ಈ ಚಾನೆಲ್‌ಗೆ 2 ಲಕ್ಷ ಒಡೆಯರು

7

ಈ ಚಾನೆಲ್‌ಗೆ 2 ಲಕ್ಷ ಒಡೆಯರು

Published:
Updated:

ಹೈದರಾಬಾದ್: ಸುದ್ದಿ ಚಾನೆಲ್‌ಗಳ ಜಗತ್ತಿಗೆ ಹೊಸ ಚಾನೆಲ್ ಸೇರ್ಪಡೆಗೊಂಡಿದೆ. ಇದು ಉಳಿದೆವುಗಳಿಗಿಂತ ಭಿನ್ನ! ದೇಶದಲ್ಲಿ ಇದು ಮೊದಲ ಪ್ರಯೋಗ.ಆಂಧ್ರಪ್ರದೇಶದಲ್ಲಿ ಆರಂಭವಾಗಿರುವ `10ಟಿವಿ' ಎಂಬ ಹೆಸರಿನ ಈ ಚಾನೆಲ್ ಮಾಲೀಕರು ಸಾರ್ವಜನಿಕರೇ.ಕೆಲವು ಸಾವಿರ ದಿನಗೂಲಿ ನೌಕರರೂ ಸೇರಿದಂತೆ ಎರಡು ಲಕ್ಷ ಜನರು 10 ರೂ ಮುಖಬೆಲೆಯ ಈ ಚಾನೆಲ್‌ನ ಷೇರನ್ನು ಖರೀದಿಸಿದ್ದಾರೆ. ಹಾಗಾಗಿ ಈ ಚಾನೆಲ್ ಸಂಪೂರ್ಣವಾಗಿ ಸಾಮಾನ್ಯ ಜನರದ್ದೇ ಎಂದು ಚಾನೆಲ್‌ನ ಪ್ರವರ್ತಕರು ಹೇಳಿದ್ದಾರೆ.ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರು ಚಾನೆಲ್‌ನ ಲಾಂಛನವನ್ನು ಶುಕ್ರವಾರ ಬಿಡುಗಡೆ ಮಾಡಿದರು.`ದ ಫೋರ್ತ್ ಎಸ್ಟೇಟ್ ವಿದ್ ಎ ಸಿಕ್ತ್ಸ್ ಸೆನ್ಸ್' ಎಂಬ ಅಡಿಬರಹವನ್ನು ಈ ಚಾನೆಲ್‌ನ ಲಾಂಛನ ಹೊಂದಿದೆ.ಈಗಾಗಲೇ ಆಂಧ್ರದಲ್ಲಿ 15 ಪ್ರಾದೇಶಿಕ ಸುದ್ದಿಚಾನೆಲ್‌ಗಳಿವೆ. ಆದರೆ ಇವುಗಳಲ್ಲಿ ಹೆಚ್ಚಿನ ಚಾನೆಲ್‌ಗಳ ಮಾಲೀಕರು ರಾಜಕಾರಣಿಗಳು ಇಲ್ಲವೇ  ಬಲವಾದ ರಾಜಕೀಯ ಸಿದ್ಧಾಂತವನ್ನು ಹೊಂದಿದವರು. ಹಾಗಾಗಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ `10ಟಿವಿ' ಮಾಲೀಕತ್ವದ ಮಾದರಿ ಇತರ ಚಾನೆಲ್‌ಗಳಿಂದ ಭಿನ್ನವಾಗಿದೆ. ಆದರೂ, ಹೊಸ ಚಾನೆಲ್‌ಗೆ ಸಿಪಿಎಂ ಪಕ್ಷದ ಬೆಂಬಲವಿದೆ ಎಂಬ ಮಾತುಗಳು ಕೇಳಿ ಬರುತ್ತಿದೆಯಾದರೂ,  ಪ್ರವರ್ತಕರು ಇದನ್ನು ಅಲ್ಲೆಗಳೆದಿದ್ದಾರೆ.`ಗಂಭೀರ ಪತ್ರಿಕೋದ್ಯಮದ ಬಗ್ಗೆ ಚಿಂತಿಸುವವರಿಗೆ ನಮ್ಮ ಚಾನೆಲ್ ಪರ್ಯಾಯ ವೇದಿಕೆಯಾಗಲಿದೆ. ನಾವು ಸುದ್ದಿಗಳಲ್ಲಿ ನಿಜವಾದ ಚಿತ್ರಗಳನ್ನೇ ಪ್ರಸಾರ ಮಾಡಲಿದ್ದೇವೆ. ಟಿಆರ್‌ಪಿಗಾಗಿ ಪೈಪೋಟಿಗೆ ಬಿದ್ದವರಂತೆ ಎಲ್ಲಾ ಚಾನೆಲ್‌ಗಳು ವಯಸ್ಕರಿಗೆ ಮೀಸಲಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವ ಸಂದರ್ಭದಲ್ಲಿ ಒಂದು ಸುದ್ದಿ ಚಾನೆಲ್ ಹೇಗಿರಬೇಕು ಎಂಬುದನ್ನು ನಾವು ತೋರಿಸಲಿದ್ದೇವೆ' ಎಂದು ಚಾನೆಲ್ ಅಧ್ಯಕ್ಷ, ಪತ್ರಿಕೋದ್ಯಮದ ಪ್ರೊಫೆಸರ್  ಹಾಗೂ ವಿಧಾನ ಪರಿಷತ್ ಸದಸ್ಯರೂ ಆಗಿರುವ ಕೆ.ನಾಗೇಶ್ವರ್ ಹೇಳಿದ್ದಾರೆ.ನಾಗೇಶ್ವರ್ ಅವರು ಎಡ ಪಂಥೀಯ ಸಿದ್ಧಾಂತವಾದಿ ಎಂದೇ ಖ್ಯಾತರಾಗಿದ್ದಾರೆ. `ಜನರ, ಸಮಾಜ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಮಾನತೆಯ ಕುರಿತಾಗಿ ಕಾಳಜಿ ಹೊಂದಿರುವ ಪ್ರಗತಿಪರ ಸಿದ್ಧಾಂತವಾದಿಗಳು ಜೊತೆ ಯಾಗಿಸ್ಫೂರ್ತಿ ಕಮ್ಯುನಿಕೇಷನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.

ಈ ಸಂಸ್ಥೆಯು ಪ್ರಗತಿ ಬ್ರಾಡ್‌ಕಾಸ್ಟಿಂಗ್ ಮತ್ತು ಅಭ್ಯುದಯ ಬ್ರಾಡ್‌ಕಾಸ್ಟಿಂಗ್ ಸಂಸ್ಥೆಯೊಂದಿಗೆ ಕೈ ಜೋಡಿಸಿ `10 ಟಿವಿ' ಸ್ಥಾಪಿಸಿದೆ' ಎಂದು ಚಾನೆಲ್‌ನ ಅಧಿಕೃತ ವೆಬ್‌ಸೈಟ್ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry