ಈ ದುರಂತ ತಪ್ಪಿಸಬಹುದಿತ್ತೇ?

7

ಈ ದುರಂತ ತಪ್ಪಿಸಬಹುದಿತ್ತೇ?

Published:
Updated:

ಕೋಲಾರ: ಜಿಲ್ಲೆಯ ಕೆಜಿಎಫ್‌ನಲ್ಲಿ ಮಲದಗುಂಡಿಗಳು ಸದ್ಯಕ್ಕೆ ಬಿಟ್ಟರೂ ಬಿಡದ ಮಾಯೆಯ ರೂಪ ತಾಳಿವೆ.

ನಗರಸಭೆ ವ್ಯಾಪ್ತಿಯಲ್ಲಿ ಕೈಯಿಂದ ಮಲ ತೆಗೆಯುವುದನ್ನು ನಿಷೇಧಿಸಲಾಗಿದೆ. ಆ ಕೆಲಸ ಮಾಡುವುದು ಮತ್ತು ಮಾಡಿಸುವುದು ಎರಡೂ ಅಪರಾಧ ಎಂದು ನಗರಸಭೆ ನಿರ್ಣಯ ಅಂಗೀಕರಿಸಲಾಗಿದೆ.ಆ ಕುರಿತು ಪ್ರಚಾರ ಕರಪತ್ರಗಳನ್ನೂ ಒಂದು ತಿಂಗಳ ಹಿಂದೆ ಹಂಚಿದ್ದೂ ಆಗಿದೆ. ಮಲದಗುಂಡಿಯನ್ನು ಸ್ವಚ್ಛಗೊಳಿಸಲು ನಗರಸಭೆಯ ಸಕ್ಕಿಂಗ್ ಯಂತ್ರ ಸೌಲಭ್ಯವನ್ನು ಶುಲ್ಕ ಪಾವತಿಸಿ ಪಡೆಯಬಹುದು ಎಂಬ ಸೂಚನೆಗೆ ಕಿಮ್ಮತ್ತು ಸಿಕ್ಕಿಲ್ಲ.ಇದೇ ವೇಳೆ, ಸಫಾಯಿ ಕರ್ಮಚಾರಿಗಳು ಮಲದಗುಂಡಿಗೆ ಇಳಿದು ದುಡಿಯದೆ ಬೇರೆ ಬದುಕಿಲ್ಲ ಎಂಬ ಅಸಹಾಯಕತೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ. ಮೂರು ತಿಂಗಳು ತಾತ್ಕಾಲಿಕವಾಗಿ 140 ಮಂದಿಗೆ (ಅವರಲ್ಲಿ ಕೆಲಸಕ್ಕೆ ಹಾಜರಾದವರು 137) ನೀಡಿದ್ದ ಕೆಲಸವನ್ನು ಮುಂದುವರಿಸಿದ್ದರೆ ಸೋಮವಾರ ಮೂವರು ದುರ್ಮರಣಕ್ಕೆ ಈಡಾಗುತ್ತಿರಲಿಲ್ಲ ಎಂಬ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.ವಿಪರ್ಯಾಸವೆಂದರೆ, ಅದೇ ಸಮುದಾಯದ ಹಲವರು ಪೇಂಟಿಂಗ್, ಬೆಂಗಳೂರಿನ ಬಟ್ಟೆ ಅಂಗಡಿಗಳಲ್ಲಿನ ಕೆಲಸವೂ ಸೇರಿದಂತೆ ಪರ್ಯಾಯ ಉದ್ಯೋಗಗಳನ್ನೂ ಮಾಡುತ್ತಿದ್ದಾರೆ. ಇದೇ ವೇಳೆ, ಮಲದಗುಂಡಿ ಸ್ವಚ್ಛಗೊಳಿಸುವ ಕೆಲಸವನ್ನು ಕಮಿಷನ್ ಆಸೆಗಾಗಿ ಜೀವಂತವಾಗಿಡಲು ಪ್ರಯತ್ನಿಸುತ್ತಿರುವ ಕೆಲವು ದಲ್ಲಾಳಿಗಳು, ಮಲದಗುಡಿಗೆ ಇಳಿದು ಕೆಲಸ ಮಾಡಿದರೆ ಆಡಳಿತದ ಗಮನ ಸೆಳೆದು ಸೌಲಭ್ಯಗಳನ್ನು ಪಡೆಯಬಹುದು ಎಂಬ ಕುಮ್ಮಕ್ಕನ್ನು ಸಫಾಯಿ ಕರ್ಮಾಚಾರಿಗಳಿಗೆ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.ಅಶೋಕನಗರದಲ್ಲಿ ಸೋಮವಾರ ಮಲದಗುಂಡಿ ಸ್ವಚ್ಛಗೊಳಿಸಲು ಇಳಿದು ಕೆನಡಿಸ್ ಲೈನ್‌ನ ತೆಲುಗು ಲೈನಿನ ಮೂವರು ಮೃತಪಟ್ಟ ದುರ್ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ `ಪ್ರಜಾವಾಣಿ~ಗೆ ಈ ಅಂಶಗಳು ಗಮನಕ್ಕೆ ಬಂದವು.~ತಲತಲಾಂತರದಿಂದ ಇದೇ ಕೆಲಸ ಮಾಡುತ್ತಿರುವ ನಮಗೆ ನಗರಸಭೆ ಪೂರ್ಣಾವಧಿ ಕೆಲಸವನ್ನೇ ಕೊಟ್ಟಿಲ್ಲ. ಕೆಲವರಿಗೆ ಸಿಕ್ಕಿದೆ. ಹಲವರಿಗೆ ಸಿಕ್ಕಿಲ್ಲ. ಇದನ್ನೆ ನಂಬಿಕೊಂಡಿರುವ ನಮಗೆ, ನಗರಾಭಿವೃದ್ಧಿ ಸಚಿವರ ಸೂಚನೆ ಮೇರೆಗೆ ಮೂರು ತಿಂಗಳು ನಗರಸಭೆ ಕೆಲಸ ಕೊಟ್ಟಿತು. ಆದರೆ ಅ. 3ರಿಂದ ಆ ಕೆಲಸವೂ ಇಲ್ಲ. ಆ ಕೆಲಸವನ್ನೆ ಮುಂದುವರಿಸಿದ್ದರೂ ಈ ಸಾವುಗಳು ಸಂಭವಿಸುತ್ತಿರಲಿಲ್ಲ~ ಎಂಬುದು ಸಫಾಯಿ ಕರ್ಮಚಾರಿ ಹೋರಾಟ ಸಮಿತಿಯ ಕಾರ್ಯದರ್ಶಿ ಪ್ರಭು ಅವರ ನುಡಿ.ಸತ್ತಿರುವ ಮೂವರ ಪೈಕಿ ಪ್ರಸಾದ್‌ಕುಟ್ಟಿ ಈ ಸಮಿತಿಯ ಅಧ್ಯಕ್ಷರಾಗಿದ್ದವರು. ಪ್ರಭುವಿನ ಚಿಕ್ಕಪ್ಪ ಕೆಲಸ ಕೊಡಿ ಎಂದು ಅ.10ರಂದು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಿದ್ದರೂ ಪ್ರಯೋಜನವಾಗಲಿಲ್ಲ ಎಂಬುದು ಅವರ ಹತಾಶೆಯ ನುಡಿ.ಆದರೆ ಅದಕ್ಕೆ ಭಿನ್ನವಾದ ಉತ್ತರ ನೀಡುತ್ತಾರೆ ನಗರಸಭೆ ಆಯುಕ್ತ ವಿ.ಬಾಲಚಂದ್ರ. ಅವರ ಪ್ರಕಾರ, 2006-07ನೇ ಸಾಲಿನಲ್ಲೆ ಸ್ವಂತ ಉದ್ಯೋಗ ಕೈಗೊಳ್ಳುವ ಸಲುವಾಗಿಯೇ ನಗರದ 2 ಸಾವಿರ ಸಫಾಯಿ ಕರ್ಮಚಾರಿಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಮತ್ತಿತರ ಸೌಲಭ್ಯಗಳನ್ನು ವಿತರಿಸಲಾಗಿದೆ. ಆದರೂ, ಪ್ರಾಣಾಪಾಯ ಇದೆ ಎಂಬ ಅರಿವಿದ್ದರೂ ಹಲವರು ಇನ್ನೂ ಈ ಕೆಲಸದಲ್ಲೆ ಮುಂದುವರಿಯುವುದು ಎಷ್ಟು ಸೂಕ್ತ?~ ಎಂಬುದು ಅವರ ಪ್ರಶ್ನೆ.ಮೂರು ತಿಂಗಳ ಹಿಂದೆ ನಿಗಮದ ಸಿಬ್ಬಂದಿ ಮತ್ತು ನಾವು ಮತ್ತೆ ಅರ್ಜಿ ಕೊಡಲು ಹೋದಾಗ ಸಾಲ ಬೇಡ ಕಾಯಂ ಕೆಲಸ ಕೊಡಿ ಎಂದು ಸಫಾಯಿ ಕರ್ಮಚಾರಿಗಳಲ್ಲಿ ಯಾರೊಬ್ಬರೂ ಅರ್ಜಿ ಪಡೆಯಲೇ ಇಲ್ಲ. 140 ಸಫಾಯಿ ಕರ್ಮಚಾರಿಗಳಿಗೆ ಪೂರ್ಣಕಾಲಿಕ ಉದ್ಯೋಗ ನೀಡುವುದು ಸದ್ಯಕ್ಕೆ ಸಾಧ್ಯವಿಲ್ಲದ  ಸಂಗತಿ ಎನ್ನುತ್ತಾರೆ.

 

ಆಂಧ್ರ ಲೇನಿನ ಹಲವರು ಮಾತ್ರ ಮಲದಗುಂಡಿಗೆ ಇಳಿಯುವ ಸಾಹಸ ಮಾಡುತ್ತಿದ್ದಾರೆ. ಬೇರೆ ಲೈನಿನವರು ಈ ಕೆಲಸವನ್ನು ಮಾಡುತ್ತಿಲ್ಲ. ಅದಕ್ಕೆ ಕೆಲವು ದಲ್ಲಾಳಿಗಳ ಕುಮ್ಮಕ್ಕು ಕಾರಣ ಎಂಬುದು ಅವರ ಆರೋಪ.ಬೇರೆ ಕಡೆ ಕೆಲಸ ಕೊಡಿಸುವ ಜಿಲ್ಲಾಧಿಕಾರಿ ನೀಡಿರುವ ಭರವಸೆ, ಉದ್ಯೋಗ ಮೇಳವನ್ನು ಮಾಡುವ ಕುರಿತು ಸ್ಥಳೀಯ ಶಾಸಕರು ಕೂಡ ಹೇಳಿರುವ ಮಾತಿಗೆ ಸಫಾಯಿ ಕರ್ಮಚಾರಿಗಳು ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಅವರಿಗೆ ಬೇರೆಡೆ ಕೆಲಸ ಮಾಡುವುದು ಇಷ್ಟವಿಲ್ಲ ಎಂಬ ಸಂಗತಿ ಸದ್ಯದ ಎಲ್ಲ ಕಷ್ಟಗಳಿಗೆ ಕಾರಣ ಎನ್ನುವುದು ಅವರ ವಿಶ್ಲೇಷಣೆ.ಮತ್ತೊಂದು ವಿಪರ್ಯಾಸದ ಸಂಗತಿ ಎಂದರೆ, ಈ ದುರ್ಘಟನೆ ನಡೆಯುವ ಕೆಲವೇ ದಿನಗಳ ಹಿಂದೆ ಬಂಗಾರಪೇಟೆ ತಹಶೀಲ್ದಾರ್ ಎಸ್.ಎಂ.ಮಂಗಳಾ ಅವರು ಸಫಾಯಿ ಕರ್ಮಚಾರಿಗಳನ್ನು ಭೇಟಿ ಮಾಡಿದಾಗ, ಮಲದಗುಂಡಿ ಸ್ವಚ್ಛಗೊಳಿಸುವ ಕೆಲಸವನ್ನು ಯಾರೂ ಮಾಡುತ್ತಿಲ್ಲ ಎಂದೂ ಹಲವರು ಹೇಳಿದ್ದರು. ~ಈಗ ನೋಡಿದರೆ ದುರಂತ ಸಂಭವಿಸಿದೆ~ ಎಂದು ಮಂಗಳಾ ವಿಷಾದಿಸಿದರು. ದುರ್ಘಟನೆ ಹಿನ್ನೆಲೆಯಲ್ಲಿ ಮೃತರ ಕುಟುಂಬಗಳ ಸದಸ್ಯರಿಗೆ ಈಗಾಗಲೇ ತಲಾ 2.10 ಲಕ್ಷ ರೂಪಾಯಿ ಪರಿಹಾರ ಧನವನ್ನೂ ವಿತರಿಸಲಾಗಿದೆ.ಕೆಜಿಎಫ್ ನಗರದಲ್ಲಿ ಮಲ ಹೊರುವ ಪದ್ಧತಿ ಜೀವಂತವಾಗಿಲ್ಲ ಎಂದು ನಗರಸಭೆ ರಾಜ್ಯ ಹೈಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ. ಆದರೆ ಕೆನಡೀಸ್ ತೆಲುಗು ಲೈನಿನ ಸಫಾಯಿ ಕರ್ಮಚಾರಿಗಳು ಈ ಪದ್ಧತಿ ಇನ್ನೂ ಜೀವಂತವಾಗಿದೆ ಎಂದು ವಾದಿಸುತ್ತಿದ್ದಾರೆ. 1993ರಲ್ಲಿ ಸಫಾಯಿ ಕರ್ಮಚಾರಿಗಳಿಗೆ ಹಾಗೂ ಮಲ ಹೊರುವ ಪದ್ಧತಿಗೆ ಸಂಬಂಧಿಸಿದಂತೆ ಹೊರಡಿಸಲಾದ ಕಾಯಿದೆಯನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸುತ್ತಿರುವುದು ಈ ವಿವಾದಕ್ಕೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry