ಈಜಿಪ್ಟ್: ನಿಲ್ಲದ ಪ್ರತಿಭಟನೆ

7

ಈಜಿಪ್ಟ್: ನಿಲ್ಲದ ಪ್ರತಿಭಟನೆ

Published:
Updated:
ಈಜಿಪ್ಟ್: ನಿಲ್ಲದ ಪ್ರತಿಭಟನೆ

ಕೈರೊ (ಪಿಟಿಐ): ಈಜಿಪ್ಟಿನಲ್ಲಿ ಸೇನಾಡಳಿತದ ವಿರುದ್ಧ ಎದ್ದಿರುವ ದಂಗೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಕಮಾಲ್ ಗಂಜೌರಿ ಅವರನ್ನು ನೂತನ ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿದೆ.ಆದರೂ ಪಟ್ಟು ಸಡಿಲಿಸದ ಚಳವಳಿಕಾರರು ಹತ್ತಾರು ಸಾವಿರ ಸಂಖ್ಯೆಯಲ್ಲಿ ತಹ್ರೀರ್ ಚೌಕಕ್ಕೆ ಜಮಾಯಿಸಿ, ಸೇನಾಡಳಿತವು ತಕ್ಷಣವೇ `ರಾಷ್ಟ್ರೀಯ ಮಧ್ಯಂತರ ಸರ್ಕಾರ~ಕ್ಕೆ ಅಧಿಕಾರ ಹಸ್ತಾಂತರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.ತಮ್ಮ ಬೇಡಿಕೆಗಳನ್ನು ಈಡೇರಿಸಲು ಫೀಲ್ಡ್ ಮಾರ್ಷಲ್ ಮಹಮ್ಮದ್ ಹುಸೇನ್ ತಂತಾವಿ ನೇತೃತ್ವದ ಸೇನಾ ಆಡಳಿತಗಾರರಿಗೆ ಇನ್ನು ಹೆಚ್ಚು ಸಮಯ ಉಳಿದಿಲ್ಲ ಎಂದು ಚಳವಳಿಕಾರರು ಘೋಷಣೆಗಳನ್ನು ಕೂಗಿದರು.ಇದಕ್ಕೆ ಮುನ್ನ, ಪ್ರತಿಭಟನಾಕಾರರನ್ನು ಪೊಲೀಸರು ಹತ್ಯೆ ಮಾಡಿರುವ ಬಗ್ಗೆ ಸೇನಾಡಳಿತ ಗುರುವಾರ ಕ್ಷಮೆ ಯಾಚಿಸಿದ್ದರೂ ಚಳವಳಿಕಾರರು ಪ್ರತಿಭಟನೆ ಕೈಬಿಟ್ಟಿರಲಿಲ್ಲ.ಈ ಮಧ್ಯೆ, ಒಂದು ವಾರದಿಂದ ನಡೆಯುತ್ತಿರುವ ದಂಗೆ ವೇಳೆ ಮೃತರಾದವರ ಸಂಖ್ಯೆ 41ಕ್ಕೆ ಏರಿದ್ದು, 3000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಹೆಚ್ಚಿನ ಹಿಂಸಾಚಾರದ ಘಟನೆಗಳು ತಹ್ರೀರ್ ಚೌಕದ ಆಸುಪಾಸಿನಲ್ಲೇ ನಡೆದಿವೆ.ಮುಬಾರಕ್ ಪತನದ ನಂತರ ರಾಷ್ಟ್ರದಲ್ಲಿ ಮೊದಲಬಾರಿಗೆ ಸೋಮವಾರ ನಡೆಯಲಿರುವ ಸಂಸದೀಯ ಚುನಾವಣೆಗೆ ಮೊದಲು ಸೇನಾಡಳಿತ ಹೊಸ ಪ್ರಧಾನಿಯನ್ನು ನೇಮಿಸಿದೆ.ಅರ್ಥಶಾಸ್ತ್ರಜ್ಞ ಗಂಜೌರಿ ಪದಚ್ಯುತ ಅಧ್ಯಕ್ಷ ಹೋಸ್ನಿ ಮುಬಾರಕ್ ಆಡಳಿತಾವಧಿಯಲ್ಲಿ 1996-99ರವರೆಗೆ ರಾಷ್ಟ್ರದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು.ಹೋಸ್ನಿ ಮುಬಾರಕ್ ಆಡಳಿತದಿಂದ ಅಂತರ ಕಾಯ್ದುಕೊಂಡಿದ್ದ ಗಂಜೌರಿ, ಮುಂಬರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.1933ರಲ್ಲಿ ಜನಿಸಿದ ಗಂಜೌರಿ ಅವರು ಮೊದಲ ಬಾರಿ ಪ್ರಧಾನಿ ಆಗುವುದಕ್ಕಿಂತಲೂ ಮೊದಲು  ಯೋಜನೆ ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry