ಭಾನುವಾರ, ಮೇ 22, 2022
22 °C

ಈರುಳ್ಳಿ ಬೀಜೋತ್ಪಾದನೆಯಲ್ಲಿ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಗಾಲಕ್ಕೆ ಹೆಸರಾದ ಬಾಗಲಕೋಟೆ ಜಿಲ್ಲೆಯ ರೈತರದು ಸದಾ ಹೋರಾಟದ ಬದುಕು. ಬೇಸಾಯ ಮಾಡುವ ಉತ್ಸಾಹ ಇದ್ದರೂ ಮಳೆ ಸಕಾಲಕ್ಕೆ ಬಾರದೆ ರೈತರು ಹೆಣಗಾಡುತ್ತಾರೆ. ಕೆಲವರು ಕೃಷಿಗೆ ಪೂರಕವಾದ ಉದ್ಯೋಗಗಳನ್ನು ಮಾಡುತ್ತ ಜೀವನ ನಿರ್ವಹಣೆಯ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ.ಗುಳೇದಗುಡ್ಡದ ಹನುಮಂತಪ್ಪ ಭರಮಪ್ಪ ತಳವಾರ ಅಂಥ ರೈತರೊಬ್ಬರು. ಅವರಿಗೆ ಸ್ವಂತದ್ದಾದ ಗೇಣು ಜಮೀನೂ ಇಲ್ಲ. ಆದರೆ ಬೇಸಾಯ ಮಾಡಬೇಕು, ಏನಾದರೂ ಸಾಧಿಸಬೇಕು ಎಂಬ ಉತ್ಸಾಹ. ಹೀಗಾಗಿ 21 ಎಕರೆ ಜಮೀನನ್ನು ಗುತ್ತಿಗೆ ಪಡೆದು ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಉಳ್ಳಾಗಡ್ಡಿ (ಈರುಳ್ಳಿ) ಬೀಜೋತ್ಪಾದನೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.ಒಂದೂವರೆ ಎಕರೆಯಲ್ಲಿ ಬಿಳಿಗೆಂಪು (ಜವಾರಿ) ಈರುಳ್ಳಿ ತಳಿಯ ಬೀಜೋತ್ಪಾದನೆ ಮಾಡುತ್ತಾರೆ. ಶಾಲೆಗೆ ಹೋಗಿ ಓದದೇ ಇದ್ದರೂ ವ್ಯವಸಾಯದಲ್ಲೇ ಅಪಾರ ಅನುಭವ ಗಳಿಸಿದ್ದಾರೆ.ಇವರ ಈರುಳ್ಳಿ ಬೀಜ ಖರೀದಿಗೆ ಯಾವ ಕಂಪೆನಿಯವರೂ ಬಂದಿಲ್ಲ. `ಬೀಜ ಉತ್ಪಾದನೆ ಮಾಡಿದ್ದೇನೆ; ಖರೀದಿಸಿ~ ಎಂದು ಇವರೂ ದುಂಬಾಲು ಬಿದ್ದಿಲ್ಲ. ಆದರೆ ಇವರ ಹತ್ತಿರ ಗುಣಮಟ್ಟದ ಖಾತರಿ ಈರುಳ್ಳಿ ಬಿತ್ತನೇ ಬೀಜ ಇದೆ ಎಂಬುದು ಸುತ್ತಲಿನ ಹಲವಾರು ಹಳ್ಳಿಗಳ ರೈತರಿಗೆ ಗೊತ್ತಿದೆ. ಬಾಗಲಕೋಟೆ, ಹುನಗುಂದ, ಬದಾಮಿ ತಾಲೂಕಿನ ರೈತರು ಮನೆ ಬಾಗಿಲಿಗೇ ಬಂದು ಖರೀದಿಸಿ ಒಯ್ಯುತ್ತಾರೆ.`ಒಂಬತ್ತು ವರ್ಷಗಳಿಂದ ಬೀಜ ಮಾರಾಟ ಮಾಡುತ್ತ್ದ್ದಿದೇನೆ. ಖರೀದಿಸಿದ ರೈತರಿಂದ ಒಂದೇ ಒಂದು ದೂರು ಬಂದಿಲ್ಲ. ಬೀಜಗಳು ನೂರಕ್ಕೆ ನೂರರಷ್ಟು ಮೊಳಕೆ ಬರುತ್ತದೆ.ಬೀಜಗಳನ್ನು ನಾನು ದೃಢೀಕರಣ ಮಾಡಿಸುವುದಿಲ್ಲ. ಸರಿಯಾದ ಬೀಜೋತ್ಪಾದನೆ ಕ್ರಮಗಳನ್ನು ಅನುಸರಿಸುವುದರಿಂದ ಬೀಜಗಳು ಮೊಳೆಯದೇ ಇರುವ ಸಾಧ್ಯತೆಗಳಿಲ್ಲ~ ಎನ್ನುತ್ತಾರೆ ಹನುಮಂತಪ್ಪ.ಈರುಳ್ಳಿ ಬೀಜೋತ್ಪಾದನೆ ಕುರಿತಂತೆ ಅವರು ವಿವರಣೆ ನೀಡುತ್ತಾ ಹೋದರೆ ಕೃಷಿ ಅನುಭವಿ ಜೊತೆಯಲ್ಲಿ ಮಾತನಾಡಿದ ಅನುಭವ ಆಗುತ್ತದೆ. ಅವರ ಇಡೀ ಕುಂಟುಂಬ ಬೇಸಾಯದ ಕೆಲಸಗಳಲ್ಲಿ ತೊಡಗಿಕೊಂಡಿದೆ. ಮಳೆ ಕೊರತೆ, ವಿದ್ಯುತ್ ಅಭಾವ ಇತ್ಯಾದಿಗಳಿಂದ ಬೇಸಾಯಕ್ಕೆ ಆಗಾಗ ಹಿನ್ನಡೆ ಆಗುತ್ತದೆ. ಬೇಸಾಯದ ನಷ್ಟ ತುಂಬಿಕೊಳ್ಳಲು ಹೈನುಗಾರಿಕೆ ಮಾಡುತ್ತಾರೆ.

ಅವರ ಸಂಪರ್ಕ ಸಂಖ್ಯೆ 94487 79852.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.