ಈಗ ಹುಲಿ ಸಂಕುಲಕ್ಕೆ ಹೆಲಿಪ್ಯಾಡ್ ಭೀತಿ

7

ಈಗ ಹುಲಿ ಸಂಕುಲಕ್ಕೆ ಹೆಲಿಪ್ಯಾಡ್ ಭೀತಿ

Published:
Updated:

ಚಾಮರಾಜನಗರ: ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯ ಪುಣಜನೂರು ಅರಣ್ಯ ವಲಯದ ಬಳಿ ಎಸ್ಟೇಟ್ ಉದ್ಯಮಿಯೊಬ್ಬರು ಹೆಲಿಪ್ಯಾಡ್ ನಿರ್ಮಾಣಕ್ಕೆ ಮುಂದಾಗಿರುವುದು ಬೆಳಕಿಗೆ ಬಂದಿದೆ.ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ಅಭಯಾರಣ್ಯ ಹಾಗೂ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತ ವಾಣಿಜ್ಯ ಉದ್ದೇಶಿತ ಚಟುವಟಿಕೆ ಮಾಡುವಂತಿಲ್ಲ. ಹೆಲಿಕಾಪ್ಟರ್ ಹಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ, ಹುಲಿ ರಕ್ಷಿತಾರಣ್ಯದಲ್ಲಿ ಕಾಫಿ ಎಸ್ಟೇಟ್ ಹೊಂದಿರುವ ಚೆನ್ನೈ ಮೂಲದ ಉದ್ಯಮಿಯೊಬ್ಬರು ಈಗ ಹೆಲಿಪ್ಯಾಡ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.ಈ ಸಂಬಂಧ ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದ್ದು, ತಹಶೀಲ್ದಾರ್ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳಿಂದ ಸ್ಥಳದ ಪರಿಶೀಲನೆಯೂ ನಡೆದಿದೆ.ಪುಣಜನೂರು ಗ್ರಾಮದ ಸರ್ವೇ ನಂ. 24/1ರ 3 ಎಕರೆಯಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈ ಸ್ಥಳದಿಂದ ಹುಲಿ ರಕ್ಷಿತಾರಣ್ಯ ಕೇವಲ ಅರ್ಧ ಕಿ.ಮೀ. ದೂರದಲ್ಲಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ರೈತರೊಬ್ಬರ ಈ ಜಮೀನಿನಲ್ಲಿ ಕಳೆದ ಮೂರು ವರ್ಷದ ಹಿಂದೆ ತಾತ್ಕಾಲಿಕವಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ಚೆನ್ನೈನಿಂದ ಆಗಮಿಸಿದ್ದ ಉದ್ಯಮಿ ಈ ಸ್ಥಳದಲ್ಲಿಯೇ ಹೆಲಿಕಾಪ್ಟರ್ ನಿಲುಗಡೆ ಮಾಡಿ ಬೇಡಗುಳಿಯಲ್ಲಿರುವ ಸ್ವಂತ ಕಾಫಿ ಎಸ್ಟೇಟ್‌ಗೆ ತೆರಳಿದ್ದರು.ಪ್ರಸ್ತುತ ಹೆಲಿಪ್ಯಾಡ್ ನಿರ್ಮಾಣಕ್ಕೆ ಜಮೀನಿನ ರೈತರು ಒಪ್ಪಿಗೆ ನೀಡಿದ್ದಾರೆ. ಹೆಲಿಪ್ಯಾಡ್ ನಿರ್ಮಾಣಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಸ್ಥಳ ಪರಿಶೀಲನೆ ನಡೆಸಿರುವ ಪೊಲೀಸ್ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನದ ವ್ಯಾಪ್ತಿ ಹೆಲಿಕಾಪ್ಟರ್ ಹಾರಾಟಕ್ಕೆ ಅವಕಾಶವಿಲ್ಲ.ಈ ಹಿನ್ನೆಲೆಯಲ್ಲಿ ಅನುಮತಿ ನೀಡಬಾರದೆಂದು ಬಿಆರ್‌ಟಿ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರು ವರದಿ ಸಲ್ಲಿಸಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ವರದಿ `ಪ್ರಜಾವಾಣಿ~ಗೆ ಲಭ್ಯವಾಗಿದೆ.ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಒಟ್ಟು ವಿಸ್ತ್ರೀರ್ಣ 574.82 ಚ.ಕಿ.ಮೀ. ಇದರಲ್ಲಿ ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ತಿರುಳು ವಲಯ(ಕೋರ್ ಜೋನ್) 359.10 ಚ.ಕಿ.ಮೀ. ಮಾನವ ನಿರ್ಮಿತ ಆಘಾತ ನಿಯಂತ್ರಿಸುವ ತಡೆವಲಯ(ಬಫರ್ ಜೋನ್) 215.72 ಚ.ಕಿ.ಮೀ. ರಕ್ಷಿತಾರಣ್ಯದಲ್ಲಿರುವ ಬೇಡಗುಳಿಯಲ್ಲಿ ಎಮರಾಲ್ಡ್ ಹೆವನ್ ಎಸ್ಟೇಟ್, ಬಿಳಿಗಿರಿರಂಗನ್ ಕಾಫಿ ಎಸ್ಟೇಟ್‌ಗಳಿವೆ. ಹೊನ್ನಮೇಟಿಯಲ್ಲಿ ನೀಲಗಿರಿ ಪ್ಲಾಂಟೇಷನ್ ಎಸ್ಟೇಟ್ ಮತ್ತು ಅತ್ತಿಕಾನೆಯಲ್ಲಿ ಸಂಗಮೇಶ್ವರ ಕಾಫಿ ಎಸ್ಟೇಟ್ ಇದೆ.ಈ ಎಸ್ಟೇಟ್‌ಗಳು ಕೋರ್ ವಲಯದಲ್ಲಿ ಬರುತ್ತವೆ. ಪ್ರಸ್ತುತ ನಾಲ್ಕು ಎಸ್ಟೇಟ್‌ಗಳ ಕಂದಾಯ ಭೂಮಿಯ ಗ್ರಾಂಟ್ ರದ್ದುಪಡಿಸಿ ರಕ್ಷಿತಾರಣ್ಯಕ್ಕೆ ಸೇರಿಸುವಂತೆ ಅರಣ್ಯ ಇಲಾಖೆಯಿಂದಲೂ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಜಿಲ್ಲಾಡಳಿತದಿಂದ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಈ ನಡುವೆಯೇ ಎಸ್ಟೇಟ್‌ಗಳ ಒಡೆತನ ಹೊಂದಿರುವ ಉದ್ಯಮಿಗಳು ಹೆಲಿಪ್ಯಾಡ್ ನಿರ್ಮಿಸುವ ಮೂಲಕ ವನ್ಯಜೀವಿ ಸಂಕುಲಕ್ಕೆ ಅಡ್ಡಿಯುಂಟು ಮಾಡಲು ಮುಂದಾಗಿದ್ದಾರೆ. ಯಾವುದೇ, ಕಾರಣಕ್ಕೂ ಹೆಲಿಪ್ಯಾಡ್ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂಬುದುಪರಿಸರವಾದಿಗಳ ಒತ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry