ಶುಕ್ರವಾರ, ಮಾರ್ಚ್ 5, 2021
29 °C

ಈ ತಿಂಗಳ ಅಂತ್ಯದೊಳಗೆ ಆರಂಭ ಅನುಮಾನ

ಶಶಿಧರ ಗರ್ಗೇಶ್ವರಿ Updated:

ಅಕ್ಷರ ಗಾತ್ರ : | |

ಈ ತಿಂಗಳ ಅಂತ್ಯದೊಳಗೆ ಆರಂಭ ಅನುಮಾನ

ರಾಯಚೂರು: ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ವೈಟಿಪಿಎಸ್‌) ಮೊದಲ ಘಟಕದ ಪ್ರಾಯೋಗಿಕ ಪರೀಕ್ಷೆ ಈ ತಿಂಗಳ ಅಂತ್ಯದೊಳಗೆ ನಡೆಸಲು ನಿಶ್ಚಯವಾಗಿದೆ. ಆದರೆ, ಕೆಲವು ತಾಂತ್ರಿಕ ಸಮಸ್ಯೆಗಳು ಪರಿಹಾರವಾಗದ ಕಾರಣ ಪ್ರಾಯೋಗಿಕ ಪರೀಕ್ಷೆ ಮುಂದೂಡುವ ಸಾಧ್ಯತೆ ಇದೆ.ಎಲ್‌ಡಿಒ (ಲೈಟ್‌ ಡೀಸೆಲ್‌ ಆಯಿಲ್‌) ಮತ್ತು ಎಸ್‌ಎಫ್‌ಒ (ಹೆವಿ ಫ್ಯೂಯಲ್‌ ಆಯಿಲ್‌) ತೈಲ ಬಳಸಿ ಮೊದಲ ಘಟಕದ ಪರೀಕ್ಷಾರ್ಥ ಪ್ರಯೋಗವನ್ನು ಜ.30 ಅಥವಾ 31ರಂದು ನಡೆಸಲು ಸಿದ್ಧತೆಗಳು ನಡೆದಿದ್ದವು. ಆದರೆ, ಬಾಯ್ಲರ್‌ ಘಟಕದಲ್ಲಿನ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಈ ಕಾರ್ಯ ಪೂರ್ಣವಾಗುವುದು ಅನುಮಾನ ಎಂದು ವೈಟಿಪಿಎಸ್‌ ಮೂಲಗಳು ತಿಳಿಸಿವೆ.ಆರ್‌ಟಿಪಿಎಸ್‌ನ (ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ) ಜಾಕ್‌ವೆಲ್‌ ಇರುವ ಸ್ಥಳದ ಸಮೀಪದಲ್ಲೇ ವೈಟಿಪಿಎಸ್‌ನ ಜಾಕ್‌ವೆಲ್‌ ಸ್ಥಾಪಿಸಲಾಗಿದೆ. ವಾರ್ಷಿಕವಾಗಿ 1.56 ಟಿ.ಎಂ.ಸಿ. ನೀರು ವೈಟಿಪಿಎಸ್‌ಗೆ ಮಂಜೂರಾಗಿದ್ದು, ನೀರು ಪೂರೈಕೆಯ ಕೊಳಾಯಿ ಮಾರ್ಗ ನಿರ್ಮಾಣದ ಕಾಮಗಾರಿ ಕೂಡ ಮುಗಿಯುವ ಹಂತಕ್ಕೆ ಬಂದಿದೆ.ಯರಮರಸ್‌ ರೈಲು ನಿಲ್ದಾಣದಿಂದ ವೈಟಿಪಿಎಸ್‌ಗೆ ಹಳಿ ನಿರ್ಮಾಣ ಕಾರ್ಯ ಆರಂಭವಾಗಿದೆ. ಈ ಕಾಮಗಾರಿ ಮುಗಿಯುವವರೆಗೆ ಅಗತ್ಯ ಕಲ್ಲಿದ್ದಲನ್ನು ಆರ್‌ಟಿಪಿಎಸ್‌ನಿಂದ ರಸ್ತೆ ಮೂಲಕ ಸಾಗಣೆ ಮಾಡಲಾಗುತ್ತದೆ.ಈ ಶಾಖೋತ್ಪನ್ನ ಘಟಕವು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುವ ಕಾರಣ ನೀರು ಮತ್ತು ಕಲ್ಲಿದ್ದಲಿನ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗಿ ಹೆಚ್ಚು ವಿದ್ಯುತ್‌ ಉತ್ಪಾದನೆ ಆಗಲಿದೆ.ಮೊದಲ ಘಟಕದ ಪ್ರಾಯೋಗಿಕ ಪರೀಕ್ಷೆಯನ್ನು ಎಲ್‌ಡಿಒ ಮತ್ತು ಎಸ್‌ಎಫ್‌ಒ ತೈಲ ಬಳಸಿ ನಡೆಸಲಾಗುತ್ತದೆ. ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಂಡು, ನಂತರದಲ್ಲಿ ಕಲ್ಲಿದ್ದಲಿನಿಂದ ವಿದ್ಯುತ್‌ ಉತ್ಪಾದನೆ ಆರಂಭಗೊಳ್ಳಲಿದೆ.ಕೆಪಿಸಿ ಮತ್ತು ಬಿಎಚ್‌ಇಎಲ್‌ ಸಹಯೋಗದಲ್ಲಿ ರಾಯಚೂರು ಬಳಿಯ ಯರಮರಸ್‌ ಹೊರವಲಯದಲ್ಲಿ ತಲಾ 800 ಮೆಗಾವಾಟ್‌ ಸಾಮರ್ಥ್ಯದ ಎರಡು ಘಟಕಗಳನ್ನು ಸುಮಾರು ₹9 ಸಾವಿರ ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. 2010ರಲ್ಲಿ ಆರಂಭವಾದ ವೈಟಿಪಿಎಸ್ ಕಾಮಗಾರಿ, 2015ರ ಮಾರ್ಚ್‌ ಹೊತ್ತಿಗೆ ಮುಗಿದು ಮೊದಲ ಘಟಕದ ಪ್ರಾಯೋಗಿಕ ಪರೀಕ್ಷೆ ಅದೇ ತಿಂಗಳು ನಡೆಯಬೇಕಿತ್ತು. ಆದರೆ, ಕೇಂದ್ರ ಸರ್ಕಾರದ ಕಲ್ಲಿದ್ದಲು ಪರಿಸರ ಸಚಿವಾಲಯದಿಂದ ಅಗತ್ಯ ಅನುಮತಿ ದೊರೆಯುವುದು ಹಾಗೂ ಸ್ಥಳೀಯವಾಗಿ ಕೆಲವು ಅಡಚಣೆಗಳು ಎದುರಾದ ಕಾರಣ ಪ್ರಾಯೋಗಿಕ ಪರೀಕ್ಷೆ 11 ತಿಂಗಳು ತಡವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.