ಈಡನ್‌ನಲ್ಲಿ ಭಾರತಕ್ಕೆ ಐತಿಹಾಸಿಕ ವಿಜಯ

7

ಈಡನ್‌ನಲ್ಲಿ ಭಾರತಕ್ಕೆ ಐತಿಹಾಸಿಕ ವಿಜಯ

Published:
Updated:
ಈಡನ್‌ನಲ್ಲಿ ಭಾರತಕ್ಕೆ ಐತಿಹಾಸಿಕ ವಿಜಯ

ಕೋಲ್ಕತ್ತ: ಹಠಹಿಡಿದು ನಿಂತರು ಕೆರಿಬಿಯನ್ನರು. ಸುಲಭವಾಗಿ ಪಟ್ಟು ಸಡಿಲಿಸಲಿಲ್ಲ. ಪರಿಣಾಮವಾಗಿ ಪ್ರವಾಸಿಗಳನ್ನು ಕಟ್ಟಿಹಾಕುವುದು ಭಾರತಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಭಾರಿ ಕಷ್ಟ. ಗೆಲುವು ಸ್ಪಷ್ಟವೆಂದು ನಂಬಿಕೊಂಡು ಬಿಸಿಲು ಸಹಿಸಿಕೊಂಡು ಕಾಯ್ದರು ಆತಿಥೇಯರು. ನಿರೀಕ್ಷೆ ಹುಸಿಯಾಗಲಿಲ್ಲ. ತಡವಾಗಿಯಾದರೂ ಇನಿಂಗ್ಸ್ ಹಾಗೂ ಹದಿನೈದು ರನ್‌ಗಳ ಅಂತರದ ಜಯ ಒಲಿಯಿತು.ವೆಸ್ಟ್ ಇಂಡೀಸ್ ಇನಿಂಗ್ಸ್‌ಗೆ ಬೆಳಿಗ್ಗೆಯೇ ಬೇಗ ಮಂಗಳ ಹಾಡುವ ಆಸೆ ಹೊಂದಿದ್ದ `ಮಹಿ~ ಪಡೆಗೆ ಬಹಳಷ್ಟು ಹೊತ್ತಿನವರೆಗೆ ಚಡಪಡಿಕೆ. ಡರೆನ್ ಬ್ರಾವೊ ಹಾಗೂ ಮರ್ಲಾನ್ ಸ್ಯಾಮುಯಲ್ಸ್ ತೊಡಕಾಗಿ ನಿಂತರು. ಇವರಿಬ್ಬರ ನಡುವಣ ಐದನೇ ವಿಕೆಟ್ ಜೊತೆಯಾಟ ಮುರಿದಾಗಲೇ ಸಮಾಧಾನದ ನಿಟ್ಟುಸಿರು. ಮತ್ತೆ ಬ್ಯಾಟಿಂಗ್ ಮಾಡುವ ಅಗತ್ಯ ಎದುರಾಗುವುದಿಲ್ಲ ಎನ್ನುವ ಭರವಸೆಗೂ ಬಲ. ಆದರೂ ಡರೆನ್ ಸಾಮಿ ನೇತೃತ್ವದ ತಂಡವು ದಿಟ್ಟ ಹೋರಾಟ ನಡೆಸಲು ಹಿಂದೇಟು ಹಾಕಲಿಲ್ಲ.ಭಾರತಕ್ಕೆ ಗೆಲುವು ಕಟ್ಟಿಟ್ಟ ಬುತ್ತಿಯೆಂದು ಗೊತ್ತಿದ್ದರೂ, ಅಷ್ಟು ಸುಲಭವಾಗಿ ಪಂದ್ಯ ಬಿಟ್ಟುಕೊಡಲಿಲ್ಲ ವಿಂಡೀಸ್. ಮೊದಲ ಇನಿಂಗ್ಸ್ ತಪ್ಪುಗಳನ್ನೆಲ್ಲಾ ತಿದ್ದಿಕೊಂಡು ಪುಟಿದೆದ್ದು ನಿಂತಿತು. ಆದ್ದರಿಂದ ಇನಿಂಗ್ಸ್ ವಿಜಯದ ಕನಸು ಕಂಡಿದ್ದ ಆತಿಥೇಯರು ದೀರ್ಘಕಾಲ ಬೌಲಿಂಗ್ ದಾಳಿ ನಡೆಸಿ ಬೆವರಿದರು. ಅದೃಷ್ಟ ಎನ್ನುವಂತೆ ಪ್ರಗ್ಯಾನ್ ಓಜಾ ಎಸೆತದಲ್ಲಿ ಬ್ರಾವೊ ಬ್ಯಾಟ್‌ಗೆ ಸವರಿದ್ದ ಚೆಂಡನ್ನು ಸ್ಲಿಪ್‌ನಲ್ಲಿ ರಾಹುಲ್ ದ್ರಾವಿಡ್ ಆಕರ್ಷಕವಾಗಿ ಹಿಡಿತಕ್ಕೆ ಪಡೆದರು. ಆನಂತರ ಎಲ್ಲವೂ ಮಹೇಂದ್ರ ಸಿಂಗ್ ದೋನಿ ಬಯಸಿದಂತೆ ನಡೆಯಿತು. ಭಾರತವು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಐತಿಹಾಸಿಕ ವಿಜಯವನ್ನೂ ಪಡೆಯಿತು!ಮೂವತ್ತಾರು ವರ್ಷಗಳ ನಿರೀಕ್ಷೆಯೂ ಕೊನೆ. ಈಡನ್‌ನಲ್ಲಿ ಇಷ್ಟೊಂದು ದೀರ್ಘ ಕಾಲದಿಂದ ವಿಂಡೀಸ್ ವಿರುದ್ಧ ಟೆಸ್ಟ್‌ನಲ್ಲಿ ಜಯ ಸಿಕ್ಕಿಲ್ಲವೆನ್ನುವ ನಿರಾಸೆಯೂ ಮರೆಯಿತು. `ಟೈಗರ್~ ಮನ್ಸೂರ್ ಅಲಿ ಖಾನ್ ಪಟೌಡಿ ನಾಯಕತ್ವದಲ್ಲಿ ಆಡಿದ್ದ (1974ರ ಡಿಸೆಂಬರ್ 27-1975ರ ಜನವರಿ 1) ಟೆಸ್ಟ್‌ನಲ್ಲಿ ಪಡೆದಿದ್ದ 85 ರನ್‌ಗಳ ಅಂತರದ ಯಶಸ್ಸಿನ ನಂತರ ಭಾರತದ ಪಾಲಿಗೆ ಬಂದಿದ್ದು ಸೋಲು ಹಾಗೂ ಡ್ರಾ ಮಾತ್ರ.ಅಂಥ ನೀರಸ ಇತಿಹಾಸ ಮುಂದುವರಿಯಲು ಬಿಡಲಿಲ್ಲ. ಪಟೌಡಿ ಪಡೆಯು ಸಾಧಿಸಿದ್ದಕ್ಕಿಂತ ದೊಡ್ಡ ಜಯವನ್ನು ಕೆರಿಬಿಯನ್ನರ ವಿರುದ್ಧ ಇಲ್ಲಿ `ಮಹಿ~ ಬಳಗ ದಾಖಲಿಸಿತು. ಅದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0ಯಿಂದ ವಿಜಯ.ಭಾರತವು ಕೇವಲ ಏಳು ವಿಕೆಟ್‌ಗಳನ್ನು ಕಳೆದುಕೊಂಡು ಪೇರಿಸಿಟ್ಟ 631 ರನ್ ಮೊತ್ತ ವೆಸ್ಟ್ ಇಂಡೀಸ್‌ಗೆ ಸವಾಲಿನದ್ದಾಯಿತು. ಒಂದರ ಹಿಂದೊಂದು ಇನಿಂಗ್ಸ್ ಆಡಿಯೂ ಈ ಮೊತ್ತವನ್ನು ಚುಕ್ತಾ ಮಾಡಲು ಸಾಧ್ಯವಾಗಲಿಲ್ಲ. ಪ್ರಥಮ ಇನಿಂಗ್ಸ್‌ನಲ್ಲಿ 153 ರನ್‌ಗೆ ಮುಗ್ಗರಿಸಿ, 478 ರನ್‌ಗಳ ಹಿನ್ನಡೆ ಅನುಭವಿಸಿದ್ದ ಪ್ರವಾಸಿಗಳು ಆನಂತರ ಚೇತರಿಕೆಯ ಆಟವಾಡಿದ್ದನ್ನು ಮೆಚ್ಚಲೇಬೇಕು. ಬುಧವಾರದ ಆಟದ ಕೊನೆಗೆ ಮೂರು ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದ್ದ ಅದರ ಮುಂದೆ ಸವೆಸಲು ಕಷ್ಟವಾಗುವಂಥ (283 ರನ್) ಹಾದಿ ಬಾಕಿ ಇತ್ತು.ಬೇಗ ಕೈಚೆಲ್ಲಿ ನಿಲ್ಲಲಿಲ್ಲ. ಜೊತೆಯಾಟಗಳನ್ನು ಬೆಳೆಸುವ ಸಾಹಸ ಮಾಡಿದರು. ಬ್ರಾವೊ ಅವರಂತೂ ಎರಡು ಬೆಲೆಯುಳ್ಳ ಜೊತೆಯಾಟದಲ್ಲಿ ಭಾಗಿ. ಶಿವನಾರಾಯಣ ಚಂದ್ರಪಾಲ್ ಜೊತೆ ನಾಲ್ಕನೇ ವಿಕೆಟ್‌ನಲ್ಲಿ 108 (202 ಎಸೆತ) ಹಾಗೂ ಸ್ಯಾಮುಯಲ್ಸ್ ಅವರೊಂದಿಗೆ ಐದನೇ ವಿಕೆಟ್‌ನಲ್ಲಿ 132 (158 ಎ.) ರನ್ ಕಲೆಹಾಕಿದರು. ಆದ್ದರಿಂದಲೇ ವಿಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ 463 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಆದರೂ ಅದು ಆತಿಥೇಯರನ್ನು ಮತ್ತೆ ಬ್ಯಾಟಿಂಗ್ ಮಾಡುವಂಥ ಒತ್ತಡಕ್ಕೆ ಸಿಲುಕಿಸುವಲ್ಲಿ ವಿಫಲವಾಯಿತು.ಯುವ ವೇಗಿ ಉಮೇಶ್ ಯಾದವ್ (80ಕ್ಕೆ4) ದಾಳಿಯೇ ಸಾಮಿ ಬಳಗಕ್ಕೆ ಮಾರಕ. ಇನ್ನೊಬ್ಬ ವೇಗಿ ಇಶಾಂತ್ ಶರ್ಮ ಹಾಗೂ ಸ್ಪಿನ್ನರ್‌ಗಳಾದ ಪ್ರಗ್ಯಾನ್ ಓಜಾ ಹಾಗೂ ರವಿಚಂದ್ರನ್ ಅಶ್ವಿನ್ ಅವರೂ ತಲಾ ಎರಡು ವಿಕೆಟ್ ಕಬಳಿಸುವ ಮೂಲಕ ಇನಿಂಗ್ಸ್ ಗೆಲುವಿನ ಆಸೆ ಈಡೇರುವಂತೆ ಮಾಡಿದರು. ಚಂದ್ರಪಾಲ್ (47; 133 ನಿ., 94 ಎ., 6 ಬೌಂಡರಿ) ಅಪಾಯಕಾರಿಯಾಗಿ ಬೆಳೆಯದಂತೆ ತಡೆದ ಶ್ರೇಯ ಪಡೆದಿದ್ದು ಉಮೇಶ್.

 

ಅಶ್ವಿನ್ ಕೂಡ ಸ್ಯಾಮುಯಲ್ಸ್ (84; 136 ನಿ., 111 ಎ., 13 ಬೌಂಡರಿ, 1 ಸಿಕ್ಸರ್) ಅವರು ಎಲ್‌ಬಿಡಬ್ಲ್ಯು ಬಲೆಗೆ ಬೀಳುವಂತೆ ಮಾಡಿದ್ದು ಮಹತ್ವದ ಘಟ್ಟ. ಆದರೆ ಶತಕ ಸಂಭ್ರಮದೊಂದಿಗೆ ಕ್ರೀಸ್‌ನಲ್ಲಿ ಗಟ್ಟಿಯಾಗಿದ್ದ ಬ್ರಾವೊ (136; 321 ನಿ., 230 ಎ., 16 ಬೌಂಡರಿ, 4 ಸಿಕ್ಸರ್) ಅವರನ್ನು ಪೆವಿಲಿಯನ್‌ಗೆ ಅಟ್ಟಲು ಓಜಾ `ಸ್ಪಿನ್ ಮೋಡಿ~ ಮಾಡಬೇಕಾಯಿತು.ಬ್ರಾವೊ ಕೆಣಕಿದ ಚೆಂಡನ್ನು ದ್ರಾವಿಡ್ ಕ್ಯಾಚ್ ಪಡೆದ ರೀತಿಯಂತೂ ಆಕರ್ಷಕ. ಕಾರ್ಲಟನ್ ಬಗ್ ಕೂಡ ರಾಹುಲ್‌ಗೆ ಸ್ಲಿಪ್‌ನಲ್ಲಿ ಚೆಂಡನ್ನು ಒಪ್ಪಿಸಿದರು. ವಿಂಡೀಸ್ ನಾಯಕ ಸಾಮಿ (32; 37 ನಿ., 28 ಎ., 3 ಸಿಕ್ಸರ್) ಅವರು ಇನಿಂಗ್ಸ್ ಸೋಲಿನ ಕಳಂಕ ತಮ್ಮ ತಂಡಕ್ಕೆ ಅಂಟದಂತೆ ತಡೆಯಲು ಮಾಡಿದ ಕೊನೆಯ ಹಂತದ ಪ್ರಯತ್ನವೂ ವಿಫಲವಾಯಿತು!ಸ್ಕೋರ್ ವಿವರ

