ಈಶ್ವರಪ್ಪ ಆಸ್ತಿ: ಲೋಕಾಯುಕ್ತ ತನಿಖೆಗೆ ಒತ್ತಾಯ

7

ಈಶ್ವರಪ್ಪ ಆಸ್ತಿ: ಲೋಕಾಯುಕ್ತ ತನಿಖೆಗೆ ಒತ್ತಾಯ

Published:
Updated:

ಬೆಂಗಳೂರು: `ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಆಸ್ತಿಯನ್ನು ಸಂಪಾದನೆ ಮಾಡಿದ್ದಾರೆ' ಎಂದು ಸಾಮಾಜಿಕ ಕಾರ್ಯಕರ್ತೆ ನಾಗಲಕ್ಷ್ಮಿಬಾಯಿ ಆರೋಪಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈಶ್ವರಪ್ಪನವರ ವಿರುದ್ಧ ಲೋಕಾಯುಕ್ತ ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿಯನ್ನು  ಸಲ್ಲಿಸಲಾಗಿದೆ' ಎಂದರು.`ಈಶ್ವರಪ್ಪ ಅವರು ಹಲವಾರು ಆಸ್ತಿಗಳನ್ನು ಸಂಪಾದನೆ ಮಾಡಿದ್ದು, ಲಭ್ಯವಾಗಿರುವ ದಾಖಲೆಗಳ ಪ್ರಕಾರ ಸುಮಾರು 30 ಕೋಟಿಗೂ ಅಧಿಕ ಅಕ್ರಮ ಸಂಪಾದನೆಯನ್ನು ಮಾಡಿದ್ದಾರೆ. ಇದರಲ್ಲಿ ಕೇವಲ 4 ಕೋಟಿ ರೂಪಾಯಿ ಮಾತ್ರ ನೈಜ ಹಣವಾಗಿದೆ. ಉಳಿದ 26 ಕೋಟಿ ರೂಪಾಯಿ ಅಕ್ರಮ ಸಂಪಾದನೆಯಾಗಿದೆ' ಎಂದು ಮಾಹಿತಿ ನೀಡಿದರು.`2004 ರ ಚುನಾವಣಾ ಸಂದರ್ಭದಲ್ಲಿ ಕೇವಲ 50 ಸಾವಿರ ರೂಪಾಯಿ ನಗದು, 4 ಲಕ್ಷ ರೂಪಾಯಿ ವಿಮೆ, 15 ಸಾವಿರ ರೂಪಾಯಿ ಮೌಲ್ಯದ ಚಿನ್ನ, 90 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿ ಹಾಗೂ ಮಗನ ಹೆಸರಿನಲ್ಲಿ 6 ಲಕ್ಷ ರೂಪಾಯಿ ಹೂಡಿಕೆಯನ್ನು ಹೊಂದಿದ್ದರು. ಅಲ್ಲದೇ, 2008 ರಲ್ಲಿ ಶಿವಮೊಗ್ಗದ ಬಿಎಚ್ ರಸ್ತೆಯಲ್ಲಿ 21 ಸಾವಿರ ಚದರ ಅಡಿಯ ಕಟ್ಟಡವನ್ನು  ಮಾತ್ರ ಹೊಂದಿದ್ದರು' ಎಂದು ತಿಳಿಸಿದರು.`ಆದರೆ, ಈಗ ಅವರು ಶಿವಮೊಗ್ಗದ ಬಿಎಚ್ ರಸ್ತೆಯಲ್ಲಿ 17 ಕೈಗಾರಿಕಾ ನಿವೇಶನ, 14 ವಾಣಿಜ್ಯ ನಿವೇಶನಗಳ ಸಹಿತ ಸುಮಾರು 29 ನಿವೇಶನಗಳನ್ನು ಹೊಂದಿದ್ದಾರೆ. ಇವುಗಳಲ್ಲಿ 9 ಆಸ್ತಿಗಳನ್ನು ಕೇವಲ ಒಂದೇ ದಿನದಲ್ಲಿ ನೋಂದಣಿ ಮಾಡಿದ್ದಾರೆ' ಎಂದು ಅವರು ವಿವರಿಸಿದರು. `2004 ರ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಮಾಹಿತಿಗಳ ಪ್ರಕಾರ ಕೇವಲ ಶಾಸಕ ವೇತನವಷ್ಟೇ ಆದಾಯವಿರುವ ಈಶ್ವರಪ್ಪನವರು ಇಷ್ಟೆಲ್ಲ ಆಸ್ತಿಗಳನ್ನು ಸಂಪಾದಿಸಿರುವುದರ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು' ಎಂದು ಆಗ್ರಹಿಸಿದರು.`ಈ ಕುರಿತು ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಗಿದೆ. ರಾಜ್ಯಪಾಲರು ಅನುಮತಿ ನೀಡದಿದ್ದಲ್ಲಿ ಹೈಕೋರ್ಟ್ ಮೊರೆ ಹೋಗಲಾಗುವುದು' ಎಂದು ತಿಳಿಸಿದರು. ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಮಾತನಾಡಿ, `ಅಕ್ರಮ ಆಸ್ತಿ ಸಂಪಾದಿಸಿರುವ ಈಶ್ವರಪ್ಪ ಅವರನ್ನು ಕೂಡ ಪಕ್ಷದಿಂದ ಹೊರ ಕಳುಹಿಸಬೇಕಾಗಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry