ಶನಿವಾರ, ಮೇ 21, 2022
25 °C

ಈಶ್ವರಪ್ಪ ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಶ್ವರಪ್ಪ ರಂಗಪ್ರವೇಶ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬೇಡಿಕೆ ಕುರಿತು ಬಿಜೆಪಿ ಹೈಕಮಾಂಡ್‌ನ ಒಲವು-ನಿಲುವುಗಳು ಸ್ಪಷ್ಟವಾಗುವ ಮೊದಲೇ ಮುಖ್ಯಮಂತ್ರಿ ಪಟ್ಟಕ್ಕಾಗಿ ಪಕ್ಷದಲ್ಲಿ ಲಾಬಿ ಶುರುವಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಹೆಸರನ್ನು ಬಿಂಬಿಸುತ್ತಿದೆ. ಮತ್ತೊಂದು ಬಣ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಬೆನ್ನಿಗೆ ನಿಂತಿದೆ.

ನಾಯಕತ್ವ ಬದಲಿಸಬೇಕು ಎಂಬ ಆಗ್ರಹಕ್ಕೆ ಪಕ್ಷದ ವರಿಷ್ಠರಿಂದ ಇದುವರೆಗೂ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ಆದರೆ, ಪಕ್ಷದ ವಲಯದಲ್ಲಿ ವದಂತಿಗಳು ರೆಕ್ಕೆಪುಕ್ಕ ಪಡೆದಿವೆ. `ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಸ್ಥಾನಕ್ಕೆ ಶೆಟ್ಟರ್ ಅವರನ್ನು ನೇಮಿಸಲು ಹೈಕಮಾಂಡ್ ಒಲವು ಹೊಂದಿದೆ~ ಎಂಬ ಮಾತುಗಳು ಕೇಳಿಬರುತ್ತಿವೆ.

ದಿಢೀರ್ ಬೆಳವಣಿಗೆಯಲ್ಲಿ ಕೆಲವು ಸಚಿವರು ಈಶ್ವರಪ್ಪ ಪರ ಧ್ವನಿ ಎತ್ತಿದ್ದಾರೆ. ಪಕ್ಷ ಸಂಘಟನೆಗೆ ಶ್ರಮಿಸಿರುವ ಅವರನ್ನು ಮುಖ್ಯಮಂತ್ರಿ ಮಾಡಿದರೆ ಪಕ್ಷಕ್ಕೆ ಮತ್ತಷ್ಟು ಲಾಭ ಆಗಲಿದೆ ಎಂದು ಅವರ ಪರ ಲಾಬಿ ಆರಂಭಿಸಿದ್ದಾರೆ. ಸಚಿವರಾದ ಎಸ್.ಎ.ರಾಮದಾಸ್, ಎಸ್.ಸುರೇಶ್‌ಕುಮಾರ್, ಎಸ್.ಎ. ರವೀಂದ್ರನಾಥ್, ಎ.ನಾರಾಯಣಸ್ವಾಮಿ, ಶಾಸಕರಾದ ಸೊಗಡು ಶಿವಣ್ಣ, ಅಪ್ಪಚ್ಚು ರಂಜನ್, ಸಿ.ಟಿ.ರವಿ, ಬಿ.ಸಿ.ನಾಗೇಶ್, ಬಿ.ಎನ್.ವಿಜಯಕುಮಾರ್, ಡಿ.ಎಚ್.ಶಂಕರಮೂರ್ತಿ ಸೇರಿದಂತೆ ಹಲವರು ಈಶ್ವರಪ್ಪ ಬೆಂಬಲಕ್ಕೆ ನಿಂತಿದ್ದಾರೆ. ಇವರಲ್ಲಿ ಕೆಲವರು ಈಶ್ವರಪ್ಪ ಅವರನ್ನು ಭೇಟಿ ಮಾಡಿ `ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದರೆ ತಾವು ಕೂಡ ಸ್ಪರ್ಧೆಗೆ ಇಳಿಯಬೇಕು~ ಎಂದು ಒತ್ತಡ ಹಾಕಿದ್ದಾರೆ. ಈಶ್ವರಪ್ಪ ಅವರೂ ಭಾನುವಾರ ಆಪ್ತರ ಜತೆ ಈ ಸಂಬಂಧ ಚರ್ಚೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, `ಪಕ್ಷದ ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದು ಗೊತ್ತಿಲ್ಲ. ಪಕ್ಷ ಹೇಳಿದಂತೆ ನಡೆದುಕೊಳ್ಳುವುದು ನನ್ನ ಜಾಯಮಾನ~ ಎಂದಿದ್ದಾರೆ.

ಇದರ ಮಧ್ಯೆ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಯಡಿಯೂರಪ್ಪ ಅವರನ್ನು ಭಾನುವಾರ ಈಶ್ವರಪ್ಪ ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಸದಾನಂದ ಗೌಡ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಲಿಂಗಾಯತರಿಗೆ ಅವಕಾಶ ತಪ್ಪಿಸಿದರು ಎಂಬ ಆರೋಪದಿಂದ ಮುಕ್ತರಾಗಲು ಯಡಿಯೂರಪ್ಪ ಅವರು ಶೆಟ್ಟರ್ ಅವರ ಪರ ನಿಂತಿದ್ದಾರೆ. ಇದರ ಹೊರತಾಗಿ ಶೆಟ್ಟರ್ ಅವರ ಬಗ್ಗೆ ವಿಶೇಷ ಮಮತೆ ಏನೂ ಇಲ್ಲ ಎಂದು ಅವರ ಬಣದ ಶಾಸಕರೇ ಹೇಳುತ್ತಾರೆ.

ಎರಡು ಪ್ರಬಲ ಸಮುದಾಯಗಳಿಗೆ ಅವಕಾಶ ದೊರೆತಿದೆ. ಮತ್ತೊಂದು ಪ್ರಮುಖ ಸಮುದಾಯವಾದ ಕುರುಬ ಜನಾಂಗದವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಹಿಂದುಳಿದ ವರ್ಗಗಳ ಮತಗಳು ಪಕ್ಷದ ಪರ ವಾಲುವ ಅವಕಾಶ ಇದೆ ಎಂದು ಈಶ್ವರಪ್ಪ ಪರ ನಿಂತಿರುವ ಮುಖಂಡರು ವಾದ ಹೂಡಿದ್ದಾರೆ.

ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಇತರರು ಕೂಡ ಜಿಂದಾಲ್‌ಗೆ ತೆರಳಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಸಿಎಂ ಸಭೆ: ಈ ಎಲ್ಲ ಬೆಳವಣಿಗೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸದಾನಂದ ಗೌಡ ಅವರು ಮಂಗಳವಾರ ಸಂಜೆ ತಮ್ಮ ಬೆಂಬಲಿಗ ಸಚಿವರ ಸಭೆಯನ್ನು ಕರೆದಿದ್ದಾರೆ ಎನ್ನಲಾಗಿದೆ. ಸಚಿವರಿಗೆ ಸ್ವತಃ ಮುಖ್ಯಮಂತ್ರಿಯೇ ದೂರವಾಣಿ ಕರೆ ಮಾಡಿ ನಗರಕ್ಕೆ ಬರುವಂತೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಪ್ರಧಾನ್ ಭೇಟಿ: ಇದೇ 28ರ ರಾತ್ರಿ ನಗರಕ್ಕೆ ಬರಲಿರುವ ಪಕ್ಷದ ರಾಜ್ಯದ ಉಸ್ತುವಾರಿ ಧರ್ಮೇಂದ್ರ ಪ್ರದಾನ್ ಅವರು 29 ಮತ್ತು 30ರಂದು ನಗರದಲ್ಲೇ ಉಳಿಯಲಿದ್ದಾರೆ. ಪಕ್ಷದಲ್ಲಿನ ಗೊಂದಲಗಳ ಕುರಿತು ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.