರಕ್ಕೂ ಹಾರಿ ರೋಗ ಪಸರಿಸಬಹುದು. ನಗರದ ಸೊಳ್ಳೆಗಳ ಸಂಖ್ಯೆಯಂತೂ ನಿರೀಕ್ಷೆಗೂ ನಿಲುಕದ್ದು! ಆದರೆ ನೊಣ ಮತ್ತು ಸೊಳ್ಳೆಗೆ ನಿಂತ ನೀರು ಮತ್ತು ತ್ಯಾಜ್ಯವೇ `ಹೆರಿಗೆ ಆಸ್ಪತ್ರೆ~ ಮತ್ತು `ಆಹಾರ~. ಹೀಗಾಗಿ ಕೋಟ್ಯಂತರ ಸೊಳ್ಳೆ, ನೊಣಗಳ ಜನನಕ್ಕೆ ಆಡಳಿತದ ನಿರ್ಲಕ್ಷ್ಯವೇ ನೇರ ಕಾರಣ.ರೋಗಗಳು: ನೊಣಗಳಿಂದ ಬ್ಯಾಕ್ಟೀರಿಯಾ, ವೈರಸ್ ಮತ್ತು ಪರಾವಲಂಬಿ ಕೀಟಗಳ ಮೂಲಕ ಪಸರಿಸುವ ರೋಗಗಳು ಬರುತ್ತವೆ. ಸೊಳ್ಳೆಗಳು ಕಾಲರಾ, ಮಲೇರಿಯಾ, ವಾಂತಿಬೇಧಿ, ಕಾಮಾಲೆ, ಆನೆಕಾಲು ರೋಗ ತರುತ್ತವೆ.ಎಚ್ಚರ ವಹಿಸಿ: ನಿಮ್ಮ ಮನೆ ಸುತ್ತ ಪರಿಸರದಲ್ಲಿ ನೀರು ನಿಲ್ಲಲು ಬಿಡಬೇಡಿ. ನೆಲ ಮತ್ತಿತರೆಡೆ ಸ್ವಚ್ಛಗೊಳಿಸುವಾಗ ಫಿನಾಯಿಲ್ ಅಥವಾ ಡೆಟಾಲ್ ಬಳಸಿ. ತ್ಯಾಜ್ಯವನ್ನು ಸೂಕ್ತ ವಿಲೇವಾರಿ ಮಾಡಿ. ಸೊಳ್ಳೆ ಪರದೆಯನ್ನು ಬಳಸಿ. ಮಕ್ಕಳಿದ್ದರೆ ಸಾಕಷ್ಟು ಮುಂಜಾಗ್ರತೆ ವಹಿಸಿ. ಬೀದಿ ಬದಿ, ತೆರೆದಿಟ್ಟ ಆಹಾರ ತಿನ್ನಬೇಡಿ. ಕಂಡ ಕಂಡಲ್ಲಿ ಶೌಚ ಮಾಡುವ, ಉಗುಳುವ ದುರಾಭ್ಯಾಸ ಬಿಟ್ಟು ಬಿಡಿ ಎನ್ನುತ್ತಾರೆ ವೈದ್ಯರು.`ಶೀಘ್ರವೇ ಗಪ್ಪಿ ಮೀನು ಬಿಡುವ, ಔಷಧಿ ಸಿಂಪಡಿಸುವ ಕಾರ್ಯ ನಡೆಸಲಾಗುವುದು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಮಾರ್ಗದರ್ಶನದಲ್ಲಿ ಕಾರ್ಯಯೋಜನೆ ಸಿದ್ಧಗೊಳ್ಳುತ್ತಿದೆ~ ಎನ್ನುತ್ತಾರೆ ಆರೋಗ್ಯ ಇಲಾಖೆಯ ಜಿಲ್ಲಾ ಸಮಗ್ರ ಕಣ್ಗಾವಲು ಯೋಜನಾ ಅಧಿಕಾರಿ ಡಾ. ಅಮರೇಶ್ ಕೊಳ್ಳೂರ್.`ಸರ್, ಪ್ರತಿ ವರ್ಷ ಆಷಾಢ ಬಂದ್ರೆ ನೊಣ-ಸೊಳ್ಳೆ ಗ್ಯಾರಂಟಿ. ರೋಗ ಹರಡುವುದೂ ಹೆಚ್ಚು. ಶ್ರಾವಣ ಮುಗೀತಾ ಕಡಿಮೆಯಾಗ್ತದೆ. ~ಎನ್ನುತ್ತಾರೆ ಜನತೆ. ನೊಣ-ಸೊಳ್ಳೆಗಳ ಕಾಟ ಹೈರಾಣಾಗಿಸಿದೆ. ಈ ಬಾರಿಯಾದರೂ ಎಚ್ಚೆತ್ತುಕೊಳ್ಳುವುದೇ ಆಡಳಿತ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.