ಈರುಳ್ಳಿ ರಫ್ತಿಗೆ ದಿಢೀರ್ ನಿರ್ಧಾರ

7

ಈರುಳ್ಳಿ ರಫ್ತಿಗೆ ದಿಢೀರ್ ನಿರ್ಧಾರ

Published:
Updated:

ನವದೆಹಲಿ (ಪಿಟಿಐ): ನಾಗಾಲೋಟದಲ್ಲಿ ಗಗನಕ್ಕೇರಿ ಖರೀದಿದಾರರಿಗೂ ಕಣ್ಣೀರು ತರಿಸಿದ್ದ ಈರುಳ್ಳಿಯ  ಪೂರೈಕೆ ಅಭಾವ ದೂರ ಮಾಡಲು, ಎರಡು ತಿಂಗಳ ಹಿಂದೆ ಪಾಕಿಸ್ತಾನದಿಂದ  ಆಮದು ಮಾಡಿಕೊಳ್ಳಲು ಮುಂದಾಗಿದ್ದ ಕೇಂದ್ರ ಸರ್ಕಾರವು ಈಗ ರಫ್ತಿಗೆ ಅವಕಾಶ ಮಾಡಿಕೊಡುವ ದಿಢೀರ್ ನಿರ್ಧಾರ ಪ್ರಕಟಿಸಿದೆ.

ಈರುಳ್ಳಿಯ ಬಂಪರ್ ಉತ್ಪಾದನೆ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿ ಕಾಪಾಡಲು ಈ ನಿರ್ಧಾರಕ್ಕೆ ಬರಲಾಗಿದೆ. ಕರ್ನಾಟಕದಲ್ಲಿ ಬೆಳೆಯುವ ಸೀಮಿತ ಪ್ರಮಾಣದಲ್ಲಿ ಬಳಕೆಯಾಗುವ ‘ರೋಸ್’ ತಳಿಯ ಈರುಳ್ಳಿ ರಫ್ತಿಗೆ ಅವಕಾಶ ಮಾಡಿಕೊಡುವ ಮೂಲಕ ಇತರ ಕೃಷಿ ಉತ್ಪನ್ನಗಳ  ರಫ್ತಿಗೆ ರಹದಾರಿ ಕಲ್ಪಿಸಲು ಕೇಂದ್ರ ಮುಂದಾಗಿದೆ. ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದಲ್ಲಿನ ಸಚಿವರ ಸಮಿತಿಯು ದಕ್ಷಿಣದ ರಾಜ್ಯಗಳಲ್ಲಿ ಬೆಳೆಯುವ ಮೂರು ಬಗೆಯ ಬಾಸ್ಮತಿಯೇತರ ಅಕ್ಕಿ ರಫ್ತಿಗೂ ಅವಕಾಶ ಕಲ್ಪಿಸಲು ಬುಧವಾರ ಮಹತ್ವದ ನಿರ್ಧಾರ ಕೈಗೊಂಡಿತು.

ಈರುಳ್ಳಿಯ ಸಮೃದ್ಧ ಉತ್ಪಾದನೆಯ ಫಲವಾಗಿ ಬೆಲೆ ಗಮನಾರ್ಹವಾಗಿ ಕುಸಿದಿದ್ದರಿಂದ ಮಹಾರಾಷ್ಟ್ರದ ರೈತರು ಈರುಳ್ಳಿ ರಫ್ತಿಗೆ ಅವಕಾಶ ಮಾಡಿಕೊಡಲು ಒತ್ತಾಯಿಸುತ್ತಿದ್ದಾರೆ. ಬಂಪರ್ ಉತ್ಪಾದನೆಯೂ   ರಫ್ತಿಗೆ ಅವಕಾಶ ಮಾಡಿಕೊಡಲು ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ.

ಮಹಾರಾಷ್ಟ್ರದ ನಾಸಿಕ್‌ದ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯು ಪ್ರತಿ ಕ್ವಿಂಟಲ್‌ಗೆ  `6300ದಿಂದ ಈಗ ದಿಢೀರನೆ  `450ರಿಂದ `500ಕ್ಕೆ ಇಳಿದಿದೆ. ಎರಡು ತಿಂಗಳ ಹಿಂದೆ ಪ್ರತಿ ಕೆಜಿಗೆ  `75ರಿಂದ `80ರವರೆಗೆ ಇದ್ದ ಈರುಳ್ಳಿ ಬೆಲೆ ಈಗ  `4ರಿಂದ `5ಕ್ಕೆ ಇಳಿದಿದೆ. ಇದರಿಂದ ಆಕ್ರೋಶಗೊಂಡಿರುವ ರೈತರು ಈರುಳ್ಳಿ ರಫ್ತು ನಿಷೇಧ ತೆರವಿಗೆ ಆಗ್ರಹಿಸಿ ಬುಧವಾರ ರಸ್ತೆ ತಡೆಯನ್ನೂ ನಡೆಸಿದರು.

ಪವಾರ್ ಒಲವು: ಪ್ರಸಕ್ತ ಸಾಲಿನಲ್ಲಿ ಕೃಷಿ ಉತ್ಪಾದನೆಯು ಸಮೃದ್ಧವಾಗಲಿರುವ ಹಿನ್ನೆಲೆಯಲ್ಲಿ ಸಕ್ಕರೆ, ಈರುಳ್ಳಿ ಮತ್ತು ಬಾಸ್ಮತಿಯೇತರ ಅಕ್ಕಿ ರಫ್ತು ಮಾಡಲು ಪವಾರ್ ಒಲವು ವ್ಯಕ್ತಪಡಿಸಿದ್ದಾರೆ.

 ರೈತ ಸಮುದಾಯದ ಹಿತಾಸಕ್ತಿ ರಕ್ಷಿಸಲು ಕೆಲ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಬೇಕಾಗುತ್ತದೆ. ಈರುಳ್ಳಿ  ಸೇರಿದಂತೆ ಕೆಲ ಸರಕುಗಳ ಬೆಲೆಗಳು ತೀವ್ರವಾಗಿ ಕುಸಿಯುತ್ತಿರುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಸೀಮಿತ ಪ್ರಮಾಣದ ರಫ್ತಿಗೆ ಅವಕಾಶ ಮಾಡಿಕೊಟ್ಟರೆ ಅದರಿಂದ ರೈತರ ಸಮಸ್ಯೆಗಳು ದೂರವಾಗಲಿವೆ ಎಂದರು.

ದಾಖಲೆ ಬೆಳೆ ನಿರೀಕ್ಷೆ:   2010-11ನೇ ಸಾಲಿನಲ್ಲಿ ದೇಶದ ಒಟ್ಟು ಕೃಷಿ ಉತ್ಪಾದನೆ ಶೇ 6ರಷ್ಟು ಹೆಚ್ಚುವ ಸಾಧ್ಯತೆ ಇದ್ದು, ಒಟ್ಟು 232.07 ದಶಲಕ್ಷ ಟನ್  ಇಳುವರಿ ನಿರೀಕ್ಷಿಸಲಾಗಿದೆ ಎಂದು ಕೃಷಿ ಸಚಿವಾಲಯ ಹೇಳಿದೆ.

81.47 ದಶಲಕ್ಷ ಟನ್ ಗೋಧಿ, 16.51 ಟನ್ ಬೇಳೆ ಕಾಳು ಹಾಗೂ  ತಲಾ 170 ಕೆಜಿಯ 34 ದಶಲಕ್ಷ ಟನ್‌ಗಳಷ್ಟು ಹತ್ತಿ ಮೂಟೆ ಉತ್ಪಾದನೆ ಗುರಿ ಇದೆ. ಆಹಾರೇತರ ಬೆಳೆಯಲ್ಲಿ ಪ್ರಮುಖವಾಗಿ ಎಣ್ಣೆ ಕಾಳುಗಳ ಉತ್ಪಾದನೆ 27.84 ದಶಲಕ್ಷ ಟನ್ ಹಾಗೂ ಕಬ್ಬು ಇಳುವರಿ 336.69 ದಶಲಕ್ಷ ಟನ್ ತಲುಪುವ ಅಂದಾಜಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.

ಸದ್ಯ ಹಣದುಬ್ಬರ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೊಸ ಫಸಲುಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಗ್ರಾಹಕನಿಗೆ ಸ್ವಲ್ಪ ನೆಮ್ಮದಿ ದೊರಕಬಹುದು ಎಂದು  ಐಎಎಫ್‌ಪಿಆರ್‌ಐ’ ಸಂಸ್ಥೆಯ ಏಷ್ಯಾ ನಿರ್ದೇಶಕ ಅಶೋಕ್ ಗುಲಾಟಿ ಹೇಳಿದ್ದಾರೆ.

ಕೃಷಿ ಸಾಲ ಗುರಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಸಾಲ ಉದ್ದೇಶಿತ ಗುರಿ `3.75 ಲಕ್ಷ ಕೋಟಿ ದಾಟಿ,  `4 ಲಕ್ಷ ಕೋಟಿ ತಲುಪಲಿದೆ ಎಂದೂ  ಸಚಿವ ಶರದ್ ಪವಾರ್ ಹೇಳಿದ್ದಾರೆ.

2009-10ರಲ್ಲಿ ಕೃಷಿ ಸಾಲ ಉದ್ದೇಶಿತ ಗುರಿ `3.28 ಲಕ್ಷ ಕೋಟಿ ದಾಟಿ, `3.84 ಲಕ್ಷದ ಹತ್ತಿರ ತಲುಪಿತ್ತು. 2003-04ನೇ ಸಾಲಿನ  `86,981 ಕೋಟಿಗಳಿಗೆ ಹೋಲಿ ಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ  ಇದು  `4ಲಕ್ಷ ಕೋಟಿ ತಲುಪುವುದು ನಿಶ್ಚಿತ ಎಂದು ಪವಾರ್ ಹೇಳಿದ್ದಾರೆ.

ಈ ಹಣಕಾಸು ವರ್ಷದ ಮೊದಲ ಏಳು ತಿಂಗಳುಗಳಲ್ಲಿ ಬ್ಯಾಂಕುಗಳು   `2.29 ಲಕ್ಷ ಕೋಟಿ ಕೃಷಿ ಸಾಲ ವಿತರಿಸಿವೆ. ಕೃಷಿ ಹೂಡಿಕೆ ಹೆಚ್ಚಿಸಲು ಸಾಲ ನೀತಿಯಲ್ಲಿ ಸರ್ಕಾರ ಹಲವು ಸುಧಾರಣೆಗಳನ್ನು ತಂದಿರುವ ಹಿನ್ನೆಲೆಯಲ್ಲಿ ಶೇ 7ರ ಬಡ್ಡಿದರಲ್ಲಿ ಬ್ಯಾಂಕುಗಳು ಸಾಲ ನೀಡುತ್ತಿವೆ.  2010-11ನೇ ಸಾಲಿನಿಂದ ರೈತರಿಗೆ ಶೇ 5ರ ಬಡ್ಡಿ ದರದಲ್ಲಿ ಬೆಳೆ ಸಾಲ ಲಭಿಸುತ್ತಿದೆ.  

2006-07ನೇ ಸಾಲಿನಲ್ಲಿ ರೈತರು ಮುಂಗಾರು ಬೆಳೆಗಾಗಿ `3 ಲಕ್ಷದ ವರೆಗೆ ಕೃಷಿ ಸಾಲವನ್ನು ಶೇ 7ರ ಬಡ್ಡಿ ದರದಲ್ಲಿ ಪಡೆದಿದ್ದಾರೆ. 2009-10ರಲ್ಲಿ ಅಲ್ಪಾವಧಿ ಕೃಷಿ ಸಾಲವನ್ನು ನಿರ್ದಿಷ್ಟ ಕಂತಿನಲ್ಲಿ ಮರು ಪಾವತಿಸಿದ ರೈತರಿಗೆ ಶೇ 1ರಷ್ಟು ಸಹಾಯಧನವನ್ನು ಸರ್ಕಾರ ನೀಡಿದೆ.

ನಿರ್ದಿಷ್ಟ ಕಂತಿನೊಳಗೆ ಮರು ಪಾವತಿಸುವ ಬೆಳೆ ಸಾಲದ ಮೇಲೆ ನೀಡಲಾಗುವ ಸಹಾಯಧನವನ್ನು ಕಳೆದ ವರ್ಷದಿಂದ ಸರ್ಕಾರ ದ್ವಿಗುಣಗೊಳಿಸಿದ್ದು, ಜಾಮೀನು ಮುಕ್ತ ಕೃಷಿ ಸಾಲದ ಮಿತಿಯನ್ನು `50 ಸಾವಿರದಿಂದ `1 ಲಕ್ಷದವರೆಗೆ ಹೆಚ್ಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry