ಗುರುವಾರ , ಅಕ್ಟೋಬರ್ 1, 2020
28 °C

ಈಜಿಪ್ಟ್‌ನಲ್ಲಿ ಪ್ರಜಾಸತ್ತೆಗಾಗಿ ತಹತಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಜಿಪ್ಟ್‌ನಲ್ಲಿ ಪ್ರಜಾಸತ್ತೆಗಾಗಿ ತಹತಹಕ್ರಾಂತಿಗಳ ಕುರಿತು ನಾವು ಓದಿ ತಿಳಕೊಂಡಿದ್ದೇ ಹೆಚ್ಚು. ಚೀನಾ, ರಷ್ಯ ಸೇರಿದಂತೆ ಹಲವು ದೇಶಗಳಲ್ಲಿ ದಶಕಗಳ ಕಾಲ ಜನಜಾಗೃತಿ, ಹೋರಾಟ ನಡೆದು ಕೊನೆಗೂ ಅರಸೊತ್ತಿಗೆಗಳು ಉರುಳಿದ್ದವು, ಸರ್ವಾಧಿಕಾರಿಗಳು ಅಳಿದಿದ್ದರು. ಆದರೆ ಕಾಲ ಬದಲಾಗಿದೆ. ಇದೀಗ ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಕ್ರಾಂತಿಯ ನೇರಪ್ರಸಾರವನ್ನು ಜಗತ್ತಿನಾದ್ಯಂತ ಜನ ನೋಡುತ್ತಿದ್ದಾರೆ. ‘ಸರ್ವಾಧಿಕಾರಿ’ ಮುಬಾರಕ್ ವಿರುದ್ಧ ಬಂಡೆದ್ದವರು ಮತ್ತು ಆತನ ಪರ ನಿಂತವರ ನಡುವೆ ತೆಹ್ರಿಕ್ ಚೌಕದ ಬಳಿ ನಡೆದಿರುವ ಕದನವನ್ನು ಕೋಟ್ಯಂತರ ಜನ ಟೀವಿಗಳ ಎದುರು ಕುಳಿತು ಕಣ್ಣೆವೆ ಮುಚ್ಚದೆ ನೋಡಿದ್ದಾರೆ.ಪರಸ್ಪರ ಎರಡೂ ಗುಂಪುಗಳು ಕಲ್ಲೆಸೆತ ನಡೆಸುವುದನ್ನು, ಕಟ್ಟಡ, ಕಾರುಗಳಿಗೆ ಬೆಂಕಿ ಹೊತ್ತಿಸಿರುವುದನ್ನು, ಕುದುರೆ, ಒಂಟೆಗಳ ಮೇಲೆ ಕುಳಿತವರು ಜನರತ್ತ ನುಗ್ಗಿ ಚಾವಟಿ ಬೀಸುತ್ತಿರುವುದನ್ನು, ರೊಚ್ಚಿಗೆದ್ದ ಜನರು ಕುದುರೆಗಳ ಸುತ್ತ ಮುಗಿಬಿದ್ದು ಅದರ ಮೇಲೆ ಕುಳಿತವರನ್ನು ಬೀಳಿಸಿ ಮನಬಂದಂತೆ ಥಳಿಸುತ್ತಿರುವುದನ್ನು  ಕೆಲ ದಿನಗಳಿಂದ ಟೀವಿಯಲ್ಲಿ ವೀಕ್ಷಿಸುತ್ತಲೇ ಇದ್ದೇವೆ.ಮುಬಾರಕ್ ಅವರ ‘ತುರ್ತು ಪರಿಸ್ಥಿತಿ’ ಸ್ವರೂಪದ ಆಡಳಿತ, ಭ್ರಷ್ಟಾಚಾರ, ಬೆಲೆ ಏರಿಕೆ ಮುಂತಾದವುಗಳ ವಿರುದ್ಧವೇ ಘೋಷಣೆಗಳು ಕೇಳಿ ಬರುತ್ತಿದ್ದವು. ‘ಮುಬಾರಕ್ ಹಟಾವೊ’ ಎನ್ನುವುದು ಪ್ರತಿಭಟನಾ ಕಾರರ ಹೆಗ್ಗುರಿ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಒಟ್ಟಾರೆ, ನಮ್ಮ ಕಣ್ಣೆದುರಿನ ಬಂಡಾಯವೊಂದು ಹೀಗೆ ಸರಳ ವ್ಯಾಖ್ಯಾನ ಕಂಡುಕೊಳ್ಳುತ್ತಿದೆ. ಆದರೆ ‘ತೆಹ್ರಿಕ್ ಕದನ’ದ ಹಿನ್ನೆಲೆಯನ್ನು ಇಷ್ಟಕ್ಕೇ ಸೀಮಿತಗೊಳಿಸುವಂತಿಲ್ಲ.ಇಸ್ಲಾಂ ತವರು ಅರೇಬಿಯಾದ ನೆರೆಯಲ್ಲಿರುವ ಈಜಿಪ್ಟ್‌ನಲ್ಲಿ ಪ್ರವಾದಿಯವರ ಕಾಲಘಟ್ಟದಲ್ಲೇ ಇಸ್ಲಾಂ ನೆಲೆ ಕಂಡು ಕೊಂಡಿತ್ತು.  ಆದರೆ ಅಲ್ಲಿನ ಸಂಸ್ಕೃತಿ ನಿರಂತರವಾಗಿ ಯುರೋಪ್ ಪ್ರಭಾವಕ್ಕೆ ಒಳಗಾಗುತ್ತಲೂ ಬಂದಿದೆ. ಜತೆಗೆ ಸಹಸ್ರಮಾನಗಳಿಂದ ಅರಸೊತ್ತಿಗೆ, ಸರ್ವಾಧಿಕಾರಗಳ ಅಬ್ಬರಕ್ಕೆ ಸಿಲುಕುತ್ತಲೂ ಬಂದಿದೆ.  ಈ ಸೂಕ್ಷ್ಮವನ್ನು ಕೆದಕಿದರೆ ತೆಹ್ರಿಕ್ ಪ್ರತಿಭಟನೆ ಕೇವಲ ಮುಬಾರಕ್ ವಿರುದ್ಧದ ಧ್ವನಿಯಾ ಗಷ್ಟೇ ಅಲ್ಲ, ಸಹಸ್ರಮಾನಗಳ ‘ಸರ್ವಾಧಿಕಾರ ಪರಂಪರೆ’ಯ ವಿರುದ್ಧದ ದಂಗೆಯಂತಿದೆ. ಆದರೆ ಈ ನಡುವೆ ದಂಗೆಯ ಒಡಲಿನಿಂದ ಮತ್ತದೇ ‘ಪರಂಪರೆ’ಯೇ ಇನ್ನೊಂದು ಮುಖವಾಡದಲ್ಲಿ ಧುತ್ತೆನ್ನುವುದೋ, ತೆರೆಮರೆಯಲ್ಲಿರುವ ‘ಉಗ್ರ’ರು ಎದ್ದು ನಿಲ್ಲುವರೋ, ಪ್ರಜಾಸತ್ತೆಯ ಮೌಲ್ಯಗಳು ಜೀವ ತಳೆಯುವುದೋ ಎನ್ನುವುದು ಇದೀಗ ಕೌತುಕ ಮೂಡಿಸಿದೆ.ಉತ್ತರ ಆಫ್ರಿಕಾದ ಜೀವನದಿ  ನೈಲ್, ಸುಡಾನ್, ಕಾಂಗೊ ಸೇರಿದಂತೆ ಹಲವು ದೇಶಗಳಲ್ಲಿ ಒಟ್ಟು ಆರೂವರೆ ಸಾವಿರ ಕಿ ಮೀ ಹರಿದು ಕಡಲು ಸೇರುತ್ತದೆಯಾದರೂ, ಈಜಿಪ್ಟ್ ಮಾತ್ರ ತನ್ನ ಸಂಸ್ಕೃತಿ, ಜನರ ಬದುಕುಗಳೆಲ್ಲವನ್ನೂ ಈ ನದಿಯ ಜತೆಗೇ ಗುರುತಿಸಿಕೊಂಡಿದೆ. ಈ ದೇಶದ ದಕ್ಷಿಣ ತುದಿಯಿಂದ ಉತ್ತರಕ್ಕೆ ಹರಿವ ನೈಲ್‌ನ ಆಸುಪಾಸಿನಲ್ಲೇ ಏಳು ಸಹಸ್ರಮಾನಗಳಿಂದ ನಾಗರಿಕತೆ ಬೆಳೆದುಬಂದಿದೆ. ಕ್ರಿಸ್ತ ಹುಟ್ಟುವುದಕ್ಕಿಂತ ಐದು ಸಾವಿರ ವರ್ಷಗಳ ಹಿಂದೆಯೇ ಅಲ್ಲಿ ಒಕ್ಕಲುತನವಿತ್ತು. ಐದು ಸಾವಿರ ವರ್ಷಗಳ ಹಿಂದೆಯೇ ಅರಸೊತ್ತಿಗೆ ಆರಂಭಗೊಂಡಿತ್ತು. ಫೆರೊಗಳು, ರ್ಯಾಮ್ಸೆಸ್, ಕುಶಿಬ್, ಅಸಿರಿಯನ್, ಬಾಗ್ದಾದ್‌ನ ಖಲೀಫರು, ಫತಿವೀಡ್, ಅಯೂಬಿದ್, ಸಲಾದಿನ್, ಬೈಬರ್ಸ್ ವಂಶಸ್ಥ ಅರಸರು ಈ ನಾಡನ್ನು ಸಹಸ್ರಮಾನಗಳ ಕಾಲ ಆಳಿದ್ದರು. ಗ್ರೀಕ್ ಚಕ್ರವರ್ತಿ ಅಲೆಗ್ಸಾಂಡರ್ ‘ನೈಲ್ ಪ್ರದೇಶ’ದಲ್ಲಿ ಅಧಿಪತ್ಯ ಸ್ಥಾಪಿಸಿ ಅಲೆಗ್ಸಾಂಡ್ರಿಯ ನಗರವನ್ನೇ ಕಟ್ಟುತ್ತಾನೆ. ರೋಮ್ ಚಕ್ರವರ್ತಿ ಜೂಲಿಯಸ್ ಸೀಸರ್ ಈಜಿಪ್ಟನ್ನು ಗೆದ್ದ ನಂತರ ನಾನೂರು ವರ್ಷಗಳ ಕಾಲ ರೋಮನ್ನರು ಆಳ್ವಿಕೆ ನಡೆಸುತ್ತಾರೆ. ಆಗಲೇ ಕ್ರೈಸ್ತ ಧರ್ಮ ಈಜಿಪ್ಟ್‌ನ ಪ್ರತಿ ಮನೆ ಮನ ತಲುಪುತ್ತದೆ.  ನಂತರ ಪರ್ಷಿಯಾ, ಅರಬ್, ಟರ್ಕಿ ಮೂಲದ ಅರಸರ ನಿರಂಕುಶಾಡಳಿತದ ಅಡಿಯಲ್ಲಿ ಸಹಸ್ರಮಾನವನ್ನೇ ಕಳೆಯುವ ಈಜಿಪ್ಟ್‌ನಾದ್ಯಂತ ಇಸ್ಲಾಂ ತನ್ನ ಬೇರಿಳಿಸಿಕೊಳ್ಳುತ್ತದೆ.ಇನ್ನೂರು  ವರ್ಷಗಳ ಹಿಂದೆ ನೆಪೋಲಿಯನ್ ಈ ನಾಡನ್ನು ತನ್ನ ಕೈವಶಕ್ಕೆ ತೆಗೆದುಕೊಳ್ಳುತ್ತಾನೆ. ಫ್ರೆಂಚರ ಕೈಯಿಂದ ಬ್ರಿಟಿಷರ ಕಪಿಮುಷ್ಠಿಗೆ ಅಧಿಕಾರ ಹೋಗುತ್ತದೆ. ಶತಮಾನದ ಹಿಂದೆ ಆಂಗ್ಲರ ವಿರುದ್ಧ ಈಗಿನಂತೆ ಕೈರೊ  ಭುಗಿಲಾಗಿತ್ತು. 1922ರಲ್ಲಿ ಬ್ರಿಟಿಷರು ಈಜಿಪ್ಟ್ ತೊರೆದರಾದರೂ, ಅರಸ ಪರಂಪರೆಯ ಫಾದ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾನೆ. 1923ರಲ್ಲೇ ಚುನಾವಣಾ ಪ್ರಕಿಯೆ ನಡೆದರೂ ಅರಸನೇ ಎಲ್ಲವೂ ಆಗಿರುತ್ತಾನೆ. ಈ ರಾಜವಂಶಸ್ಥರ ವಿರುದ್ಧವೂ 1952ರಲ್ಲಿ ಕ್ರಾಂತಿ ನಡೆದು, ಅರಸ ಫಾರೂಕ್ ಅಪಾರ ಚಿನ್ನಾಭರಣಗಳೊಂದಿಗೆ ದೇಶ ತೊರೆಯುತ್ತಾನೆ. ಅದೇ ವರ್ಷ ಜುಲೈನಲ್ಲಿ ನಾಸೆರ್ ನೇತೃತ್ವದಲ್ಲಿ ಸೇನೆ ಅಧಿಕಾರ ಹಿಡಿಯುತ್ತದೆ. ಆಗ ಈಜಿಪ್ಟನ್ನು ಗಣರಾಜ್ಯವೆಂದು ಘೋಷಿಸಲಾಯಿತಾದರೂ, ಎಲ್ಲಾ ರಾಜಕೀಯ ಪಕ್ಷಗಳನ್ನೂ ನಿಷೇಧಿಸಲಾಗಿತ್ತು. ಸರ್ವಾಧಿಕಾರಿ ನಾಸೆರ್ ಹಿಂದಿನ ಎಲ್ಲಾ ‘ದೊರೆ’ಗಳಿಗಿಂತ ಉತ್ತಮ ಅಭಿವೃದ್ಧಿ ಕೆಲಸ ಮಾಡಿದ್ದರು. ಚೀನಾ, ಸೋವಿಯತ್ ಜತೆಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದ ಅವರು ಅಲಿಪ್ತ ನೀತಿಗೆ ಸಂಬಂಧಿಸಿದಂತೆ ನೆಹರೂಗೆ ಸಾಥ್ ನೀಡಿದ್ದರು.ಮಧ್ಯಪ್ರಾಚ್ಯದಲ್ಲಿ ಶಾಂತಿ ಅರಳಿಸಲು ಇಸ್ರೇಲ್ ಜತೆಗೆ ಮಾತಿಗಿಳಿದಾಗಲೇ ಇಸ್ಲಾಂ ಜಗತ್ತಿನಿಂದ ಅತೀವ ಒತ್ತಡಕ್ಕೆ ಒಳಗಾಗಿ 1970ರಲ್ಲಿ ಸಾವನ್ನಪ್ಪಿದರು. ಆಗ ಅಧ್ಯಕ್ಷ ಪಟ್ಟಕ್ಕೇರಿದ ಅನ್ವರ್ ಸಾದತ್ ಕೂಡಾ ಸರ್ವಾಧಿಕಾರಿಯಾಗಿಯೇ ಮೆರೆದರಾದರೂ ನಾಸೆರ್ ನಿಲುವುಗಳನ್ನೇ ಅನುಸರಿಸಿದರು. ಇಸ್ರೇಲ್‌ಗೆ ಸ್ನೇಹಹಸ್ತ ಚಾಚಿದ ನಾಸೆರ್ ವಿರುದ್ಧ ಅರಬ್ ಲೋಕ ಕಿಡಿಕಿಡಿಯಾಗಿದ್ದು, 1981ರಲ್ಲಿ ಕೈರೊದಲ್ಲಿ ನಡೆದಿದ್ದ ಸೇನಾ ಪಥಸಂಚಲನದಲ್ಲೇ ಅಲ್‌ಜಿಹಾದ್ ಉಗ್ರಸಂಘಟನೆಯ ಗುಂಡೇಟಿಗೆ ನಾಸೆರ್ ಬಲಿಯಾದರು. ಆಗ ಹೋಸ್ನಿ ಮುಬಾರಕ್ ಅಧ್ಯಕ್ಷ ಗಾದಿ ಏರಿದರು.ಸಹಸ್ರಮಾನಗಳ ಸರ್ವಾಧಿಕಾರದ ಕಗ್ಗತ್ತಲಲ್ಲೇ ಅಧಿಕಾರಸ್ತರು ಐಷಾರಾಮಿ ಬದುಕಲ್ಲಿ ಮುಳುಗಿದ್ದರು. ಮೂರು ಸಾವಿರ ವರ್ಷಗಳ ಹಿಂದೆಯೇ ರಾಜರು ತಾವು ಸತ್ತಮೇಲೂ ಐಷಾರಾಮಿ ಬದುಕು ಮುಂದುವರಿಸಲಿಕ್ಕಾಗಿಯೇ ಭವ್ಯ ಪಿರಪಿಡ್ ಸ್ಮಾರಕಗಳನ್ನು ಕಟ್ಟಿಸಿ ಕೊಳ್ಳುತ್ತಿದ್ದರು! ಆ ರಾಜಕುಟುಂಬಗಳು ಜನರಿಂದ ಅದೆಷ್ಟು ದೂರವಿದ್ದರೆಂದರೆ, ಆಸ್ತಿ, ಅಧಿಕಾರ ಬೇರೆಯವರ ಪಾಲಾಗದಿರಲೆಂಬ ಆಶಯದಿಂದ ಸೋದರ ಸೋದರಿಯರ ನಡುವೆಯೇ ವಿವಾಹಗಳು ನಡೆಯುತ್ತಿದ್ದವು !ಇಂತಹ ಸುದೀರ್ಘ ಅಟ್ಟಹಾಸಗಳ ನಡುವೆಯೂ ತಾಳ್ಮೆಯನ್ನು ಮೈಗೂಡಿಸಿಕೊಂಡಿದ್ದ ಈಜಿಪ್ಟ್ ಮಂದಿ ವಿಚಿತ್ರ ಮೌನಕ್ಕೆ ಶರಣಾಗಿದ್ದು ಇತಿಹಾಸದುದ್ದಕ್ಕೂ ಕಂಡು ಬರುತ್ತದೆ. ಇದು ಇಸ್ಲಾಂ ದೇಶವಾದರೂ ಇಲ್ಲಿ ಅದೆಂತಹ ಉದ್ರಿಕ್ತ ಸ್ಥಿತಿಗಳಲ್ಲೂ ಆಫ್ಘನ್, ಪಾಕ್‌ಗಳಲ್ಲಿ ಕಂಡು ಬರುವ ತಾಲಿಬಾನ್ ಅಬ್ಬರಗಳಿಲ್ಲ. ಇದೀಗ ಎರಡು ವಾರಗಳ ಕ್ರಾಂತಿ ನಡೆದಿದ್ದರೂ ಬಾಗ್ದಾದ್ ತೆರನಾದ ಬಾಂಬ್‌ಸ್ಫೋಟಗಳಿಲ್ಲ. ಇನ್ನೇನು ಹಿಂಸಾಚಾರ ಭುಗಿಲೇಳುತ್ತದೆ ಎಂದೆನಿಸಿದಾಗಲೆಲ್ಲಾ ಅಲ್ಲಿ ಅಹಿಂಸಾ ನಡೆಯೇ ಹೊಳೆಯತೊಡಗುತ್ತದೆ. ಇದೇ ಈಜಿಪ್ಟ್ ವೈಶಿಷ್ಟ್ಯ. ಇದಕ್ಕೆ ಕಾರಣವೂ ಇದೆ. ಅರಬ್ಬರು, ಪರ್ಷಿಯನ್ನರು, ಅಸಿರೀಯನ್ನರು, ಮಂಗೋಲರು, ಫ್ರೆಂಚರು, ಆಂಗ್ಲರು ಸೇರಿದಂತೆ ವಿಭಿನ್ನ ಪ್ರದೇಶ, ಸಂಸ್ಕೃತಿ, ಧರ್ಮಗಳಿಗೆ ಸೇರಿದ ಮಂದಿ ಸಹಸ್ರಮಾನಗಳಿಂದ ಈಜಿಪ್ಟ್ ಮೇಲೇರಿ ಹೋಗಿದ್ದಲ್ಲದೆ, ಅಲ್ಲಿನ ಜನರೊಂದಿಗೆ ಬೆರೆತುಹೋದರು. ಸೂಡಾನ್,ಕಾಂಗೊ ಸೇರಿದಂತೆ ಆಫ್ರಿಕ ಖಂಡದ ದೇಶಗಳಿಂದ ಗುಲಾಮರಾಗಿ ಬಂದವರೂ ಈ ನೆಲದ ಸಂಸ್ಕೃತಿಯೊಳಗೆ ಐಕ್ಯವಾದರು.ಬಹುಶಃ ಇಲ್ಲಿ ನಡೆದಷ್ಟು ವರ್ಣಸಂಕರ ಇನ್ನೆಲ್ಲೂ ನಡೆದಿರಲಿಕ್ಕಿಲ್ಲ. ಇದಲ್ಲದೆ ಭೌಗೋಳಿಕವಾಗಿಯೂ ಆಯಕಟ್ಟಿನ ಸ್ಥಳದಲ್ಲಿರುವ ಈಜಿಪ್ಟ್‌ಗೆ ಮೂರೂ ಖಂಡಗಳೊಂದಿಗೆ ನಿಕಟ ಬಾಂಧವ್ಯ ಹೊಂದಿದ ಅನನ್ಯ ಅನುಭವವೂ ಇದೆ. ಆಫ್ರಿಕಾ ಖಂಡದ ಪ್ರಭಾವಿ ದೇಶವಾದ ಇದು, ಯುರೋಪ್ ತಡಿಯನ್ನು ಮುತ್ತಿಕ್ಕುವ ‘ಮೆಡಿಟರೇನಿಯನ್ ಸಂಸ್ಕೃತಿ’ಯೊಂದಿಗೂ ಆವಿನಾಭಾವತೆ ಹೊಂದಿದೆ. ಇಸ್ಲಾಂ ಜಗತ್ತಿನಲ್ಲಿ ಪ್ರಭಾವಿಯಾಗಿರುವ ಈಜಿಪ್ಟ್‌ಗೆ ಮಧ್ಯಪ್ರಾಚ್ಯ ದೇಶಗಳೊಂದಿಗೆ ನಿಕಟ ಸಂಪರ್ಕವಿದೆ. ಹೀಗಾಗಿಯೇ ಈಜಿಪ್ಟ್ ನಮಗೆ ಭಿನ್ನವಾಗಿಯೇ ಕಾಣಿಸುತ್ತದೆ. ಅಲ್ಲಿನ ರಾಜಕಾರಣ ಕೂಡಾ....ನಾಸೆರ್, ಅನ್ವರ್ ಸಾದತ್ ಅವರಂತೆಯೇ ಸೇನಾ ಹಿನ್ನಲೆಯ ಮುಬಾರಕ್ ಕೂಡಾ ಮಧ್ಯಪ್ರಾಚ್ಯದಲ್ಲಿ ಶಾಂತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಕಾರಾತ್ಮಕ ಯತ್ನ ನಡೆಸಿದರಾದರೂ, ತಮ್ಮ ದೇಶದಲ್ಲಿ ಮಾತ್ರ ನಿತ್ಯ ತುರ್ತು ಪರಿಸ್ಥಿತಿಯಂತಹ ಕಾನೂನನ್ನು ಜೀವಂತವಾಗಿಟ್ಟರು. ಅಮೆರಿಕದ ಜತೆಗೆ ಮಧುರ ಬಾಂಧವ್ಯ ಹೊಂದಿರುವ ಮುಬಾರಕ್ ಅಮೆರಿಕ ಪ್ರತಿ ವರ್ಷವೂ ನೀಡುವ 1.3ಶತಕೋಟಿ ಡಾಲರ್ ನೆರವಿನಿಂದ ಬಲಿಷ್ಠ ಸೇನೆಯನ್ನು ಕಟ್ಟಿದ್ದಾರೆ. 14ಲಕ್ಷಕ್ಕೂ ಅಧಿಕ ಸೈನಿಕರಿರುವ ಈ ಸೇನೆ ಜಗತ್ತಿನಲ್ಲಿಯೇ 10ನೇ ದೊಡ್ಡ ಸೇನಾಪಡೆ. ಉಗ್ರವಾದಕ್ಕೆ ಒಂದಿಷ್ಟೂ ಎಡೆಕೊಡದ ಮುಬಾರಕ್ ವಿರುದ್ಧ ಇಸ್ಲಾಂ ಉಗ್ರವಾದಿಗಳು ಕೆಂಡ ಕಾರುತ್ತಿರುವುದಂತೂ ನಿಜ. 13ವರ್ಷಗಳ ಹಿಂದೆ 60 ಪ್ರವಾಸಿಗರನ್ನು ಉಗ್ರರು ಕೊಂದಾಗ, ಮುಬಾರಕ್ ಸರ್ಕಾರ 20ಸಾವಿರ ಉಗ್ರ ಮೂಲಭೂತವಾದಿಗಳನ್ನು ಜೈಲಿಗೆ ತಳ್ಳಿದ್ದರು. ಆದರೆ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳಿಗೆ ಕಡಿವಾಣ ಹಾಕುವಲ್ಲಿ ಮುಬಾರಕ್ ವೈಫಲ್ಯ ಕಂಡರು.ಹೀಗಾಗಿ ಸಾಮಾನ್ಯ ಜನರಲ್ಲಿ ಅಸಮಾಧಾನ ಕುಡಿಯೊಡೆಯುತ್ತಲೇ ಇತ್ತು. ಎರಡು ವಾರಗಳ ಹಿಂದೆ ಇಂತಹ ಆರ್ಥಿಕ ಕಾರಣಗಳಿಗಾಗಿ ಸಣ್ಣಮಟ್ಟದ ಪ್ರತಿಭಟನೆಯೊಂದು ನಡೆದಾಗ ಪೊಲೀಸರು ಕ್ರೂರವಾಗಿ ಅಬ್ಬರಿಸಿದ್ದರು. ಇದರಿಂದ ರೊಚ್ಚಿಗೆದ್ದ ಜನ ತೆಹ್ರಿಕ್‌ನಲ್ಲಿ ಗುಂಪುಗೂಡಿದರು.ಇದೀಗ ದಿನೇ ದಿನೇ ಮುಬಾರಕ್ ವಿರುದ್ಧದ ಕ್ರಾಂತಿಯ ಹಾದಿಯಲ್ಲಿ ಕೈರೊ, ಅಲೆಗ್ಸಾಂಡ್ರಿಯ ಸೇರಿದಂತೆ ಹತ್ತಾರು ಊರುಗಳಲ್ಲಿ ಸಾವಿರಾರು ಮಂದಿ ಪ್ರವಾಹದೋಪಾದಿಯಲ್ಲಿ ಸೇರುತ್ತಿರುವುದನ್ನು ಜಗತ್ತಿನಾದ್ಯಂತ ಜನ ಟೀವಿಯಲ್ಲಿ ನೋಡುತ್ತಲೇ ಇದ್ದಾರೆ.ಅಮೆರಿಕದ ಸಾಮ್ರಾಜ್ಯಶಾಹಿ ವಿರುದ್ಧ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳ ವಿರುದ್ಧ, ಸರ್ವಾಧಿಕಾರಿ ವ್ಯವಸ್ಥೆಯ ದಬ್ಬಾಳಿಕೆಯ ವಿರುದ್ಧ ಜನ ತೆಹ್ರಿಕ್‌ನಲ್ಲಿ ಒಗ್ಗೂಡಿದಂತೆ ಕಂಡು ಬರುತ್ತಿದೆ. ಸಹಸ್ರಮಾನಗಳ ಸರ್ವಾಧಿಕಾರಿ ಪರಂಪರೆಗೆ ಇತಿಶ್ರೀ ಹಾಡುವ ತುಡಿತ ಜನರಲ್ಲಿರುವಂತೆನಿಸುತ್ತಿದೆ. ಆದರೆ ಜನರ ಇಂತಹ ಭಾವನೆಗಳನ್ನೇ ತಮ್ಮ ಅನುಕೂಲಕ್ಕೆ ಕೆಲವು ಮೂಲಭೂತವಾದಿ ಸಂಘಟನೆಗಳು  ಬಳಸಿಕೊಂಡರೆ ಜನ ಬಾಣಲೆಯಿಂದ ಬೆಂಕಿಗೆ ಹಾರಿದ ಸ್ಥಿತಿಯನ್ನು ಸೃಷ್ಟಿಸಿಕೊಂಡಂತಾಗುತ್ತದೆ. ‘ಗೊಂದಲಗಳಿಗೆಲ್ಲಾ ಮುಸ್ಲಿಮ್ ಬ್ರದರ್‌ವುಡ್ ಸಂಘಟನೆಯೇ ಕಾರಣ’ ಎಂದು ಈ ನಡುವೆ ಮುಬಾರಕ್ ಆರೋಪಿಸಿದ್ದಾರೆ. ಈಜಿಪ್ಟ್‌ನಲ್ಲಿ 1928ರಲ್ಲಿ ಹುಟ್ಟು ಪಡೆದ ‘ಮುಸ್ಲಿಮ್ ಬ್ರದರ್‌ವುಡ್’ ಸಂಘಟನೆ ಸೂಫಿ ಚಿಂತಕ ಅಲ್‌ಬನಾ ಕನಸಿನ ಕೂಸು. ಕುರಾನ್‌ನಲ್ಲಿರುವ ಸದ್ವಿಚಾರಗಳನ್ನು ಜನ ಮತ್ತು ಸರ್ಕಾರ ಆಳವಡಿಸಿಕೊಳ್ಳಬೇಕೆನ್ನುವ ಈ ಸಂಘಟನೆ ನೈತಿಕ ಮೌಲ್ಯಗಳಿಗೇ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಹೀಗಾಗಿಯೇ ಈ ಸಂಘಟನೆಯ ಅಹಿಂಸಾವಾದವನ್ನು ಅಲ್‌ಖೈದಾ ಸೇರಿದಂತೆ ಹಲವು ಉಗ್ರವಾದಿ ಸಂಘಟನೆಗಳು ಖಂಡಿಸುತ್ತಿವೆ. ಆದರೆ ಈಚೆಗಿನ ದಶಕಗಳಲ್ಲಿ ‘ಮುಸ್ಲಿಮ್ ಬ್ರದರ್‌ವುಡ್’ ಹಲವು ಗುಂಪುಗಳಾಗಿ ಒಡೆದಿದ್ದು, ಕೆಲವು ಗುಂಪುಗಳಿಗೆ ಉಗ್ರವಾದಿಗಳೇ ನೇತೃತ್ವ ವಹಿಸಿರುವುದೊಂದು ವಿಪರ್ಯಾಸ.ಈ ಸಂಘಟನೆಯು ಆಫ್ರಿಕಾದ ಟುನಿಷಿಯಾ, ಲಿಬಿಯ, ಸೂಡಾನ್, ಅಲ್ಜಿರಿಯಾ, ಮಧ್ಯಪ್ರಾಚ್ಯದ ಇರಾನ್, ಇರಾಕ್, ಕುವೈತ್, ಬಹರೇನ್‌ಗಳಲ್ಲಿ ಪ್ರಭಾವಿಯಾಗಿದೆ. ಅಮೆರಿಕಾದ ಸಾಮ್ರಾಜ್ಯಶಾಹಿ ವಿರುದ್ಧ ಅಲ್ಲೆಲ್ಲಾ ಧ್ವನಿ ಕೇಳಿಸತೊಡಗಿದೆ. ಟ್ಯುನಿಷಿಯ, ಜೋರ್ಡಾನ್, ಸಿರಿಯ, ಲಿಬಿಯಾಗಳಲ್ಲಿ ಸರ್ವಾಧಿಕಾರಿ ಆಡಳಿತ, ಭ್ರಷ್ಟಾಚಾರಗಳ ವಿರುದ್ಧ ಜನ ಸೊಲ್ಲು ಎತ್ತತೊಡಗಿದ್ದಾರೆ. ಈ ಧ್ವನಿ ತಮ್ಮ ದೇಶಗಳಿಗೆ ತಲುಪದಂತೆ ಸೌದಿ ಅರೆಬಿಯಾ, ಕತಾರ್, ಯುಎಇ, ಕುವೈತ್ ಮುಂತಾದ ದೇಶಗಳ ‘ಪ್ರಭು’ಗಳು ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದಾರೆ. ಹೀಗಾಗಿ ಈಜಿಪ್ಟ್‌ನಲ್ಲಿ ನಡೆದಿರುವ ಕ್ರಾಂತಿ ಹಲವು ಆಯಾಮ ಪಡೆದುಕೊಂಡಿದ್ದು, ‘ನೇರ ಪ್ರಸಾರ’ದ ಸರಳತೆಯನ್ನೂ ಮೀರಿದ ಸಂಕೀರ್ಣ ಸನ್ನಿವೇಶವಾಗಿದೆ. ಸದ್ಯಕ್ಕೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಚುರುಕುಗತಿಯೇ ಎಲ್ಲದಕ್ಕೂ ಪರಿಹಾರದಂತೆ ಕಾಣಿಸುತ್ತಿದೆ.


 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.