ಈಗ ಸತೀಶ್‌ ಸೈಲ್‌ ಸರದಿ

7
ಬೇಲೆಕೇರಿ ಹಗರಣ: ಸಿಬಿಐನಿಂದ ಮತ್ತೊಂದು ಬಂಧನ

ಈಗ ಸತೀಶ್‌ ಸೈಲ್‌ ಸರದಿ

Published:
Updated:

ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ನಡೆದಿರುವ ಕಬ್ಬಿಣದ ಅದಿರು ಕಳ್ಳಸಾಗಣೆ ಹಗರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಬಿಐ, ಕಾರವಾರ ಕ್ಷೇತ್ರದ ಪಕ್ಷೇತರ ಶಾಸಕ ಸತೀಶ್‌ ಸೈಲ್‌ ಅವರನ್ನು ಶುಕ್ರವಾರ ರಾತ್ರಿ ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕರ ಸಂಖ್ಯೆ ಎರಡಕ್ಕೇರಿದೆ.ಅದಿರು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಟಿ.ಎಚ್‌.ಸುರೇಶ್‌ಬಾಬು ಅವರನ್ನು ಸಿಬಿಐ ಅಧಿಕಾರಿಗಳು ಗುರುವಾರ ಬಂಧಿಸಿದ್ದರು. ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೈಲ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದರು. ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ಹಾಜರಾದ ಸತೀಶ್‌ ಸೈಲ್‌ ಅವರನ್ನು ದೀರ್ಘ ಕಾಲ ವಿಚಾರಣೆ ನಡೆಸಿದ ತನಿಖಾ ತಂಡ, ರಾತ್ರಿ 8 ಗಂಟೆಗೆ ಬಂಧಿಸಿತು. ಸೈಲ್‌, ಆರು ಲಕ್ಷ ಟನ್‌ ಅದಿರನ್ನು ಕಳ್ಳಸಾಗಣೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.ಸತೀಶ್‌ ಸೈಲ್‌ ಅವರನ್ನು ಸಿಬಿಐ ಕಚೇರಿಯಲ್ಲೇ ಇರಿಸಲಾಗಿದೆ. ಶನಿವಾರ ಬೆಳಿಗ್ಗೆ ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿಬಿಐ ಅಧಿಕಾರಿಗಳು ತೀರ್ಮಾನಿ­ಸಿದ್ದಾರೆ. ಆರೋಪಿ ಶಾಸಕರನ್ನು ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ನೀಡುವಂತೆ ತನಿಖಾ ತಂಡ ಶನಿವಾರ ನ್ಯಾಯಾ­ಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಸತೀಶ್‌ ಸೈಲ್‌ ಬೇಲೆಕೇರಿ ಬಂದರಿನಲ್ಲಿ ಸರಕು ಸಾಗಣೆಗೆ ನೆರವು ಒದಗಿಸುತ್ತಿದ್ದ ಮಲ್ಲಿಕಾರ್ಜುನ ಶಿಪ್ಪಿಂಗ್‌ ಕಂಪೆನಿಯ ಮಾಲೀಕರು. ಈ ಕಂಪೆನಿ 2006ರಿಂದ ಈಚೆಗೆ ಅದಿರು ರಫ್ತು ವ್ಯವಹಾರದಲ್ಲಿ ತೊಡಗಿತ್ತು. 2009 ಮತ್ತು 2010ರ ಅವಧಿಯಲ್ಲಿ ಈ ಕಂಪೆನಿ ಒಂಬತ್ತು ಲಕ್ಷ ಟನ್‌ ಅದಿರನ್ನು ರಫ್ತು ಮಾಡಿತ್ತು. ಈ ಪೈಕಿ ಆರು ಲಕ್ಷ ಟನ್‌ಗೂ ಹೆಚ್ಚು ಅದಿರು ಬಳ್ಳಾರಿಯ ವಿವಿಧೆಡೆ ಕಳ್ಳತನ ಮಾಡಿದ್ದಾಗಿತ್ತು ಎಂಬ ಅಂಶ ತನಿಖೆ ವೇಳೆ ಖಚಿತಪಟ್ಟಿದೆ.ಮಲ್ಲಿಕಾರ್ಜುನ ಶಿಪ್ಪಿಂಗ್‌ ಕಂಪೆನಿ ಖುದ್ದಾಗಿ 6 ಲಕ್ಷ ಟನ್‌ ಅದಿರನ್ನು ಕಳ್ಳ ಸಾಗಣೆ ಮಾಡಿರುವುದನ್ನು ದೃಢಪಡಿ ಸುವ ಮಹತ್ವದ ಸಾಕ್ಷ್ಯಗಳನ್ನು ಸಿಬಿಐ ಕಲೆಹಾಕಿದೆ. ಜೊತೆಯಲ್ಲೇ ಬೇಲೆಕೇರಿ ಬಂದರಿನ ಮೂಲಕ ಅದಿರು ಕಳ್ಳ ಸಾಗಣೆ ಮಾಡಿದ್ದ ಇತರೆ ಆರೋಪಿ ಗಳಿಗೂ ಈ ಕಂಪೆನಿ ನೆರವು ನೀಡಿತ್ತು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.ಬಂದರಿನ ಮೇಲೆ ಹಿಡಿತ: ಮಲ್ಲಿಕಾರ್ಜುನ ಶಿಪ್ಪಿಂಗ್‌ ಕಂಪೆನಿ ಬೇಲೆಕೇರಿ ಬಂದರನ್ನೇ ತನ್ನ ಕಾರ್ಯ­ಸ್ಥಾನ ಮಾಡಿಕೊಂಡಿತ್ತು. ಹೀಗಾಗಿ ಬಂದರಿನಲ್ಲಿನ ಎಲ್ಲಾ ಚಟುವಟಿಕೆಗಳ ಮೇಲೆ ಈ ಕಂಪೆನಿಗೆ ಹೆಚ್ಚಿನ ಹಿಡಿತ ಇತ್ತು. ಬಳ್ಳಾರಿಯಲ್ಲಿ ಕಳ್ಳಸಾಗಣೆ ಮಾಡಿದ ಅದಿರನ್ನು ಈ ಕಂಪೆನಿ ನೇರವಾಗಿ ಬಂದರಿನ ಆವರಣಕ್ಕೆ ತರಿಸಿಕೊಳ್ಳುತ್ತಿತ್ತು. ತ್ವರಿತವಾಗಿ ಅದನ್ನು ರಫ್ತು ಮಾಡುತ್ತಿತ್ತು ಎಂಬುದೂ ತನಿಖೆಯಲ್ಲಿ ಬಯಲಿಗೆ ಬಂದಿದೆ.ಬಳ್ಳಾರಿಯ ವಿವಿಧೆಡೆ ಅಕ್ರಮ ಗಣಿಗಾರಿಕೆ ನಡೆಸಿ, ಅದಿರು ಕಳ್ಳತನ ಮಾಡುತ್ತಿದ್ದ 30ಕ್ಕೂ ಹೆಚ್ಚು ಕಂಪೆನಿಗಳಿಂದ ಮಲ್ಲಿಕಾರ್ಜುನ

ಶಿಪ್ಪಿಂಗ್‌ ಖರೀದಿ ಮಾಡುತ್ತಿತ್ತು. ಪರವಾನಗಿ ಇಲ್ಲದೇ ದೊಡ್ಡ ಪ್ರಮಾಣದ ಅದಿರನ್ನು ಬೇಲೆಕೇರಿಗೆ ಸಾಗಿಸುತ್ತಿತ್ತು. ಕೆಲವು ಪ್ರಕರಣಗಳಲ್ಲಿ ಅದಿರು ರಫ್ತು ಮಾಡಿದ ಬಳಿಕ ಸಾಗಣೆ ಪರವಾನಗಿಗಳನ್ನು ಪಡೆದಿರುವುದು ಪತ್ತೆಯಾಗಿದೆ.ಅದಿರು ಕಳ್ಳತನದಲ್ಲೂ ಭಾಗಿ: ಬೇಲೆಕೇರಿ ಬಂದರಿನ ಮೂಲಕ ಅದಿರು ಕಳ್ಳಸಾಗಣೆ ನಡೆಯುತ್ತಿರುವ  ಮಾಹಿತಿ ಪಡೆದಿದ್ದ ಲೋಕಾಯುಕ್ತ ತನಿಖಾ ತಂಡ, 2010ರ ಮಾರ್ಚ್‌ನಲ್ಲಿ ಅಲ್ಲಿಗೆ ದಾಳಿ ನಡೆಸಿತ್ತು.

ಆಗ, ಬಳ್ಳಾರಿ ಮತ್ತು ಇತರೆ ಕಡೆಗಳಿಂದ ಅಕ್ರಮವಾಗಿ ತಂದು ಅಲ್ಲಿ ಸಂಗ್ರಹಿಸಿದ್ದ ಎಂಟು ಲಕ್ಷ ಟನ್‌ಗೂ ಹೆಚ್ಚು ಅದಿರು ಪತ್ತೆ­ಯಾಗಿತ್ತು. ಈ ಅದಿರನ್ನು ಅರಣ್ಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿತ್ತು.ಅರಣ್ಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಅದಿರನ್ನು ಕೆಲವು ಕಂಪೆನಿಗಳು ಕದ್ದು ರಫ್ತು ಮಾಡಿರು­ವುದು 2010ರ ಜೂನ್‌ನಲ್ಲಿ ಪತ್ತೆಯಾಗಿತ್ತು. ಈ ಕೃತ್ಯದಲ್ಲಿ ಕೂಡ ಸತೀಶ್‌ ಸೈಲ್‌ ಭಾಗಿಯಾಗಿರುವ ಆರೋಪವಿದೆ. ಈ ಬಗ್ಗೆಯೂ ಸಿಬಿಐ ತನಿಖೆ ನಡೆಸುತ್ತಿದೆ. ಮುಟ್ಟುಗೋಲು ಹಾಕಿಕೊಂಡಿದ್ದ ಅದಿರು ಕಳ್ಳತನದಲ್ಲೂ ಶಾಸಕರ ಪಾತ್ರ ಇರುವುದು ಬಹುತೇಕ ಖಚಿತಪಟ್ಟಿದೆ.ಆಳಕ್ಕಿಳಿಯಲಿದೆ ತನಿಖೆ: ಶಾಸಕರ ಒಡೆತನದ ಶಿಪ್ಪಿಂಗ್‌ ಕಂಪೆನಿ ಅದಿರು ಕಳ್ಳಸಾಗಣೆ ಮಾತ್ರವಲ್ಲದೇ ತೆರಿಗೆ ವಂಚನೆ, ಕಪ್ಪುಹಣದ ವರ್ಗಾವಣೆ, ಬಂದರು ಹಾಗೂ ವಿವಿಧ ಇಲಾಖೆಗಳಿಗೆ ಲಂಚ ನೀಡಿರುವ ಆರೋಪವನ್ನೂ ಎದುರಿಸುತ್ತಿದೆ. ಈ ಬಗ್ಗೆಯೂ ತನಿಖೆ ಮುಂದುವರಿದಿದೆ. ಮಲ್ಲಿಕಾರ್ಜುನ ಶಿಪ್ಪಿಂಗ್‌ ಕಂಪೆನಿಯ ಹಲವು ನೌಕರರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಕಂಪೆನಿಯ ಮಾಲೀಕರಾಗಿರುವ ಸತೀಶ್‌ ಸೈಲ್ ಆದೇಶದಂತೆ ಎಲ್ಲವನ್ನೂ ಮಾಡಿರುವುದಾಗಿ ಅವರು ತನಿಖಾ ತಂಡದ ಬಳಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಮೊದಲ ಬಾರಿಗೆ ಶಾಸಕ

ಕಾರವಾರದ ಪ್ರಭಾವಿ ಉದ್ಯಮಿ­ಗಳಲ್ಲಿ ಒಬ್ಬರಾಗಿದ್ದ 45 ವರ್ಷ ವಯಸ್ಸಿನ ಸತೀಶ್‌ ಸೈಲ್‌ ಆರಂಭ­ದಿಂದಲೂ ಕಾಂಗ್ರೆಸ್‌ ಪಕ್ಷದಲ್ಲಿ ದ್ದರು. 2008ರ ವಿಧಾನಸಭಾ ಚುನಾವಣೆ­ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು.ಆದರೆ, 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿತ್ತು. ಪಕ್ಷದ ನಿಲುವಿನಿಂದ ಸಿಟ್ಟಿಗೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸೈಲ್‌, ಗೆಲುವು ಸಾಧಿಸಿ ವಿಧಾನ ಸಭೆ ಪ್ರವೇಶಿಸಿದ್ದರು.ಬಿ.ಎಸ್‌ಸಿ ಪದವೀಧರರಾಗಿರುವ ಸೈಲ್‌, ಹಲವು ಕಂಪೆನಿಗಳನ್ನು ನಡೆಸುತ್ತಿ ದ್ದಾರೆ. ಬೇಲೆಕೇರಿ ಬಂದರಿನ ಮೂಲಕ ಅದಿರು ರಫ್ತಿನ ಪ್ರಮಾಣ ಹೆಚ್ಚಿದಂತೆ ಇವರ ವಹಿವಾಟೂ ಮೇಲಕ್ಕೇರಿತ್ತು. ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ನಾಮ ಪತ್ರದ ಜೊತೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಭಾರಿ ಪ್ರಮಾಣದ ಆಸ್ತಿ ಘೋಷಿಸಿ­ಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry