ಬುಧವಾರ, ನವೆಂಬರ್ 13, 2019
21 °C

`ಈಶ್ವರಪ್ಪ ಸ್ವಕ್ಷೇತ್ರದಲ್ಲಿ ಗೆದ್ದು ತೋರಿಸಲಿ'

Published:
Updated:

ಹಾವೇರಿ: `ಹಾವೇರಿಯಲ್ಲಿ ಹುಟ್ಟಿದ ಕೆಜೆಪಿ ಹಾವೇರಿಯಲ್ಲಿಯೇ ಸಾಯುತ್ತದೆ ಎಂದು ಹೇಳಿರುವ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು, ತಾಕತ್ತಿದ್ದರೆ ತಮ್ಮ ಸ್ವಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದರು.ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ನಡೆದ ಕೆಜೆಪಿ ಅಭ್ಯರ್ಥಿ ನೆಹರೂ ಓಲೇಕಾರ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಎಸ್‌ವೈ ಇಲ್ಲದ ಬಿಜೆಪಿ ಮುಳುಗುವ ಹಡಗಿನಂತಾಗಿದೆ. ಅದನ್ನು ಮೊದಲು ಕಾಪಾಡಿಕೊಳ್ಳುವತ್ತ ಈಶ್ವರಪ್ಪ ಗಮನ ಹರಿಸಲು ಎಂದು ಸಲಹೆ ಮಾಡಿದರು.ಬಿಜೆಪಿಯಂತಹ ಮುಳುಗುವ ಹಡಗು ಹತ್ತಲು ಯಾರೂ ಇಷ್ಟಪಡುವುದಿಲ್ಲ. ಇದರಿಂದ ಬಹಳಷ್ಟು ಜನರು ಹಾಗೂ ಮುಖಂಡರು ಕೆಜೆಪಿಯತ್ತ ಒಲವು ತೋರುತ್ತಿದ್ದಾರೆ. ಈ ವಾತಾವರಣ ಕೇವಲ ಹಾವೇರಿಯಷ್ಟೇ ಅಲ್ಲದೇ ಇಡಿ ರಾಜ್ಯದಲ್ಲಿದೆ ಎಂದು ಹೇಳಿದರು.

ಮಹಿಳಾ ಬ್ಯಾಂಕ್: ತಮ್ಮ ಪಕ್ಷ ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದ್ದು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೂರು ತಿಂಗಳೊಳಗೆ ದೇಶದಲ್ಲಿಯೇ ಪ್ರಥಮ ಎನ್ನಬಹುದಾದ ಮಹಿಳಾ ಸಹಕಾರ ಬ್ಯಾಂಕ್ ಸ್ಥಾಪಿಸಲಾಗುವುದು. ಅದಕ್ಕಾಗಿ 2 ಸಾವಿರ ಕೋಟಿ ರೂಪಾಯಿ ತೆಗೆರಿಸಲಾಗುವುದು ಎಂದು ತಿಳಿಸಿದರು.ಅದೇ ರೀತಿ ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಸಾಲ ಮಾಡಿಯಾದರೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದ ಅವರು, ಅಲ್ಪಸಂಖ್ಯಾತರನ್ನು ಹಿಂದಿನ ಸರ್ಕಾರಗಳು ಕೇವಲ ಮತಬ್ಯಾಂಕ್ ಮಾಡಿಕೊಂಡು ಕೈಬಿಟ್ಟಿದ್ದಾರೆ ಎಂದು ಆಪಾದಿಸಿದರು.ತಮ್ಮ ಪಕ್ಷ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹೆಚ್ಚಿನ ಒತ್ತು ನೀಡಲಿದೆ. ಅವರ ಶಿಕ್ಷಣ ಹಾಗೂ ಸ್ವಾವಲಂಬಿ ಜೀವನಕ್ಕಾಗಿ 2 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದ ಅವರು, ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಅಗತ್ಯ ಹಣ ಬಿಡುಗಡೆ ಮಾಡುವ ಮೂಲಕ ರಾಜ್ಯದ ಎಲ್ಲ ತಾಲ್ಲೂಕುಗಳನ್ನು ಸಮಾನ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಇಡೀ ದೇಶದಲ್ಲಿ ಮಾದರಿ ರಾಜ್ಯವನ್ನಾಗಿಸುವ ಕನಸು ಹೊಂದಿರುವುದಾಗಿ ತಿಳಿಸಿದರು.ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕೆಜೆಪಿ ಸರ್ಕಾರ ಸ್ಥಾಪನೆಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡಬೇಕೆಂದು ಮತದಾರರಿಗೆ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ, ಬಿಜೆಪಿಯ ಸ್ಲಂ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪೇಲನವರ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ನಗರಸಭೆಗೆ ಈಚೆಗಷ್ಟೇ ಆಯ್ಕೆಯಾದ ಇರ್ಫಾನ್ ಪಠಾಣ ಸೇರಿದಂತೆ ಇನ್ನಿತರರು ಇದೇ ಸಂದರ್ಭದಲ್ಲಿ ಕೆಜೆಪಿಗೆ ಸೇರ್ಪಡೆಯಾದರು.ಪ್ರಚಾರ ಸಭೆಯಲ್ಲಿ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷ ಜಬ್ಬರಖಾನ್ ಹೊನ್ನಳ್ಳಿ,ಮಾಜಿ ಸಚಿವ ಸಿ.ಎಂ. ಉದಾಸಿ, ಬ್ಯಾಡಗಿ ಕ್ಷೇತ್ರದ ಅಭ್ಯರ್ಥಿ ಶಿವರಾಜ ಸಜ್ಜನರ, ಹಾವೇರಿ ಕ್ಷೇತ್ರದ ಅಭ್ಯರ್ಥಿ ನೆಹರೂ ಓಲೇಕಾರ, ಜಿ.ಪಂ.ಮಾಜಿ ಉಪಾಧ್ಯಕ್ಷ ಬಸವರಾಜ ಕಂಬಳಿ, ಕೆಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೈಲಪ್ಪ ಗುಡಗೂರು, ಜಗದೀಶ ಮಲಗೋಡ, ಗಿರೀಶ ತುಪ್ಪದ, ಕೆ.ಸಿ.ಕೋರಿ, ಸುರೇಶ ಹೊಸಮನಿ, ವಿಜಯಕುಮಾರ ಚಿನ್ನಿಕಟ್ಟಿ, ಬಾಬುಸಾಬ ಮೋಮಿನಗಾರ ಅಲ್ಲದೇ ಅನೇಕರು ಹಾಜರಿದ್ದರು.

ಪ್ರತಿಕ್ರಿಯಿಸಿ (+)