ಈಶ್ವರಪ್ಪ ಸಾರಥ್ಯದಲ್ಲೇ ಚುನಾವಣೆಗೆ ಬಿಜೆಪಿ ನಿರ್ಧಾರ

7

ಈಶ್ವರಪ್ಪ ಸಾರಥ್ಯದಲ್ಲೇ ಚುನಾವಣೆಗೆ ಬಿಜೆಪಿ ನಿರ್ಧಾರ

Published:
Updated:

ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಕೊಡದಿದ್ದರೆ ಪಕ್ಷ ತೊರೆಯುವುದಾಗಿ ಬೆದರಿಕೆ ಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ `ಬ್ಲಾಕ್‌ಮೇಲ್ ತಂತ್ರ~ಕ್ಕೆ ಮಣಿಯದ ವರಿಷ್ಠರು, ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲು ತೀರ್ಮಾನಿಸಿದ್ದಾರೆ.ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮನೆಯಲ್ಲಿ ಸೋಮವಾರ ತಡರಾತ್ರಿ ಸೇರಿದ್ದ ಸಭೆಯಲ್ಲಿ ಈಶ್ವರಪ್ಪ ಅವರನ್ನೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದಕ್ಕಾಗಿ ಅವರು ಉಪ ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ಅಗತ್ಯವಿಲ್ಲ. ಎರಡೂ ಜವಾಬ್ದಾರಿ ನಿಭಾಯಿಸಬಹುದೆಂದು ಸ್ಪಷ್ಟಪಡಿಸಲಾಯಿತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಧಾರವಾಡ ಲೋಕಸಭಾ ಸದಸ್ಯ ಪ್ರಹ್ಲಾದ ಜೋಶಿ, ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರಿಗೆ ಹೆಚ್ಚು ಸಮಯವನ್ನು ಪಕ್ಷದ ಸಂಘಟನೆಗೆ ಮೀಸಲಿಡಲು ಸೂಚಿಸಲಾಯಿತು.ಗಡ್ಕರಿ ಭರವಸೆ: `ಯಡಿಯೂರಪ್ಪ ಅವರನ್ನು ಲೆಕ್ಕಕ್ಕೆ ಹಿಡಿಯಬೇಡಿ. ಬಿಜೆಪಿ ಬಿಡುವುದಾಗಿ ಹೇಳುತ್ತಿರುವ ಅವರ ಮಾತುಗಳಿಗೆ ಬೆಲೆ ಕೊಡಬೇಡಿ. ಅವರು ಹೋದರೆ ಹೋಗಲಿ. ನೀವು ಚುನಾವಣೆಗೆ ಸಜ್ಜಾಗಿ. ಎಲ್ಲ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಮಾವೇಶ ಸಂಘಟಿಸಿ. ಹೈಕಮಾಂಡ್ ನಿಮಗೆ ಅಗತ್ಯ ಬೆಂಬಲ ಮತ್ತು ಸಹಕಾರ ನೀಡಲಿದೆ~ ಎಂದು ಗಡ್ಕರಿ ಭರವಸೆ ನೀಡಿದ್ದಾರೆ.`ಯಡಿಯೂರಪ್ಪ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದ್ದಾರೆ. ಅವರು ಖಂಡಿತ ಬಿಜೆಪಿ ತೊರೆಯುವುದಿಲ್ಲ. ಸುಮ್ಮನೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಅವರ ಒತ್ತಡಕ್ಕೆ ಮಣಿಯುವುದು ಬೇಡ. ಯಾವುದೇ ಪರಿಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನವಿರಲಿ, ಪ್ರಚಾರ ಸಮಿತಿ ನೇತೃತ್ವ ಕೂಡಾ ಕೊಡುವುದಿಲ್ಲ. ಲಿಂಗಾಯತ ಸಮಾಜ ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ. ನಾವು ಬಹುಸಂಖ್ಯಾತ ಸಮಾಜ ಕಡೆಗಣಿಸಿಲ್ಲ. ಅದೇ ಸಮಾಜದ ಜಗದೀಶ ಶೆಟ್ಟರ್ ಅವರನ್ನೇ ಮುಖ್ಯಮಂತ್ರಿ ಮಾಡಿದ್ದೇವೆ. ಹೀಗಾಗಿ ಯಾರಿಗೂ ಬಗ್ಗುವ ಅಗತ್ಯವಿಲ್ಲ~ ಎಂದು ಗಡ್ಕರಿ ಹೇಳಿದ್ದಾರೆ.`ನಿಮಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪನವರಿಗೆ ನೇರವಾಗಿ ಹೇಳಲಾಗಿದೆ. ಹೇಗಾದರೂ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕೆಂದು ಕಸರತ್ತು ಮುಂದುವರಿಸಿದ್ದಾರೆ. ಅವರು ಪಕ್ಷದಲ್ಲಿ ಇದ್ದರೂ ಅಷ್ಟೇ, ಹೋದರೂ ಅಷ್ಟೇ ನಾವಂತೂ ಅವರನ್ನು ಹೊರ ಹಾಕುವುದಿಲ್ಲ ಎಂಬ ಮಾತನ್ನು ಗಡ್ಕರಿ ಹೇಳಿದ್ದಾರೆ. ಚುನಾವಣೆಗೆ ಪಕ್ಷದ ನೇತೃತ್ವ ವಹಿಸುವಂತೆಯೂ ಈಶ್ವರಪ್ಪ ಅವರಿಗೆ ಸೂಚಿಸಿದರು. ` ಪಕ್ಷಕ್ಕೆ ಮಗ್ಗುಲ ಮುಳ್ಳಾಗಿರುವ ಯಡಿಯೂರಪ್ಪ ಅವರನ್ನು ಸಮರ್ಥವಾಗಿ ಎದುರಿಸಬಲ್ಲ ಶಕ್ತಿ- ಸಾಮರ್ಥ್ಯ ನಿಮಗಿದೆ. ನೀವು ಡಿಸಿಎಂ ಹುದ್ದೆ ಬಿಡಬೇಕಾದ ಅಗತ್ಯವಿಲ್ಲ. ಎರಡನ್ನೂ ನಿಭಾಯಿಸಬಹುದು~ ಎಂದು ಸಲಹೆ ನೀಡಿದ್ದಾರೆ.

ಈಶ್ವರಪ್ಪ ಅವರ ಜತೆಗೂಡಿ ಕೆಲಸ ಮಾಡಲು ಜೋಶಿ ಮತ್ತು ಕಟೀಲು ಸಮ್ಮತಿಸಿದರು. ಈಶ್ವರಪ್ಪ ಅವರನ್ನೇ ಮುಂದುವರಿಸುವ ನಿರ್ಧಾರಕ್ಕೆ ಅಭ್ಯಂತರವಿಲ್ಲ. ಆದರೆ, ಸ್ವಲ್ಪ ಮುಂಚೆಯೇ ಈ ತೀರ್ಮಾನ ಪ್ರಕಟವಾಗಿದ್ದರೆ ಪಕ್ಷಕ್ಕೆ ಹೆಚ್ಚು ಲಾಭವಾಗುತ್ತಿತ್ತು ಎಂಬ ಅಭಿಪ್ರಾಯವನ್ನು ಇಬ್ಬರೂ ವ್ಯಕ್ತಪಡಿಸಿದರು ಎಂದು ಅಧಿಕೃತ ಮೂಲಗಳು ಹೇಳಿವೆ.ಯಡಿಯೂರಪ್ಪ ಬಿಜೆಪಿ ಬಿಡಬಾರದು. ಹೊಸ ಪಕ್ಷ ಹುಟ್ಟುಹಾಕಲೂಬಾರದು ಎಂಬ ದೃಷ್ಟಿಯಿಂದ ಬಿಜೆಪಿ ವರಿಷ್ಠರು ಈಶ್ವರಪ್ಪ ಅವರನ್ನೇ ಮುಂದುವರಿಸುವ ತೀರ್ಮಾನ ಮಾಡಿದ್ದಾರೆ ಎಂದು ಮೂಲಗಳು ವ್ಯಾಖ್ಯಾನಿಸಿವೆ. ಕಳೆದ ತಿಂಗಳು ಹರಿಯಾಣದ ಸೂರಜ್‌ಕುಂಡ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ತೆರೆಮರೆಯಲ್ಲಿ ಸಮಾಲೋಚಿಸಿದ ವರಿಷ್ಠರು, ಈಶ್ವರಪ್ಪ ಅವರೇ ರಾಜ್ಯ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂಬ ನಿಲುವು ವ್ಯಕ್ತಪಡಿಸಿದ್ದರು.

ಹಾವೇರಿಯಲ್ಲಿ ಬಿಎಸ್‌ವೈ ನೂತನ ಪಕ್ಷದ ಘೋಷಣೆ ?

ಹಾವೇರಿ
:  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ಪಕ್ಷದ ಘೋಷಣೆಗೆ ಹಾವೇರಿಯನ್ನು ಬಹುತೇಕ ಆಯ್ಕೆ ಮಾಡಿಕೊಂಡಿದ್ದು ಮುಹೂರ್ತವನ್ನು ಡಿಸೆಂಬರ್ 10ಕ್ಕೆ ನಿಗದಿಪಡಿಸಿದ್ದಾರೆ ಎನ್ನಲಾಗಿದೆ. `ಅಂದು ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ತಮ್ಮ ಪಕ್ಷದ  ಘೋಷಣೆ ಮಾಡಲಿದ್ದಾರೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ತಮ್ಮ ಬೆಂಬಲಿಗ ಸಚಿವರು, ಶಾಸಕರಿಗೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ~ ಎಂದು ಬಿಜೆಪಿ ಮುಖಂಡರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಮನವೊಲಿಕೆ- ಮನವರಿಕೆ ಸಾಧ್ಯವಿಲ್ಲ: ಬಿಎಸ್‌ವೈ

ಕೊಪ್ಪಳ: `
ನವರಾತ್ರಿ ಆರಂಭವಾಗುವ ದಿನವಾದ ಇಂದು ಹೇಳುತ್ತೇನೆ ಕೇಳಿ, ನಾನು ಬಿಜೆಪಿ ಜೊತೆ ಸಂಬಂಧ ಕಡಿದುಕೊಂಡಿದ್ದೇನೆ. ಅವರು (ಬಿಜೆಪಿ ಹೈಕಮಾಂಡ್) ನನ್ನ ಮನವೊಲಿಸುವುದಾಗಲಿ ನಾನು ಅವರಿಗೆ ಮನವರಿಕೆ ಮಾಡಿಕೊಡುವುದಾಗಲಿ ಸಾಧ್ಯವಿಲ್ಲ~ - ಇವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಖಚಿತ ಮಾತುಗಳು. ಬಿಜೆಪಿ ಹೈಕಮಾಂಡ್ ಮನವೊಲಿಸಿದರೆ ಪಕ್ಷ ಬಿಡುವ ನಿರ್ಧಾರದಿಂದ ಹಿಂದೆ ಸರಿಯುವಿರಾ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry