ಈ ನಗರದಲ್ಲಿಯೂ ಶಾಲೆ ಇದೆ!

7

ಈ ನಗರದಲ್ಲಿಯೂ ಶಾಲೆ ಇದೆ!

Published:
Updated:
ಈ ನಗರದಲ್ಲಿಯೂ ಶಾಲೆ ಇದೆ!

ಕಾರವಾರ: ನಗರದಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-17ರ ಪಕ್ಕದಲ್ಲೇ ಇದೆ ಸರ್ವೋದಯ ನಗರ. ಸರ್ಕಾರದ ಯೋಜನೆಗಳಿಂದ ನಿರಾಶ್ರಿತರಾದವರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೆಲೆಸಿದ್ದಾರೆ. ಬಹುತೇಕ ಮೀನುಗಾರರು, ಕೂಲಿ, ಕಾರ್ಮಿಕರು ವಾಸವಾಗಿರುವ ಈ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಜವಾಗಿಯೇ  ನಿರ್ಲಕ್ಷ್ಯಕ್ಕೊಳಗಾಗಿತ್ತು. ಇಲ್ಲಿ ಶಾಲೆ ಇದೇ ಎನ್ನುವುದೂ ಕೆಲವರಿಗೆ ಗೊತ್ತಿರಲಿಲ್ಲ.1ರಿಂದ7ನೇ ತರಗತಿಯವರೆಗೆ 52ಗಂಡು ಹಾಗೂ 34 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 86 ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮನೆಯಲ್ಲಿ ಅಪ್ಪ ಮೀನು ಹಿಡಿಯಲು ಹೋದರೆ; ಮೀನು ತಂದಿರುವ ತಾಯಿ ಮಾರಾಟ ಮಾಡಲು ಪೇಟೆಗೆ ಹೋಗುತ್ತಾಳೆ. ಮನೆಯ ವಾತಾವರಣವೇ ಹೀಗಿರುವಾಗ ಸಹಜವಾಗೇ ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿಸಿಕೊಳ್ಳುವುದಿಲ್ಲ. ಶಿಕ್ಷಣಕ್ಕೆ ಪೂರಕವಾದ ವಾತಾವರಣವೂ ಇಂತಹ ಮಕ್ಕಳಿಗೆ ಸಿಕ್ಕಿರುವುದಿಲ್ಲ.ಆದರೆ, ಈಗ ಸರ್ವೋದಯ ನಗರದಲ್ಲಿ ಶಾಲೆ ಇದೆ ಎನ್ನುವುದು ಗೊತ್ತಾಗಿದೆ. ಒಂದೂವರೆ ವರ್ಷದ ಹಿಂದೆ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಖುರ್ಷಿದಾ ಬಾನು ಶೇಖ್ ಆಗಮಿಸಿದ ನಂತರ ಶಾಲೆಯ ಸ್ವರೂಪವೇ ಬದಲಾಗಿದೆ. ಬೇಕಾಬಿಟ್ಟಿಯಾಗಿ ಶಾಲೆಗೆ ಬರುತ್ತಿದ್ದ ಮಕ್ಕಳು ಈಗ ದಿನವೂ ತಪ್ಪದೇ ಶಾಲೆಗೆ ಬರುತ್ತಿದ್ದಾರೆ. ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದಾರೆ. ಅರ್ಧದಲ್ಲೇ ಶಾಲೆಬಿಟ್ಟ ಮಕ್ಕಳು ಮತ್ತೆ ಶಾಲೆಗೆ ಬಂದು ಭವಿಷ್ಯದತ್ತ ಹೆಜ್ಜೆ ಇಟ್ಟಿದ್ದಾರೆ.ಮುಖ್ಯ ಶಿಕ್ಷಕಿ ಸೇರಿದಂತೆ ಶಾಲೆಯಲ್ಲಿ ಐದು ಮಂದಿ ಸಹ ಶಿಕ್ಷಕಿಯರಿದ್ದಾರೆ. ಸಹ ಶಿಕ್ಷಕಿಯರಾದ ಜೆನ್ನಿಫರ ಡಿಲಿಮಾ, ಕುಸುಮಾ ನಾಯ್ಕ, ಫೈರೋಜಾ ಶೇಖ್, ವನಜಾಕ್ಷಿ ಕುಡ್ತಲಕರ್ ಅವರ ಆಸಕ್ತಿಗೆ ನೀರೆರೆಯುವ ಕಾರ್ಯವನ್ನು ಮುಖ್ಯ ಶಿಕ್ಷಕಿ ಮಾಡುತ್ತಿದ್ದಾರೆ. ಶಿಕ್ಷಕಿಯರು ಹೊಂದಾಣಿಕೆಯಿಂದಿರುವ ಕಾರಣ ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲ ಎನ್ನುವಂಥ ರೀತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ತಾವು ನಿರ್ವಹಿಸುತ್ತಿರುವ ಶಿಕ್ಷಕ ಹುದ್ದೆಗೆ ಗೌರವ ತರಬೇಕು. ಮಕ್ಕಳ ಭವಿಷ್ಯ ಉಜ್ವಲವಾಗಬೇಕು ಎನ್ನುವ ದೃಷ್ಟಿಯಿಂದ ಶಾಲಾ ಅವಧಿಯ ಹೊರತಾಗಿಯೂ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಮಧ್ಯಾಹ್ನದ ಊಟಕ್ಕೆ ಮನೆಗೆ ಹೋಗದೇ ಮಕ್ಕಳೊಂದಿಗೆ ಸಮಯವನ್ನು ಕಳೆಯುತ್ತಿರುವುದು ಇಲ್ಲಿಯ ಶಿಕ್ಷಕರ ಸೇವಾ ಮನೋಭಾವಕ್ಕೆ ಸಾಕ್ಷಿ.ಕನ್ನಡ ಶಾಲೆಯಲ್ಲಿ ಓದುವ ಮಕ್ಕಳಿಗೆ ಇಂಗ್ಲಿಷ್ ಎಂದರೆ ಕಬ್ಬಿಣದ ಕಡಲೆ. ಆದರೆ, ಸರ್ವೋದಯ ನಗರದ ಶಾಲೆಯ ಮಕ್ಕಳು ಇಂಗ್ಲಿಷ್ ವಿಷಯವನ್ನೂ ಕನ್ನಡದಷ್ಟೇ ಸರಳವಾಗಿ ಅಧ್ಯಯನ ಮಾಡುತ್ತಿದ್ದಾರೆ. ಶಾಲೆಯ ಇಂಗ್ಲಿಷ್ ಶಿಕ್ಷಕಿ ಜೆನ್ನಿಫರ ಡಿಲಿಮಾ ಅದ್ಭುತ ಎನ್ನುವಂಥಹ ರೀತಿಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಪಾಠ ಮಾಡುತ್ತಿದ್ದಾರೆ.ಕನ್ನಡ, ಗಣಿತ, ಸಮಾಜ ಹಾಗೂ ವಿಜ್ಞಾನ ಶಿಕ್ಷಕಿಯರು ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತಹ ರೀತಿಯಲ್ಲಿ ಪಾಠ ಮಾಡುತ್ತಿದ್ದಾರೆ. ಪ್ರಾಥಮಿಕ ಮಟ್ಟದಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸುವ ಇಲ್ಲಿಯ ಮಕ್ಕಳಲ್ಲಿ ಹೆಚ್ಚಿನ ವ್ಯಾಸಂಗ ಮಾಡಬೇಕು ಎನ್ನುವ ಉತ್ಸಾಹವೂ ಬಂದಿದೆ. ಉತ್ತಮ ಶಿಕ್ಷಣ ಪಡೆಯಬೇಕು ಎಂದು ಕಳೆದ ವರ್ಷ ಈ ಶಾಲೆಯಿಂದ ಹೊರಬಂದಿರುವ ಏಳನೇ ತರಗತಿ ಮಕ್ಕಳಲ್ಲಿ ಬಹುತೇಕರು ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆದಿರುವುದೇ ಶಿಕ್ಷಕರ ಶ್ರಮಕ್ಕೆ ಉದಾಹರಣೆ.‘ಮನೆಯಲ್ಲಿ ಪಾಲಕರ ಪ್ರೀತಿಯಿಂದ ವಂಚಿತರಾದ ಮಕ್ಕಳಿಗೆ ಶಿಕ್ಷಕರಾದವರು ಪ್ರೀತಿ ತೋರಿಸಬೇಕು. ಆಗ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಮೂಡಿಸಿಕೊಳ್ಳುತ್ತಾರೆ. ಕರ್ತವ್ಯವೇ ದೇವರು ಎನ್ನುವುದು ಅರಿತು ಕೆಲಸ ಮಾಡಿದರೆ ವೃತ್ತಿಗೆ ನಾವು ಗೌರವ ತಂದುಕೊಡಲು ಸಾಧ್ಯ’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಖುರ್ಷಿದಾ ಶೇಖ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry