ಈ ಅಜ್ಜಿ ಎಲ್ಲರಿಗೂ ಮಾದರಿ...

ಗುರುವಾರ , ಜೂಲೈ 18, 2019
28 °C

ಈ ಅಜ್ಜಿ ಎಲ್ಲರಿಗೂ ಮಾದರಿ...

Published:
Updated:

ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಗ್ರಾಮದ ನಿಂಗಮ್ಮ ಕರಿಯಪ್ಪ ಮೂರುಣ್ಣಿ ಎಂಬ 80 ವರ್ಷ ವಯೋವೃದ್ಧೆ ಅನುಕರಣೀಯ ಕಾರ್ಯ ಮಾಡಿದ್ದಾರೆ. ಗ್ರಾಮದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಡೆದಿದ್ದ ಬೆಳೆ ಸಾಲವನ್ನು ಕರಾರುವಾಕ್ಕಾಗಿ ಮರುಪಾವತಿ ಮಾಡುವ ಮೂಲಕ ಮಾದರಿಯಾಗಿದ್ದಾಳೆ.ಪಡೆದ ಸಾಲವನ್ನು ಮರುಪಾವತಿ ಮಾಡಿದ್ದರಲ್ಲಿ ಅಂಥ ವಿಶೇಷ ಏನಿದೆ ಎಂದು ಅಚ್ಚರಿಯೂ ಆಗಬಹುದು.

ಈ ಅಜ್ಜಿ ಕಳೆದ 10 ವರ್ಷಗಳಿಂದ ಈ ರೀತಿ ಸಾಲವನ್ನು ಮರುಪಾವತಿ ಮಾಡುತ್ತಿದ್ದಾಳೆ. ಅಲ್ಲದೇ, ಬರಗಾಲ, ಬೆಳೆ ಹಾನಿ ಎಂಬಂತಹ ಸಬೂಬು ಹೇಳುವುದು ಇಲ್ಲವೇ ಸರ್ಕಾರ ನೀಡುವ ಸಾಲ ಮನ್ನಾದಂತಹ ಸೌಲಭ್ಯದ ನೆಪದಲ್ಲಿ ಸಾಲ ಮರುಪಾವತಿಸದಿರುವಂತಹ ಕಾರ್ಯಕ್ಕೆ ಕೈ ಹಾಕಿಲ್ಲ ಎಂಬುದು ಈ ಅಜ್ಜಿಯ   ಹೆಗ್ಗಳಿಕೆ. ಈಚೆಗೆ ಸಂಘದ ಕಚೇರಿಗೆ ಆಗಮಿಸಿ ಸಾಲವನ್ನು ಮರುಪಾವತಿ ಮಾಡುತ್ತಿದ್ದ ಅಜ್ಜಿಯನ್ನು ಗ್ರಾಹಕರೊಬ್ಬರು ಮಾತಿಗೆಳೆದರಲ್ಲದೇ, ತಮಾಷೆಗಾಗಿ `ಸಾಲ ಮನ್ನಾ ಆಕೈತಿ ಕಟ್ಟಬ್ಯಾಡಬೇ~ ಎಂದು ಕಿಚಾಯಿಸಿದರು.ಆ ಮಾತಿಗೆ ಅಜ್ಜಿ `ಆವಾಗ ನಮ್ಮ ಯಜಮಾನ ಊರ ತುಂಬ ಅಡ್ಡಾಡಿದಾಗ ಯಾವ ಸಾವಕಾರರು ಹಂತೇಕ ಬರಗೊಡಲಿಲ್ಲ. ಹೀಗ ಕೆಳಕೊಂತ ನಾನು, ನನ ಗಂಡ ಸೊಸೈಟಿಗೆ ಬಂದ್ವಿ. ಅವಾಗ ಸೊಸೈಟಿ ಗದ್ದಲ ಇರತಿದ್ದಿಲ್ಲ. ಅಲ್ಲಿ ಕೇಳಿದ್ವಿ, ಒಂದ ಮಾತ್ಗೆ 15 ಸಾವಿರ ಕೊಟ್ರು. ಬಾಳವಿ ಛಂದಾತು. ಈಗ ನೋಡು ಮುದೇತನು ಇಲ್ಲ, ಈ ಮೊಮ್ಮಗನ (ಸಂಘದ ಸಿಬ್ಬಂದಿ) ಎಲ್ಲಾ ನೋಡಕೊತಾನ. ಯಾವಾಗ ಕೇಳಿದರೂ ನಮ್ಮಪ್ಪ ಇಲ್ಲ ಅನ್ನದಿಲ್ಲ ಇಂತಾತನ ರೊಕ್ಕ ಕಟ್ಟಬ್ಯಾಡಂದ್ರ ಹ್ಯಾಗ ಯಪ್ಪ. ಬ್ಯಾಡಪ್ಪ ದೇವರು ಮಳಿಬೆಳಿ ಕೊಡ್ಲಿ, ಅವರ ಸಾಲ ಎಷ್ಟರದು~ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದಳು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry