ಗುರುವಾರ , ಜೂನ್ 17, 2021
21 °C
ಪ್ರಾದೇಶಿಕ ಪಕ್ಷಗಳು ಲೆಕ್ಕಕ್ಕಿಲ್ಲ: ಅಭಿವೃದ್ಧಿಯೇ ಚುನಾವಣಾ ವಿಷಯ

ಈಶಾನ್ಯ: ಕಾಂಗ್ರೆಸ್‌–ಬಿಜೆಪಿ ನೇರ ಹಣಾಹಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗರ್ತಲಾ, ಗುವಾಹಟಿ (ಐಎಎನ್‌ಎಸ್‌): ಈಶಾನ್ಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ದೊಡ್ಡ ಸಾಧನೆ ಮಾಡುವುದು ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿ ಇಲ್ಲಿನ ಎಂಟು ರಾಜ್ಯಗಳ 25 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯ ನಡುವೆಯೇ ನೇರ ಹಣಾಹಣಿ ಇದೆ.ದಶಕಗಳಿಂದ ಈ ಪ್ರದೇಶ ಉಗ್ರಗಾಮಿ ಚಟು­ವಟಿಕೆಗಳಿಂದ ನಲುಗಿದೆ. ಆದರೆ ಈ ಬಾರಿಯ ಚುನಾವಣೆಯ ವಿಷಯ ಅಭಿವೃದ್ಧಿಯೇ ಆಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.‘ಈಶಾನ್ಯ ರಾಜ್ಯಗಳ ಜನರು ಭಯೋತ್ಪಾದನಾ ಚಟುವಟಿಕೆಗಳನ್ನು ಮರೆಯಲು ಯತ್ನಿಸುತ್ತಿದ್ದಾರೆ. ಈ ಪ್ರಾಂತ್ಯವು ವಿವಿಧ ಭಾಷೆಗಳು, ಜನಾಂಗೀಯ ಗುಂಪುಗಳು ಮತ್ತು ಧರ್ಮಗಳನ್ನು ಒಳಗೊಂಡಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಇಲ್ಲಿನ ಸಮಸ್ಯೆಗಳತ್ತ ಗಮನ ಹರಿಸಬೇಕು’ ಎಂದು ರಾಜಕೀಯ ವಿಶ್ಲೇಷಕ ನಾನಿ ಗೋಪಾಲ್‌ ಮಹಾಂತ ಅಭಿಪ್ರಾಯಪಡುತ್ತಾರೆ.ಕಾಂಗ್ರೆಸ್‌ಗೆ ಹೆಚ್ಚು ಅವಕಾಶ: ಅಸ್ಸಾಂನ 14 ಸ್ಥಾನಗಳಲ್ಲಿ 6–7ರಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಸಮಾನ ಅವಕಾಶ ಇದೆ. ಇತರ ರಾಜ್ಯಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ ಮುಂದಿದೆ. ಈ ಬಾರಿ ಪ್ರಾದೇಶಿಕ ಪಕ್ಷಗಳು ಅಪ್ತಸ್ತುತವಾಗಿವೆ ಎಂದು ಮಹಾಂತ ಹೇಳುತ್ತಾರೆ. ಸುಮಾರು ನಾಲ್ಕೂವರೆ ಕೋಟಿ ಜನಸಂಖ್ಯೆಯ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಸಿಕ್ಕಿಂ, ಮಣಿಪುರ, ನಾಗಾಲ್ಯಾಂಡ್‌, ತ್ರಿಪುರಾ ಮತ್ತು ಮಿಜೋರಾಂ­ಗಳಲ್ಲಿ 2.7 ಕೋಟಿಗೂ ಅಧಿಕ ಮತದಾರರಿದ್ದಾರೆ.ಧರ್ಮ ಅಥವಾ ಜನಾಂಗೀಯತೆಯ ಆಧಾರ­ದಲ್ಲಿ ಶೇ 6–7ರಷ್ಟು ಮತಗಳು ಯಾವುದಾದರೂ ಒಂದು ಪಕ್ಷಕ್ಕೆ ಬಿದ್ದರೂ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಮುಸ್ಲಿಮರ ಮತಗಳು ಕೂಡ ನಿರ್ಣಾಯಕವಾಗಿದ್ದು,  ಅಸ್ಸಾಂನಲ್ಲಿ ಶೇ 33ರಷ್ಟಿರುವ  ಮುಸ್ಲಿಮರು ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಾರೆ.2009ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಅಸ್ಸಾಂ ಗಣ ಪರಿಷತ್‌ (ಎಜಿಪಿ) ನಡುವೆ ಮೈತ್ರಿ ಇತ್ತು. ಆದರೆ ಈ ಬಾರಿ ಯಾವುದೇ ಮೈತ್ರಿ ಇಲ್ಲ. 1985–90 ಮತ್ತು 1996–2001ರಲ್ಲಿ ಅಸ್ಸಾಂನಲ್ಲಿ ಆಡಳಿತ ನಡೆಸಿದ್ದ ಎಜಿಪಿ ಈಗ ಒಡೆದ ಮನೆ. ಹಲವು ಹಿರಿಯ ನಾಯಕರು ಬಿಜೆಪಿ ಸೇರಿದಂತೆ ಬೇರೆ ಬೇರೆ ಪಕ್ಷಗಳಿಗೆ ಹೋಗಿದ್ದಾರೆ.ಕಳೆದ ಬಾರಿ 25ರಲ್ಲಿ ಕಾಂಗ್ರೆಸ್‌ 13, ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಸಿಪಿಎಂ ತ್ರಿಪುರಾದ ಎರಡು ಸ್ಥಾನಗಳಲ್ಲಿ ಗೆದ್ದಿದ್ದರೆ ಮೇಘಾಲಯದಲ್ಲಿ ಎನ್‌ಸಿಪಿ ಒಂದು ಸ್ಥಾನ ಗೆದ್ದಿತ್ತು. ಉಳಿದ ಕ್ಷೇತ್ರಗಳು ಪ್ರಾದೇಶಿಕ ಪಕ್ಷಗಳ ಪಾಲಾಗಿದ್ದವು. ಮಣಿಪುರ, ಅಸ್ಸಾಂ, ಮಿಜೋರಾಂ, ಅರುಣಾ­ಚಲ ಪ್ರದೇಶ ಮತ್ತು ಮೇಘಾಲಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೆ, ತ್ರಿಪುರಾದಲ್ಲಿ ಎಡ­ರಂಗದ ಸರ್ಕಾರವಿದೆ. ನಾಗಾಲ್ಯಾಂಡ್‌ನಲ್ಲಿ ಎನ್‌ಪಿಎಫ್‌ ನೇತೃತ್ವದ ಮೈತ್ರಿಕೂಟ, ಸಿಕ್ಕಿಂನಲ್ಲಿ  ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್‌ ಆಡಳಿತ ಪಕ್ಷವಾಗಿದೆ.ಎಂಟು ರಾಜ್ಯಗಳ 566 ಶಾಸಕರಲ್ಲಿ ಬಿಜೆಪಿ ಅಸ್ಸಾಂನಲ್ಲಿ ಐದು, ಅರುಣಾಚಲ ಪ್ರದೇಶದಲ್ಲಿ ಮೂರು ಮತ್ತು ನಾಗಾಲ್ಯಾಂಡ್‌­ನಲ್ಲಿ ಒಬ್ಬ ಶಾಸಕರನ್ನು ಹೊಂದಿದೆ.ಉಗ್ರಗಾಮಿ ಚಟುವಟಿಕೆಗಳನ್ನು ಬಹುತೇಕ ನಿಯಂತ್ರಣಕ್ಕೆ ತರಲಾಗಿದೆ. ಹಾಗಾಗಿ ಈ ಬಾರಿ ಅಭಿವೃದ್ಧಿ ಮತ್ತು ಹಿಂದುಳಿದಿರುವಿಕೆಯೇ ಚುನಾ-ವಣೆಯ ಮುಖ್ಯ ವಿಷಯವಾಗಿದೆ ಎಂದು ರಾಜಕೀಯ ವಿಶ್ಲೇಷಕ ತಪಸ್‌ ದೇ ಕೂಡ ಅಭಿಪ್ರಾಯ­ಪಟ್ಟಿದ್ದಾರೆ.ಈ ಪ್ರದೇಶದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಯ ನಾಯಕರು ಹೇಳುತ್ತಿದ್ದಾರೆ. ‘ಈಶಾನ್ಯ ರಾಜ್ಯಗಳಿಗೆ ಚುನಾವಣಾ ಪ್ರಚಾರ­ಕ್ಕಾಗಿ ಎರಡು ಬಾರಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭೇಟಿ ನೀಡಿದ್ದಾಗ ಭಾರಿ ಸಂಖ್ಯೆ­ಯಲ್ಲಿ ಜನ ಸೇರಿದ್ದರು. ಇದು ನಮ್ಮ ಅವಕಾಶ­ಗಳನ್ನು ಹೆಚ್ಚಿಸಿದೆ’ ಎಂದು ಬಿಜೆಪಿಯ ರಾಷ್ಟ್ರೀಯ ಉಪಾ­ಧ್ಯಕ್ಷ ಎಸ್‌.ಎಸ್‌. ಅಹ್ಲುವಾಲಿಯ ಹೇಳುತ್ತಾರೆ.ಐದು ರಾಜ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರ ಉತ್ತಮ ಸಾಧನೆ ಮಾಡಿದೆ. ಹಾಗಾಗಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಕಾಂಗ್ರೆಸ್‌ ಮುಖಂಡ ರತನ್‌ರಾಲ್‌ ನಾಥ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.