ಮಂಗಳವಾರ, ಮೇ 24, 2022
31 °C

ಈಡೇರದ ಬೇಡಿಕೆ: ನಿಲ್ಲದ 108 ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಲಸ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಆರೋಗ್ಯ ಕವಚ (108) ನೌಕರರ ಸಂಘದ ಸದಸ್ಯರು ನಡೆಸುತ್ತಿರುವ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ.ಪ್ರತಿಭಟನೆ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಬಿ.ಎಸ್.ರಾಮಪ್ರಸಾದ್ ಅವರು ಸಂಘದ ಸದಸ್ಯರು ಮತ್ತು ಜಿವಿಕೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಚರ್ಚೆ ನಡೆಸಿದ್ದರು. ಕೆಲಸ ಕಾಯಂಗೊಳಿಸುವುದು ಮತ್ತು ಜಿವಿಕೆ ಸಂಸ್ಥೆಯನ್ನು ಯೋಜನೆಯಿಂದ ಹೊರಗಿಡುವ ವಿಷಯವನ್ನು ಹೊರತುಪಡಿಸಿ ಇತರೆ ಎಲ್ಲ ಬೇಡಿಕೆಗಳನ್ನೂ ಈಡೇರಿಸಲು ಅವರು ಒಪ್ಪಿಕೊಂಡಿದ್ದರು. ಆದರೆ ಬೇಡಿಕೆ ಈಡೇರಿಸುವ ಭರವಸೆಯನ್ನು ಲಿಖಿತ ರೂಪದಲ್ಲಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸದಸ್ಯರು ಪ್ರತಿಭಟನೆ ಮುಂದುವರೆಸಿದ್ದಾರೆ.`ಮಾತುಕತೆ ನಡೆದ ದಿನದಿಂದಲೇ ಸರ್ಕಾರ ಕೈಗೊಂಡ ನಿರ್ಧಾರದ ವಿವರಗಳನ್ನು ಲಿಖಿತ ರೂಪದಲ್ಲಿ ನೀಡಬೇಕೆಂದು ಒತ್ತಾಯಿಸಿದ್ದೆವು. ಆದರೂ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ನೀಡದೆ ನೌಕರರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ಈ ಬಗ್ಗೆ ಮತ್ತೊಮ್ಮೆ ಮನವಿ ಮಾಡಲು ಸೋಮವಾರ ರಾತ್ರಿವರೆಗೂ ಆರೋಗ್ಯ ಇಲಾಖೆ ಆಯುಕ್ತರ ಕಚೇರಿ ಬಳಿ ಕಾಯ್ದರೂ, ದೂರವಾಣಿ ಕರೆ ಮಾಡಿದರೂ ಅವರು ಸ್ಪಂದಿಸಿಲ್ಲ.ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದೇವೆ~ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಹೇಳಿದರು.ಶಾಸಕ ಗೂಳಿಹಟ್ಟಿ ಬೆಂಬಲ:
ಹೋರಾಟಕ್ಕೆ ಬೆಂಬಲ ನೀಡಿರುವ ಶಾಸಕ ಗೂಳಿಹಟ್ಟಿ ಶೇಖರ್, `ನೌಕರರ ಹೋರಾಟ ನ್ಯಾಯಯುತವಾಗಿದ್ದು, ಸರ್ಕಾರ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಪ್ರತಿಭಟನೆಗೂ ಮುನ್ನವೇ ಶೇ 10ರಷ್ಟು ವೇತನ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿತ್ತು. ವೇತನ ಪ್ರಮಾಣವನ್ನು ಶೇ 25ಕ್ಕೆ ಹೆಚ್ಚಿಸಬೇಕು. ನೌಕರರಿಗೆ ಅವರ ಸ್ವಂತ ಜಿಲ್ಲೆಯಲ್ಲೇ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು~ ಎಂದರು.`ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿರುವ ಸರ್ಕಾರ ಆ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡಲು ಏನು ಅಡ್ಡಿ~ ಎಂದು ಅವರು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.