ಸೋಮವಾರ, ಜೂನ್ 21, 2021
29 °C

ಈಶ್ವರ ದೇವಾಲಯ ಲೋಕಾರ್ಪಣೆಗೆ ಸಜ್ಜು

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ/ ಹೇಮಂತ್‌ ಎಂ. ಎನ್‌. Updated:

ಅಕ್ಷರ ಗಾತ್ರ : | |

ವಿರಾಜಪೇಟೆ: ಸಮೀಪದ ಅರಪಟ್ಟು ಗ್ರಾಮದಲ್ಲಿ 47 ಏಕರೆ ವಿಸ್ತೀರ್ಣದ ದೇವರ ಕಾಡಿನಲ್ಲಿದ್ದ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಪಟ್ಟೋಟು ಈಶ್ವರ ದೇವಾಲಯವು ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಮಾರ್ಚ್‌ 18, 19 ಮತ್ತು 20ರಂದು ದೇವಾಲಯದ ಪುನರ್‌ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ನಡೆಯಲಿದೆ.ಲ್ಯಾಟರೈಟ್‌ ಕಲ್ಲುಗಳಿಂದ ನಿರ್ಮಾಣಗೊಂಡಿದ್ದ ದೇವಾಲಯವು ಅಪರೂಪ ಎನ್ನುವಂತಹ ಸುಂದರ ಕೆತ್ತನೆಗಳಿಂದ ಕೂಡಿತ್ತು. ದೇವಾಲಯದ ಮೇಲ್ಚಾವಣಿ ಕೂಡ ಕಲ್ಲಿನಿಂದ ನಿರ್ಮಾಣಗೊಂಡಿತ್ತು. ಯಾವುದೇ ಮೇಲ್ಚಾವಣಿ ಇಲ್ಲದೆಯೂ ಮಳೆಗಾಳಿಗೆ ಎದೆಯೊಡ್ಡಿ ಭದ್ರವಾಗಿ ಅನೇಕ ವರ್ಷಗಳವರೆಗೆ ನಿಂತಿತ್ತು. ದೇವಾಲಯದ ಗರ್ಭಗುಡಿಯ ಒಳಗಿನ ಗೋಳಾಕಾರದ ವಿನ್ಯಾಸ ಎಲ್ಲರನ್ನು ಆಶ್ಚರ್ಯಗೊಳಿಸುವಂತೆ ಸುಂದರವಾದ ರೀತಿಯಿಂದ ನಿರ್ಮಾಣವಾಗಿತ್ತು. ಇದು ಆ ಕಾಲದ ಕೆಲಸಗಾರರ ನೈಪುಣ್ಯತೆಗೆ ಸಾಕ್ಷಿಯಾಗಿದೆ.

ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕೊಡಗಿನ ಇತರ ದೇವಾಲಯಗಳಂತೆ ಅನ್ಯರ ದಾಳಿಗೆ ತುತ್ತಾಗಿ ದೇವಾಲಯದ ಅನೇಕ ಭಾಗಗಳು ನಾಶವಾಗಿ ಶಿಥಿಲಾವಸ್ಥೆಗೆ ತಲುಪಿದ್ದವು.ಎರಡು ವರ್ಷಗಳ ಹಿಂದೆ ದೇವಾಲಯವನ್ನು ಜೀರ್ಣೋದ್ಧಾರ ಮಾಡುವ ಕಾರ್ಯಕ್ಕೆ ಮುಂದಾದ ಭಕ್ತರು, ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯ ಗೌರವಾಧ್ಯಕ್ಷತೆ ಹಾಗೂ ಊರಿನ ಹಿರಿಯರ ಮಾರ್ಗದರ್ಶನದಲ್ಲಿ ಪಟ್ಟೋಟು ಈಶ್ವರ ದೇವಸ್ಥಾನ ಜಿರ್ಣೋದ್ಧಾರ ಸಮಿತಿಯನ್ನು ರಚಿಸಿದರು.ಉಡುಪಿಯ ಮುರುಳಿಧರ ತಂತ್ರಿಯಿಂದ ಅಷ್ಟಮಂಗಲ ಪ್ರಶ್ನೆ ನೋಡಿಕೊಂಡು ದೇವಾಲಯದ ಜಿರ್ಣೋದ್ಧಾರ ಕೆಲಸವನ್ನು ಪ್ರಾರಂಭಿಸಲಾಯಿತು. ದೇವಾಲಯವನ್ನು ಮೂಲಸ್ವರೂಪದಲ್ಲಿಯೇ ನಿರ್ಮಿಸಬೇಕು ಎಂಬ ನಿಶ್ಚಯದೊಂದಿಗೆ ಕೇರಳದಿಂದ ಲ್ಯಾಟರೈಟ್‌ ಕಲ್ಲನ್ನು ದೇವಾಲಯ ನಿರ್ಮಾಣಕ್ಕಾಗಿ ತರಿಸಿಕೊಳ್ಳಲಾಯಿತು. ಕಾಸರಗೋಡಿನ ಪ್ರಸನ್ನ ಮುಳಿಯಾಳ ಎಂಬ ಶಿಲ್ಪಿಯ ಮಾರ್ಗದರ್ಶನದಲ್ಲಿ ಮಂಗಳೂರಿನ ರಾಜೇಂದ್ರ ತಂಡದವರು ದೇವಾಲಯದ ನಿರ್ಮಾಣದ ಕಾರ್ಯ ಕೈಗೊಂಡರು.ಇದರ ಫಲವಾಗಿ ಕಾಡಿನ ನಡುವೆ ಸುಂದರವಾದ ದೇವಾಲಯದ ಗರ್ಭಗುಡಿ ಹಾಗೂ ತೀರ್ಥ ಮಂಟಪವು ನಿರ್ಮಾಣವಾಗಿದೆ. ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲು ಮಧ್ಯಪ್ರದೇಶದ ನರ್ಮದಾ ನದಿಯಿಂದ ಬಂಡೆಯನ್ನು ತಂದು ಕಾರ್ಕಳದಲ್ಲಿ ಶಿವಲಿಂಗದ ಕೆತ್ತನೆಯನ್ನು ಮಾಡಲಾಗಿದೆ.ಸರ್ಕಾರ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಅಂದಾಜು ₨ 45 ಲಕ್ಷ ಮೊತ್ತದಲ್ಲಿ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮೂಲ ಸ್ವರೂಪದಲ್ಲಿ ತಲೆ ಎತ್ತಿ ನಿಂತಿರುವ ದೇವಾಲಯದ ಪುನರ್‌ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವವು ಕುಂದಾಪುರದ ವೇ.ಮೂ. ಕೃಷ್ಣ ಸೋಮಯಾಜಿ ಅವರ ನೇತೃತ್ವದಲ್ಲಿ ಮಾರ್ಚ್‌ 18, 19 ಹಾಗೂ 20ರಂದು ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.