ಬುಧವಾರ, ನವೆಂಬರ್ 20, 2019
21 °C
ಅಪಾರ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಮುಖಂಡರು

ಈಶ್ವರಪ್ಪ, ಇಬ್ರಾಹಿಂ, ಆರಗ, ಕಿಮ್ಮನೆ ಕಣಕ್ಕೆ

Published:
Updated:

ಶಿವಮೊಗ್ಗ: ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಮಾಜಿ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್ ಮತ್ತಿತರ ಮುಖಂಡರು ಬುಧವಾರ ನಾಮಪತ್ರ ಸಲ್ಲಿಸಿದರು.ಶಿವಮೊಗ್ಗ ನಗರ: ಬಿಜೆಪಿ ಅಭ್ಯರ್ಥಿಯಾಗಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನಾಮಪತ್ರ ಸಲ್ಲಿಸಿದರು. ಬುಧವಾರ ಬೆಳಿಗ್ಗೆ ತಮ್ಮ ಅಪಾರ ಬೆಂಬಲಿಗರು ಹಾಗೂ ಕಾರ್ಯಕರ್ತರ ಮೂಲಕ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ಮೆರವಣಿಗೆ ಹೊರಟ  ಈಶ್ವರಪ್ಪ, ನಗರಸಭೆಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಪತ್ನಿ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮತ್ತಿತರರ ಮುಖಂಡರು ಪಾಲ್ಗೊಂಡಿದ್ದರು.ಜೆಡಿಎಸ್ ಅಭ್ಯರ್ಥಿಯಾಗಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್ ನಾಮಪತ್ರ ಸಲ್ಲಿಸಿದರು. ಬೆಳಿಗ್ಗೆ ಕೆಲವೇ ಮುಖಂಡರೊಂದಿಗೆ ಆಗಮಿಸಿ, ನಾಮಪತ್ರ ಸಲ್ಲಿಸಿ ಹೋಗಿದ್ದ ಎಂ. ಶ್ರೀಕಾಂತ್, ಮಧ್ಯಾಹ್ನ ಮತ್ತೆ ಕೋಟೆ ದೇವಸ್ಥಾನ ಹಾಗೂ ರಾಮಣ್ಣಶ್ರೇಷ್ಠಿ ಪಾರ್ಕಿನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಪಾರ ಬೆಂಬಲಿಗರು ಹಾಗೂ ಕಾರ್ಯಕರ್ತರ ಮೂಲಕ ನಗರಸಭೆಗೆ ಬಂದು ನಾಮಪತ್ರ ಸಲ್ಲಿಸಿದರು. ಮುಖಂಡರಾದ ಮಹೇಶ್ವರಪ್ಪ, ಮಂಜುನಾಥ, ನಗರಸಭಾ ಸದಸ್ಯರಾದ ಪಾಲಾಕ್ಷಿ, ನಾಗರಾಜ್ ಕಂಕಾರಿ, ಮಹೇಶ್ ಮತ್ತಿತರರು ಪಾಲ್ಗೊಂಡಿದ್ದರು.ಭದ್ರಾವತಿ: ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಬುಧವಾರ ನಾಮಪತ್ರ ಸಲ್ಲಿಸಿದರು. ಅಚ್ಚರಿಯ ಬೆಳವಣಿಗೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಶಾಸಕ ಸಂಗಮೇಶ್ ಸಹೋದರ ಬಿ.ಕೆ. ಮೋಹನ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಕೆಜೆಪಿ ಅಭ್ಯರ್ಥಿ ಯಾಗಿ ಕದರೇಶ್ ಪಕ್ಷದ ಬಿ. ಫಾರಂ ಸಲ್ಲಿಸಿ ಬುಧವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.ತೀರ್ಥಹಳ್ಳಿ: ಹಾಲಿ ಶಾಸಕ ಕಿಮ್ಮನೆ ರತ್ನಾಕರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ, ಮಾಜಿ ಶಾಸಕ ಆರಗ ಜ್ಞಾನೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಶಿಕಾರಿಪುರ: ಬಿಜೆಪಿ ಅಭ್ಯರ್ಥಿಯಾಗಿ ಕೊಪ್ಪಲು ಮಂಜುನಾಥ, ಜೆಡಿಎಸ್ ಅಭ್ಯರ್ಥಿಯಾಗಿ ಬಳಿಗಾರ್ ನಾಮಪತ್ರ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)