ಸೋಮವಾರ, ಏಪ್ರಿಲ್ 19, 2021
32 °C

ಈ ಪುಟ್ಟ ಗೂಡೇ ಕಾಮಣ್ಣನ ಅರಮನೆ!

ಪ್ರಜಾವಾಣಿ ವಾರ್ತೆ/ ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಯಾದಗಿರಿ: ಅದೊಂದು ಪುಟ್ಟ ಗುಬ್ಬಚ್ಚಿಯ ಗೂಡಿನಂತಿದೆ. ಅಕ್ಕಪಕ್ಕದಲ್ಲಿ ಎರಡು ಕಲ್ಲುಗಳು, ಛಾವಣಿಯ ರೂಪದಲ್ಲಿ ಮತ್ತೊಂದು ಕಲ್ಲು, ಮೇಲೆ ಒಂದಿಷ್ಟು ಮಣ್ಣು ಹಾಕಿ ನಿರ್ಮಿಸಿರುವ ಈ ಗೂಡಿನಂತಿರುವ ಮನೆಯೇ ವ್ಯಕ್ತಿಯೊಬ್ಬರ ಆಶ್ರಯ ತಾಣವಾಗಿದೆ.ಸೂರಿಲ್ಲದೆ ನಿರ್ಗತಿಕರಾದವರಿಗೆ ಹಲವಾರು ಯೋಜನೆಗಳಲ್ಲಿ ಸೂರು ನೀಡುವ ಯೋಜನೆ ಜಾರಿಯಲ್ಲಿದ್ದರೂ ಜಿಲ್ಲೆಯ ಹಲವಾರು ಗ್ರಾಮಗಳ ಅನೇಕ ನಿರಾಶ್ರಿತರು ನೆಲೆಯಿಲ್ಲದೇ ಬದುಕು ಸಾಗಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯೇ ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಕಾಮಣ್ಣ.ಕಾಮಣ್ಣನಿಗೆ ಹೆಂಡತಿ, ಮಕ್ಕಳಿಲ್ಲ. ಸಂಬಂಧಿಗಳಿದ್ದರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಬೇರೆಯವರ ಹೊಲದಲ್ಲಿ ಕೂಲಿ ಮಾಡಿ ಒಪ್ಪತ್ತಿನ ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಕೂಲಿ ಇಲ್ಲದಿದ್ದರೆ ಕಟ್ಟಿಗೆ ತಂದು ಮಾರಿ ಉಪಜೀವನ ಕಂಡುಕೊಳ್ಳುತ್ತಾರೆ.ಆದರೆ ವಾಸಿಸಲು ಕಾಮಣ್ಣನಿಗೆ ಪುಟ್ಟದಾದ ಜಾಗೆ ಮಾತ್ರವಿದೆ. ಈ ಮೊದಲು ಕಾಮಣ್ಣ ಚಿಕ್ಕ ಗುಡಿಸಲು ಕಟ್ಟಿಕೊಂಡಿದ್ದರು. ಆದರೆ ಗಾಳಿಗೆ ಗುಡಿಸಲು ನೆಲಸಮವಾಯಿತು. ನಂತರ ಇದೇ ಜಾಗೆಯಲ್ಲಿ ಎರಡು ಬಂಡೆಗಲ್ಲುಗಳನ್ನು ಭೂಮಿಯಲ್ಲಿ ನೆಟ್ಟು, ಅದರ ಸುತ್ತ ಕಲ್ಲಿನಿಂದ ಸಣ್ಣ ಗೋಡೆ ನಿರ್ಮಿಸಿಕೊಂಡಿದ್ದು, ಛಾವಣಿಯಾಗಿ ಮತ್ತೊಂದು ಉದ್ದನೆ ಕಲ್ಲನ್ನು ಹಾಕಿದ್ದಾರೆ. ಅದರ ಮೇಲೆ ಒಂದಿಷ್ಟು ಮಣ್ಣು ಹಾಕಿ, ವಾಸಿಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.ಈ ಪುಟ್ಟ ಗೂಡಿನಲ್ಲಿ ಮಲಗಲು ಸಾಧ್ಯವಾಗದು. ಅದರೊಳಗೆ ಹೋಗಿ ಬರುವುದಂತೂ ಸಾಹಸದ ಕೆಲಸ. ಆದರೂ ಸಂಬಂಧಿಗಳಿಗೆ ಹೊರೆಯಾಗದೇ ಈ ಪುಟ್ಟಣ ಗೂಡಿನಲ್ಲಿಯೇ ಮಲಗುವ ಕಾಮಣ್ಣ, ಹೊರಗಡೆ ಅಡುಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮಳೆಗಾಲ ಬಂದರೆ ಸಾಕು ಒಳಗಡೆ ಅಡುಗೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.ಇವರ ಪರಿಸ್ಥಿತಿ ನೋಡಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಆಶ್ರಯ ಯೋಜನೆಯಡಿ ಮನೆ ಕೂಡಾ ಮಂಜೂರು ಮಾಡಿದ್ದರು. ಆದರೆ ಅನಕ್ಷರಸ್ಥ ಕಾಮಣ್ಣ ಅವರಿಗೆ ತಿಳಿಯದಂತೆ, ಸಂಬಂಧಿಕರು ಮನೆ ನಿರ್ಮಾಣಕ್ಕೆ ಬಿಡುಗಡೆಯಾದ ಹಣವನ್ನು ಲಪಟಾಯಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ವಸತಿ ಸಚಿವ ವಿ. ಸೋಮಣ್ಣ, ಜಿಲ್ಲೆಗೆ 37 ಸಾವಿರ ಮನೆಗಳನ್ನು ಮಂಜೂರು ಮಾಡಿರುವುದಾಗಿ ತಿಳಿಸಿದ್ದಾರೆ. ಇತ್ತ ಸರ್ಕಾರದ ವಸತಿ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ಅರ್ಹ ಫಲಾನುಭವಿಗಳಿಗೆ ದೊರೆಯುತ್ತಿಲ್ಲ ಎನ್ನುವುದಕ್ಕೆ ಕಾಮಣ್ಣನಂತಹ ನಿರ್ಗತಿಕರೇ ನಿದರ್ಶನವಾಗಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.