ಈರುಳ್ಳಿ ದರ ದಿಢೀರ್ ಇಳಿಕೆ : ರೈತರ ಪ್ರತಿಭಟನೆ

7

ಈರುಳ್ಳಿ ದರ ದಿಢೀರ್ ಇಳಿಕೆ : ರೈತರ ಪ್ರತಿಭಟನೆ

Published:
Updated:

ರಾಣೆಬೆನ್ನೂರ (ಹಾವೇರಿ ಜಿಲ್ಲೆ): ಇಲ್ಲಿಯ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಗುರುವಾರ ಏಕಾಏಕಿ ಈರುಳ್ಳಿಯನ್ನು ಕಡಿಮೆ ದರಕ್ಕೆ ಹರಾಜು ಮಾಡಿದ್ದನ್ನು ವಿರೋಧಿಸಿ ರೈತರು ಹಲಗೇರಿ ವೃತ್ತದ ಬಳಿ ಹೆದ್ದಾರಿ ಬಂದ್‌ ಮಾಡಿ  ಪ್ರತಿಭಟನೆ ನಡೆಸಿದರು.ಎಪಿಎಂಸಿ ಪ್ರಾಂಗಣದಲ್ಲಿ  ರೂ.2,000ಕ್ಕೂ ಕಡಿಮೆ ದರಕ್ಕೆ ಈರುಳ್ಳಿ ಹರಾಜು ಮಾಡಿದ್ದಕ್ಕೆ ರೈತರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ ಪ್ರತಿಭಟನೆಗೆ ಮುಂದಾದರು. ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ ಕಡೂರು ಮತ್ತು ಪೊಲೀಸರು ರೈತರ ಮನವೊಲಿಸಿದ ನಂತರ ಹೆದ್ದಾರಿ ತಡೆ ಚಳವಳಿ ಹಿಂತೆಗೆದುಕೊಂಡು ಮಾರುಕಟ್ಟೆಗೆ ಬಂದರು.ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜಪ್ಪ, ‘ಪ್ರತಿ ವರ್ಷ ಇದೇ ಕರಿಬೇವಿನ ಅಂಗಡಿಯವರಿಂದಲೇ ರೈತರಿಗೆ ಸಮಸ್ಯೆ ಉಂಟಾಗುತ್ತದೆ, ಇಲ್ಲಿಂದಲೇ ರೈತರು ಪ್ರತಿಭಟನೆ ದಾರಿ ಹಿಡಿಯುತ್ತಿದ್ದಾರೆ, ವ್ಯಾಪಾರಸ್ಥರಿಗೆ ರೈತರ ಸಂಕಷ್ಟ ಗೊತ್ತಿಲ್ಲ, ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಇಂತಹ ಅಂಗಡಿಗಳ ಲೈಸೆನ್ಸ್‌  ರದ್ದುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.‘ಈರುಳ್ಳಿ ವ್ಯಾಪಾರಸ್ಥರು ಏಕಾಏಕಿ ರೂ.1,500 ರಿಂದ 2,000 ವರೆಗೆ ಮಾತ್ರ ಹರಾಜು ಮಾಡಿದ್ದು ಅನ್ಯಾಯ, ಇದರಿಂದ ರೈತರಿಗೆ ಮೋಸವಾಗುತ್ತದೆ, ಕೃಷಿ ಕಾರ್ಮಿಕರಿಗೆ ಕೂಲಿ, ವಾಹನ ಬಾಡಿಗೆ, ಹಮಾಲಿ, ದಲಾಲಿ ಕೊಟ್ಟರೆ, ರೈತರಿಗೆ ಏನೂ ಉಳಿಯಲ್ಲ’ ಎಂದು ವಿವರಿಸಿದರು.ಎಪಿಎಂಸಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ ಹಾಗೂ ಸಹಾಯಕ ಕಾರ್ಯದರ್ಶಿ ಎನ್‌.ಎಚ್‌. ಈಶ್ವರಾಚಾರ್‌ ಅವರು  ಮಾರುಕಟ್ಟೆಗೆ ಬಂದು ರೈತರು, ವ್ಯಾಪಾರಸ್ಥರು ಮತ್ತು ದಲ್ಲಾಳಿಗಳ ಜೊತೆಗೆ ಚರ್ಚಿಸಿದರು. ಬೆಂಗಳೂರು , ದಾವಣಗೆರೆ ಮತ್ತು ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಈರುಳ್ಳಿ ಬೆಲೆ ಪಡೆದು, ರೂ.2000 ದಿಂದ 4,800 ವರೆಗೂ ಮರುಹರಾಜು ಮಾಡಲು ಸೂಚಿಸಿದಾಗ ರೈತರು ಪ್ರತಿಭಟನೆ ನಿಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry