ಈರಣ್ಣನವರ ‘ಹನಿ ನೀರು’ ಸದ್ಬಳಕೆ ಕಹಾನಿ

7
ಪ್ರಜಾವಾಣಿ ವಿಶೇಷ : ಕೃಷಿ– ಋಷಿ

ಈರಣ್ಣನವರ ‘ಹನಿ ನೀರು’ ಸದ್ಬಳಕೆ ಕಹಾನಿ

Published:
Updated:
ಈರಣ್ಣನವರ ‘ಹನಿ ನೀರು’ ಸದ್ಬಳಕೆ ಕಹಾನಿ

ಗುಲ್ಬರ್ಗ:  ‘ಗುಲ್ಬರ್ಗದ ಎಂಎಸ್‌ಕೆ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆ ಕೆಲಸದ ವೈಖರಿ ಬೇಸರ ತರಿಸಿತ್ತು. ಹಲವು ದಿನ ಯೋಚಿಸಿದೆ. ಕೊನೆ­ಗೊಮ್ಮೆ ರಾಜೀನಾಮೆ ನೀಡಿ ಊರಿಗೆ ಮರಳಿದೆ. ಪಿತ್ರಾರ್ಜಿತ ಹಾಗೂ ಸ್ವಯಾ­ರ್ಜಿತ ಹೊಲದಲ್ಲಿ ಮೈಮುರಿದು ದುಡಿದೆ. ಅದರ ಫಲ ನಿಮ್ಮ ಕಣ್ಣ ಮುಂದಿದೆ’– ರೈತ ಈರಣ್ಣ ಮಲ್ಲಾಪುರ ಅವರ ಆತ್ಮವಿಶ್ವಾಸದ ಮಾತುಗಳಿವು.ಅಫಜಲಪುರ – ಗುಲ್ಬರ್ಗ ತಾಲ್ಲೂ­ಕಿನ ಗಡಿಭಾಗದ ಸುಮಾರು 12 ಎಕರೆಯಲ್ಲಿ ವೈವಿಧ್ಯಮಯ ಬೆಳೆಗಳು ನಳನಳಿಸುತ್ತಿವೆ. ಈ ಗ್ರಾಮದಲ್ಲಿ ನೀರಾ­ವರಿ ಸೌಲಭ್ಯ ಇಲ್ಲ. ಎಲ್ಲೆಡೆ ಬೀಳುಬಿದ್ದ ಭೂಮಿ ಕಣ್ಣಿಗೆ ರಾಚುತ್ತದೆ. ಕೆಲವರು ಮಾತ್ರ ಬಂದಷ್ಟು ಬರಲಿ ಎಂದು ತೊಗರಿ ಬೆಳೆದಿದ್ದಾರೆ. ಕೊಳವೆ­ಬಾವಿ ಕೊರೆಸಿದರೂ ಹನಿ ನೀರು ಉಕ್ಕುವು­ದಿಲ್ಲ. ಅಷ್ಟರ ಮಟ್ಟಿಗೆ ನೀರಿನ ಅಭಾವ ಗ್ರಾಮ ಹಾಗೂ ಸುತ್ತಲಿನ ಹೊಲಗಳ­ಲ್ಲಿದೆ. ಆದರೆ, ಈರಣ್ಣನ ಹೊಲದಲ್ಲಿ ಮಾತ್ರ ವರ್ಷಪೂರ್ತಿ ಹಸಿರು ತುಂಬಿರು­ತ್ತದೆ. ಅದು ಹೇಗೆ?ಹಿಂದೆಲ್ಲ ಈರಣ್ಣ ತೊಗರಿ ಬೆಳೆ ನಂಬಿದ್ದರು. ಬಂದಷ್ಟು ಬರಲಿ ಎಂಬುದು ಅವರ ಉದ್ದೇಶವಾಗಿತ್ತು. ನಂತರ ದಿನಗಳಲ್ಲಿ ಹೊಸ ಪ್ರಯೋಗ­ಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಶುರುಮಾಡಿದ್ದರು. ಗ್ರಾಮದ ಪ್ರಗತಿಪರ ರೈತರ ಹೊಲಗಳಿಗೆ ಭೇಟಿ ನೀಡಿದರು. ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕ ಇರಿಸಿಕೊಂ­ಡರು. ಈ ಭೇಟಿ ಹೊಸ ಸಾಧ್ಯತೆ ಹುಟ್ಟುಹಾಕಿತು.ಆಗ ಹೊಳೆದಿದ್ದೇ ಎರೆಹುಳು ಗೊಬ್ಬರ ಬಳಸುವ ವಿಧಾನ. ಹೊಲ­ದಲ್ಲಿ ಇದಕ್ಕಾಗಿ ಕೊಟ್ಟಿಗೆ ನಿರ್ಮಿಸಿದರು. ಹೊಲದ ತ್ಯಾಜ್ಯ, ಹಸುಗಳ ಸಗಣಿ, ಗಂಜಲ, ಊರಿನ ಕಸ ಎಲ್ಲ ಸೇರಿಸಿ ಗೊಬ್ಬರ ತಯಾರಿಕೆ ಆರಂಭವಾಯಿತು.ಇದೇ ವೇಳೆ, ಹೊಲದಲ್ಲಿ ತೆರೆದ­ಬಾವಿಯ ತಳಮಟ್ಟದಲ್ಲಿ ಸ್ವಲ್ಪ ನೀರಿತ್ತು. ಮೋಟಾರ್ ಅಳವಡಿಸಿ ನೀರು ಮೇಲೆತ್ತಿ ಬೆಳೆಗಳಿಗೆ ಹನಿಸಲು ಸಿದ್ಧತೆ ಮಾಡಿಕೊಂಡರು. ತೊಗರಿಗೆ ವಿದಾಯ ಹೇಳಿ ಕಬ್ಬು ಬೆಳೆಯತ್ತ ಚಿತ್ತ ಹರಿಸಿ­ದರು. ಕಡಿಮೆ ನೀರು ಲಭ್ಯವಿದ್ದ ಕಾರಣ ಹನಿ ನೀರಾವರಿ ಪದ್ಧತಿ ಅಳವಡಿಸಿದರು. ಇದರಿಂದ ಮೊದಲ ವರ್ಷ ಕಬ್ಬಿಗೆ ನೀರಿನ ಸಮಸ್ಯೆ ಉಂಟಾಗಲಿಲ್ಲ. ಒಟ್ಟು ಭೂಮಿಯ 5 ಎಕರೆಯಲ್ಲಿ ಹನಿ ನೀರಾವರಿ ಮೂಲಕ ಕಬ್ಬು ಬೆಳೆದರು. ಈಗ ವಾರ್ಷಿಕ 150 ಟನ್ ಕಬ್ಬು ಬೆಳೆಯುವ ಹಂತ ತಲುಪಿದ್ದಾರೆ.ಮರಳಿ ಯತ್ನವ ಮಾಡು: ಇನ್ನೊಂದೆಡೆ ಜಲಮೂಲಗಳಿಗಾಗಿ ಹೊಲದಲ್ಲಿ ಪ್ರಯತ್ನ ನಿರಂತರವಾಗಿಸಿದ್ದರು. ಕೊಳವೆ­ಬಾವಿ ಕೊರೆಸುವ ಹಲವು ಪ್ರಯತ್ನ ವಿಫಲವಾದರೂ ಚಿಂತಿಸಲಿಲ್ಲ. ಕೊನೆಗೂ ಆ ಪ್ರಯತ್ನ ಯಶಕಂಡಿತು. ಎರಡು ಕಡೆ ಅಂತರಗಂಗೆ ಉಕ್ಕಿದಳು. ಕೊಳವೆಬಾವಿಯ ನೀರನ್ನು ತೆರೆದ­ಬಾವಿಗೆ ತಿರುಗಿಸಿದರು. ಕರೆಂಟ್‌ ಇದ್ದಾಗ ಅಲ್ಲಿ ನೀರು ಸಂಗ್ರಹ­ವಾ­ಯಿತು. ಈ ನೀರಿನನ್ನು ಸಮರ್ಥವಾಗಿ ಬಳಸಲು ಹನಿ ನೀರಾವರಿ ಪದ್ಧತಿ ಸೂಕ್ತ.ಅದರಿಂದ ಹೆಚ್ಚು ಫಸಲು ಬೆಳೆಯ­ಬಹುದು ಎಂಬುದು ಅವರಿಗೆ ಮನವ­ರಿಕೆ­ಯಾಗಿತ್ತು. ಇದಕ್ಕಾಗಿ ಕಷ್ಟಪಟ್ಟು ಹಣ ಹೊಂದಿಸಿ ಹನಿ ನೀರಾವರಿ ಸಾಮಗ್ರ ಖರೀದಿಸಿದರು. 12 ಎಕರೆ ವಿಸ್ತಾರ ಪ್ರದೇಶಕ್ಕೆ ನೀರುಣಿಸುವ ವ್ಯವಸ್ಥೆ ಕಲ್ಪಿಸಿದರು. ಕಬ್ಬಿನ ಜತೆಗೆ ಹತ್ತಿ ಹಾಗೂ ಇತರ ವಾಣಿಜ್ಯ ಬೆಳೆ ಬೆಳೆಯುವುದು ಸಾಧ್ಯವಾಯಿತು. ಪ್ರಸ್ತುತ ವಾರ್ಷಿಕ 6 ಕ್ವಿಂಟಲ್ ಹತ್ತಿ ಕೈಸೇರುತ್ತಿದೆ.ಥರಾವರಿ ಬೆಳೆ: ಕಬ್ಬು, ಹತ್ತಿ ವರ್ಷ­ಕ್ಕೊಮ್ಮೆ ಕೈ ಸೇರುತ್ತವೆ. ಆದರೆ, ತುರ್ತು ಅಗತ್ಯಗಳಿಗೆ ಬೇಕಾದ ಹಣ ಹೊಂದಿ­ಸುವ ವಿಧಾನ ಅವರಲ್ಲಿದೆ. ಒಟ್ಟು ಜಮೀನಿನಲ್ಲಿ 1 ಎಕರೆಯನ್ನು ಅಲ್ಪಾ­ವಧಿ ಬೆಳೆಗೆ ಮೀಸಲಿಟ್ಟಿದ್ದಾರೆ. 2-–3 ತಿಂಗಳಿಗೆ ಫಸಲು ನೀಡುವ ಬೆಳೆಗಳನ್ನು ಬೆಳೆಯುತ್ತಾರೆ. ಟೊಮೆಟೊ, ಮೆಣಸಿನಕಾಯಿ, ಈರುಳ್ಳಿ ಮುಂತಾದ ಬೆಳೆ ಬೆಳೆದು ಹಣ ಮಾಡಿಕೊಳ್ಳುತ್ತಾರೆ.ಈ ಬಾರಿ ಹೊಸ ಪ್ರಯೋಗಕ್ಕೆ ಸಿದ್ಧತೆ ನಡೆಸಿದ್ದು, ಬೇಸಿಗೆ ಹಂಗಾಮಿನಲ್ಲಿ ಹೆಚ್ಚು ಬೇಡಿಕೆ ಇರುವ ಕಲ್ಲಂಗಡಿ ಬೆಳೆಯಲು ಸಿದ್ಧತೆ ಮಾಡಿಕೊಂಡಿ­ದ್ದಾರೆ. ಇದಕ್ಕಾಗಿ ಮಣ್ಣಿನ ಒಡ್ಡಿನ ಮೇಲೆ ಪ್ಲಾಸ್ಟಿಕ್ ಹಾಳೆಹಾಕಿ (ಮಲ್ಚಿಂಗ್‌) ನೀರು ಆವಿಯಾಗದ ವಿಧಾನ ಅಳವಡಿಸಿದ್ದಾರೆ. ಈ ಪ್ಲಾಸ್ಟಿಕ್ ಹಾಳೆಯ ಮೇಲೆ ವೃತ್ತಾಕಾರದಲ್ಲಿ ಕೊರೆದು ಕಲ್ಲಂಗಡಿ ಸಸಿ ನೆಡಲಾಗುತ್ತಿದೆ. ಹಾಳೆ ಒಳಗೆ ಹನಿ ನೀರಾವರಿ ಪೈಪ್ ಅಳವಡಿಸಲಾಗಿದೆ. ಇದರಿಂದ ಬಿಸಿಲ ತಾಪಕ್ಕೆ ನೀರು ಆವಿಯಾಗದು.ಅಲ್ಪ ನೀರಿನ ಸದ್ಬಳಕೆಗೆ ಇದು ಉಪಯುಕ್ತ ಎಂಬುದು ಅವರ ಮಾಹಿತಿ. ತಮ್ಮ ಹೊಲದ ಎಲ್ಲ ಬೆಳೆಗಳಿಗೆ ಸಾವಯವ ಗೊಬ್ಬರ ಬಳಸುತ್ತಿದ್ದಾರೆ. ಎರಡು ಹಸು ಸಾಕಿದ್ದಾರೆ. ಗೊಬ್ಬರ ಕಡಿಮೆಯಾದರೆ ಇತರ ರೈತರಿಂದ ಖರೀದಿಸುತ್ತಾರೆ. ಎಂದಿಗೂ ರಾಸಾಯನಿಕಗಳ ಬಳಸುವ ಗೋಜಿಗೆ ಹೋಗಿಲ್ಲ. (ಮೊ:7259378127)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry