ಭಾನುವಾರ, ಜೂನ್ 13, 2021
22 °C

ಈಜುವ ಗೋಜು

ರಮೇಶ ಕೆ. Updated:

ಅಕ್ಷರ ಗಾತ್ರ : | |

ನೆತ್ತಿ ಸುಡುವ ರಣಬಿಸಿಲಿಗೆ ಮೈ ತಂಪು ಮಾಡಿಕೊಳ್ಳಲು ಹಳ್ಳಿಗಳಲ್ಲಿ ಸ್ನೇಹಿತರೆಲ್ಲಾ ಸೇರಿ ಸಮೀಪದ ಕೆರೆಗಳಿಗೋ, ಕಲ್ಯಾಣಿಗಳಿಗೋ ಹೋಗಿ ಈಜುತ್ತಿದ್ದ ದಿನಗಳು ಬೇಸಿಗೆ ಸಮೀಪಿಸುತ್ತಿದ್ದಂತೆ ನೆನಪಾಗುತ್ತವೆ.ಆದರೆ ಬೆಂಗಳೂರಿನಂಥ ಮಹಾನಗರದಲ್ಲಿ ಕೆರೆ, ಬಾವಿಗಳಿಗೆ ಹುಡುಕಾಡಬೇಕು. ಇರುವ ಕೆರೆಗಳಿಗೆ ಬೇಲಿ ಹಾಕಿದ್ದಾರೆ. ಅಲ್ಲಿಯೇ ಒಂದಿಷ್ಟು  ಜಾಗದಲ್ಲಿ ಈಜುಕೊಳ ನಿರ್ಮಿಸಿ ಉದ್ಯಮದ ಸ್ಪರ್ಶ ನೀಡಿದ್ದಾರೆ. ಮೋಜಿನ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಈಜು ಒಳ್ಳೆಯ ಹವ್ಯಾಸ ಎಂಬುದನ್ನು ಅರಿತಿರುವ ನಗರಿಗರು ಈಜುವುದಕ್ಕಾಗಿಯೇ ಸಮಯ ಮೀಸಲಿಟ್ಟು, ಹಣ ವಿನಿಯೋಗಿಸುತ್ತಿದ್ದಾರೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಈಜು ಶಿಬಿರಗಳಿಗೆ ಹೋಗುವ ಪರಿಪಾಠ ಹೆಚ್ಚಾಗುತ್ತಿದೆ. ಅದಕ್ಕೆಂದೇ ನಗರದ ಅನೇಕ ಈಜುಕೇಂದ್ರಗಳು ಬೇಸಿಗೆ ಕಾಲಕ್ಕಾಗಿಯೇ ವಿಶೇಷವಾಗಿ ಸಜ್ಜಾಗಿವೆ.ವರ್ಷದಿಂದ ವರ್ಷಕ್ಕೆ ಬೇಸಿಗೆಯಲ್ಲಿ ಈಜು ಕಲಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳಿಂದ ವೃದ್ಧರವರೆಗೂ ಈಜು ಕಲಿಯಲು ಇಂದು ಈಜು ಕೇಂದ್ರಗಳಿಗೆ ಹೋಗುತ್ತಿದ್ದಾರೆ. ಹೊಸದಾಗಿ ಈಜು ಕಲಿಯುವ ಮಂದಿ ಮುಂಜಾಗ್ರತೆ ವಹಿಸಿ ಈಜು ಕೇಂದ್ರಗಳಿಗೆ ಹೋದರೆ ಒಳಿತು.‘ಎರಡು ರೀತಿ ಈಜುಕೊಳಗಳಿರುತ್ತವೆ. ಒಂದು ಶಾರ್ಟ್‌ ಕೋರ್ಸ್‌ (25 ಮೀಟರ್‌) ಮತ್ತೊಂದು ಲಾಂಗ್‌ ಕೋರ್ಸ್‌ (50 ಮೀಟರ್‌). ಶಾರ್ಟ್‌ ಕೋರ್ಸ್‌ ಕೊಳದಲ್ಲಿ ದಿನಕ್ಕೆ ಪ್ರತ್ಯೇಕ ತಂಡಗಳಂತೆ 300ರಿಂದ 400 ಮಂದಿ ಈಜಬಹುದು. ಲಾಂಗ್‌ ಕೋರ್ಸ್‌ನಲ್ಲಿ ಒಂದು ಸಾವಿರದಿಂದ 1,200 ಮಂದಿ ಈಜಬಹುದು. ನೀರಿನ ಸ್ವಚ್ಛತೆಗಾಗಿ ಗ್ರ್ಯಾನುಯಲ್ಸ್‌ ಕ್ಲೋರಿನ್‌  ರಾಸಾಯನಿಕ ಬಳಸಬೇಕು. ಉದಾಹರಣೆಗೆ 1ಲಕ್ಷ ಲೀಟರ್‌ ನೀರಿಗೆ 200 ಗ್ರಾಂ ಹಾಕಬೇಕು. ಇದರಲ್ಲಿ ಕ್ಲೋರಿನ್‌ ಅಂಶವೂ ಇರುತ್ತದೆ. 20ರಿಂದ 24 ಗಂಟೆ ನಂತರ ಫಿಲ್ಟರ್‌ ಬಳಸಲಾಗುತ್ತದೆ. ನೀರಿನಲ್ಲಿ ಹೈಡ್ರೋಜನ್‌ ಅಯಾನ್‌ (ಪಿಎಚ್‌) ಪರೀಕ್ಷಿಸಬೇಕು, ಅದು 7.2ರಿಂದ 7.6ರ ಪ್ರಮಾಣದಲ್ಲಿರಬೇಕು. ಆಗಮಾತ್ರ ಕಣ್ಣು ಉರಿ ಸೇರಿದಂತೆ ಇನ್ನಿತರೆ ತೊಂದರೆಯಾಗದಂತೆ ನೋಡಿಕೊಳ್ಳಬಹುದು’ ಎನ್ನುತ್ತಾರೆ ಕರ್ನಾಟಕ ರಾಜ್ಯ ಈಜು ಸಂಸ್ಥೆ (ಕೆಎಸ್ಎ) ಕಾರ್ಯದರ್ಶಿ ಎಸ್‌. ಆರ್. ಸಿಂಧ್ಯ.ಇನ್ನೂ ನೀರಿನಲ್ಲಿ ಬ್ಯಾಕ್ಟೀರಿಯಾ ಆಗದಂತೆ ತಡೆಯಲು ವಾರಕ್ಕೊಮ್ಮೆ ಸೂಪರ್‌ ಕ್ಲೋರಿನೇಷನ್ ಮಾಡಬೇಕಾಗುತ್ತದೆ. ಈಜು ಕೇಂದ್ರಗಳಲ್ಲಿ ಮುಖ್ಯವಾಗಿ ನುರಿತ ತರಬೇತುದಾರರು ಇರಬೇಕು. ಲೈಫ್‌ ಗಾರ್ಡ್‌ಗಳನ್ನೂ ಇಟ್ಟುಕೊಳ್ಳಬೇಕಾಗುತ್ತದೆ.

‘ತರಬೇತುದಾರರಿಗೆ ನಮ್ಮಲ್ಲಿ ಪ್ರತಿ ವರ್ಷ ಎರಡು ಬಾರಿ ಕೋರ್ಸ್‌ ನಡೆಸುತ್ತೇವೆ. ಅಲ್ಲದೇ ಈಜು ಕೇಂದ್ರದ ಆಪರೇಟರ್‌ಗಳಿಗೂ ಕೋರ್ಸ್‌ ಇದೆ. ಕೊಳದ ನೀರು ಹಸಿರು ಅಥವಾ ಬೇರೆ ಬಣ್ಣಕ್ಕೆ ತಿರುಗಿದಾಗ ಏನು ಮಾಡಬೇಕು ಇತ್ಯಾದಿ ಅಂಶಗಳ ಬಗ್ಗೆ ಹೇಳಿಕೊಡಲಾಗುತ್ತದೆ.ಹೆಚ್ಚುತ್ತಿರುವ ಶಿಬಿರಾರ್ಥಿಗಳು

‘ಬೇಸಿಗೆ ಕಾಲ ಬಂದರೆ ಈಜು ಕಲಿಯಲು ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಅದರಲ್ಲೂ 5ರಿಂದ 13 ವರ್ಷದೊಳಗಿನ ಮಕ್ಕಳು ಹೆಚ್ಚಿರುತ್ತಾರೆ. ಒಂದೇ ಕ್ಯಾಂಪಿನಲ್ಲೇ ಪೂರ್ಣ ಪ್ರಮಾಣದ ಈಜು ಕಲಿಸಿ ಎಂದು ಕೇಳಿಕೊಳ್ಳುತ್ತಾರೆ. ಒಂದೊಂದು ಮಗುವಿನಲ್ಲೂ ಕಲಿಯುವ ವೇಗ ವ್ಯತ್ಯಾಸವಿರುತ್ತದೆ. ಮಕ್ಕಳಿಗೆ ಮೊದಲು ನೀರಿನಲ್ಲಿ ಬಿದ್ದಾಗ ಹೇಗೆ ಅಪಾಯದಿಂದ ಪಾರಾಗಬೇಕು ಎಂಬ ಕೌಶಲವನ್ನು ಹೇಳಿಕೊಡುತ್ತೇವೆ.ವಿದ್ಯಾರ್ಥಿಗಳು ಈಜು ಬಾರದೇ ಕೆರೆಗಳಿಗೆ ಈಜಲು ಹೋಗಿ ಸಾವನ್ನಪ್ಪುತ್ತಿರುವ ಸುದ್ದಿ ನಿತ್ಯ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಹಾಗಾಗಿ ಪರಿಪೂರ್ಣವಾಗಿ ಕಲಿತು ಈಜುವುದು ಉತ್ತಮ. ನಮ್ಮಲ್ಲಿ ಫ್ರೀಸ್ಟೈಲ್, ಬ್ಯಾಕ್‌ಸ್ಟ್ರೋಕ್, ಬ್ರೆಸ್ಟ್‌ಸ್ಟ್ರೋಕ್ ಹಾಗೂ ಬಟರ್‌ಫೈ ವಿಭಾಗಗಳ ಬಗ್ಗೆ ವಿವಿಧ ವಯೋಮಾನದವರಿಗೆ ಈಜು ಕಲಿಸಲಾಗುತ್ತದೆ. ಇನ್ನು ಸುರಕ್ಷತೆ ವಿಷಯಕ್ಕೆ ಬಂದರೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇದೆ. ಗುಣಮಟ್ಟದ ಲೈಫ್‌ಗಾರ್ಡ್‌ಗಳಿವೆ. ಪ್ರತಿ ಎರಡು ಗಂಟೆಗೊಮ್ಮೆ ನೀರಿನ ಪರೀಕ್ಷೆ ಮಾಡಲಾಗುತ್ತದೆ. 11 ಮಂದಿ ನುರಿತ ಈಜು ತರಬೇತುದಾರರಿದ್ದಾರೆ’ ಎನ್ನುತ್ತಾರೆ ಮತ್ತಿಕೆರೆ ಡಾಲ್ಫಿನ್‌ ಆಕ್ವೆಟಿಕ್‌ ಸೆಂಟರ್‌ನ (ರಾಮಕೃಷ್ಣ ಹೆಗಡೆ ಈಜುಕೊಳ) ತರಬೇತುದಾರ ಮಧು.

 ಈಜು ಶಿಬಿರ ಆರಂಭ

‘ನಮ್ಮಲ್ಲಿ ಏಪ್ರಿಲ್‌ 2ರಿಂದ ಜೂನ್‌ 3ರವರೆಗೆ ಬೇಸಿಗೆ ಈಜು ಶಿಬಿರ ಆಯೋಜಿಸಿದ್ದೇವೆ. ಈಗಾಗಲೇ 60 ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಕಳೆದ ವರ್ಷಕ್ಕಿಂತ ಹೆಚ್ಚು ಮಂದಿ ಬರುವ ನಿರೀಕ್ಷೆ ಇದೆ. ಬೆಳಿಗ್ಗೆ 5ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 3.15ರಿಂದ ರಾತ್ರಿ 9.30ರವರೆಗೆ ಶಿಬಿರ ನಡೆಯುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಅವರು.ವಿಜಯನಗರ ಕೇಂದ್ರದಲ್ಲಿ...

ಏ.4ರಿಂದ ವಿಜಯನಗರ ಆರ್‌ಪಿಸಿ ಲೇಔಟ್‌ ಈಜು ಕೇಂದ್ರದಲ್ಲೂ ಬೇಸಿಗೆ ಶಿಬಿರ ಆರಂಭಗೊಳ್ಳುತ್ತಿದೆ.

‘ಏ.4ರಿಂದ 27ರವರೆಗೆ ಮೊದಲ ಬ್ಯಾಚ್, ಏ.30ರಿಂದ ಮೇ 24ರವರೆಗೆ ಎರಡನೇ ಬ್ಯಾಚ್‌ಗೆ ತರಬೇತಿ ನೀಡಲಾಗುತ್ತದೆ. ಬೆಳಿಗ್ಗೆ 10ರಿಂದ 12 ಹಾಗೂ ಸಂಜೆ 4.30ರಿಂದ 7.30ರವರಗೆ ಶಿಬಿರ ನಡೆಯುತ್ತದೆ.ಮಹಿಳೆಯರಿಗೆ ಮಧ್ಯಾಹ್ನ 3.30ರಿಂದ 4.30 ಹಾಗೂ ಸಂಜೆ 7.45ರಿಂದ 8.45ರವರೆಗೆ ತರಬೇತಿ ಇರುತ್ತದೆ. ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ನಿಂದ ಮಾನ್ಯತೆ ಪಡೆದ 14 ಮಂದಿ ತರಬೇತುದಾರರು ತರಬೇತಿ ನೀಡಲಿದ್ದಾರೆ. ಈ ಬಾರಿ 600 ಮಂದಿ ನೋಂದಣಿ ಮಾಡಿಸುವ ನಿರೀಕ್ಷೆ ಇದೆ’ ಎನ್ನುತ್ತಾರೆ ಈಜು ಕೇಂದ್ರದ ವ್ಯವಸ್ಥಾಪಕ ಎ. ಕುಮಾರ್. 

ಕೆಎಸ್ಎ ಮಾನ್ಯತೆ ಪಡೆದ ಕೊಳಗಳು

*ನೆಟ್ಟಕಲ್ಲಪ್ಪ ಈಜು ಕೇಂದ್ರ, ಪದ್ಮನಾಭನಗರ ಬಳಿಯ ಉತ್ತರಹಳ್ಳಿಯ ಮುಖ್ಯರಸ್ತೆ.

*ಬಸವನಗುಡಿ ಈಜು ಕೇಂದ್ರ

*ಪಿ.ಎಂ. ಸ್ವಿಮ್ಮಿಂಗ್‌ ಸೆಂಟರ್, ಜಯನಗರ.

*ಗ್ಲೋಬಲ್‌ ಸ್ವಿಮ್‌ ಸೆಂಟರ್, ಸದಾಶಿವನಗರ.

*ಡಾಲ್ಫಿನ್‌ ಅಕ್ವೆಟಿಕ್‌ ಸೆಂಟರ್‌, ಮತ್ತಿಕೆರೆ.

*ವಿಜಯನಗರ, ಆರ್‌ಪಿಸಿ ಲೇಔಟ್‌ ಸ್ವಿಮ್‌ ಸೆಂಟರ್‌.

*ಜ್ಯೋತಿ ಅಕ್ವೆಟಿಕ್‌ ಸೆಂಟರ್‌, ಜೈನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌, ಕನಕಪುರ.

*ಸಿಂಧ್ಯ ಸ್ವಿಮ್ಮಿಂಗ್‌ ಸ್ಕೂಲ್‌, ನಾಗರಬಾವಿ.

*ಬೆಂಗಳೂರು ಕ್ಲಬ್‌, ರೆಸಿಡೆನ್ಸಿ ರಸ್ತೆ.

*ಸದಾಶಿವನಗರ ಸ್ವಿಮ್ಮಿಂಗ್ ಸೆಂಟರ್‌.

ನೀರಿಗಿಳಿಯುವ ಮುನ್ನ

ಈಜುಕೊಳದಲ್ಲಿ ನೀರಿಗಿಳಿಯುವುದಕ್ಕೂ ಮುನ್ನ ಅನೇಕ ಕ್ರಮಗಳನ್ನು ಅನುಸರಿಸಬೇಕು.

*ಈಜುವುದಕ್ಕೂ ಮುಂಚೆ ಐದು ನಿಮಿಷ ಲಘು ವ್ಯಾಯಾಮ ಮಾಡಬೇಕು ಮತ್ತು ಸ್ನಾನ ಮಾಡಿರಬೇಕು.

*ತಿಂಡಿ ಅಥವಾ ಊಟ ಮಾಡಿದ ಎರಡು ಗಂಟೆ ನಂತರ ಈಜಬೇಕು (ವಾಂತಿ, ಪಾರ್ಶ್ವವಾಯು ಆಗುವುದನ್ನು ತಪ್ಪಿಸಲು).

*ಮದ್ಯಪಾನ ಮಾಡಿ ನೀರಿಗಿಳಿಯಬಾರದು.

*ಈಜು ಉಡುಗೆ ಧರಿಸಲೇಬೇಕು. ಮಹಿಳೆಯರು ತಲೆಗೆ ರಬ್ಬರ್‌ ಕ್ಯಾಪ್‌ ಹಾಕಬೇಕು.

*ನೀರು ಕಣ್ಣಿನೊಳಗೆ ಹೋದಾಗ ಉಜ್ಜಿಕೊಳ್ಳಬಾರದು.

*ಕಿವಿಯೊಳಗೆ ಹತ್ತಿ ಇಟ್ಟುಕೊಳ್ಳಬಾರದು.

*ಬಾಡಿ ಲೋಷನ್‌, ಎಣ್ಣೆ ಹಚ್ಚಿ ನೀರಿಗಿಳಿಯಬಾರದು.

*ಕೊಳದೊಳಗೆ ಮೂತ್ರ ವಿಸರ್ಜಿಸಬಾರದು.

*ಉಗುರು ಉದ್ದ ಇರದಂತೆ ನೋಡಿಕೊಳ್ಳಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.