ಭಾರತ: ಪ್ರಥಮ ಇನಿಂಗ್ಸ್ 151.2 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 631 ಡಿಕ್ಲೇರ್ಡ್‌

ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 48 ಓವರುಗಳಲ್ಲಿ 153

ವೆಸ್ಟ್ ಇಂಡೀಸ್: ಎರಡನೇ ಇನಿಂಗ್ಸ್ 126.3 ಓವರುಗಳಲ್ಲಿ 463


(ಬುಧವಾರದ ಆಟದಲ್ಲಿ: 62 ಓವರುಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 195)

ಡರೆನ್ ಬ್ರಾವೊ ಸಿ ರಾಹುಲ್ ದ್ರಾವಿಡ್ ಬಿ ಪ್ರಗ್ಯಾನ್ ಓಜಾ  136

ಶಿವನಾರಾಯಣ ಚಂದ್ರಪಾಲ್ ಬಿ ಉಮೇಶ್ ಯಾದವ್  47

ಮರ್ಲಾನ್ ಸ್ಯಾಮುಯಲ್ಸ್ ಎಲ್‌ಬಿಡಬ್ಲ್ಯು ಬಿ ರವಿಚಂದ್ರನ್ ಅಶ್ವಿನ್  84

ಕಾರ್ಲ್‌ಟನ್ ಬಗ್ ಸಿ ರಾಹುಲ್ ದ್ರಾವಿಡ್ ಬಿ ಪ್ರಗ್ಯಾನ್ ಓಜಾ  03

ಡರೆನ್ ಸಾಮಿ ಬಿ ಉಮೇಶ್ ಯಾದವ್  32

ಕೆಮರ್ ರೋಷ್ ಬಿ ರವಿಚಂದ್ರನ್ ಅಶ್ವಿನ್  01

ಫಿಡೆಲ್ ಎಡ್ವರ್ಡ್ಸ್  ಔಟಾಗದೆ  15

ದೇವೇಂದ್ರ ಬಿಶೋ ಬಿ ಉಮೇಶ್ ಯಾದವ್  00

ಇತರೆ: (ಬೈ-9, ಲೆಗ್‌ಬೈ-4, ವೈಡ್-1)  14

ವಿಕೆಟ್ ಪತನ: 1-23 (ಕ್ರೇಗ್ ಬ್ರಾಥ್‌ವೈಟ್; 4.2), 2-116 (ಆ್ಯಡ್ರಿನ್ ಭರತ್; 32.4), 3-161 (ಕ್ರಿಕ್ ಎಡ್ವರ್ಡ್ಸ್; 50.1), 4-269 (ಶಿವನಾರಾಯಣ ಚಂದ್ರಪಾಲ್; 83.5), 5-401 (ಡರೆನ್ ಬ್ರಾವೊ; 110.1), 6-411 (ಕಾರ್ಲ್‌ಟನ್ ಬಗ್; 116.1), 7-417 (ಮರ್ಲಾನ್ ಸ್ಯಾಮುಯಲ್ಸ್; 117.5), 8-421 (ಕೆಮರ್ ರೋಷ್; 121.4), 9-463 (ಡರೆನ್ ಸಾಮಿ; 126.2), 10-463 (ದೇವೇಂದ್ರ ಬಿಶೋ; 126.3).

ಬೌಲಿಂಗ್: ಉಮೇಶ್ ಯಾದವ್ 17.3-1-80-4, ಇಶಾಂತ್ ಶರ್ಮ 25-4-95-2, ಪ್ರಗ್ಯಾನ್ ಓಜಾ 32-5-104-2, ರವಿಚಂದ್ರನ್ ಅಶ್ವಿನ್ 40-4-137-2, ಯುವರಾಜ್ ಸಿಂಗ್ 3-0-14-0, ವೀರೇಂದ್ರ ಸೆಹ್ವಾಗ್ 9-2-20-0 (ವೈಡ್-1).

ಫಲಿತಾಂಶ: ಭಾರತಕ್ಕೆ ಇನಿಂಗ್ಸ್ ಹಾಗೂ 15 ರನ್‌ಗಳ ಗೆಲುವು; ಮೂರು ಟೆಸ್ಟ್‌ಗಳ ಸರಣಿಯಲ್ಲಿ 2-0ಯಿಂದ ಮುನ್ನಡೆ.

ಪಂದ್ಯ ಶ್ರೇಷ್ಠ: ವಿ.ವಿ.ಎಸ್.ಲಕ್ಷ್ಮಣ್ (ಭಾರತ).

ಮೂರನೇ ಹಾಗೂ ಅಂತಿಮ ಟೆಸ್ಟ್: ವಾಂಖೇಡೆ ಕ್ರೀಡಾಂಗಣ, ಮುಂಬೈ (ನವೆಂಬರ್ 22ರಿಂದ 26ರವರೆಗೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry