ಈಜಿಪ್ಟ್: ಸೇನೆ ವಿರುದ್ಧ ತೀವ್ರ ಹೋರಾಟ

7

ಈಜಿಪ್ಟ್: ಸೇನೆ ವಿರುದ್ಧ ತೀವ್ರ ಹೋರಾಟ

Published:
Updated:
ಈಜಿಪ್ಟ್: ಸೇನೆ ವಿರುದ್ಧ ತೀವ್ರ ಹೋರಾಟ

ಕೈರೊ (ಪಿಟಿಐ): ಈಜಿಪ್ಟಿನಲ್ಲಿ ಸೇನಾಡಳಿತದ ವಿರುದ್ಧ ಪ್ರಜಾಪ್ರಭುತ್ವ ಪರ ಚಳವಳಿಕಾರರ ಪ್ರತಿಭಟನೆ ಐದನೇ ದಿನವಾದ ಬುಧವಾರ ತೀವ್ರಗೊಂಡಿದ್ದು, ಐತಿಹಾಸಿಕ ತಹ್ರೀರ್ ಚೌಕದಲ್ಲಿ ಸಾವಿರಾರು ಪ್ರತಿಭಟನಾಕಾರರು ಜಮಾವಣೆಗೊಂಡಿ ದ್ದಾರೆ. ಪ್ರತಿಭಟನಾಕಾರರು ಹಾಗೂ ಯೋಧರ ಮಧ್ಯೆ ಘರ್ಷಣೆಗಳೂ ನಡೆದಿವೆ.ನಾಗರಿಕ ಸರ್ಕಾರಕ್ಕೆ ಅಧಿಕಾರ ಹಸ್ತಾಂತರ ಮಾಡುವ ಬಗ್ಗೆ ಜನಮತಗಣನೆ ನಡೆಸುವುದಾಗಿ ಹೇಳಿರುವ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಹುಸೇನ್ ತಂತಾವಿ ಹೇಳಿಕೆಯನ್ನು ಪ್ರತಿಭಟನಾನಿರತರು ಖಂಡಿಸಿದರು.`ತಂತಾವಿಯನ್ನು ನಾವು ನಂಬುವುದಿಲ್ಲ; ತಂತಾವಿಯು  ಮುಬಾರಕ್ ಅವರ ಪ್ರತಿರೂಪವೇ ಹೌದು; ಸೇನಾಡಳಿತ ತೊಲಗಲಿ~ ಎಂಬ ಘೋಷಣೆಗಳನ್ನು ಕೂಗಿದರು.ತಹ್ರೀರ್ ಚೌಕದಿಂದ ಕದಲಲು ಒಪ್ಪದ ಚಳವಳಿಕಾರರು ಹಾಗೂ ಪೊಲೀಸರೊಂದಿಗೆ ಸಂಘರ್ಷಗಳು ನಡೆದವು. ಈ ಮಧ್ಯೆ ಐದು ದಿನಗಳಿಂದ ನಡೆಯುತ್ತಿರುವ ದಂಗೆಯಿಂದಾಗಿ ಮೃತರಾದವರ ಸಂಖ್ಯೆ 38ಕ್ಕೆ ಏರಿದ್ದು, 2000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.ಮುಬಾರಕ್ ಪದುಚ್ಯುತಿಯ ನಂತರ ಫೆಬ್ರುವರಿಯಿಂದ ಆಡಳಿತದ ಚುಕ್ಕಾಣಿ ಹಿಡಿದಿರುವ ತಂತಾವಿ, ಮಂಗಳವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ `ಸಂಸದೀಯ ಚುನಾವಣೆಗಳು ಎಂದಿನಂತೆ ನ.28ರಂದು ನಡೆಯಲಿದ್ದು, 2012ಕ್ಕೆ ಮುನ್ನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲಾಗುವುದು~ ಎಂದಿದ್ದರು.ಇದೇ ವೇಳೆ ನಾಗರಿಕ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವ ಬಗ್ಗೆ ಜನಮತಗಣನೆ ನಡೆಸುವುದಾಗಿಯೂ ಹುಸೇನ್ ತಂತಾವಿ ಹೇಳಿದ್ದರು.ಈ ಭಾಷಣ ಪ್ರಕಟವಾಗುತ್ತಿದ್ದಂತೆ ತಂತಾವಿ ಬಗ್ಗೆ ಪ್ರಜಾಪ್ರಭುತ್ವ ಹೋರಾಟಗಾರರ ಅನುಮಾನಗಳು ತೀವ್ರಗೊಂಡು, ಚೌಕದೆಡೆಗೆ ಹೆಚ್ಚು ಜನ ಜಮಾಯಿಸತೊಡಗಿದರು. ತಹ್ರೀರ್ ಚೌಕಕ್ಕೆ ಸೇರುವ ಎಲ್ಲ ಮಾರ್ಗಗಳನ್ನು ಅರೆ ಸೇನಾ ಪಡೆ ಹಾಗೂ ಪೊಲೀಸ್ ಸಿಬ್ಬಂದಿ ಮುಚ್ಚಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗ ಮತ್ತು ಲಾಠಿ ಚಾರ್ಜ್ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry