ಭಾನುವಾರ, ಡಿಸೆಂಬರ್ 15, 2019
21 °C

ಈಡೇರದ ಗುರಿ...

ಮಹಮ್ಮದ್ ನೂಮಾನ್ Updated:

ಅಕ್ಷರ ಗಾತ್ರ : | |

ಈಡೇರದ ಗುರಿ...

ಈ ಬಾರಿಯೂ ಕರ್ನಾಟಕದ ಪಯಣ ನಿಗದಿತ ಗುರಿ ತಲುಪುವ ಮುನ್ನವೇ ಕೊನೆಗೊಂಡಿದೆ. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯ ತಂಡ ಉತ್ತಮ ಆರಂಭ ಪಡೆದಿತ್ತು. ಆದರೆ ಟೂರ್ನಿ ಮುಂದುವರಿದಂತೆ, ಆಟಗಾರರ ಪ್ರದರ್ಶನ ನಿಧಾನವಾಗಿ ಬಲ ಕಳೆದುಕೊಳ್ಳುತ್ತಾ ಸಾಗಿತು. ಕ್ವಾರ್ಟರ್ ಫೈನಲ್‌ನಲ್ಲಿ ತಂಡ ಸಂಪೂರ್ಣವಾಗಿ ನೆಲಕಚ್ಚಿತು.13 ವರ್ಷಗಳ ಬಿಡುವಿನ ಬಳಿಕ ರಣಜಿ ಟ್ರೋಫಿ ಗೆಲ್ಲುವ ಅದಮ್ಯ ಹಂಬಲ ಕರ್ನಾಟಕ ತಂಡದ್ದಾಗಿತ್ತು. ಅದು ಕೈಗೂಡಲಿಲ್ಲ. ಹರಿಯಾಣ ವಿರುದ್ಧದ ಎಂಟರಘಟ್ಟದ ಪಂದ್ಯದಲ್ಲಿ ಎದುರಾದ ನಿರಾಸೆಯನ್ನು ನೆನಪಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಕರುನಾಡಿನ ತಂಡ ಒಂದು ರೀತಿಯಲ್ಲಿ ಈ ಸೋಲನ್ನು ತಾನಾಗಿಯೇ ಆಹ್ವಾನಿಸಿದಂತಿತ್ತು.ಯಾವುದೇ ಕೋನದಿಂದ ನೋಡಿದರೂ ಕ್ವಾರ್ಟರ್ ಫೈನಲ್‌ನಲ್ಲಿ ಗಣೇಶ್ ಸತೀಶ್ ಬಳಗವೇ ಗೆಲ್ಲುವ `ಫೇವರಿಟ್~ ಎನಿಸಿಕೊಂಡಿತ್ತು. ಆದರೆ ಕ್ರಿಕೆಟ್‌ನಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದನ್ನು ಹರಿಯಾಣ ತೋರಿಸಿಕೊಟ್ಟಿದೆ. ಎಲ್ಲರೂ ಕಡೆಗಣಿಸಿದ್ದ ತಂಡವೊಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೀಡಿದ್ದ ಪ್ರದರ್ಶನ ಚೇತೋಹಾರಿಯಾಗಿತ್ತು.

ಹರಿಯಾಣ ಬಹಳ ಪ್ರಯಾಸದಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ತಂಡ. ಈ ಕಾರಣ ಅಮಿತ್ ಮಿಶ್ರಾ ಬಳಗವನ್ನು ಅಷ್ಟು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂಬ ಭಾವನೆಯೂ ಕರ್ನಾಟಕದ ಆಟಗಾರರ ಮನದಲ್ಲಿ ಸ್ಥಾನ ಪಡೆದಿರುವ ಸಾಧ್ಯತೆಯಿದೆ. ಹರಿಯಾಣದ ಬೌಲಿಂಗ್ ದಾಳಿಯನ್ನು ಸುಲಭದಲ್ಲಿ ಎದುರಿಸಿ ನಿಲ್ಲಬಹುದು ಎಂಬ ಅತಿಯಾದ ಆತ್ಮವಿಶ್ವಾಸ ಬ್ಯಾಟಿಂಗ್ ವೇಳೆ ಕಂಡುಬಂತು.ಇದು ತಂಡಕ್ಕೆ ಮುಳುವಾಗಿ ಪರಿಣಮಿಸಿತು. ಮೊದಲ ದಿನದಾಟದಲ್ಲೇ ಪಂದ್ಯದ ಭವಿಷ್ಯ ಹೆಚ್ಚುಕಡಿಮೆ ನಿರ್ಧಾರವಾಗಿತ್ತು. ಕರ್ನಾಟಕ 151 ರನ್‌ಗಳಿಗೆ ಆಲೌಟಾಗಿದೆ ಎಂಬುದನ್ನು ಈ ತಂಡದ ಬ್ಯಾಟಿಂಗ್ ಶಕ್ತಿಯನ್ನು ಅರಿತಿದ್ದ ಯಾರಿಗೂ ನಂಬಲು ಸಾಧ್ಯವಾಗಿರಲಿಲ್ಲ. 40 ರನ್‌ಗಳಿಗೆ ಎಂಟು ವಿಕೆಟ್ ಪಡೆದ ಹರ್ಷಲ್ ಪಟೇಲ್ ಎಂಬ `ಅಪರಿಚಿತ~ ಬೌಲರ್‌ನ್ನು ಕರ್ನಾಟಕ ಒಂದೇ ದಿನದಲ್ಲಿ `ಹೀರೊ~ ಆಗಿ ಬೆಳೆಸಿತು.ಮೊದಲ ಇನಿಂಗ್ಸ್‌ನಲ್ಲಿ ಬೇಗನೇ ಆಲೌಟ್ ಆಗಿದ್ದ ತಂಡದಿಂದ ಬಳಿಕ ಮರುಹೋರಾಟ ನಿರೀಕ್ಷಿಸಲಾಗಿತ್ತು. ಆದರೆ ಬ್ಯಾಟ್ಸ್‌ಮನ್‌ಗಳು ಎರಡನೇ ಇನಿಂಗ್ಸ್‌ನಲ್ಲೂ ತಪ್ಪುಗಳನ್ನು ಪುನರಾವರ್ತಿಸಿದ್ದು ಅಚ್ಚರಿಯೇ ಸರಿ. ನಿಮ್ಮ ಬೌಲಿಂಗ್ ಚೆನ್ನಾಗಿತ್ತೋ ಅಥವಾ ಕರ್ನಾಟಕ ಕಳಪೆ ಬ್ಯಾಟಿಂಗ್ ಮಾಡಿದೆಯೋ ಎಂದು ಮೊದಲ ದಿನದಾಟದ ಬಳಿಕ ಹರ್ಷಲ್ ಅವರನ್ನು ಕೇಳಿದಾಗ, `ಎರಡೂ ಜೊತೆಯಾಗಿ ನಡೆಯಿತು~ ಎನ್ನುತ್ತಾ ನಗು ಬೀರಿದ್ದರು.ಟೂರ್ನಿಯ ಲೀಗ್ ಹಂತ ಅರ್ಧ ಹಾದಿ ಸವೆಸಿದಾಗ ಕರ್ನಾಟಕ ಕೆಲವು ಪ್ರಮುಖರನ್ನು ಕಳೆದುಕೊಂಡದ್ದು ಕೂಡಾ ಹಿನ್ನಡೆ ಉಂಟುಮಾಡಿತು. ಅರ್. ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಎಸ್. ಅರವಿಂದ್ ಮತ್ತು ಮನೀಷ್ ಪಾಂಡೆ ಅಲಭ್ಯರಾದದ್ದು ಸೋಲಿಗೆ ಒಂದು ಕಾರಣ. ಕೋಚ್ ಕೆ. ಜಸ್ವಂತ್ ಕೂಡಾ ಇದೇ ಕಾರಣವನ್ನು ಮುಂದಿಟ್ಟಿದ್ದಾರೆ. `ಈ ನಾಲ್ಕು ಮಂದಿ ಅಂತಿಮ ಇಲೆವೆನ್‌ನಲ್ಲಿ ಇರಬೇಕಾಗಿದ್ದಂತಹ ಆಟಗಾರರು. ಇವರ ಅನುಪಸ್ಥಿತಿ ದೊಡ್ಡ ವ್ಯತ್ಯಾಸಕ್ಕೆ ಕಾರಣವಾಯಿತು~ ಎಂದಿದ್ದಾರೆ.ವಿನಯ್ ಮತ್ತು ಮಿಥುನ್ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡದ ಜೊತೆಗೆ ಇದ್ದರೂ ಮೊದಲ ಎರಡು ಟೆಸ್ಟ್‌ಗಳಲ್ಲಿ ಪ್ರೇಕ್ಷಕರಾಗಿಯೇ ಉಳಿದುಕೊಂಡಿದ್ದರು. ಇನ್ನುಳಿದ ಎರಡು ಟೆಸ್ಟ್‌ಗಳಲ್ಲಿ ಇವರಿಗೆ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಲಭಿಸಬಹುದು ಎಂಬುದಕ್ಕೆ ಯಾವುದೇ ಖಚಿತತೆ ಇಲ್ಲ. ಈ ಬೌಲರ್‌ಗಳು ಕರ್ನಾಟಕ ರಣಜಿ ತಂಡಕ್ಕೆ ಬಲ ನೀಡಿದ್ದರೆ ಚೆನ್ನಾಗಿತ್ತು.ಸೋಲಿಗೆ ಹಲವು ಕಾರಣಗಳನ್ನು ಹುಡುಕಬಹುದು. ಆದರೆ ಅದರಿಂದ ಯಾವುದೇ ಫಲವಿಲ್ಲ. ಟ್ರೋಫಿಯ ಕನಸು ಈಗಾಗಲೇ ಕೈಜಾರಿದೆ. ಇನ್ನು ಭವಿಷ್ಯದ ಯೋಜನೆಗಳತ್ತ ಗಮನ ಹರಿಸುವುದು ಅನಿವಾರ್ಯ.ಏನೇ ಇರಲಿ, ಈ ರಣಜಿ ಋತುವಿನಲ್ಲಿ ಕರ್ನಾಟಕದ ಪರ `ಹೀರೊ~ ಎನಿಸಿದ್ದು ಸ್ಟುವರ್ಟ್ ಬಿನ್ನಿ. ಕೆಲವು ಪಂದ್ಯಗಳಲ್ಲಿ ಅವರ ಆಲ್‌ರೌಂಡ್ ಆಟ ಇಲ್ಲದೇ ಇರುತ್ತಿದ್ದಲ್ಲಿ, ತಂಡದ ಕ್ವಾರ್ಟರ್ ಫೈನಲ್ ಹಾದಿ ಅಷ್ಟು ಸುಲಭ ಎನಿಸುತ್ತಿರಲಿಲ್ಲ. ಒಟ್ಟು 742 ರನ್ ಕಲೆಹಾಕಿದ ಬಿನ್ನಿ ರಾಜ್ಯ ತಂಡದ ಪರ ಗರಿಷ್ಠ ಮೊತ್ತ ಕಲೆಹಾಕಿದ ಆಟಗಾರ ಎನಿಸಿದ್ದಾರೆ.67.45ರ ಸರಾಸರಿಯಲ್ಲಿ ರನ್ ಗಳಿಸಿದ ಅವರು ತಲಾ ಮೂರು ಶತಕ ಹಾಗೂ ಅರ್ಧಶತಕ ತಮ್ಮ ಹೆಸರಲ್ಲಿ ಬರೆಯಿಸಿಕೊಂಡಿದ್ದಾರೆ. 20 ವಿಕೆಟ್‌ಗಳನ್ನೂ ಬಿನ್ನಿ ಪಡೆದರು. ಕೆ.ಬಿ. ಪವನ್ (659), ಗಣೇಶ್ ಸತೀಶ್ (583), ಅಮಿತ್ ವರ್ಮಾ (545) ಮತ್ತು ರಾಬಿನ್ ಉತ್ತಪ್ಪ (505) ಅವರು ಐನೂರಕ್ಕೂ ಅಧಿಕ ರನ್ ಕಲೆಹಾಕಿದ ಇತರ ಬ್ಯಾಟ್ಸ್‌ಮನ್‌ಗಳು.

ಅತ್ಯಧಿಕ ವಿಕೆಟ್ ಪಡೆದ ಶ್ರೇಯವನ್ನು ಕೆ.ಪಿ. ಅಪ್ಪಣ್ಣ (28 ವಿಕೆಟ್) ತಮ್ಮದಾಗಿಸಿಕೊಂಡರು. ಮೊದಲ ಎರಡು ಪಂದ್ಯಗಳಲ್ಲಿ ತೋರಿದ ಅದ್ಭುತ ಪ್ರದರ್ಶನವನ್ನು ಅಪ್ಪಣ್ಣ ಬಳಿಕ ಪುನರಾವರ್ತಿಸದೇ ಇದ್ದುದು ಹಿನ್ನಡೆ ಉಂಟುಮಾಡಿತು.ರಾಬಿನ್ ಅಬ್ಬರ ಒಂದೇ ಶತಕಕ್ಕೆ ಸೀಮಿತಗೊಂಡದ್ದು ನಿರಾಸೆಯ ವಿಚಾರ. ಮೂರು ವರ್ಷಗಳ ಬಿಡುವಿನ ಬಳಿಕ ರಣಜಿ ತಂಡಕ್ಕೆ ಮರಳಿದ ಎನ್.ಸಿ. ಅಯ್ಯಪ್ಪ ಗಮನಾರ್ಹ ಪ್ರದರ್ಶನ ನೀಡಿದರು. ಅವರು 14 ವಿಕೆಟ್‌ಗಳನ್ನು ಪಡೆಯಲು ಯಶಸ್ವಿಯಾದರು.

ಕಳೆದ ವರ್ಷ ಸೆಮಿಫೈನಲ್‌ನಲ್ಲಿ ಬರೋಡಾ ಎದುರು ಪರಾಭವ ಎದುರಿಸಿದ್ದ ಬಳಿಕ ಕರ್ನಾಟಕ `ಕೆಟ್ಟ ಪಿಚ್ ಸೋಲಿಗೆ ಕಾರಣ~ ಎಂದಿತ್ತು.ಆದರೆ ಈ ಬಾರಿ ತವರು ನೆಲದಲ್ಲಿ ನಡೆದ ಪಂದ್ಯದಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಆದ್ದರಿಂದ ಪಿಚ್ ಕುರಿತು ಟೀಕೆ ಮಾಡುವಂತಿಲ್ಲ. ರಣಜಿ ಟ್ರೋಫಿಗಾಗಿನ ಕಾಯುವಿಕೆ ಈ ಬಾರಿಯಾದರೂ ಕೊನೆಗೊಳ್ಳಬಹುದು ಎಂದು ಭಾವಿಸಲಾಗಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ಪ್ರತಿಷ್ಠಿತ ಟ್ರೋಫಿಗೆ ಇನ್ನೆಷ್ಟು ದಿನ ಕಾಯಬೇಕೋ?... 

ಪ್ರತಿಕ್ರಿಯಿಸಿ (+)