ಈಜಿಪ್ಟ್ ಸರ್ವಾಧಿಕಾರಿ ಮುಬಾರಕ್‌ಗೆ ಜೀವಾವಧಿ ಶಿಕ್ಷೆ

7

ಈಜಿಪ್ಟ್ ಸರ್ವಾಧಿಕಾರಿ ಮುಬಾರಕ್‌ಗೆ ಜೀವಾವಧಿ ಶಿಕ್ಷೆ

Published:
Updated:
ಈಜಿಪ್ಟ್ ಸರ್ವಾಧಿಕಾರಿ ಮುಬಾರಕ್‌ಗೆ ಜೀವಾವಧಿ ಶಿಕ್ಷೆ

ಕೈರೊ (ಪಿಟಿಐ): ಸರ್ಕಾರದ ದುರಾಡಳಿತದ ವಿರುದ್ಧ ನಡೆದ ಈಜಿಪ್ಟ್ ಕ್ರಾಂತಿಯ ವೇಳೆ ಪ್ರತಿಭಟನಾಕಾರರನ್ನು ಹತ್ಯೆ ಮಾಡಲು ಆದೇಶಿಸಿದ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪದಚ್ಯುತ ಅಧ್ಯಕ್ಷ ಹೋಸ್ನಿ ಮುಬಾರಕ್ (84) ಅವರಿಗೆ ಇಲ್ಲಿನ ನ್ಯಾಯಾಲಯವು ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿತು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಅಮಹದ್ ರೆಫಾತ್ ಅವರು `ವಿಚಾರಣೆ ವೇಳೆ ಮುಬಾರಕ್ ಹಾಗೂ ಮಾಜಿ ಆಂತರಿಕ ಭದ್ರತಾ ಸಚಿವ ಹಬೀಬ್ ಅಲ್-ಅದ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಈ ಇಬ್ಬರಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ~ ಎಂದು ಆದೇಶಿಸಿದರು.

 

ಇದೇ ವೇಳೆ ನ್ಯಾಯಾಲಯವು ಮುಬಾರಕ್ ಪುತ್ರರಾದ ಅಲ್ಲಾ ಮತ್ತು ಗಮಾಲ್ ಅವರ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ಕೈಬಿಡುವುದರೊಂದಿಗೆ ಆರು ಜನ ಪೊಲೀಸ್ ಕಮಾಂಡರ್‌ನ್ನು ಬಿಡುಗಡೆಗೊಳಿಸಿದೆ.ನಂತರ ಮಾತನಾಡಿದ ರೆಫಾತ್ ಅವರು `ಹತ್ತು ತಿಂಗಳ ಕಾಲ ನಡೆದ ವಿಚಾರಣೆಯು ನ್ಯಾಯಸಮ್ಮತವಾಗಿದ್ದು, 30 ವರ್ಷಗಳ ಕಾಲದ ಮುಬಾರಕ್ ಅವರ ದುರಾಡಳಿತದಲ್ಲಿ ಈಜಿಪ್ಟ್ ನಾಗರೀಕರು ತುಂಬ ಕಷ್ಟ ಅನುಭವಿಸಿದ್ದರು~ ಎಂದು ಹೇಳಿದರು.ಅಸ್ವಸ್ಥತೆಯಿಂದ ಬಳಲುತ್ತಿರುವ ಮುಬಾರಕ್ ಅವರು ವಿಚಾರಣೆಗೆ ಗಾಲಿ ಮಂಚದ ಮೇಲೆ ನ್ಯಾಯಾಲಯಕ್ಕೆ ಆಗಮಿಸಿದರೆ ಹಬೀಬ್ ಅಲ್-ಅದ್ಲಿ ಅವರನ್ನು ವಿಶೇಷ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಕರೆತರಲಾಗಿತ್ತು.ವಿಚಾರಣೆ ವೇಳೆ ನ್ಯಾಯಾಲಯದ ಸುತ್ತಲೂ ವಿಶೇಷ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಅಲ್ಲದೇ ನ್ಯಾಯಾಲಯದ ಒಳಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿತ್ತು.ನ್ಯಾಯಾಲಯದ ತೀರ್ಪು ತಿಳಿಯುತ್ತಿದ್ದಂತೆ ನ್ಯಾಯಾಲಯದ ಮುಂಭಾಗದಲ್ಲಿ ನೆರೆದಿದ್ದ ಮುಬಾರಕ್ ಪರ ಹಾಗೂ ವಿರೋಧಿ ಗುಂಪುಗಳ ನಡುವೆ ಗದ್ದಲ ಉಂಟಾಯಿತು.ಅನ್ವರ್ ಅಲ್-ಸಾದತ್ ಹತ್ಯೆಯ ನಂತರ 1981ರ ಅಕ್ಟೋಬರ್ 14ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಮುಬಾರಕ್ ಅವರು ನಿರಂತರ 30 ವರ್ಷಗಳ ಕಾಲ ನಿರಂಕುಶ ಅಧಿಕಾರ ಚಲಾಯಿಸಿದರು.ಇದರಿಂದ ರೋಸಿ ಹೋದ ಈಜಿಪ್ಟ್ ನಾಗರೀಕರು ಕಳೆದ ವರ್ಷದ ಜನವರಿ 25 ರಿಂದ ಮುಬಾರಕ್ ಆಡಳಿತದ ವಿರುದ್ಧ ಕ್ರಾಂತಿ ಆರಂಭಿಸಿದರು. ಸುಮಾರು 18 ದಿನಗಳ ಕಾಲ ನಡೆದ ಪ್ರತಿಭಟನೆಯಲ್ಲಿ ಸುಮಾರು 800ಕ್ಕೂ ಅಧಿಕ ಹೋರಾಟಗಾರರನ್ನು ಹತ್ಯೆ ಮಾಡಲಾಗಿತ್ತು. ಕೊನೆಗೆ ಪ್ರತಿಭಟನೆ ತೀವ್ರತೆಗೆ ಮಣಿದ ಸರ್ವಾಧಿಕಾರಿ ಮುಬಾರಕ್ ಅವರು ಫೆಬ್ರುವರಿ 11ರಂದು ಪದತ್ಯಾಗ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry