ಭಾನುವಾರ, ಡಿಸೆಂಬರ್ 15, 2019
26 °C

ಈಜು ಅವಗಣನೆ...

-ಆರ್.ಜಿತೇಂದ್ರ Updated:

ಅಕ್ಷರ ಗಾತ್ರ : | |

ಈಜು ಅವಗಣನೆ...

ಕಳೆದ ವಾರ ಹುಬ್ಬಳ್ಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಈಜು ಸ್ಪರ್ಧೆ ನಡೆಯಿತು. ಫ್ರೀಸ್ಟೈಲ್, ಬ್ಯಾಕ್ ಸ್ಟ್ರೋಕ್, ಬ್ರೆಸ್ಟ್ ಸ್ಟ್ರೋಕ್, ಬಟರ್‌ಫ್ಲೈ, ಮೆಡ್ಲೆ ವಿಭಾಗಗಳಲ್ಲಿ 20 ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಆದರೆ, ಮಹಿಳೆಯರು ಹಾಗೂ ಪುರುಷರ ವಿಭಾಗಗಳೆರಡರಲ್ಲೂ ಪಾಲ್ಗೊಂಡ ಒಟ್ಟು ಈಜುಗಾರರ ಸಂಖ್ಯೆ ಮಾತ್ರ 27!ಇದು ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಈಜು ಕ್ರೀಡೆಯ ವಸ್ತುಸ್ಥಿತಿಯ ಚಿತ್ರಣ. ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಿಶ್ವವಿದ್ಯಾಲಯದಲ್ಲಿ ಮಹಿಳೆಯರ ವಿಭಾಗದಲ್ಲಿ ಬೆರಳೆಣಿಕೆಯಷ್ಟು ಈಜುಗಾತಿರ್ಯರು ಇದ್ದಾರೆ. ಪುರುಷ ಸ್ಪರ್ಧಿಗಳ ಸ್ಥಿತಿಯೂ ಭಿನ್ನ ಏನಲ್ಲ.

‘ಅಭ್ಯಾಸಕ್ಕೆ ಈಜುಕೊಳಗಳು ಇಲ್ಲದಿರುವುದು. ಪೋಷಕರು- ಶಿಕ್ಷಣ ಸಂಸ್ಥೆಗಳಿಂದ ಸಿಗದ ಪ್ರೋತ್ಸಾಹ, ಸೆಮಿ­ಸ್ಟರ್‌ನಿಂದಾಗಿ ಬಿಡುವಿಲ್ಲದ ಓದು... ಇವೆಲ್ಲವೂ ಈಜು ಬೆಳೆಯಲು ಹಿನ್ನೆಡೆಯಾಗಿದೆ’ ಎನ್ನುತ್ತಾರೆ ತರಬೇತುದಾರರು.ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಮಹಾನಗರ­ಪಾಲಿಕೆಯ ಎರಡು ಈಜುಕೊಳಗಳಿವೆ. ಹುಬ್ಬಳ್ಳಿಯಲ್ಲಿನ ಈಜುಕೊಳವನ್ನು ಆರು ತಿಂಗಳ ಹಿಂದಷ್ಟೇ ನವೀಕರಿಸಲಾಗಿದೆ. ಇದರಿಂದಾಗಿ ಇಲ್ಲಿ ಮಾತ್ರ ಸದ್ಯ ಕ್ರೀಡಾ ಚಟುವಟಿಕೆಗಳು ನಡೆಯುತ್ತಿವೆ. ಹುಬ್ಬಳ್ಳಿಯ ಅಮರಗೋಳ ಸಮೀಪ ಮತ್ತೊಂದು ಖಾಸಗಿ ಈಜುಕೊಳವೂ ಇದೆ.ಧಾರವಾಡದ ಈಜುಕೊಳ ವರ್ಷಗಳ ಹಿಂದೆ ಮುಚ್ಚಿದ್ದು, ಮತ್ತೆ ತೆರೆದಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮೂವತ್ತು ವರ್ಷಗಳ ಹಿಂದೆ ಒಂದು ಈಜುಕೊಳ ಇತ್ತು.ಗದಗ ನಗರದಲ್ಲಿ ಕ್ಲಬ್‌ವೊಂದು ಈಜುಕೊಳ ಹೊಂದಿದೆ. ಅದರ ಸದಸ್ಯರಿಗೆ ಮಾತ್ರ ಬಳಕೆಯ ಅವಕಾಶವಿದ್ದು, ಇಂತಿಷ್ಟು ಶುಲ್ಕ ವಿಧಿಸಲಾಗುತ್ತಿದೆ. ಬೇಸಿಗೆಯ ದಿನಗಳಲ್ಲಿ ಇಲ್ಲಿ ಮಾಸಿಕ ಶುಲ್ಕದ ಪಾವತಿ ಮಾಡುವವರಿಗೆ ಅವಕಾಶ ನೀಡಲಾಗುತ್ತದೆ.ಹಾವೇರಿಯಲ್ಲಿನ ಈಜುಕೊಳವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಿರ್ವಹಿಸುತ್ತಿದ್ದು, ಸದ್ಯ ಸುಸ್ಥಿತಿಯಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲೂ ಒಂದು ಈಜುಕೊಳ ಇದೆಯಾದರೂ ಬಳಸಿದ್ದು ಕಡಿಮೆ.ಸೌಲಭ್ಯಗಳ ಕೊರತೆಯಿಂದಾಗಿ, ತಾಂತ್ರಿಕವಾಗಿ ಈಜು ಅಭ್ಯಾಸ ಮಾಡುವವರ ಕೊರತೆ ಇದೆ. ಹೀಗಾಗಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಸಹಜವಾಗಿಯೇ ಸ್ಪರ್ಧಿಗಳ ಸಂಖ್ಯೆ ಕಡಿಮೆ ಇದೆ. ಪರಿಸ್ಥಿತಿ ಹೀಗಿರುವಾಗ ಗುಣಮಟ್ಟದ ಸ್ಪರ್ಧೆಯನ್ನು ನಿರೀಕ್ಷಿಸುವಂತೆಯೂ ಇಲ್ಲ. ಒಬ್ಬ ಸ್ಪರ್ಧಿಯೇ 10-15 ಚಿನ್ನ ಗೆಲ್ಲುವಂತಾಗಿದೆ.‘ಬೆಳಗಾವಿಯ ಚಂದರಗಿ ಕ್ರೀಡಾಶಾಲೆಯಲ್ಲಿ ಆರು ಹಾಗೂ ಏಳನೇ ತರಗತಿ ಓದುತ್ತಿರುವಾಗ ಅಲ್ಲಿನ ತರಬೇತು­ದಾರರಿಂದ ಈಜು ಕಲಿತೆ. ಅದನ್ನೇ ಬಳಸಿಕೊಂಡು ಸ್ಪರ್ಧೆಗೆ ಬರುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಕರ್ನಾಟಕ ವಿಶ್ವವಿದ್ಯಾಲಯದ ಈಜು ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಆದರೆ ನಮಗೆ ಅಭ್ಯಾಸಕ್ಕೆ ಸಮೀಪದಲ್ಲಿ ಯಾವ ಈಜು­ಕೊಳವೂ ಇಲ್ಲ. ಹೀಗಾಗಿ ನಿರಂತರ ಅಭ್ಯಾಸ ಸಾಧ್ಯವಾಗಿಲ್ಲ. ಸ್ಪರ್ಧೆಗೆ ಒಂದು ವಾರದ ಮುನ್ನ ಹುಬ್ಬಳ್ಳಿಗೆ ಬಂದು ಅಭ್ಯಾಸ ಮಾಡಿಹೋಗುತ್ತಿದ್ದೇನೆ. ನಿತ್ಯ ಇಪ್ಪತ್ತು ಕಿಲೋಮೀಟರ್ ಬಂದು ಹೋಗುವುದು ಕಷ್ಟ. ಧಾರವಾಡದ ಈಜುಕೊಳ ಆದಷ್ಟು ಬೇಗ ಮತ್ತೆ ಆರಂಭವಾಗಬೇಕು’ ಎನ್ನುತ್ತಾರೆ ಪ್ರಥಮ ಎಂಪಿ.ಇಡಿ ವಿದ್ಯಾರ್ಥಿ ಸೂರಜ್ ಶ್ರೇಷ್ಠಿ.‘ಮೊದಲು ಹುಬ್ಬಳ್ಳಿಯ ಖಾಸಗಿ ಈಜುಕೊಳದಲ್ಲಿ ಅಭ್ಯಾಸ ಮಾಡುತ್ತಿದ್ದೆ. ಓದಿನ ಜೊತೆಗೆ ನಿತ್ಯ ಹತ್ತಾರು ಕಿಲೋಮೀಟರ್ ಓಡಾಡುತ್ತ ಅಭ್ಯಾಸ ಮಾಡುವುದು ಕಷ್ಟವಾಗುತ್ತಿತ್ತು. ಹೀಗಾಗಿ ಸಾಮರ್ಥ್ಯ ಕಾಯ್ದುಕೊಳ್ಳಲು ಓಟದ ಮೊರೆ ಹೋಗುತ್ತಿದ್ದೆ. ಆದರೆ ಹುಬ್ಬಳ್ಳಿಯ ಈಜುಕೊಳ ಈಗ ತೆರೆದಿರುವುದರಿಂದ ಈಜು ಅಭ್ಯಾಸ ಮಾಡುವವರಿಗೆ ಅನುಕೂಲವಾಗಿದೆ. ಇದಕ್ಕೂ ಮುಂಚಿನ ಸ್ಥಿತಿ ಕಠಿಣವಾಗಿತ್ತು’ ಎನ್ನುತ್ತಾರೆ ವಿಶ್ವವಿದ್ಯಾಲಯದ ಈಜುಪಟು, ಹುಬ್ಬಳ್ಳಿಯ ಗ್ಲೋಬಲ್ ಕಾಲೇಜಿನ ಅಂತಿಮ ಬಿಬಿಎ ವಿದ್ಯಾರ್ಥಿನಿ ಸ್ಫೂರ್ತಿ ಪಾಟೀಲ.‘ಈ ಮೊದಲು ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿ ಹಿರಿದಾಗಿತ್ತು. ಈಗ ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಆಗಿರುವ ಕಾರಣ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೇ ಈಜು ಮೊದಲಾದ ಸ್ಪರ್ಧೆಗಳಿಗೆ ಸಹಜವಾಗಿಯೇ ಸ್ಪರ್ಧಿಗಳ ಸಂಖ್ಯೆ ಕಡಿಮೆ ಇರುತ್ತದೆ. ಸೌಲಭ್ಯಗಳ ಕೊರತೆಯೇ ಅದಕ್ಕೆ ಕಾರಣ’ ಎನ್ನುತ್ತಾರೆ ಹಿರಿಯ ತರಬೇತುದಾರರಾದ ಭಾರತಿ ಕೊಠಾರಿ.‘ಹುಬ್ಬಳ್ಳಿಯಲ್ಲಿನ ಈ ಈಜುಕೊಳ ಬಿಟ್ಟರೆ ವಿಶ್ವವಿದ್ಯಾಲ­ಯದ ಮಟ್ಟದಲ್ಲಿ ಸ್ಪರ್ಧೆಗೆ ಸೂಕ್ತವಾದ ಈಜುಕೊಳಗಳು ಕಡಿಮೆ. ಹೀಗಿರುವಾಗ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದಾದರೂ ಎಲ್ಲಿಂದ’ ಎಂಬುದು ಅವರ ಪ್ರಶ್ನೆ.‘ಕಲಿಕೆಯಲ್ಲಿನ ಒತ್ತಡ ಮಕ್ಕಳನ್ನು ಕ್ರೀಡೆಯಿಂದ ದೂರವಾಗಿ­ಸುತ್ತಿದೆ. ಪ್ರೋತ್ಸಾಹಿಸುವವರೇ ಇಲ್ಲದಂತಾಗಿದೆ. ಈ ನಡುವೆ ಸೌಲಭ್ಯಗಳೂ ಇಲ್ಲದ ಕಾರಣ ಮಕ್ಕಳು ಕ್ರೀಡೆ­ಯಿಂದ ವಿಮುಖರಾಗುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು  ಕ್ರೀಡಾ­ಪಟು­ಗಳನ್ನು ಪ್ರೋತ್ಸಾಹಿಸುವ ಅಗತ್ಯ ಇದೆ’ ಎನ್ನುವುದು ಅವರ ಅಭಿಪ್ರಾಯ.

ಪ್ರತಿಕ್ರಿಯಿಸಿ (+)