ಗುರುವಾರ , ಮೇ 19, 2022
21 °C

ಈಸಬೇಕು ಇದ್ದು ಜೈಸಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊರಗಿನಿಂದ ಬಂದವರಿಗೆ ಉಡುಪಿ ಬಹಳ ಸುಂದರವಾದ ಜಿಲ್ಲೆ ಅನ್ನಿಸುತ್ತದೆ. ಕೃಷ್ಣಮಠ, ಮಲ್ಪೆಯ ಕಡಲ ತೀರ, ಸೇಂಟ್ ಮೇರಿಸ್ ದ್ವೀಪ ಇತ್ಯಾದಿಗಳನ್ನು ನೋಡಿದವರು ಈ ಜಿಲ್ಲೆ ಅತ್ಯಂತ ಸುಂದರ ಎನ್ನುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಇನ್ನು ಕೆಲವರು ಉಡುಪಿಯನ್ನು ‘ಬುದ್ಧಿವಂತರ ಜಿಲ್ಲೆ’ ಎಂದೂ ಮೆಚ್ಚುಗೆಯ ಮಾತು ಹೇಳುತ್ತಾರೆ. ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿ ಹಾಗೂ ಇತರ ಮಂತ್ರಿಗಳು ಉಡುಪಿಯನ್ನು ‘ಮಾದರಿ ಜಿಲ್ಲೆ’ ಎಂದು ಕರೆದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.ದುರದೃಷ್ಟದ ಸಂಗತಿ ಎಂದರೆ ಈಗಲೂ ದೋಣಿ ಹತ್ತಿ ಸಣ್ಣ ಪುಟ್ಟ ಹೊಳೆ, ಹಳ್ಳ, ಹಿನ್ನೀರು ಪ್ರದೇಶವನ್ನು ದಾಟಿಕೊಂಡು ಉಡುಪಿಗೆ ಬರಬೇಕಾದ ನಡುಗಡ್ಡೆಯಂತಹ ಪ್ರದೇಶಗಳು ಇಲ್ಲಿವೆ. ಸುತ್ತ ನೀರಿರುವ ನಡುಗಡ್ಡೆಗಳನ್ನು ‘ಕುದ್ರು’ಗಳು ಎನ್ನುತ್ತಾರೆ. ಜಿಲ್ಲೆಯಲ್ಲಿ ಅನೇಕ ಕುದ್ರುಗಳಿವೆ. ರಸ್ತೆ, ಶುದ್ಧ ನೀರು, ವಿದ್ಯುತ್ ಇಲ್ಲದ ಕುದ್ರುಗಳೂ ಇವೆ. ಈ ‘ಕುದ್ರು’ಗಳಲ್ಲಿ ವಾಸಿಸುವ ಜನರ ಬದುಕು ‘ಈಸಬೇಕು ಇದ್ದು ಜೈಸಬೇಕು’ ಎಂಬಂತಿದೆ.ಕೆಲವು ‘ಕುದ್ರು’ಗಳಲ್ಲಿ ದೋಣಿ ನಡೆಸುವವರಿಲ್ಲದೆ ಅಲ್ಲಿನ ಮಕ್ಕಳು ಶಾಲೆಗೆ ಹೋಗಲು ಆಗಿಲ್ಲ. ಶಾಲೆಗೆ ಹೋಗಬೇಕೆಂದರೆ ದೋಣಿ ದಾಟಿದ ಬಳಿಕ ಎರಡು ಕಿ.ಮೀ ನಡೆಯಬೇಕು. ಇಂಥ ಕುದ್ರುಗಳಲ್ಲಿ ವಾಸ ಮಾಡುವ ಪ್ರಾಯದ ಹುಡುಗರಿಗೆ ಹೆಣ್ಣು ಕೊಡಲು ಕನ್ಯಾಪಿತೃಗಳೂ ಹಿಂದೇಟು ಹಾಕುತ್ತಾರೆ. ಕಾಯಿಲೆಗೆ ತುತ್ತಾದವರು ವೈದ್ಯರನ್ನು ಕಾಣಲು ದೋಣಿ ದಾಟಿ ಹೋಗುವಾಗ ಸತ್ತ ಉದಾಹರಣೆಗಳಿವೆ. ಅನೇಕ ಕುದ್ರುಗಳ ಮಕ್ಕಳು ಮಳೆಗಾಲದಲ್ಲಿ ಮೂರ್ನಾಲ್ಕು ತಿಂಗಳು ಶಾಲೆಗೆ ಗೈರು ಹಾಜರಾಗುತ್ತಾರೆ.ಬ್ರಹ್ಮಾವರದಿಂದ ನೀಲಾವರಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ‘ಬಾವಲಿ’ ಎಂಬ ಕುದ್ರುವಿನ ವಾಸಿಗಳ ಬದುಕು ಅತ್ಯಂತ ಶೋಚನೀಯ. ಸೀತಾ ನದಿ ನೀರಿನಿಂದ ಆವೃತ್ತವಾಗಿರುವ ‘ಬಾವಲಿ ಕುದ್ರು’ ಮೂಲ ಸೌಕರ್ಯಗಳಿಂದ ವಂಚಿತವಾದ ಊರು.ಒಂದು ಕಾಲದಲ್ಲಿ ಅದು ಬಾವಲಿಗಳ ಸಾಮ್ರಾಜ್ಯವಾಗಿತ್ತು. ಈಗ ಬಾವಲಿಗಳಿಲ್ಲ. ಸುಮಾರು 100 ಎಕರೆ ವಿಸ್ತಾರ ಪರಿಸರದಲ್ಲಿ 23 ಕ್ರಿಶ್ಚಿಯನ್ ಕುಟುಂಬಗಳಿವೆ. ಜನಸಂಖ್ಯೆ ನೂರು ದಾಟುವುದಿಲ್ಲ. ಅಲ್ಲಿಗೆ ಯಾವ ಪತ್ರಿಕೆಯೂ ಬರುವುದಿಲ್ಲ.ನೀಲಾವರಕ್ಕೆ ಹೋಗಲು ಸಂಪರ್ಕ ಸೇತುವೆ ನಿರ್ಮಿಸಿ ಕೊಡಿ ಎಂಬುದು ಬಾವಲಿ ಕುದ್ರುವಿನ ಜನರ ಬಹುಕಾಲದ ಬೇಡಿಕೆ.ಮಳೆ ಬಂದಾಗ ಇಲ್ಲಿನ ಮನೆಗಳು ಅರ್ಧ ಭಾಗ ಜಲಾವೃತವಾಗುತ್ತವೆ. ಆಗ ಕುಡಿಯುವ ನೀರಿಗೆ ಜನರು ಪರದಾಡುತ್ತಾರೆ. ಬೇಸಿಗೆಯಲ್ಲೂ ನೀರಿಗೆ ತತ್ವಾರ. ಬಾವಿಗಳಲ್ಲಿ ಉಪ್ಪು ನೀರು. ದೋಣಿಯಲ್ಲಿ ಹೋಗಿ ಪಕ್ಕದ ಊರುಗಳಿಂದ ಸಿಹಿ ನೀರು ತರುವುದು ನಿಜಕ್ಕೂ ಅತ್ಯಂತ ಕಷ್ಟದ ಕೆಲಸ.‘ನಾವು ಹುಡುಗರಾಗಿದ್ದಾಗ ಊರಿನ ಹಿರಿಯರು ಸರ್ಕಾರ ನಮಗೆ ಸೇತುವೆ ನಿರ್ಮಿಸಿ ಕೊಡುತ್ತದೆ ಎಂದು ಸಂಭ್ರಮದಿಂದ ಹೇಳುತ್ತಿದ್ದರು. ಆದರೆ ನಾವು ದೋಣಿಯಲ್ಲಿ ಹೋಗಿ ನೀಲಾವರದಲ್ಲಿ ಕಲಿತೆವು, ಉದ್ಯೋಗವನ್ನೂ ಪಡೆದೆವು. ಆದರೆ ನಮಗೆ ಹೆಣ್ಣು ಕೊಡಲು ಯಾರೂ ತಯಾರಿರಲಿಲ್ಲ. ಈಗ ಅನೇಕ ಯುವಕರು ಊರು ಬಿಟ್ಟು ಹೋಗಿದ್ದಾರೆ ಎನ್ನುತ್ತಾರೆ ಬಹರೈನ್‌ನಲ್ಲಿ ಐಟಿ ಉದ್ಯೋಗಿಯಾಗಿರುವ ಇದೇ ಕುದ್ರುವಿನ ಸ್ಟೀಫನ್ ಡಿ’ಸೋಜಾ. ಈಗ ಅವರು ರಜೆ ಮೇಲೆ ಊರಿಗೆ ಬಂದಿದ್ದಾರೆ.‘ಈ ಊರಿನ ಯುವಕರನ್ನು ಮದುವೆಯಾಗಿ ಇಲ್ಲಿ ನೆಲೆಸಿರುವ ಮಹಿಳೆಯರು ತಮ್ಮ ಅದೃಷ್ಟವನ್ನು ಹಳಿದುಕೊಳ್ಳುತ್ತಾರೆ. ನಿತ್ಯ ದೋಣಿಯಲ್ಲಿ ಹೋಗಿ ಅಕ್ಕ ಪಕ್ಕದ ಊರುಗಳಿಂದ ಸಿಹಿ ನೀರು ತಂದು ತಂದೂ ಸಾಕಾಗಿ ಹೋಗಿದೆ. ನೀರು ತರುವಾಗ ಉರುಳಿ ನದಿಗೆ ಬಿದ್ದ ಪ್ರಸಂಗಗಳಿವೆ’ ಎನ್ನುತ್ತಾರೆ ವೀಣಾ ಫೆರಾವೊ ಎಂಬ ಮಹಿಳೆ.ನಮ್ಮ ಹಿರಿಯರು ದೋಣಿ ದಾಟಿಕೊಂಡೇ ಜೀವನ ನಡೆಸಿದರು. ಈಗಿನ ಯುವಕರಿಗೆ ದೋಣಿ ನಡೆಸಲು ಬಾರದು. ಕಷ್ಟಪಟ್ಟು ಹೊರಗೆ ಹೋಗಿ ವಿದ್ಯೆ ಕಲಿತು ಉದ್ಯೋಗ ಹಿಡಿದಿದ್ದಾರೆ. ಅಂಥವರು ಹೆತ್ತವರನ್ನು ಕರೆದುಕೊಂಡು ಬೇರೆಡೆಗೆ ಹೋಗಿ ನೆಲೆಸಿದ್ದಾರೆ. ಒಂದು ಕಾಲದಲ್ಲಿ ಬಾವಲಿ ಕುದ್ರುವಿನ ಜನರು ಭತ್ತ, ಕಬ್ಬು, ತೆಂಗು ಬೆಳೆಯುತ್ತಿದ್ದರು. ಈಗ ತೆಂಗು ಹೊರತು ಬೇರೇನೂ ಬೆಳೆಯುತ್ತಿಲ್ಲ.‘ಕಳೆದ 30 ವರ್ಷಗಳಿಂದ ಸರ್ಕಾರ ಅಧಿಕಾರಿಗಳು, ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಚುನಾವಣೆ ಸಮಯದಲ್ಲಿ ಎಲ್ಲರೂ ಭರವಸೆ ಕೊಡುತ್ತಾರೆ. ಮತ್ತೆ ಅವರು ಇಲ್ಲಿಗೆ ಬರುವುದು ಐದು ವರ್ಷಗಳ ನಂತರವೇ. ನಮ್ಮ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂದು ಇಲ್ಲಿನ ಜನರು ಸಿಟ್ಟು, ಹತಾಶೆಯಿಂದ ಹೇಳುತ್ತಾರೆ. ಉಡುಪಿ ಜಿಲ್ಲಾ ಪಂಚಾಯ್ತಿ ಮೂಲಕ ಬಾವಲಿ ಕುದ್ರುವಿಗೆ ಸಂಪರ್ಕ ಸೇತುವೆ ನಿರ್ಮಿಸಲು 33 ಲಕ್ಷ ರೂಪಾಯಿಗಳ ಅಂದಾಜು ಯೋಜನೆ ರೂಪಿಸಿದೆ.ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬರುವ ವಿಶ್ವಾಸ ಜನರಿಗೆ ಇಲ್ಲ. ಇಂತಹ ಕೆಲವು ಕುದ್ರುಗಳ ಮೇಲೆ ಪ್ರವಾಸೋದ್ಯಮ ಇಲಾಖೆ ಹಾಗೂ ಉದ್ಯಮಿಗಳ ಕಣ್ಣು ಬಿದ್ದಿದೆ. ಇವನ್ನು ಬಳಸಿಕೊಂಡು ‘ಐಲ್ಯಾಂಡ್ ರೆಸಾರ್ಟ್’ಗಳನ್ನು ನಿರ್ಮಿಸುವ ಮಾತುಗಳು ಕೇಳಿ ಬರುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.