ಈಜುಕೊಳ ಕಾಯಕಲ್ಪಕ್ಕೆ ಅನುದಾನ ನಿರೀಕ್ಷೆ

7

ಈಜುಕೊಳ ಕಾಯಕಲ್ಪಕ್ಕೆ ಅನುದಾನ ನಿರೀಕ್ಷೆ

Published:
Updated:

ಮಡಿಕೇರಿ: ಕೊಡಗು ಕ್ರೀಡೆಯ ತವರು ಜಿಲ್ಲೆ. ಈ ಪುಟ್ಟ ಜಿಲ್ಲೆ ಹಾಕಿಗೆ ಅನೇಕ ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ನೀಡಿದ ಹೆಗ್ಗಳಿಕೆಯಿದೆ. ಕೇವಲ ಹಾಕಿಯಷ್ಟೇ ಏಕೆ? ಅಥ್ಲೆಟಿಕ್ಸ್, ಟೆನಿಸ್, ಕ್ರಿಕೆಟ್, ಗಾಲ್ಫ್, ಬ್ಯಾಡ್ಮಿಂಟನ್, ಸ್ಕ್ವ್ಯಾಷ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಕೊಡಗಿನ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಜಿಲ್ಲೆಗೆ ಕೀರ್ತಿ ತಂದುಕೊಡುತ್ತಿದ್ದಾರೆ.ಅಂತೆಯೇ, ರಾಜ್ಯ ಸರ್ಕಾರ ಕೂಡ ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗೆ ಹೆಚ್ಚಿನ ಅನುದಾನ ನೀಡಿ ಉತ್ತೇಜನ ನೀಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಜಿಲ್ಲೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ. ಬಿಜೆಪಿ ಮುಖಂಡರೇ ಹೇಳಿಕೊಳ್ಳುವಂತೆ ಸರ್ಕಾರ ಕ್ರೀಡಾ ಅಭಿವೃದ್ಧಿ ಕೆಲಸಗಳಿಗಾಗಿ ಸುಮಾರು 10 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ, ಅಷ್ಟೂ ಹಣ ಸಂಪೂರ್ಣವಾಗಿ ಬಿಡುಗಡೆಯಾಗಿದೆಯೋ ಇಲ್ಲವೋ ಗೊತ್ತಿಲ್ಲ.ಆದರೆ, ಕೂಡಿಗೆ ಒಳಾಂಗಣ ಕ್ರೀಡಾಂಗಣ, ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಬಳಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಗಳ ಅಭಿವೃದ್ಧಿ ಕಾರ್ಯಗಳು ಮಾತ್ರ ಕಣ್ಣಿಗೆ ಗೋಚರಿಸುತ್ತಿವೆ. ಇದನ್ನು ಗಮನಿಸಿದರೆ, ಈ ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಕ್ರೀಡೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ನೆರವು ಸಿಕ್ಕಿದೆ ಎಂಬುದು ಕೂಡ ಸತ್ಯ. ಆದರೆ, ಮ್ಯಾನ್ಸ್ ಕಾಂಪೌಂಡ್ ಬಳಿಯಿರುವ ಈಜುಕೊಳ ಮಾತ್ರ ಕಾಯಕಲ್ಪಕ್ಕಾಗಿ ಇನ್ನೂ ಅನುದಾನದ ನಿರೀಕ್ಷೆಯಲ್ಲಿದೆ.ಈ ಹಿಂದಿನ ಕ್ರೀಡಾ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್ ಒಮ್ಮೆ ಮಡಿಕೇರಿಗೆ ಭೇಟಿ ನೀಡಿದ್ದಾಗ ಪಾಳು ಬಿದ್ದಿರುವ ಈಜುಕೊಳವನ್ನು ಗಮನಿಸಿ ಅದರ ಪುನಶ್ಚೇತನದ ಭರವಸೆ ನೀಡಿದರು. ಬರೀ ಈಜುಕೊಳಕ್ಕೆ ಕಾಯಕಲ್ಪ ನೀಡುವುದಷ್ಟಕ್ಕೇ ಸೀಮಿತವಾಗದ ಸಚಿವರು, ಈಜುಕೊಳ ಸುತ್ತಲೂ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿಪಡಿಸುವುದಕ್ಕಾಗಿ ಹೊಸ ಪ್ರಸ್ತಾವ ಸಲ್ಲಿಸುವಂತೆ ಕ್ರೀಡಾ ಇಲಾಖೆಗೆ ಸೂಚಿಸಿದರು. ಪರಿಣಾಮ, ಮೊದಲು 1 ಕೋಟಿ ರೂಪಾಯಿಗಳಿಗೆ ಪ್ರಸ್ತಾವ ಸಲ್ಲಿಸಿದ್ದ ಕ್ರೀಡಾ ಇಲಾಖೆ, ಆನಂತರ ಹೆಚ್ಚುವರಿ ಅನುದಾನ ಕೋರಿ 1.76 ಕೋಟಿ ರೂಪಾಯಿಗಳಿಗೆ ಸರ್ಕಾರಕ್ಕೆ ಹೊಸ ಪ್ರಸ್ತಾವ ಸಲ್ಲಿಸಿತು.ಆದರೆ, ಸಚಿವ ಗೂಳಿಹಟ್ಟಿ ಶೇಖರ್ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆಯೇ ಕ್ರೀಡಾ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವ ಕೇವಲ ಪ್ರಸ್ತಾವವವಾಗಿಯೇ ಉಳಿದಿದೆ. ಅದಕ್ಕೆ ಇನ್ನೂ ಆಡಳಿತಾತ್ಮಕ ಅನುಮೋದನೆ ಕೂಡ ಸಿಕ್ಕಿಲ್ಲ. ಪ್ರಸ್ತುತ ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರಬಲ್ಲಂತಹ ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯನವರ ಮೂಲಕ ಈಜುಕೊಳಕ್ಕೆ ಅನುದಾನ ತರಲು ಕ್ರೀಡಾ ಇಲಾಖೆ ಚಿಂತಿಸುತ್ತಿದೆ.ಈ ಬಾರಿ ಮುಂಚಿತವಾಗಿಯೇ ಅಂದರೆ, ಫೆ. 24ರಂದು ರಾಜ್ಯ ಬಜೆಟ್ ಮಂಡಿಸಲಿರುವುದರಿಂದ ಪೂರ್ವಭಾವಿ ಬಜೆಟ್‌ನ ಸಿದ್ಧತೆಯಲ್ಲಿ ಮುಖ್ಯಮಂತ್ರಿಗಳು ‘ಬ್ಯುಸಿ’ಯಾಗಬಹುದು. ಆದರೆ, ಈಗ ಪ್ರಯತ್ನ ನಡೆಸಿದರೂ ಬಜೆಟ್ ನಂತರವಾದರೂ ಈಜುಕೊಳಕ್ಕೆ ಹಣ ಬಿಡುಗಡೆಯಾಗಬಹುದು. ಬಹುಶಃ ಗೂಳಿಹಟ್ಟಿ ಶೇಖರ್ ಅವರೇ ಇದುವರೆಗೆ ಸಚಿವರಾಗಿ ಮುಂದುವರಿದಿದ್ದರೆ ಈ ವೇಳೆಗೆ ಈಜುಕೊಳ ಕಾಯಕಲ್ಪಕ್ಕೆ ಆಡಳಿತಾತ್ಮಕ ಮಂಜೂರಾತಿ ದೊರೆತು ಅನುದಾನವೂ ಬಿಡುಗಡೆಯಾಗುತ್ತಿತ್ತೋ ಏನೋ ಗೊತ್ತಿಲ್ಲ? ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗೆ ಅವರು ನೀಡುತ್ತಿದ್ದ ಪ್ರೋತ್ಸಾಹವನ್ನು ಗಮನಿಸಿದರೆ ಹಾಗೆನ್ನಿಸುತ್ತದೆ.ವಿಪರ್ಯಾಸದ ಸಂಗತಿಯೆಂದರೆ, ಬಹಳ ವರ್ಷಗಳಿಂದ ಈಜುಕೊಳ ಪಾಳುಬಿದ್ದು, ಅದರ ಸುತ್ತಲೂ ಕುರುಚಲು ಗಿಡ ಬೆಳೆದು ನಿಂತಿದ್ದರೂ ಗಮನಿಸುವವರೇ ಇರಲಿಲ್ಲ. ಆದರೆ, ಕೆಲವು ವರ್ಷಗಳ ಹಿಂದೆ ಅದಕ್ಕೆ ಪುನರ್‌ಜೀವ ನೀಡಲು ಕ್ರೀಡಾ ಇಲಾಖೆ ಮುಂದಾಯಿತಾದರೂ, ಸರ್ಕಾರದಿಂದ ಅಂತಹ ಪ್ರೋತ್ಸಾಹವೂ ಸಿಗಲಿಲ್ಲ. ಆದರೆ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಈಜುಕೊಳದ ಪುನಶ್ಚೇತನಕ್ಕೆ ತಾವೇ ಖುದ್ದು ಮುತುವರ್ಜಿ ವಹಿಸಿ ಪ್ರಸ್ತಾವ ಸಲ್ಲಿಸುವಂತೆ ಕ್ರೀಡಾ ಇಲಾಖೆಗೆ ಸೂಚಿಸಿದ್ದರು. ಅಲ್ಲದೆ, ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನೂ ನೀಡಿದ್ದರು.ಆದರೆ, ಅದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಮುನ್ನವೇ ಸಚಿವರು ಬದಲಾದ ರಾಜಕೀಯ ಬೆಳವಣಿಗೆಗಳಿಂದ ಅಧಿಕಾರದಿಂದ ಕೆಳಗಿಳಿದರು. ಅಂದಿನಿಂದ ಈಜುಕೊಳ ಕಾಯಕಲ್ಪಕ್ಕೆ ಸಂಬಂಧಿಸಿದ ಪ್ರಸ್ತಾವ ಹಾಗೇ ಉಳಿದಿದೆ.ಮ್ಯಾನ್ಸ್ ಕಾಂಪೌಂಡ್ ಬಳಿ ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣಗಳ ಅಭಿವೃದ್ಧಿ ಜೊತೆಗೆ, ಈಜುಕೊಳಕ್ಕೂ ಕಾಯಕಲ್ಪ ನೀಡಿದಲ್ಲಿ ಸುತ್ತಲಿನ ಪರಿಸರಕ್ಕೆ ಹೊಸ ರೂಪ ಬರಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದ ಭವಿಷ್ಯದಲ್ಲಿ ಕೊಡಗಿನ ಕ್ರೀಡಾಪಟುಗಳು ಈಜಿನಲ್ಲಿಯೂ ಮಿಂಚಲು ಸಹಕಾರಿಯಾದೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry