ಈ ಊರಾಗ ರಸ್ತೆ ಅನ್ನೋದ ಕಾಣೋದಿಲ್ರಿ

7

ಈ ಊರಾಗ ರಸ್ತೆ ಅನ್ನೋದ ಕಾಣೋದಿಲ್ರಿ

Published:
Updated:
ಈ ಊರಾಗ ರಸ್ತೆ ಅನ್ನೋದ ಕಾಣೋದಿಲ್ರಿ

ಯಾದಗಿರಿ: “ಜಿಲ್ಲಾ ಆಗಿ ಎರಡು ವರ್ಷ ಕಳುದು ನೋಡ್ರಿ. ಅದೊಂದ ಸಾಧನೆ. ಯಾದಗಿರ‌್ಯಾಗ ಎಲ್ಲಿ ನೋಡಿದ್ರು, ರಸ್ತೆದಾಗ ತೆಗ್ಗ ಬಿದ್ದಾವ. ಈ ಊರಾಗ ರಸ್ತೆ ಅನ್ನೋದ ಕಾಣೋದಿಲ್ಲ ನೋಡ್ರಿ”

ಜಿಲ್ಲಾ ಕೇಂದ್ರದ ನಾಗರಿಕರು ನೊಂದು ಹೇಳುತ್ತಿರುವ ಮಾತುಗಳಿವು. ತೆಗ್ಗುಗಳ ಮಧ್ಯೆ ರಸ್ತೆಯನ್ನು ಹುಡುಕಿ ತಿರುಗಾಡುವ ಸಾಹಸವನ್ನು ನಿತ್ಯವೂ ನಾಗರಿಕರು ಮಾಡಬೇಕಾಗಿದೆ.

 

ನಗರವನ್ನು ಪ್ರತಿನಿಧಿಸುತ್ತಿರುವ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅವರೇ, ಅಟೋ ರಿಕ್ಷಾದಲ್ಲಿ ಕುಳಿತು ರಸ್ತೆಗಳ ದುಸ್ಥಿತಿಯನ್ನು ಪರಿಶೀಲಿಸಿದ್ದರು. ಇದಾಗಿ ಒಂದು ವರ್ಷವೇ ಕಳೆದಿದ್ದರೂ, ಇದುವರೆಗೆ ಶಾಸಕರ ಅಟೋ ಪ್ರಯಾಣದಿಂದ ಪ್ರಯೋಜನ ಮಾತ್ರ ಸಿಕ್ಕಿಲ್ಲ.ನಗರದ ಶಾಸ್ತ್ರಿ ವೃತ್ತದಿಂದ ಸ್ಟೇಶನ್ ರಸ್ತೆ, ಗಂಜ್ ರಸ್ತೆ, ಚಿತ್ತಾಪುರ ರಸ್ತೆಗಳನ್ನು ಹೊರತುಪಡಿಸಿದರೆ, ಉಳಿದ ಯಾವ ರಸ್ತೆಗಳೂ ಡಾಂಬರ್ ಕಾಣದೇ ವರ್ಷಗಳೇ ಕಳೆದಿವೆ. ಪ್ರಮುಖ ರಸ್ತೆಗಳ ಸ್ಥಿತಿಯೇ ಇಷ್ಟೊಂದು ಗಂಭೀರವಾಗಿದ್ದು, ಇನ್ನು ಒಳರಸ್ತೆಗಳ ಸ್ಥಿತಿಯಂತೂ ಹೇಳತೀರದಾಗಿದೆ.

 

ರಸ್ತೆಗಳ ಮಧ್ಯದಲ್ಲಿಯೇ ದೊಡ್ಡ ಹೊಂಡಗಳು ಬಿದ್ದಿದ್ದು, ಚರಂಡಿಯ ನೀರು ಸಂಗ್ರಹವಾಗುತ್ತಿದೆ. ಇದರಿಂದ ವಾಹನಗಳ ಸವಾರರು, ಹರಸಾಹಸ ಪಟ್ಟು ರಸ್ತೆ ದಾಟುವಂತಾಗಿದೆ.ನಗರದ ಜನನಿಬಿಡ ರಸ್ತೆಗಳಾದ ಗ್ರಾಮೀಣ ಠಾಣೆಯಿಂದ ಪದವಿ ಕಾಲೇಜಿನವರೆಗಿನ ರಸ್ತೆ, ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಹೈದರಾಬಾದ್ ರಸ್ತೆಯಿಂದ ಜಿಲ್ಲಾ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿಯಿಂದ ಡಿಡಿಪಿಐ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹೀಗೆ ಹತ್ತು ಹಲವು ರಸ್ತೆಗಳು ದುರಸ್ತಿಗಾಗಿ ಕಾದು ಕುಳಿತಿವೆ.ಕೊಟ್ಟ ಭರವಸೆ ಈಡೇರಿಸಲಿಲ್ಲ: ನಗರದ ರಸ್ತೆಗಳ ದುರಸ್ತಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು, ಹದಗೆಟ್ಟ ರಸ್ತೆಯಲ್ಲಿಯೇ ಕುಳಿತು ಧರಣಿ ನಡೆಸಿದ್ದರು. ಕಳೆದ ನವೆಂಬರ್‌ನಲ್ಲಿ ಕರವೇ ಕಾರ್ಯಕರ್ತರು ಧರಣಿ ನಡೆಸಿದ್ದ ಸಂದರ್ಭದಲ್ಲಿ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಗಳ ಎಂಜಿನಿಯರ್‌ಗಳು, ಎರಡು ತಿಂಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸುವುದಾಗಿ ಲಿಖಿತ ಭರವಸೆ ನೀಡಿದ್ದರು. ಆದರೆ ಅದು ಇನ್ನೂ ಈಡೇರಿಯೇ ಇಲ್ಲ ಎನ್ನುತ್ತಾರೆ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ.ಒಂದೆಡೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಬಂದಿದೆ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಶಾಸಕರು ಮಾತ್ರ ಸರ್ಕಾರ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಇಬ್ಬರ ರಾಜಕೀಯದ ಮಧ್ಯೆ ನಗರದ ಜನರಿಗೆ ಒಳ್ಳೆಯ ರಸ್ತೆ ಸಿಗದಂತಾಗಿವೆ ಎಂದು ನೋವು ತೋಡಿಕೊಳ್ಳುತ್ತಾರೆ.ಜಿಲ್ಲಾ ಕೇಂದ್ರವಾಗಿರುವ ಯಾದಗಿರಿಯಲ್ಲಿ ಈಗಲೂ ಹಳೆಯ ಕಾಲದ ರಸ್ತೆಗಳೇ ಇವೆ. ನಗರಸಭೆಯ ಎದುರಿಗಂತೂ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಜಿಲ್ಲಾ ಕೇಂದ್ರವಾದ ನಂತರ ವಾಹನ ದಟ್ಟಣೆ ವಿಪರೀತವಾಗಿದ್ದು, ಅದಕ್ಕೆ ತಕ್ಕಂತೆ ರಸ್ತೆಗಳು ದುರಸ್ತಿ ಆಗುತ್ತಿಲ್ಲ ಎಂದು ಭೀಮುನಾಯಕ ಹೇಳುತ್ತಾರೆ.ಸಾಕಾಗಿ ಹೋಗಿದೆ: ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿ ಸಾಕಾಗಿ ಹೋಗಿದೆ. ಸಲ್ಲಿಸುವ ಮನವಿ ಪತ್ರಗಳಿಗೂ ಬೆಲೆ ಇಲ್ಲದಂತಾಗಿದೆ. ಕೇಳುವವರೇ ಇಲ್ಲದಂತಾಗಿದ್ದು, ಅಧಿಕಾರಿಗಳು ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿಯೇ ರಸ್ತೆಗಳ ಅಭಿವೃದ್ಧಿ ನೆನೆಗುದಿಗೆ ಬೀಳುತ್ತಿದೆ ಎಂದು ಯುವ ಮುಖಂಡ ನಾಗರಾಜ ಬೀರನೂರ ಆರೋಪಿಸುತ್ತಾರೆ.ನಗರದಲ್ಲಿ ಒಂದು ಒಳ್ಳೆಯ ರಸ್ತೆಯನ್ನು ತೋರಿಸಿಕೊಡಿ. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ. ಎಸ್.ಆರ್. ನಾಯಕರೂ, ಇಲ್ಲಿನ ಅವ್ಯವಸ್ಥೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಂತೂ ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾದರೆ, ಜಿಲ್ಲಾ ಕೇಂದ್ರ ಅಭಿವೃದ್ಧಿ ಆಗುವುದಾದರೂ ಯಾವಾಗ ಎಂಬ ಪ್ರಶ್ನೆ ಜಯಕರ್ನಾಟಕ ಸಂಘಟನೆ ಕೃಷ್ಣಮೂರ್ತಿ ಕುಲಕರ್ಣಿ ಅವರದ್ದು.ನಗರದ ಜನರ ಕಷ್ಟಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹೋರಾಟ ಮಾಡಿದರೂ, ಪ್ರಯೋಜನ ಇಲ್ಲದಂತಾಗಿದೆ. ಬೇರೆ ಊರಿನ ಜನರು ಬಂದು ನೋಡಿದರೆ, ಜಿಲ್ಲಾ ಕೇಂದ್ರದ ಬಗ್ಗೆ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಬೇಸಿಗೆ ಮುಗಿಯುವುದರೊಳಗಾಗಿ ರಸ್ತೆಗಳನ್ನು ದುರಸ್ತಿ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಭೀಮಾಶಂಕರ ಆಲ್ದಾಳ, ಶ್ರೀಕಾಂತ ಭೀಮನಳ್ಳಿ ಮನವಿ ಮಾಡುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry