ಶುಕ್ರವಾರ, ನವೆಂಬರ್ 15, 2019
24 °C

ಈಜುವ ಮೋಜು

Published:
Updated:
ಈಜುವ ಮೋಜು

ಬೇಸಿಗೆ ಬಂತು ಅಂದರೆ ಮನೆಯಲ್ಲಿರುವ ಮಕ್ಕಳನ್ನು ಯಾವುದಾದರೂ ಚಟುವಟಿಕೆಗೆ ಹಾಕಬೇಕು ಎಂದು ಹಪಹಪಿಸುವ ಬೆಂಗಳೂರಿನ ಪೋಷಕರಿಗೆ ಈಜು ಶಿಬಿರಗಳು ಅಪೂರ್ವ ಆಯ್ಕೆ.ನಗರದಲ್ಲಿರುವ ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ನೂರಾರು ಕಡೆ ಈಜುಕೊಳಗಳ ಸಂಖ್ಯೆ ಹೆಚ್ಚುತ್ತಿದೆ. ಕೊಳಗಳು ಹೆಚ್ಚಿದಂತೆ ಈಜುವವರ ಸಂಖ್ಯೆಯೂ ಹೆಚ್ಚಬೇಕಲ್ಲ? ಅದರಲ್ಲೂ ಬೇಸಿಗೆಯಲ್ಲಿ ಮಕ್ಕಳು ಈಜೋದನ್ನು ಕಣ್ಣು ತುಂಬಿಕೊಳ್ಳಲು ಪೋಷಕರೂ ಈಜು ಕೊಳಗಳ ಕಡೆ ಮುಖ ಮಾಡುತ್ತಾರೆ. ಇಂತವರಿಗೆ ತಣ್ಣನೆ ಅನುಭವ ನೀಡಲು ನಗರದ ನೂರಾರು ಈಜುಕೊಳಗಳು ಬೇಸಿಗೆ ಶಿಬಿರಗಳಿಗಾಗಿ ತಮ್ಮದೇ ರೀತಿಯಲ್ಲಿ ತಯಾರಿ ನಡೆಸುತ್ತಿವೆ.

ಆಕರ್ಷಕ ಕರಪತ್ರಗಳ ಮೂಲಕ ಎಲ್ಲರನ್ನೂ ಆಕರ್ಷಿಸುವುದಲ್ಲದೇ, ಇಂಟರ್‌ನೆಟ್‌ನಲ್ಲೂ ಪ್ರಚಾರ ನಡೆಸುವ ಮೂಲಕ ಮಕ್ಕಳು ಹಾಗೂ ಅವರ ಈಜುಗಾರಿಕೆ ನೋಡಲು ಬರುವ ಪೋಷಕರನ್ನು ನಿಭಾಯಿಸಲು ಸಜ್ಜಾಗಿವೆ. ಬಸವನಗುಡಿ ಈಜುಕೊಳ ಸೇರಿದಂತೆ ಹಲವಡೆ ಈಗಾಗಲೇ ಬೇಸಿಗೆ ಈಜು ಶಿಬಿರಗಳು ಪ್ರಾರಂಭವಾಗಿವೆ.ಶಿಬಿರ ಸಂಘಟಕರು ಮಕ್ಕಳ ಆರೋಗ್ಯದತ್ತ ಗಮನ ಹರಿಸುವುದು ಗಮನಾರ್ಹ. ಮೊದಲ ಬಾರಿಗೆ ಈಜು ಕಲಿಯುವ ಮಕ್ಕಳಲ್ಲಿ ಭಯ ಹೋಗಲಾಡಿಸುವ ಪ್ರಯತ್ನ ಮಾಡುವ ಜತೆಗೆ ಮಕ್ಕಳಿಗೆ ಆರೋಗ್ಯದಲ್ಲಿ ವ್ಯತ್ಯಯವಾದರೆ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಿವೆ. `ಈಜುಕೇವಲ ಮೋಜಿಗಾಗಿ ಅಥವಾ ಕಾಲಹರಣ ಅಲ್ಲ. ಇದು ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ದೇಹಕ್ಕೆ ಒಳ್ಳೆಯ ವ್ಯಾಯಾಮ.

ಶೀತ, ಕಫ ನಿವಾರಿಸುತ್ತದೆ, ರೋಗ ನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ. ಹಸಿವು, ಏಕಾಗ್ರತೆ ಹೆಚ್ಚಿಸುತ್ತದೆ. ಕೆಲವು ಮಕ್ಕಳು ಒಂದು ವಿಷಯದಲ್ಲಿ ಗಮನ ಕೊಡುವಾಗ ಇನ್ನೊಂದು ವಿಷಯವನ್ನು ಮರೆಯುತ್ತಾರೆ ನೋಡಿ. ಅಂಥವರಿಗೂ ಇದು ಹೆಚ್ಚು ಉಪಯುಕ್ತ' ಎನ್ನುತ್ತಾರೆ ಬಸವನಗುಡಿ ಈಜುಕೊಳದನಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕೋಚ್ ಆಗಿರುವ ಪದ್ಮನಾಭ ಅವರು.

ಈ ರೀತಿ ಬೇಸಿಗೆ ಶಿಬಿರಕ್ಕೆ ಬಂದ ಮಕ್ಕಳೇ ಆಸಕ್ತಿಯಿಂದ ಮುಂದುವರಿದು ದೇಶವನ್ನು ಪ್ರತಿನಿಧಿಸಿದ ಉದಾಹರಣೆಗಳು ಸಾಕಷ್ಟು ಇವೆ. ಅಭಿಜಿತ್, ಸುನಿಲ್‌ಶೆಟ್ಟಿ, ಆರ್. ಎನ್. ಡಿಸೋಜ, ಪೂಜಾ ಆರ್ ಆಳ್ವಾ, ಗಗನ್ ಎ.ಪಿ. ಇವರೆಲ್ಲರೂ ಬಸವನಗುಡಿ ಈಜುಕೊಳದಲ್ಲಿ ಈಜು ಕಲಿತವರು.`ಬೇಸಿಗೆ ಶಿಬಿರಗಳು ಕೇವಲ 2 ತಿಂಗಳು ನಡೆಯುವುದರಿಂದ ಈ ಅವಧಿಯಲ್ಲಿ ಪೂರ್ಣಪ್ರಮಾಣದಲ್ಲಿ ಈಜುಪಟುವಾಗಲು ಸಾಧ್ಯವಿಲ್ಲದಿದ್ದರೂ ಆಸಕ್ತಿಯಿಂದ ಕಲಿತರೆ ಜಲ ದುರಂತಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ತರಬೇತಿ ಸಾಕಾಗುತ್ತದೆ. ಮಾತ್ರವಲ್ಲ ಎರಡು ತಿಂಗಳ ಅವಧಿಯ ತರಬೇತಿಯಿಂದ ಸ್ಪರ್ಧೆಗಳಿಗೆ ತಯಾರಾಗಲೂ ಸಾಧ್ಯವಿಲ್ಲ. ಆದರೆ ಆಸಕ್ತಿಯಿದ್ದವರು ತರಬೇತಿ ಮುಂದುವರಿಸುತ್ತಾರೆ. ಶಿಬಿರಗಳಲ್ಲಿ ಮಕ್ಕಳ ವಯೋಮಿತಿಗೆ ತಕ್ಕಂತೆ ತಂಡಗಳನ್ನು ರಚಿಸಲಾಗುತ್ತದೆ. 10 ವರ್ಷ ಕಾಲ ಈಜು ಕಲಿತ ಹಲವರು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮಟ್ಟದ ಸಾಧನೆಗೆ ಕನಿಷ್ಠ 8 ವರ್ಷಗಳ ಕಾಲ ದಿನಕ್ಕೆ ಏಳೆಂಟು ಗಂಟೆ ಸತತ ಸಾಧನೆ ಮಾಡಬೇಕಾಗುತ್ತದೆ' ಎಂಬುದು ಪದ್ಮನಾಭ ಅವರ ಅನುಭವದ ಮಾತು.ನೀರಿನಲ್ಲಿ ಕ್ಲೋರಿನ್

ಮಕ್ಕಳಿಗೆ ಬೇಸಿಗೆ ರಜೆ ಕಳೆಯಲು ಸಹಕಾರಿಯಾಗಿ, ಈಜು ಕಲಿಕೆಗೆ ಉತ್ತಮ ವೇದಿಕೆಯಾಗಿರುವ ಈಜು ಶಿಬಿರಗಳಿಗೆ ಮಕ್ಕಳನ್ನು ದಾಖಲಿಸುವ ಮೊದಲು ಆ ಈಜುಕೊಳದ ನೀರಿನ ಬಗ್ಗೆ ಒಂದಿಷ್ಟು ಎಚ್ಚರ ವಹಿಸಬೇಕಾದ್ದು ಅತ್ಯಗತ್ಯ ಎನ್ನುತ್ತಾರೆ, ವಿಜಯನಗರದ ಡಾ. ಸತೀಶ್.`ಬೇಸಿಗೆಯಲ್ಲಿ ಈಜುವವರ ಸಂಖ್ಯೆ ಹೆಚ್ಚು. ಸಾಮಾನ್ಯವಾಗಿ ಕೊಳದ ನೀರನ್ನು ವಾರಕ್ಕೊಮ್ಮೆ ಬದಲಾಯಿಸುತ್ತಾರೆ. ಜತೆಗೆ, ಕೊಳದ ನೀರಿಗೆ ಕ್ಲೋರಿನ್ ಹಾಕಿರುತ್ತಾರೆ. ಈ ನೀರಿನಿಂದ ಕೆಲವರಿಗೆ ಚರ್ಮದ ಅಲರ್ಜಿ ಉಂಟಾದೀತು. ಪೋಷಕರು ಶಿಬಿರ ಸಂಘಟಕರನ್ನು ಈ ಕುರಿತು ವಿಚಾರಿಸುವುದು ಸೂಕ್ತ' ಎಂದು ಅವರು ಸಲಹೆ ನೀಡುತ್ತಾರೆ.ಆದರೆ ಈಜುಕೊಳಗಳ ನಿರ್ವಾಹಕರು ನೀಡುವ ವಿವರಣೆ ಬೇರೆ. ವಾರಕ್ಕೆ ಎರಡು ಬಾರಿ ನೀರನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. 1ಪಿಪಿಎಮ್ ಕ್ಲೋರಿನ್‌ನ್ನು ನೀರಿಗೆ ಹಾಕಲಾಗುತ್ತದೆ. ಪ್ರತಿನಿತ್ಯ ನೀರಿನ ಶುದ್ಧೀಕರಣದ ಬಗ್ಗೆ ಗಮನ ನೀಡಲಾಗುತ್ತದೆಯಂತೆಈಜು ಶಿಬಿರಗಳಲ್ಲೇ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತರಬೇತಿ ಮುಂದುವರಿಸುವಂತೆ ಪ್ರೋತ್ಸಾಹ ನೀಡುವ ಕೆಲಸವನ್ನೂ ಕೆಲವು ಸಂಘಟಕರು/ಈಜು ಕೊಳಗಳು ಮಾಡುತ್ತಿವೆ. ಹಾಗಾಗಿ ಬೇಸಿಗೆಯ ಎರಡು ತಿಂಗಳ ರಜೆಯನ್ನು ಸದುಪಯೋಗಪಡಿಸಿಕೊಳ್ಳಲು ಇದು ಸರಿಯಾದ ಮಾರ್ಗ.

ಪ್ರತಿಕ್ರಿಯಿಸಿ (+)