ಈಜೀಪುರ: ವಿರೋಧದ ನಡುವೆ ಅನಧಿಕೃತ ಶೆಡ್‌ಗಳ ತೆರವು

7

ಈಜೀಪುರ: ವಿರೋಧದ ನಡುವೆ ಅನಧಿಕೃತ ಶೆಡ್‌ಗಳ ತೆರವು

Published:
Updated:
ಈಜೀಪುರ: ವಿರೋಧದ ನಡುವೆ ಅನಧಿಕೃತ ಶೆಡ್‌ಗಳ ತೆರವು

ಬೆಂಗಳೂರು: ಈಜೀಪುರದಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗದ (ಇಡಬ್ಲ್ಯುಎಸ್) ವಸತಿ ಸಮುಚ್ಚಯದಲ್ಲಿನ ಅನಧಿಕೃತ ಶೆಡ್‌ಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಶನಿವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಕಾರ್ಯಾಚರಣೆಗೆ ಅಡ್ಡಿಪಡಿಸಲು ಮುಂದಾದ ಐವತ್ತು ಮಂದಿಯನ್ನು ಪೊಲೀಸರು ಬಂಧಿಸಿದರು.`ಹೈಕೋರ್ಟ್ ಆದೇಶದಂತೆ ಬಿಬಿಎಂಪಿ ಸಿಬ್ಬಂದಿ ಶುಕ್ರವಾರದಿಂದ ಶೆಡ್ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ವೇಳೆ ನ್ಯಾಯಾಲಯದ ಆದೇಶವನ್ನು ಪಾಲಿಸದ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಕೆಲವರನ್ನು ವಶಕ್ಕೆ ಪಡೆಯಲಾಗಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.`ಇಡಬ್ಲ್ಯುಎಸ್ ವಸತಿ ಸಮುಚ್ಚಯದ ಶೆಡ್‌ಗಳನ್ನು ತೆರವುಗೊಳಿಸುವಂತೆ 2012ರ ಜನವರಿ ತಿಂಗಳಲ್ಲಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಸ್ಥಳಾಂತರಗೊಳ್ಳಲು ಇಲ್ಲಿನ ನಿವಾಸಿಗಳಿಗೆ ಅಕ್ಟೋಬರ್ 8ರವರೆಗೆ ಗಡುವು ನೀಡಲಾಗಿತ್ತು. ಆ ಗಡುವು ಮುಗಿದ ನಂತರವೂ ಸ್ಥಳೀಯರು ಮನೆ ಖಾಲಿ ಮಾಡಲು ಮತ್ತೆ ಮೂರು ತಿಂಗಳು ಕಾಲಾವಕಾಶ ಕೋರಿದ್ದರು. ಹೀಗಾಗಿ ವಾಸಕ್ಕೆ ಬೇರೆಡೆ ಮನೆಗಳನ್ನು ಹುಡುಕಿಕೊಳ್ಳಲಿ ಎಂದು ಗಡುವನ್ನು ವಿಸ್ತರಿಸಲಾಗಿತ್ತು' ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಟಿ.ರಮೇಶ್ ತಿಳಿಸಿದರು.`ಹದಿನೈದು ಎಕರೆ ವಿಸ್ತೀರ್ಣದ ಈ ಪ್ರದೇಶದಲ್ಲಿ 1512 ಮನೆಗಳನ್ನು ನಿರ್ಮಿಸಲಾಗುವುದು. ಅಂತೆಯೇ ಸರ್ಜಾಪುರ ಬಳಿಯ ಸೂಲಿಕುಂಟೆಯಲ್ಲಿ ಐದು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ 900 ಮನೆಗಳನ್ನು ಕಟ್ಟಿಕೊಡಲಾಗುವುದು. ಒಂದೆರಡು ವರ್ಷಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಅಲ್ಲಿಯವರೆಗೆ ಇಲ್ಲಿನ ನಿವಾಸಿಗಳು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕು' ಎಂದು ಅವರು ಹೇಳಿದರು.`ಮಕ್ಕಳಿಗೆ ಅಂತಿಮ ಪರೀಕ್ಷೆ ಹತ್ತಿರ ಬಂದಿದೆ. ಹೀಗಾಗಿ ಏಪ್ರಿಲ್ ತಿಂಗಳವರೆಗಾದರೂ ನಮಗೆ ಇಲ್ಲಿ ಇರಲು ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡೆವು. ಆದರೆ, ಯಾವುದೇ ಸೂಚನೆ ನೀಡಿದೆ ಏಕಾಏಕಿ ಶೆಡ್‌ಗಳನ್ನು ಹೊಡೆದು ತೆರವುಗೊಳಿಸಿ ನಮ್ಮನ್ನು ಬೀದಿಪಾಲು ಮಾಡುತ್ತಿದ್ದಾರೆ' ಎಂದು ಕೊಳೆಗೇರಿ ನಿವಾಸಿ ಹಸೀನಾ ಬೇಗ್ ರೋದಿಸಿದರು.`ಸುಮಾರು 500 ಶೆಡ್‌ಗಳನ್ನು ಶುಕ್ರವಾರ ತೆರವುಗೊಳಿಸಿದರು. ಅಲ್ಲದೇ ಎರಡು ದಿನಗಳಿಂದ ಈ ಸಮುಚ್ಚಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ನೀರು ಪೂರೈಕೆಯಾಗದಂತೆ ಮಾಡಿದ್ದಾರೆ. ಅಲ್ಲದೆ ಮಕ್ಕಳು, ಮಹಿಳೆಯರನ್ನು ಹೊರಗೆಳೆದು ಶೆಡ್‌ಗಳನ್ನು ತೆರವುಗೊಳಿಸುತ್ತಿದ್ದಾರೆ. ಈ ಅಮಾನವೀಯ ಕೃತ್ಯ ಶನಿವಾರ ಬೆಳಿಗ್ಗೆಯಿಂದ ಮತ್ತೆ ಮುಂದುವರಿದಿದೆ' ಎಂದು ಧನಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು.`ಸುಮಾರು ಹದಿನೈದು ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೇವೆ. ಬೇರೆ ಮನೆ ಹುಡುಕಿಕೊಳ್ಳುವವರೆಗೆ ಇಲ್ಲಿ ಉಳಿಯಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದೆವು. ಮಗಳು ಗರ್ಭಿಣಿಯಾಗಿದ್ದು, ಆಕೆಯನ್ನು ಈಗ ಎಲ್ಲಿಗೆ ಕರೆದುಕೊಂಡು ಹೋಗಲಿ' ಎಂದು ಲಿಝಿಮಾ ಕಣ್ಣೀರಿಟ್ಟರು.`ಕೆಲವು ಮಹಿಳೆಯರು ನನ್ನ ಮೇಲೆ ಹಲ್ಲೆ ನಡೆಸಿದರು. ಈ ಅಂಶವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಅಧಿಕಾರಿಗಳು ಆ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ' ಎಂದು ಕಾನ್‌ಸ್ಟೇಬಲ್ ಒಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry