ಶುಕ್ರವಾರ, ಮೇ 7, 2021
19 °C

ಈ ಪರಿಯ ನಗರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲ್ಲೇಶ್ವರದ ಹುಡುಗಿ

ಬೆಂಗಳೂರೆಂದರೆ ಅಮ್ಮನಿದ್ದಂತೆ ಎಂದು ಕಣ್ಣರಳಿಸುತ್ತಾರೆ ಹರ್ಷಿಕಾ ಪೂಣಚ್ಚ. ಅವರ ಅಚ್ಚುಮೆಚ್ಚಿನ ತಾಣ ಮಲ್ಲೇಶ್ವರ. ಇತ್ತ ಗಿಜಿಗಿಜಿ ಎನ್ನುವ ಎಂಟನೇ ಕ್ರಾಸು, ಅತ್ತ ತಣ್ಣಗೆ ಮಲಗಿದ ಸ್ಯಾಂಕಿ ಕೆರೆ. ಇದ್ದಾರೋ ಇಲ್ಲವೋ ಎಂಬಂತಿರುವ ಮನೆಯೊಡೆಯರು. ಹಸಿರನೇ ಒಸರುವ ಮರಗಳು. ಚುಕುಬುಕು ಓಡುವ ರೈಲು, ಢಣಢಣ ಸದ್ದು ಮಾಡುತ್ತಿರುವ ಕಾಡು ಮಲ್ಲೇಶ್ವರದ ಗಂಟೆ, ಅಲ್ಲೇ ಕನಸುಗಳನು ಮಾಲೆ ಮಾಡಿಟ್ಟ ಹೂವಮ್ಮ...ಇವರ `ಬೀಟ್~ ಚಿತ್ರದಲ್ಲಿ ಒಂದು ಅಡಿಸಾಲು ಇದೆ- `ಶ್ರಿರಾಂಪುರದ ಹುಡುಗ ಮಲ್ಲೇಶ್ವರಂ ಹುಡುಗಿ~. ಆ ಸಾಲು ಅವರ ಮನಸ್ಸಿನೊಳಗೆ ಚಿರಸ್ಥಾಯಿ. `ನನಗಾಗಿಯೇ ಆ ಸಾಲು ಬರೆದಂತಿದೆ. ಈ ಏರಿಯಾವನ್ನು ನಾನು ಅಷ್ಟು ಇಷ್ಟಪಡುತ್ತೇನೆ~ ಎನ್ನುವ ಆಕೆಯ ಮನಸ್ಸಿನಲ್ಲಿ ಮೊದಲ ಸ್ಥಾನ ಇರುವುದು ಇದೇ ಮಲ್ಲೇಶ್ವರಕ್ಕೆ.ಎಂಜಿನಿಯರಿಂಗ್ ಓದುವಾಗಲೆಲ್ಲಾ ಹಳೆ ಮದ್ರಾಸು ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಕೆ.ಆರ್.ಪುರವೇ ಅವರ ಸರ್ವಸ್ವವಾಗಿತ್ತು. ಅಲ್ಲೆಲ್ಲಾ ಸ್ನೇಹಿತರೊಂದಿಗೆ ಮೋಜು ಮಸ್ತಿ.

ಮಲ್ಲೇಶ್ವರದ ನಂತರದ ಸ್ಥಾನ ಕಮರ್ಷಿಯಲ್ ಸ್ಟ್ರೀಟ್. ಅದು ಅವರ ಶಾಪಿಂಗ್‌ಗೆ ಮೀಸಲಾದ ಜಾಗ. ಕಮರ್ಷಿಯಲ್ ಸ್ಟ್ರೀಟ್‌ನ ಅಂಗಡಿಗಳಲ್ಲಿ ಕಳೆದು ಹೋಗುವುದೆಂದರೆ ಎಲ್ಲಿಲ್ಲದ ಪ್ರೀತಿ. ಗಂಟೆಗಟ್ಟಲೆ ಅಲ್ಲಿ ಕಳೆದಿದ್ದಿದೆ, ಗೆಳೆಯರೊಂದಿಗೆ ಹರಟಿದ್ದಿದೆ. ರಜೆ ಸಮಯಕ್ಕೆಂದೇ ಅವರು ಕೆಲವು ಸ್ಥಳಗಳನ್ನು ಮೀಸಲಿಟ್ಟಿದ್ದಾರೆ. ಅವು ವಂಡರ್‌ಲಾ, ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಮುಂತಾದವು.ಚಿಕ್ಕವರಿದ್ದಾಗ ಅಪ್ಪನ ಜತೆ ಲಾಲ್‌ಬಾಗ್‌ಗೆ ಹೋಗುತ್ತಿದ್ದ ನೆನಪು. ಅದು ವರ್ಷಕ್ಕೆ ಎರಡು ಬಾರಿ ಮಾತ್ರ. ಫಲಪುಷ್ಪ ಪ್ರದರ್ಶನ ನಡೆಯುವಾಗ ಅಪ್ಪನ ಭುಜಕ್ಕೆ ಆತುಕೊಂಡು ಹೂವು ಹಣ್ಣುಗಳನ್ನು ನೋಡುತ್ತಿದ್ದುದು ಇನ್ನೂ ಅವರ ಕಣ್ಣಿಗೆ ಕಟ್ಟಿದಂತಿದೆ. ಮನಸ್ಸು ಶಾಂತಿ ಬೇಕು ಎಂದಾಗಲೆಲ್ಲಾ ಅವರು ಸೀದಾ ಓಡುವುದು ರಾಜರಾಜೇಶ್ವರಿ ನಗರಕ್ಕೆ. ಅಲ್ಲೊಂದು ಉದ್ಯಾನ. ಸುತ್ತ ಗೌಜುಗದ್ದಲವಿಲ್ಲ.ವಾಹನಗಳ ಆರ್ಭಟವಿಲ್ಲ. ಗೆಳತಿಯೊಂದಿಗೆ ಹರಟೆ ಕೊಚ್ಚಲು ಹೇಳಿ ಮಾಡಿಸಿದ ತಾಣ. ಎಲ್ಲೇ ಅಲೆದರೂ ಅವರಿಗೆ ನಗರವನ್ನು ಮಲಿನಗೊಳಿಸುವುದು ಇಷ್ಟವಿಲ್ಲ. ಚಾಕೊಲೇಟ್ ತಿಂದರೂ ಅದರ ಕವರು ಇವರ ಬ್ಯಾಗು ಸೇರಿಬಿಡುತ್ತದೆ. ಮನೆಯ ಕಸದ ಬುಟ್ಟಿಯೇ ಅದಕ್ಕೆ ಮೋಕ್ಷ ಸ್ಥಳ!

ನಿವೇದಿತಾ ನಗರ್!

ಬಾಲ್ಯದಲ್ಲಿ ಕಂಡ ಸ್ಥಳಗಳು, ಘಟನೆಗಳು ಎದೆಯೊಳಗೆ ಜಾಗ ಗಿಟ್ಟಿಸಿಕೊಂಡು ಬಿಡುತ್ತವೆ. ಸ್ವಲ್ಪ ವರ್ಷಗಳ ಹಿಂದಿನ ಮಾತು. ಹನುಮಂತನಗರದ ನೆಂಟರ ಮನೆಗೆ ಫ್ರಾಕು ತೊಟ್ಟು, ಕಡಲೆಕಾಯಿ ಮೆಲ್ಲುತ್ತಾ ಹೋಗಿ ಬರುತ್ತಿದ್ದಳು ಒಬ್ಬ ಹುಡುಗಿ. ಹೆಸರು ಸ್ಮಿತಾ (ಈಗ ನಿವೇದಿತಾ). ನೆಂಟರ ಮನೆಗೆ ಹೋಗುವ ನೆಪದಲ್ಲಿ ಬಸವನಗುಡಿಗೆ ತೆರಳುವುದು, ಅಲ್ಲಿನ ಕಹಳೆಬಂಡೆ ಏರುವುದು. ಚೀಂವ್‌ಚೀಂವ್ ಎನ್ನುವ ಬಾವಲಿಗಳನ್ನು ಗಂಟೆಗಟ್ಟಲೆ ನೋಡುವುದು ಅವರ ಮೆಚ್ಚಿನ ತರಲೆ ಕೆಲಸಗಳು. ಹಸಿವಾಯಿತೋ ಅಲ್ಲಿಂದ ವಿ.ವಿ.ಪುರಂನ ತಿನಿಸಿನ ಬೀದಿಗೆ ದೌಡು. ನಟಿಯಾಗಿ ಬಿಜಿಯಾದ ಬಳಿಕವೂ ಹನುಮಂತನಗರ ಹಾಗೂ ಸುತ್ತಮುತ್ತಲಿನ ತಾಣಗಳಿಗೆ `ದಾಳಿ~ ಇಡುವುದನ್ನು ಅವರು ತಪ್ಪಿಸಿಲ್ಲ.ನಿವೇದಿತಾ ಚುರುಮುರಿ ಪ್ರಿಯೆ. ಹಾಗಂತ ಅವರು ಚಾಟ್ ಅಂಗಡಿಗಳಿಗೆ ನುಗ್ಗವುದಿಲ್ಲ. ಸೀದಾ ಬೀದಿಗೆ ಬರುತ್ತಾರೆ. ಜಯನಗರದ ಎನ್.ಎಂ.ಕೆ.ಆರ್.ವಿ ಕಾಲೇಜಿನ ಬಳಿಯ ಚುರುಮುರಿ ಅಂಗಡಿ ಅವರಿಗೆ ಅಚ್ಚುಮೆಚ್ಚು. ಸಮಯ ಸಿಕ್ಕಾಗಲೆಲ್ಲಾ ಅಲ್ಲಿ ನಡೆಯುತ್ತದೆ ಮೆಲ್ಲುವ ಕಾರ್ಯ!ಈಗ ಅವರ ಮೆಚ್ಚಿನ ತಾಣ ಜೆ.ಪಿ.ನಗರದಲ್ಲಿರುವ ಸ್ವಂತ ಮನೆ! ಅಪಾರ್ಟ್‌ಮೆಂಟ್ ಒಂದರ 17ನೇ ಅಂತಸ್ತಿನಲ್ಲಿ ಗೂಡು ಕಟ್ಟಿಕೊಂಡಿರುವ ಅವರಿಗೆ ಸಂಜೆಯಾಯಿತೆಂದರೆ ಹಬ್ಬ. ದೂರ ದಿಗಂತದಲ್ಲಿ ಹಣ್ಣು ಹಣ್ಣಾಗಿ ಮುಳುಗುತ್ತಿರುವ ಸೂರ್ಯ. ಸಾರಕ್ಕಿ ಕೆರೆಯಿಂದ ಹಾರಿ ಹೋಗುವ ಬಾನಾಡಿಗಳು. ಬಂಗಾರ ಬಣ್ಣದ ಮೋಡಗಳು. ಮಧ್ಯಾಹ್ನದ ಹೊತ್ತಿಗೆ ಶೂಟಿಂಗ್ ಮುಗಿಯಿತೆಂದರೆ ಅವರನ್ನು ಮನೆಯ ಬಾಲ್ಕನಿ ಕರೆಯುತ್ತದೆ. ಸೂರ್ಯ ಮಾಮನ ಕತೆ ಹೇಳುತ್ತದೆ.ಅಂದಹಾಗೆ ನಿವೇದಿತಾ ಪ್ಲಾಸ್ಟಿಕ್ ವೈರಿ. ಪ್ಲಾಸ್ಟಿಕ್ ಚೀಲ ಹಾಗೂ ಅವರಿಗೆ ಎಣ್ಣೆ- ಸೀಗೆ ಸಂಬಂಧ. `ಮೊದಲೆಲ್ಲಾ ಹೂವು-ಹಣ್ಣನ್ನು ಕಾಗದದ ಪೊಟ್ಟಣದಲ್ಲಿ ಕಟ್ಟಿಕೊಡುತ್ತಿದ್ದರು. ಈಗ ಹಾಗಲ್ಲ. ನಾನೇದರೂ ಒಳ್ಳೆಯದು ಮಾಡಬೇಕು ಅಂತಿದ್ದರೆ ಮೊದಲು ಪ್ಲಾಸ್ಟಿಕ್ ಕೈಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಹೋರಾಡುತ್ತೇನೆ~ ಎನ್ನುತ್ತಾರೆ.

 

ಮಿನಿ ಭಾರತ...

ಇಡೀ ಬೆಂಗಳೂರಿನಲ್ಲಿ ಎಲ್ಲಿ ಸುತ್ತಾಡಿದರೂ ನಟ ರಾಕೇಶ್‌ಗೆ ನೆಮ್ಮದಿ ಸಿಗುವುದಿಲ್ಲವಂತೆ. ಆದರೆ ಪದ್ಮನಾಭನಗರ ಮಾತ್ರ ಅದಕ್ಕೆ ಹೊರತು. ಇಡೀ ಪ್ರದೇಶವೇ ಅವರ ಪಾಲಿಗೆ ಮನೆಯಿದ್ದಂತೆ. ಇಲ್ಲಿ ಬೈಕ್ ಏರಿ ಬಿಡುಬೀಸಾಗಿ ಹೊರಡಬಹುದು. ಹೆಲ್ಮೆಟ್ ಧರಿಸಿ, ಸಿಗ್ನಲ್ ಶಿಸ್ತಾಗಿ ದಾಟಿದರೆ ಮುಗಿಯಿತು, ಅಲ್ಲಿಂದ ಮುಂದಕ್ಕೆ ತಮ್ಮದೇ ಲೋಕದಲ್ಲಿ ಯಾನ.

ರಾಜಕಾರಣಿಗಳು ಹೆಚ್ಚಿರುವುದರಿಂದಲೂ ಅವರಿಗೆ ಪದ್ಮನಾಭನಗರ ಅಚ್ಚುಮೆಚ್ಚಂತೆ! ರಾಜಕೀಯ ಧುರೀಣರಿಂದಾಗಿ ಹೆಚ್ಚುಹೆಚ್ಚು ಯುವಕರು ಇರುತ್ತಾರೆ.

 

ಯುವಕರು ಇರುವುದರಿಂದಾಗಿಯೇ ಹೆಚ್ಚುಹೆಚ್ಚು ಕಾರ್ಯಕ್ರಮಗಳು ನಡೆಯುತ್ತವೆ. ಆ ಕಾರ್ಯಕ್ರಮಗಳನ್ನೆಲ್ಲಾ ದೂರದಲ್ಲಿ ಪ್ರೇಕ್ಷಕನಾಗಿ ನಿಂತು ನೋಡುವುದು ಇವರಿಗಿಷ್ಟ.

ಬನಶಂಕರಿ ಮೂರನೇ ಹಂತದಲ್ಲಿರುವ ಪಿಇಎಸ್‌ಐಟಿ ಕಾಲೇಜಿನ ಪ್ರದೇಶ ಇವರಿಗೆ ಬೆಂಗಳೂರು ಅನ್ನಿಸುವುದೇ ಇಲ್ಲವಂತೆ.

 

ಮಣಿಪುರಿ, ಬಂಗಾಳಿ, ಮರಾಠಿ, ಮಲಯಾಳಿ, ಪಂಜಾಬಿ, ಕಾಶ್ಮೀರಿ, ಒಮ್ಮಮ್ಮೆ ಆಫ್ರಿಕನ್ನರು, ಇರಾನಿಯನ್ನರು ಹೀಗೆ ಇಡೀ ಜಗತ್ತೇ ಅಲ್ಲಿನ ಬೀದಿಗಳಲ್ಲಿ. ಇವರು ಆ ಪ್ರದೇಶಕ್ಕೆ ಇಟ್ಟಿರುವ ಹೆಸರು ಮಿನಿ ಇಂಡಿಯಾ. ಅರ್ಧರಾತ್ರಿಯಲ್ಲಿ ಅಲ್ಲಿನ ಬೀದಿಗಳಲ್ಲಿ ಅಲೆಯುತ್ತಾ ಕಾಫಿ ಕುಡಿಯುವ ವಿದ್ಯಾರ್ಥಿಗಳನ್ನು ಕಂಡಿದ್ದಾರೆ. ನಿದ್ದೆ ಹತ್ತದಾಗ ಅಲ್ಲಿಗೆ ಹೋಗಿ ತಾವೂ ಚಹಾ ಹೀರಿ ಬಂದಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.